Asianet Suvarna News Asianet Suvarna News

ಇಸ್ರೇಲಿನಲ್ಲಿ ಸಿಕ್ಕ ಇಂಟೆಲಿಜೆನ್ಸ್‌ ಸೀಕ್ರೆಟ್ ಏಜೆಂಟ್‌; ಸನ್ ಆಫ್‌ ಹಮಾಸ್!

ಬಹುತೇಕ ಎಲ್ಲ ದೇಶಗಳಲ್ಲಿರುವಂತೆ ಇಸ್ರೇಲ್‌ನಲ್ಲೂ external ಮತ್ತು internal ಇಂಟೆಲಿಜೆನ್ಸ್ ಏಜನ್ಸಿಗಳು ಪ್ರತ್ಯೇಕ. External agencyಯಾಗಿ mossad ಕೆಲಸ ಮಾಡಿದರೆ, internal agency ಯಾಗಿ ಕೆಲಸ ಮಾಡುವುದು shinbet. ಆ shinbetನ ಅಧಿಕಾರಿಯಾಗಿದ್ದವರು ಈ ಮನುಷ್ಯ. ಹೆಸರು ಗೊನೇನ್ ಬೆನ್ ಇಟ್ಜ್ಕಾಕ್. ಸಾಮಾನ್ಯವಾಗಿ ಬೇಹುಗಾರರು ಮಾಡುವ ಕೆಲಸಗಳು ಎಲ್ಲಿಯೂ - ಯಾವತ್ತೂ ಹೊರಗೆ ಬರಲ್ಲ. ಈ ಗೊನೇನ್ ಕೆಲಸ ಒಂದು ಅನಿವಾರ್ಯ ಸಂದರ್ಭದಲ್ಲಿ ಜಗಜ್ಜಾಹೀರಾಗಬೇಕಾಯಿತು

Intelligence Secret Agent Found in Israel; Son of Hamas Vin
Author
First Published Oct 22, 2023, 3:42 PM IST

-ಅಜಿತ್‌ ಹನಮಕ್ಕನವರ್‌, ಸಂಪಾದಕ, ಏಷ್ಯಾನೆಟ್ ಸುವರ್ಣ ನ್ಯೂಸ್

‘2015ರಿಂದಲೂ ನಿಮಗೆ ಮೆಸೇಜ್ ಮಾಡ್ತಾನೇ ಇದೀನಿ, ಇಲ್ಲಿ ನೋಡಿ’ ಅಂತ ಫೇಸ್‌ಬುಕ್‌ ಮೆಸೆಂಜರ್‌ ತೋರಿಸಿದೆ. ‘ಸ್ಪಾಮ್‌ನಲ್ಲಿ ಹೋಗಿ ಕುಳಿತುಬಿಟ್ಟಿದೆ. ಇಲ್ಲಿ ನೋಡಿ.. ನಾನು ಫೇಸ್‌ಬುಕ್‌ನಲ್ಲಿ ಅಷ್ಟೊಂದು ಆ್ಯಕ್ಟಿವ್‌ ಅಲ್ಲ..’ ಅಂತ ತಮ್ಮ ಮೆಸೆಂಜರ್‌ ತೋರಿಸಿದರು. ಫೈನಲೀ ಭೇಟಿ ಆಯಿತಲ್ಲ ಅಂತ ಇಬ್ಬರೂ ನಕ್ಕೆವು. ಆ ಮೂಲಕ ನನ್ನ ಇಸ್ರೇಲ್‌ ಭೇಟಿ ಪರಿಪೂರ್ಣ ಆಗಿತ್ತು!

ಎಂಟು ವರ್ಷಗಳಿಂದ ಮೆಸೇಜ್‌ ಕಳಿಸುತ್ತಿದ್ದದ್ದು ಇದ್ದೇ ಇತ್ತು. ಇಸ್ರೇಲ್‌ಗೆ ಹೊರಟು ನಿಂತಾಗಲೂ ಮೂರ್ನಾಲ್ಕು ಮೆಸೇಜ್‌ ಮಾಡಿದ್ದೆ. ಬಂದು ತಲುಪಿದ ನಂತರ ಕಂಡ ಕಂಡವರ ಮುಂದೆ ಅವರ ಫೋಟೋ ತೋರಿಸಿ, ಹೆಸರು ಹೇಳಿ ‘ಇವರ ಜೊತೆ ಮಾತಾಡಬೇಕು, ನಂಬರ್‌ ಇದ್ರೆ ಕೊಡ್ತೀರಾ’ ಅಂತ ಕೇಳ್ತಿದ್ದೆ. ‘ಇವರು ಗೊತ್ತು ಆದರೆ ನಂಬರ್‌ ಇಲ್ಲ, ಅಡ್ರೆಸ್‌ ಗೊತ್ತಿಲ್ಲ’ ಅಂತಿದ್ರು ಎಲ್ಲರೂ. ಒಂದು ಫೈನಲ್‌ ಪ್ರಯತ್ನ ಅಂತ ಕಾಲ್‌ ಮಾಡಿದ್ದು ಜರ್ನಲಿಸಂ ಸೇರಿದಂತೆ ಇನ್ನೂ ಏನೇನೋ ಕೆಲಸ ಮಾಡಿ ಇಸ್ರೇಲ್‌ ಹುಡುಗಿಯನ್ನು ಮದುವೆಯಾಗಿ ಜೆರುಸಲೇಂನಲ್ಲಿ ಸೆಟ್ಲ್‌ ಆಗಿರುವ ಬಂಗಾಳಿ ಹರಿಂದರ್‌ ಮಿಶ್ರಾರಿಗೆ. ಒಂದಿಷ್ಟು ಹಿನ್ನೆಲೆ-ಮುನ್ನೆಲೆ ಹೇಳಿ ಹೆಂಗಾದ್ರೂ ಮಾಡಿ ಇವರದೊಂದು ನಂಬರ್‌ ಹುಡುಕಿಕೊಡಿ, ನಿಮಗೆ ಪುಣ್ಯ ಬರುತ್ತೆ ಅಂದಿದ್ದೆ. ಹತ್ತು ನಿಮಿಷಕ್ಕೆ ಬಂದಿತ್ತು ನಂಬರ್‌.

ಮೆಸೇಜ್‌ ಮಾಡಿ, ಮಾತಾಡಿ, ಅಪಾಯಿಂಟ್‌ಮೆಂಟ್‌ ತಗೊಂಡು ಅಂತಿಮವಾಗಿ ಇವರೆದುರು ಹೋಗಿ ನಿಲ್ಲೋದಕ್ಕೆ ಮೂರು ದಿನ ಬೇಕಾದವು. ಇವರನ್ನು ಭೇಟಿಯಾಗದೇ ವಾಪಾಸ್‌ ಬಂದಿದ್ದರೆ, ನನ್ನ ಇಸ್ರೇಲ್‌ ವರದಿಗಾರಿಕೆಯ ಉದ್ದೇಶ ಪೂರ್ತಿ ಆಗ್ತಾನೇ ಇರಲಿಲ್ಲ.

ಇಸ್ರೇಲ್- ಹಮಾಸ್‌ ಸಂಘರ್ಷ: ಭೂದಾಳಿಗೆ ಇಸ್ರೇಲ್‌ ಮೀನಮೇಷ ಏಕೆ?

ಬಹುತೇಕ ಎಲ್ಲ ದೇಶಗಳಲ್ಲಿರುವಂತೆ ಇಸ್ರೇಲ್‌ನಲ್ಲೂ external ಮತ್ತು internal ಇಂಟೆಲಿಜೆನ್ಸ್ ಏಜನ್ಸಿಗಳು ಪ್ರತ್ಯೇಕ. External agencyಯಾಗಿ mossad ಕೆಲಸ ಮಾಡಿದರೆ, internal agency ಯಾಗಿ ಕೆಲಸ ಮಾಡುವುದು shinbet. ಆ shinbetನ ಅಧಿಕಾರಿಯಾಗಿದ್ದವರು ಈ ಮನುಷ್ಯ. ಹೆಸರು ಗೊನೇನ್ ಬೆನ್ ಇಟ್ಜ್ಕಾಕ್. ಸಾಮಾನ್ಯವಾಗಿ ಬೇಹುಗಾರರು ಮಾಡುವ ಕೆಲಸಗಳು ಎಲ್ಲಿಯೂ - ಯಾವತ್ತೂ ಹೊರಗೆ ಬರಲ್ಲ. ಈ ಗೊನೇನ್ ಕೆಲಸ ಒಂದು ಅನಿವಾರ್ಯ ಸಂದರ್ಭದಲ್ಲಿ ಜಗಜ್ಜಾಹೀರಾಗಬೇಕಾಯಿತು.

ಕಥೆ ಏನು ಅಂದರೆ..
ಗೊನೇನ್ ಹೆಗಲಿಗೆ ಆಗ ರಾಮಲ್ಲದ ಜವಾಬ್ದಾರಿ ಇತ್ತು. ಪ್ಯಾಲಿಸ್ತೇನಿನ ದೊಡ್ಡ ಭಾಗ ವೆಸ್ಟ್ ಬ್ಯಾಂಕ್‌ನ ರಾಜಧಾನಿ ಅದು. ಇಸ್ರೇಲ್ ವಿರೋಧಿ ಸೆಂಟಿಮೆಂಟ್‌ಗಳ ಹೃದಯ. ಅಲ್ಲಿಂದ ಹೊರಟ ಮಾನವ ಬಾಂಬ್‌ಗಳು, ಒಂಟಿ ತೋಳಗಳು ಯಹೂದಿಗಳ ರಕ್ತ ಹರಿಸುತ್ತಿದ್ದರು. ಈಗ ಗಾಝದಲ್ಲಿ ಕುಳಿತು ಇಸ್ರೇಲ್ ಬೆಚ್ಚಿಬಿಳಿಸುವಂಥ ದಾಳಿ ಮಾಡಿರುವ ಹಮಾಸ್ ಆಗ ವೆಸ್ಟ್‌ಬ್ಯಾಂಕ್‌ನ ಅತ್ಯಂತ ಜನಪ್ರಿಯ ಸಂಘಟನೆ. ಹಮಾಸ್‌ನ ಹೆಸರು ಕೇಳಿದರೆ ಇಸ್ರೇಲಿಗರು ಕಂಪಿಸಿಬಿಡುತ್ತಿದ್ದರು. ಪರಿಸ್ಥಿತಿ ಹಿಂಗಿದ್ದಾಗ ಹಮಾಸ್ ಮಾಡುವ ಭಯೋತ್ಪಾದಕ ದಾಳಿಯ ಮಾಹಿತಿ ಮೊದಲೇ ಸಂಗ್ರಹಿಸಿ ಅವನ್ನ ತಡೆಯುವ ಹೊಣೆ ಇದ್ದದ್ದು ಇದೇ ಗೊನೇನ್ ಮೇಲೆ.

ಹಮಾಸ್ ಸಂಸ್ಥಾಪಕರು ಏಳು ಜನ. ಅವರ ಪೈಕಿ ಒಬ್ಬ ಹಸ್ಸನ್ ಯೂಸುಫ್. ಹಸ್ಸನ್ ಯೂಸುಫ್‌ನ ಹಿರಿಮಗ ಮೊಸಾಬ್. ಬೆಳೆದು ದೊಡ್ಡವನಾಗಿ ದೊಡ್ಡ ಟೆರರಿಸ್ಟ್ ಆಗಬೇಕು - ತನ್ನ ಹೆಸರು ಕೇಳಿದರೆ ಯಹೂದಿಗಳು ನಡುಗಬೇಕು ಅಂತ ಕನಸು ಕಾಣಲು ಆರಂಭಿಸಿದಾಗ ಮೊಸಾಬ್ ಇನ್ನೂ ತುಂಬ ಚಿಕ್ಕ ಹುಡುಗ. ಹದಿನೆಂಟನೆ ವಯಸ್ಸಿಗೆ ಅವನೊಂದು ಆಟೋಮ್ಯಾಟಿಕ್ ವೆಪನ್ ಖರೀದಿ ಮಾಡ್ತಾನೆ. ಅದು ಶಿನ್ ಬೆಟ್ ಗೆ ಗೊತ್ತಾಗಿಬಿಟ್ಟಿತ್ತು. ಎಳಕೊಂಡು ಬಂದು ಒದ್ದರು. ಶಿನ್ ಬೆಟ್ ಸಂಸ್ಥಾಪಕನ ಮಗ ಅಂದರೆ ಇವನಿಗೇನೋ ತುಂಬ ವಿಷಯ ಗೊತ್ತಿರಬೇಕು ಅಂದುಕೊಂಡು ಚಿತ್ರಹಿಂಸೆ ಕೊಟ್ಟರು. ಆಗ ‘ಏ ಅವನಿಗ್ಯಾಕೆ ಹೊಡಿತಿದೀರಿ? ಸಣ್ಣ ಹುಡುಗ ಅವನು...’ ಅಂತ ಅಲ್ಲಿಗೆ ಬಂದವನು ಇದೇ ಗೊನೇನ್ ಇಟ್ಜ್ಕಾಕ್. ಅದೆಲ್ಲ ಪ್ರೀ ಪ್ಲಾನಿಂಗ್ ಅನ್ನೋದು ಮೊಸಬ್‌ಗೆ ಗೊತ್ತಾಗಿದ್ದು ಆಮೇಲೆ. ಗೊನೇನ್, ಮೊಸಬ್‌ನನ್ನ ಕೂಡಿಸಿಕೊಂಡು ತುಂಬ ಹೊತ್ತು ಮಾತಾಡ್ತಾನೆ. ಯಹೂದಿಗಳೆಂದರೆ ಯಾರು, ಅವರ ಶ್ರದ್ಧೆ ಏನು, ಅವರ ಮೂಲ ಎಲ್ಲಿ, ಇಸ್ರೇಲ್‌ಗೂ ಅವರಿಗೂ ಏನ್ ಸಂಬಂಧ, ಇತ್ಯಾದಿ ಇತ್ಯಾದಿ...

ಇಸ್ರೇಲ್‌ ಯುದ್ಧ ಕಣಕ್ಕಿಳಿದ ಅಮೆರಿಕ: 100ಕ್ಕೂ ಹೆಚ್ಚು ಹಮಾಸ್‌ ನೆಲೆಗಳ ಮೇಲೆ ಅಟ್ಯಾಕ್

ಮುಂದೆ ಮೊಸಬ್ ಜೈಲಿಗೆ ಹೋಗ್ತಾನೆ. ಬಿಡುಗಡೆ ಆಗ್ತಾನೆ. ಗೊನೇನ್ ಮಾತ್ರ ಅವನ ಸಂಪರ್ಕ ಕಡಿದುಕೊಳ್ಳುವುದಿಲ್ಲ. ಎಲ್ಲವೂ ರಹಸ್ಯ ಭೇಟಿಗಳೇ. ನಿಧಾನವಾಗಿ ಗೊನೇನ್ ಇಸ್ಲಾಮಿಕ್ ಜಿಹಾದ್, ಅದರ ಕವಲುಗಳು, ಹಣದ ಹರಿವು, ಒಳ ರಾಜಕೀಯದ ಬಗ್ಗೆ ಮಾತಾಡ್ತಾ ಹೋಗ್ತಾನೆ. ಇಸ್ರೇಲ್ - ಪಾಲಿಸ್ಟಿನ್ ಒಳ್ಳೆಯ ನೆರೆಹೊರೆಯವರಾಗಿ ಶಾಂತವಾಗಿ ಬದುಕುವುದು ಎಷ್ಟು ಮುಖ್ಯ ಅನ್ನುವುದನ್ನ ತಿಳಿಸಿ ಹೇಳ್ತಾನೆ. ಅಂತಿಮವಾಗಿ, ‘ನಾನು ನೀನು ಮನಸು ಮಾಡಿದರೆ ತುಂಬ ಹಿಂಸೆ ತಪ್ಪಿಸಬಹುದು, ಯೋಚಿಸಿ ನೋಡು...’ ಅಂತಾನೆ. ತುಂಬ ದೊಡ್ಡ ಕಥೆ ಅದು. ಹಮಾಸ್ ಸಂಸ್ಥಾಪಕನ ಮಗ - ಭಯೋತ್ಪಾದಕ ಆಗಬೇಕು ಅಂತ ಮಹತ್ವಕಾಂಕ್ಷೆ ಇಟ್ಟುಕೊಂಡಿದ್ದ ಹುಡುಗ ನಿಧಾನವಾಗಿ ಹಮಾಸ್‌ನ ಉಗ್ರ ಕೃತ್ಯಗಳ ಪ್ಲಾನ್ ಬಗ್ಗೆ ಗೊನೇನ್‌ಗೆ ಮಾಹಿತಿ ಕೊಡಲು ಶುರು ಮಾಡ್ತಾನೆ.

ಇಸ್ರೇಲ್ ಬೇಹುಗಾರಿಕೆ ಇತಿಹಾಸದ ಅತಿದೊಡ್ಡ ಸಾಧನೆಗಳ ಪೈಕಿ ಒಂದು ಅಂದರೆ ಹಮಾಸ್ ಸಂಸ್ಥಾಪಕನ ಮಗನನ್ನೇ ತಮ್ಮ ಮಾಹಿತಿದಾರನನ್ನಾಗಿ ಮಾಡಿಕೊಂಡಿದ್ದು. ಮೊಸಬ್ ಗೆ ‘ಗ್ರೀನ್ ಪ್ರಿನ್ಸ್’ ಅಂತ ಕೋಡ್‌ನೇಮ್ ಕೊಡಲಾಗತ್ತೆ. ಆತನ ಹ್ಯಾಂಡಲರ್ ಗೊನೇನ್‌ನ ಕೋಡ್ ನೇಮ್ ‘ಕ್ಯಾಪ್ಟನ್ ಲಾಯ್’. ಹಮಾಸ್‌ನಲ್ಲಿ ಹುಲ್ಲುಕಡ್ಡಿ ಅಲ್ಲಾಡಿದರೂ ಮೊಸಬ್‌ಗೆ ತಕ್ಷಣ ಮಾಹಿತಿ ಗೊತ್ತಾಗುತ್ತಿತ್ತು.

ಮೋಸ್ಟ್ ವಾಂಟೆಡ್ ಉಗ್ರರ ಅಡಗುತಾಣಗಳು, ಮಾನವ ಬಾಂಬ್ ಆಗಿ ತಮ್ಮನ್ನ ತಾವು ಸ್ಫೋಟಿಸಿಕೊಂಡು ಸತ್ತುಹೋಗಲು ತಯಾರಾಗಿರುವ ಹುಡುಗರು, ಅಲ್ ಅಕ್ಸ್ ಬ್ರಿಗೇಡ್ ಪ್ಲಾನ್‌ಗಳು, ಹೀಗೆ ಪ್ರತಿಯೊಂದು. ಅಷ್ಟೇ ಏನು, ಯಾಸರ್ ಅರಾಫಾತ್‌ಗೆ ಹಮಾಸ್ ಮಟ್ಟ ಹಾಕಲು ಅಮೇರಿಕ ಕೊಟ್ಟ ದುಡ್ಡು - ಆಯುಧಗಳು ಹೇಗೆ ಭಯೋತ್ಪಾದಕರ ಕೈಗೆ ಸಿಕ್ಕು ಇಸ್ರೇಲ್ ವಿರುದ್ಧ ಬಳಕೆ ಆಗುತ್ತಿವೆ ಅನ್ನೋದೂ ಗೊತ್ತಾಗುತ್ತಿತ್ತು. ವೆಸ್ಟ್ ಬ್ಯಾಂಕ್‌ನ ದೊಡ್ಡ ನಾಯಕನ ಮಗನಾಗಿ ಅವನಿಗೆ ಪ್ರವೇಶವಿಲ್ಲದ ಜಾಗ ಅಂತ ಉಗ್ರರ ಜಗತ್ತಿನಲ್ಲಿ ಯಾವುದೂ ಇರಲಿಲ್ಲ. ಜೋರ್ಡನ್ ರಾಜಧಾನಿ ಅಮಾನ್‌ನಲ್ಲಿ ಕುಳಿತು ಇಸ್ರೇಲ್ ಒಳಗೆ ಏನೇನೋ ಮಾಡಿಸುತ್ತಿದ್ದ ಹಮಾಸ್‌ನ ಪೊಲಿಟಿಕಲ್ ವಿಂಗ್‌ನ ಮುಖ್ಯಸ್ಥ ಖಾಲಿದ್ ಮಿಷಲ್‌ನನ್ನ ಕೊಲ್ಲೋದಕ್ಕೆ ಇಸ್ರೇಲ್ ತಿಪ್ಪರಲಾಗ ಹಾಕುತ್ತಿತ್ತು. ಆ ಖಾಲಿದ್ ದಿನ ಬೆಳಾಗಾದರೆ ಮೊಸಬ್ ಜತೆ ಫೋನ್‌ನಲ್ಲಿ ಮಾತಾಡುತ್ತಿದ್ದ.

ಹೀಗೆ ಶಿನ್ ಬೆಟ್‌ನ ಅಮೂಲ್ಯ ಸೋರ್ಸ್ ಆದ ಗ್ರೀನ್ ಪ್ರಿನ್ಸ್. ಆತ ಕ್ಯಾಪ್ಟನ್ ಲಾಯ್ ಜತೆ ಸೇರಿಕೊಂಡು ತಪ್ಪಿಸಿದ ಭಯೋತ್ಪಾದಕ ದಾಳಿಗಳು ಎಷ್ಟೋ. ಆತನಿಂದ ಮತ್ತಷ್ಟು ಮಾಹಿತಿಗಳು ಸಿಗುತ್ತಿರಬೇಕು - ಸಿಗುತ್ತಲೇ ಇರಬೇಕು ಅಂದರೆ ಮೊಸಬ್ ವೆಸ್ಟ್ ಬ್ಯಾಂಕ್ ನಲ್ಲಿ ಮತ್ತಷ್ಟು ಪ್ರತಿಷ್ಠಿತನಾಗಬೇಕಿತ್ತು - ಹಮಾಸ್ ನಲ್ಲಿ ಎತ್ತರೆತ್ತರಕ್ಕೆ ಬೆಳೆಯಬೇಕಿತ್ತು. ಅದಕ್ಕೆ ಬೇಕಾದ ವ್ಯವಸ್ಥೆಗಳನ್ನೆಲ್ಲ ಇದೇ ಗೊನೇನ್ ಮಾಡುತ್ತಿದ್ದ. ಮೋಸ್ಟ್ ವಾಂಟೆಡ್ ಉಗ್ರ ಅಂತ ಆತನನ್ನ ಬಿಂಬಿಸಲಾಯಿತು. ಒಮ್ಮೆ ಹಮಾಸ್‌ಗೆ ಆತನ ಮೇಲೆ ಸಂಶಯ ಬಂದಾಗ ಇದೇ ಕ್ಯಾಪ್ಟನ್ ಲಾಯ್ ಕಥೆ ಚಿತ್ರಕತೆ ಸಂಭಾಷಣೆ ಬರೆದು ನಾಟಕವನ್ನೂ ಆಡಿಸಿಬಿಟ್ಟ.

ಯುದ್ಧಭೂಮಿಯಲ್ಲಿ ಸುವರ್ಣ ನ್ಯೂಸ್ ಸಂಚಾರ: ಕಣ್ಣೆದುರೇ ರಾಕೆಟ್ ಅಟ್ಯಾಕ್..ಲೈವ್‌ನಲ್ಲೇ ಸೈರನ್ ಸದ್ದು..!

ಮೊಸಬ್ ತನ್ನ ಮನೆಗೆ ಹೋಗಿ ಅರ್ಧ ಗಂಟೆ ಇರೋದು, ಹೊರಗೆ ಬಂದು ಅಕ್ಕಪಕ್ಕದವರ ಜತೆ ಹರಟೆ ಹೊಡೆಯುತ್ತ ಸ್ವಲ್ಪ ಹೊತ್ತು ರಸ್ತೆಯಲ್ಲಿ ನಿಂತು ನಂತರ ಕಾರು ಹತ್ತಿಕೊಂಡು ತನ್ನ ಪಾಡಿಗೆ ತಾನು ಹೊರಟುಹೋಗೋದು. ಅದಾದ ಹತ್ತೇ ನಿಮಿಷಕ್ಕೆ ಇಸ್ರೇಲ್ ಸೇನೆ ಆತನ ಮನೆಯನ್ನ ಸುತ್ತುವರೆಯತ್ತೆ. ‘ಮೊಸಬ್, ನೀನು ಒಳಗಿದ್ದೀಯ ನಮಗೆ ಗೊತ್ತು, ಸುಮ್ಮನೆ ಎರಡೂ ಕೈ ಮೇಲೆತ್ತಿಕೊಂಡು ಹೊರಗೆ ಬಂದು ಸರೆಂಡರ್ ಆಗಿಬಿಡು. ಗುಂಡು ಗಿಂಡು ಹಾರಿಸಿ ನಾಟಕ ಮಾಡಿದರೆ ಕೊಂದುಬಿಡ್ತೀವಿ...’ ಅಂತ ಲೌಡ್ ಸ್ಪೀಕರ್‌ನಲ್ಲಿ ಅನೌನ್ಸ್ ಮಾಡ್ತಾರೆ.

ಅದೇ ಹೊತ್ತಿಗೆ ಅಲ್ ಜಝೆರಾ ನ್ಯೂಸ್ ಚಾನೆಲ್‌ಗೆ ಇಸ್ರೇಲ್‌ನವರೇ ಅನಾಮಿಕ ಅಂತ ಫೋನ್ ಮಾಡಿ ಹಸನ್ ಯೂಸುಫ್ ಮಗನ್ನ ಹುಡುಕಿಕೊಂಡು ಸೈನ್ಯ ಬಂದಿದೆ ಅಂತ ಸುದ್ದಿ ಕೊಡ್ತಾರೆ. ಅವರು ಲೈವ್ ಮಾಡೋದಕ್ಕೆ DSNG ವ್ಯಾನ್ ಬರೋದಕ್ಕೂ - ಗೊನೇನ್ ಕಳಿಸಿದ ಮಿಲಿಟರಿ ಟ್ಯಾಂಕ್‌ಗಳು ಮನೆ ಸುತ್ತುವರೆಯೋದಕ್ಕೂ ಸರಿ ಹೋಗತ್ತೆ. ಮನೆಯಲ್ಲಿದ್ದವರೆಲ್ಲ ಕೈ ಎತ್ತಿಕೊಂಡು ಹೊರಗೆ ಬರ್ತಾರೆ.

ಮೊಸಬ್‌ಗೆ ಗಡುವು ಕೊಟ್ಟಂತೆ ಎಚ್ಚರಿಕೆ ಕೊಟ್ಟು ಲೌಡ್ ಸ್ಪೀಕರ್‌ನಲ್ಲಿ ಕೂಗುವ ಮಿಲಿಟರಿ ಅಂತಿಮವಾಗಿ ಒಂದರ ನಂತರ ಒಂದರಂತೆ ಶೆಲ್ ಸಿಡಿಸಿ ಇಡಿ ಮನೆಯನ್ನ ಧ್ವಂಸ ಮಾಡಿಬಿಡತ್ತೆ. ಮೊಸಬ್, ರಾಮಲ್ಲಾದಲ್ಲೇ ಒಂದು ಹೋಟೆಲಿನ ರೂಮಿನಲ್ಲಿ ಒಬ್ಬನೇ ಕುಳಿತು ಅಲ್ ಜಝೆರಾ ಚಾನೆಲ್‌ನಲ್ಲಿ ಎಲ್ಲವನ್ನೂ ಲೈವ್ ನೋಡ್ತಿರ್ತಾನೆ. ಕೊನೆಗೆ ಗೊನೇನ್ ಫೋನ್ ಮಾಡಿ, ‘ಎಲ್ಲ ಸರಿ ಇತ್ತಲ್ವಾ..?’ ಅಂತ ಕೇಳ್ತಾನೆ. ದಿನ ಬೆಳಗಾಗುವಷ್ಟರಲ್ಲಿ ಮೊಸಬ್ ಹೀರೋ. ವೆಸ್ಟ್ ಬ್ಯಾಂಕ್‌ನ ಹುಡುಗರು ಹುಚ್ಚೆದ್ದುಬಿಡ್ತಾರೆ. ಅಷ್ಟೂ ಭಯೋತ್ಪಾದಕ ಸಂಘಟನೆಗಳಲ್ಲಿ ಆತನ ಬಗ್ಗೆಯೇ ಚರ್ಚೆ. ಅವನನ್ನ ಹುಡುಕಿಕೊಂಡು ಇಸ್ರೇಲಿ ಸೇನೆ ಯುದ್ಧ ಟ್ಯಾಂಕರ್ ತಗೊಂಡು ಬಂದಿದ್ದನ್ನ ನ್ಯೂಸ್ ಚಾನೆಲ್‌ನವರು ಲೈವ್ ತೋರಿಸಿದ್ದರಲ್ಲ..!

‘ಹತ್ತು ನಿಮಿಷ ತಡ ಆಗಿದ್ದರೆ ಪ್ರಾಣ ಕಳೆದುಕೊಳ್ತಿದ್ದ. ಹಮಾಸ್ ನಾಯಕನ ಮಗ ಯಹೂದಿಗಳ ನಿದ್ದೆಗೆಡಿಸಿದ್ದಾನೆ. ಹುಲಿ ಹೊಟ್ಟೇಲಿ ಹುಲಿನೇ ಹುಟ್ಟೋದು. ದುಷ್ಟ ಇಸ್ರೇಲಿಗರು ಅವನ ಮನೆ ನೆಲಸಮ ಮಾಡಿಬಿಟ್ಟರು..’ ಅಂತೆಲ್ಲ ಚರ್ಚೆ. ಅದೇ ಇಸ್ರೇಲಿಗರು ಹೊಸ ಮನೆ ಕಟ್ಟಿಸಿಕೊಳ್ಳೋದಕ್ಕೆ ರಹಸ್ಯವಾಗಿ ದುಡ್ಡು ಕೊಟ್ಟರು, ಆ ಮಾತು ಬೇರೆ.

900 ವರ್ಷಗಳ ಇತಿಹಾಸ ಚರ್ಚ್‌ಗೆ ಬಾಂಬ್‌ ಎಸೆದ ಇಸ್ರೇಲ್‌, ಗಾಜಾದಲ್ಲಿ 4 ಸಾವಿರದ ಗಡಿ ಮುಟ್ಟಿದ ಸಾವು!

ಮೊಸಬ್ ಇನ್ನಷ್ಟು ಉಪಕಾರಿ ಆಗಬೇಕು ಅಂದರೆ ಆತ ಒಳ್ಳೆಯ ಮುಸಲ್ಮಾನ ಆಗಬೇಕು. ಚಟಗಳು, ಅನೈತಿಕ ಸಂಬಂಧಗಳಿಗೆಲ್ಲ ಬೀಳಬಾರದು. ಕೇವಲ ಧಾರ್ಮಿಕ, ಭಯೋತ್ಪಾದಕರ ವಲಯದಲ್ಲಿ ಮಾತ್ರ ಅಲ್ಲ, ವೆಸ್ಟ್ ಬ್ಯಾಂಕ್‌ನ ಪ್ರತಿಷ್ಠಿತರ ವಲಯದಲ್ಲೂ ಇರಬೇಕು. ಅದಕ್ಕೆ ಅವನೊಂದು ಕಂಪನಿ ಶುರುಮಾಡಿ ಬಿಸಿನೆಸ್ ಮ್ಯಾನ್ ಅನ್ನಿಸಿಕೊಳ್ಳಬೇಕು ಅಂತೆಲ್ಲ ಪ್ಲಾನ್ ಇತ್ತು ಗೊನೇನ್‌ಗೆ. ಅಂಥ ಗೊನೇನ್ ಶಿನ್ ಬೆಟ್‌ನಿಂದ ರಿಟೈರ್ಡ್‌ ಆಗಿಬಿಟ್ಟ. ಹೊಸಾ ವ್ಯಕ್ತಿ ಮೊಸಬ್‌ನನ್ನ ಗೌರವದಿಂದ ನಡೆಸಿಕೊಳ್ಳಲಿಲ್ಲ. ಅಷ್ಟೊತ್ತಿಗೆ ಅವನಿಗೂ ಇದೆಲ್ಲ ಸಾಕು ಅನ್ನಿಸಿತ್ತು. ಇಸ್ಲಾಂ ಓದಿಕೊಳ್ಳೋದಕ್ಕೆ ಶುರು ಮಾಡಿದ್ದ. ಕೆಲವು ಕರಾಳ ಸತ್ಯಗಳು ಆತನೆದುರು ತೆರೆದುಕೊಳ್ಳೋದಕ್ಕೆ ಶುರುವಾಗಿದ್ದವು. ತುಂಬ ರಹಸ್ಯವಾಗಿ ಇಸ್ಲಾಂ ತೊರೆದು ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದ. ಕೊನೆಗೊಂದು ದಿನ, ‘ನನಗಿದೆಲ್ಲ ಸಾಕು, ನಾನೊಂದು ನಾರ್ಮಲ್ ಲೈಫ್ ಬದುಕಬೇಕು’ ಅಂತ ಗೊನೇನ್ ಬಳಿ ಹೇಳಿಕೊಂಡ. ಇನ್ಮುಂದೆ ಗ್ರೀನ್ ಪ್ರಿನ್ಸ್ ನಮ್ಮ ಮಾಹಿತಿದಾರನಾಗಿ ಇರಲ್ವಂತೆ ಅನ್ನೋ ಸುದ್ದಿ ಶಿನ್ ಬೆಟ್‌ನ ಅಲ್ಲಾಡಿಸಿಬಿಟ್ಟಿತ್ತು. ಗ್ರೀನ್ ಪ್ರಿನ್ಸ್ ಯಾರು ಅಂತ ಶಿನ್ ಬೆಟ್‌ನಲ್ಲಿ ಗೊತ್ತಿದ್ದವರು ಕೆಲವೇ ಕೆಲವರು. ಆದರೆ ಆತ ಕೊಟ್ಟ ಮಾಹಿತಿ ಈ ಭಾಗದ ಶಾಂತಿಗೆ ಎಷ್ಟು ಮುಖ್ಯ ಅನ್ನೋದು ಅನೇಕರಿಗೆ ಗೊತ್ತಿತ್ತು.

‘ಒಂದೆರಡು ತಿಂಗಳು ಯುರೋಪ್ ಸುತ್ತಾಡಿಕೊಂಡು ಬಾ, ಮನಸು ಹಗುರ ಆಗತ್ತೆ. ಎಲ್ಲಾ ವ್ಯವಸ್ಥೆ ಮಾಡ್ತೀನಿ’ ಅಂತ ಹೊಸ ಹ್ಯಾಂಡಲರ್‌ಗಳಿಗೆ ಹೇಳಿದಂತೆ ಹೇಳ್ತಾನೆ. ಮೊಸಬ್ ಮನಸ್ಸಿನಲ್ಲಿ ಇನ್ನೇನೋ ಇತ್ತು. ‘ನಾನು ಅಮೇರಿಕಾಕ್ಕೇ ಹೋಗಬೇಕು..’ ಅಂತ ಹಠ ಮಾಡಿದ. ದವಡೆ ಆಪರೇಷನ್ ನೆಪದಲ್ಲಿ ಅಮೇರಿಕ ಪ್ರವಾಸದ ಪ್ಲಾನ್ ಆಯಿತು. ಆದಷ್ಟು ಬೇಗ ಬಂದುಬಿಡು ಅಂತ ಹೇಳಿ ಕಳಿಸಿತು ಶಿನ್ ಬೆಟ್. ಆದರೆ ಮೊಸಾಬ್ ಮನಸಿನಲ್ಲಿ ಇನ್ನೇನೋ ಇತ್ತು.

ಅಮೇರಿಕಕ್ಕೆ ಹೋಗಿ ತನ್ನ ಬದುಕಿನ ಕಥೆ ಹೇಳಿಕೊಂಡು, ವಾಪಸ್ ಅಲ್ಲಿಗೆ ಹೋದರೆ ಕೊಲೆಯಾಗ್ತೀನಿ, ನನಗೆ ಇಲ್ಲೇ ಬದುಕೋದಕ್ಕೆ ಅವಕಾಶ ಕೊಡಿ ಅಂತ ಕೇಳಿಕೊಂಡ. ಅಮೇರಿಕಕ್ಕೆ ಆಘಾತ. ತನ್ನ ಪರಮ ಶತ್ರು ಹಮಾಸ್‌ನ ಸಂಸ್ಥಾಪಕನ ಮಗ ತನ್ನ ದೇಶಕ್ಕೆ ಬಂದದ್ದು ತನಗೆ ಗೊತ್ತೇ ಆಗಲಿಲ್ಲ ಅಂತ. ಮೊಸಬ್ ಪರವಾಗಿ ಅಮೇರಿಕಾದಲ್ಲಿ ಧ್ವನಿ ಎದ್ದಿತು. ‘ನೀನು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿಲ್ಲ - ಇಸ್ರೇಲ್ ಜತೆ ಸೇರಿಕೊಂಡು ಹಮಾಸ್ ವಿರುದ್ಧ ಕೆಲಸ ಮಾಡಿದೀಯ ಅನ್ನೋದಕ್ಕೆ ಸಾಕ್ಷಿ ಕೊಡು’ ಅಂದಿತು ಕೋರ್ಟ್.

ಎಲ್ಲಿಂದ ತರ್ತಾನೆ ಸಾಕ್ಷಿ..? 
ಒಂದು ದಾರಿ ಇತ್ತು. ಗೊನೇನ್ ಅಮೇರಿಕಕ್ಕೆ ಬಂದು ಕಟಕಟೆಯಲ್ಲಿ ನಿಂತು, ‘ಮೊಸಬ್ ಹೇಳಿದ್ದೆಲ್ಲ ನಿಜ’ ಅನ್ನಬೇಕು. ಗೊನೇನ್ ತಯಾರಿದ್ದ. ಆದರೆ ಇಸ್ರೇಲ್ ಸರಕಾರ ‘ನೋ’ ಅಂದಿತು. ಉಳಿದೆಲ್ಲಕ್ಕಿಂತ ಗೆಳೆಯನ ಪರವಾಗಿ ನಿಂತುಕೊಳ್ಳೋದು ಧರ್ಮ ಅಂತ ಗೊನೇನ್ ಅಮೇರಿಕಕ್ಕೆ ಬಂದು ಸಾಕ್ಷಿ ಹೇಳಿದ. ಆ ದೇಶ ಮೊಸಬ್‌ಗೆ ರಾಜಕೀಯ ಶರಣಾಗತಿ ಕೊಟ್ಟಿತು.

ಮೊಸಬ್ ಅಮೆರಿಕಾದ ಕೋರ್ಟಿಗೆ ಕೊಟ್ಟ ವಿವರವಾದ ಹೇಳಿಕೆ ಆತನ ಆತ್ಮಕತೆಯಾಗಿ ಪ್ರಕಟವಾಯಿತು. ‘ಸನ್ ಆಫ್ ಹಮಾಸ್’ ಹೆಸರಿನಲ್ಲಿ. ಅದನ್ನ ಕನ್ನಡಕ್ಕೆ ತಂದವನು ನಾನು. ಒಂದು ಕಾಪಿ ತಗೊಂಡು ಹೋಗಿ ಗೊನೇನ್‌ಗೆ ಕೊಟ್ಟೆ. ಅದೆಷ್ಟು ಖುಷಿ ಪಟ್ಟ ಅಂತೀರಿ...

Follow Us:
Download App:
  • android
  • ios