ಕೇರಳ(ಮೇ15): ದೂರದ ಚೀನಾದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದಾಗ ಭಾರತಕ್ಕೆ ಕೊರೋನಾ ಎಂಟ್ರಿ ಕೊಡುವುದಿಲ್ಲ. ಇಲ್ಲಿನ ವಾತಾವರಣದಲ್ಲಿ ಕೊರೋನಾ ಸಾಯುತ್ತದೆ ಎಂದೆಲ್ಲಾ ಮಾತನಾಡಿ ಕೊಂಡವರೇ ಹೆಚ್ಚು. ಆಯಾ ರಾಜ್ಯದ ಆರೋಗ್ಯ ಸಚಿವರು ಈ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಕೇರಳ ಆರೋಗ್ಯ ಸಚಿವೆ ಶೈಲಜಾ, ಜನವರಿ 20 ರಂದೇ ಕೊರೋನಾ ವೈರಸ್ ವರದಿ ಓದಿ, ತಮ್ಮ ವೈದ್ಯಕೀಯ ತಂಡಕ್ಕೆ ಕರೆ ಮಾಡಿ ಮಾತನಾಡಿದ್ದಾರೆ.

2 ಸೂತ್ರ, ಒಂದೇ ನಿಯಮ; 100 ದಿನದದಲ್ಲಿ ಕೇರಳದಿಂದ ಕೊರೋನಾ ಮಾಯ!

ಈ ವೈರಸ್ ಕೇರಳ ಪ್ರವೇಶಿಸುವ ಸಾಧ್ಯತೆ ಇದೆಯಾ? ಯಾವ ರೀತಿ ಹರಡುತ್ತದೆ ಎಂಬ ಮಾಹಿತಿ ಪಡೆದಿದ್ದರು. ಜನವರಿ 20 ರಂದೇ ಶೈಲಜಾ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ರೂಪು ರೇಶೆ ಸಿದ್ದಪಡಿಸಲು ಆರಂಭಿಸಿದ್ದರು. ಜನವರಿ 23 ರಂದು ಶೈಲಜಾ ಟಾಸ್ಕ್ ರ್ಯಾಪಿಡ್ ತಂಡ ರಚಿಸಿ, ಸಭೆ ನಡೆಸಿದ್ದಾರೆ. ಜನವರಿ 24 ರಂದು ರ್ಯಾಪಿಡ್ ತಂಡ 14 ಜಿಲ್ಲೆಗಳ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಎಲ್ಲಾ ಮೆಡಿಕಲ್ ಆಫೀಸರ್ಸ್‌ಗೆ ಮಾಹಿತಿ ನೀಡಲಾಯಿತು.

ದೇಶದಲ್ಲೇ ಮೊದಲ ಕೊರೋನಾ ಕೇಸ್‌ ಕೇರಳದಲ್ಲಿ ಪತ್ತೆ; ಈಗ ಅಲ್ಲೇ ಸೋಂಕು ಕಡಿಮೆ

ಜನವರಿ 24ರ ವೇಳೆ  ಭಾರತದಲ್ಲೇ ಒಂದೇ ಒಂದು ಕೊರೋನಾ ವೈರಸ್ ಕೇಸ್ ಇರಲಿಲ್ಲ. ಆದರೆ ಕೇರಳ ಮಾತ್ರ ಮುಂಜಾಗ್ರತ ಕ್ರಮ ವಹಿಸಲು ಸೂಚಿಸಿತ್ತು. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾರ್ಗ ಸೂಚಿ ಪಾಲಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಜನವರಿ 27 ರಂದು ಕೇರಳದಲ್ಲಿ ಮೊದಲ ಕೊರೋನಾ ಕೇಸ್ ಪತ್ತೆಯಾಯಿತು. ಇದು ದೇಶದಲ್ಲೇ ಮೊದಲ ಕೇಸ್ ಆಗಿತ್ತು. ವುಹಾನ್‌ನಿಂದ ಕೇರಳಕ್ಕೆ ಬಂದಿಳದ ವಿಮಾನದಲ್ಲಿದ್ ಸೋಂಕಿತೆಯಿಂದ ಕೇರಳ ವಿಚಲಿತಗೊಳ್ಳಲಿಲ್ಲ.

ವುಹಾನ್‌ನಿಂದ ಕೊರೋನಾ  ವೈರಸ್ ಕೇರಳ ಮೂಲಕ ಭಾರತಕ್ಕೆ ಎಂಟ್ರಿಕೊಟ್ಟಿತು. ಅಷ್ಟರಲ್ಲೇ ಭಾರತ ಸರ್ಕಾರವಾಗಲಿ, ಇತರ ರಾಜ್ಯಗಳಾಗಲಿ, ವೈರಸ್ ಗಂಭೀರತೆಯನ್ನು ಅರಿತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ(WHO) ಮಾರ್ಗಸೂಚಿಗಳತ್ತ ಕಣ್ಣೆತ್ತಿ ನೋಡಿರಲಿಲ್ಲ. ಆದಾಗಲೇ ಕೇರಳ WHO ಮಾರ್ಗಸೂಚಿಗಳನ್ನು ಮಲೆಯಾಳಂ ಭಾಷೆಯಲ್ಲಿ ಪ್ರಕಟಿಸಿ ಎಲ್ಲಾ ಆರೋಗ್ಯ ಕೇಂದ್ರ, ಮೆಡಿಕಲ್ ಆಫೀಸರ್ ಸೇರಿದಂತೆ ಗ್ರಾಮಗಳಿಗೂ ರವಾನಿಸಲಾಗಿತ್ತು. ಹೀಗಾಗಿ ತಕ್ಷಣವೇ ಮೊದಲ ಕೊರೋನಾ ಸೋಂಕಿತೆಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಯಿತು. ಇಷ್ಟೇ ಅಲ್ಲ ವಿಮಾನದಲ್ಲಿ ಇತರ ಇಬ್ಬರಿಗೆ ಜ್ವರ ಇದ್ದ ಕಾರಣ ಐಸೋಲೇಶನ್ ವಾರ್ಡನ್‌ಗೆ ಹಾಕಲಾಗಿತ್ತು. ವಿಮಾನದಲ್ಲಿದ್ದ ಇತರ ಎಲ್ಲಾ ಪ್ರಯಾಣಿಕರನ್ನು ಹೋಮ್ ಕ್ವಾರಂಟೈನ್ನಲ್ಲಿಡಲಾಯಿತು.

ಮಾರ್ಚ್ 23ಕ್ಕೆ ವಿದೇಶಿ ವಿಮಾನಗಳಿಗೆ ನಿರ್ಬಂಧ ಹೇರಲಾಯಿತು. ರಾಜ್ಯದ ಗಡಿ ಭಾಗಗಳನ್ನು ಬಂದ್ ಮಾಡಲಾಯಿತು. ಇದಾದ 2 ದಿನದ ಬಳಿಕ ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ಘೋಷಿಸಿದರು. ಜನವರಿಯಿಂದ ಆರಂಭಗೊಂಡ ಕೇರಳದ ಕೊರೋನಾ ಹೋರಾಟದ ಈಗಲೂ ಅದೇ ವೇಗದಲ್ಲಿ ಸಾಗುತ್ತಿದೆ. ಕೇರಳದಲ್ಲಿ 524 ಮಂದಿಯಲ್ಲಿ ಕೊರೋನಾ  ಸೋಂಕು ದೃಢವಾಗಿತ್ತು. ಇದರಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಇನ್ನು ಕೊರೋನಾ ಪರೀಕ್ಷೆ, ಐಸೋಲೇಶನ್ ಹಾಗೂ ಹೋಮ್ ಕ್ವಾರಂಟೈನ್ ಕಡ್ಡಾಯ ಮಾಡಲಾಗಿತ್ತು. ಈ ಮೂಲಕ ವೈರಸ್ ಕೇರಳದಲ್ಲಿ ಹರಡದಂತೆ ನೋಡಿಕೊಳ್ಳಲಾಯಿತು. 

ಕೇರಳದಲ್ಲಿ 1.70 ಲಕ್ಷ ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಎಲ್ಲಾ ಕಾರ್ಯಗಳನ್ನು ಆರೋಗ್ಯ ಸಚಿವೆ ಶೈಲಜಾ ಖುದ್ದು ಪರೀಶೀಲಿಸಿ, ಪ್ರತಿ ದಿನ ಮೆಡಿಕಲ್ ಆಫೀಸರ್ಸ್, ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಕೊರೋನಾ ನಿಯಂತ್ರಿಸಲಾಯಿತು. ಇದೇ ಕಾರಣಕ್ಕೆ ಶೈಲಜಾ ಕಾರ್ಯವನ್ನು ವಿಶ್ವದ ಇತರ ರಾಷ್ಟ್ರಗಳು ಕೂಡ ಕೊಂಡಾಡಿವೆ. ಕೇರಳ ಮಾದರಿ ಅನುಸುತ್ತಿದೆ. ವಿದೇಶಿ ಪತ್ರಿಕೆಗಳು ಶೈಲಜಾಗೆ ಸಲಾಂ ಹೇಳಿದೆ.