ಇಸ್ರೇಲ್- ಹಮಾಸ್ ಸಂಘರ್ಷ: ಭೂದಾಳಿಗೆ ಇಸ್ರೇಲ್ ಮೀನಮೇಷ ಏಕೆ?
ನೀವು 2000 ವರ್ಷ ಹಿಂದೆ ಹೋಗಲು ತಯಾರು ಇದ್ದರೆ, ಇಸ್ರೇಲ್ ಸರಿ. ನೀವು ಬರೀ 800 ವರ್ಷ ಹಿಂದೆ ಹೋಗಲು ಮಾತ್ರ ತಯಾರು ಇದ್ದರೆ, ಪ್ಯಾಲೆಸ್ತೀನ್ ಸರಿ. ಆದರೆ ಇವತ್ತು ಸರಿ- ತಪ್ಪುಗಳ ವ್ಯಾಖ್ಯೆ ನೀವು ಯಾವ ಧರ್ಮದ ದುರ್ಬೀನು ಹಾಕಿ ನೋಡುತ್ತಿದ್ದೀರೋ ಅದರ ಮೇಲೆ ನಿಂತಿದೆ.
- ಪ್ರಶಾಂತ್ ನಾತು ಇಂಡಿಯಾ ಗೇಟ್ ಅಂಕಣ
ಹಮಾಸ್ ನಡೆಸಿರುವ ದಾಳಿಯಿಂದ ಕ್ರುದ್ಧವಾಗಿರುವ ಇಸ್ರೇಲ್ ಸೇನೆ 23 ಲಕ್ಷ ಪ್ಯಾಲೆಸ್ತೀನ್ ನಿವಾಸಿಗಳಿರುವ ಗಾಜಾವನ್ನು ಸುತ್ತುವರೆದಿದೆ. ಇನ್ನೊಂದು ಕಡೆ ಹಮಾಸ್ ಉಗ್ರರು 199 ಯಹೂದಿಗಳನ್ನು ಅದೇ ಗಾಜಾದಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಒತ್ತೆಯಾಳುಗಳನ್ನು ಬಿಡಿಸಿಕೊಳ್ಳದೆ ಇಸ್ರೇಲ್ ಸೇನೆ ಹಿಂದೆ ಸರಿಯುವುದು ಅಸಾಧ್ಯ. ಆದರೆ ಹಾಗೆಂದು ಭೂ ಮಾರ್ಗವಾಗಿ ಇಸ್ರೇಲ್ ಸೇನೆ ಒಳಗೆ ನುಗ್ಗಿದರೆ ಎಷ್ಟು ದಿನ ಯುದ್ಧ ನಡೆಯುತ್ತದೆ ಎಂದು ಹೇಳುವುದು ಕಷ್ಟ. ಹಿಂದೆ 2001ರಲ್ಲಿ ಕಾಬೂಲ್ ವಶಪಡಿಸಿಕೊಂಡ ಅಮೆರಿಕ ನಂತರ ಅಲ್ಲಿಂದ ಹೊರಗಡೆ ಬಂದಾಗ ಅದೇ ತಾಲಿಬಾನಿಗಳ ಕೈಗೆ ಅಧಿಕಾರ ಕೊಡಬೇಕಾಯಿತು. ನಂತರ ಇರಾಕ್‌ನ ಬಾಗ್ದಾದ್ ವಶಪಡಿಸಿಕೊಂಡು ಅಲ್ಲಿಂದ ಅಮೆರಿಕದ ಸೇನೆ ಹೊರಗೆ ಬಂದಾಗ ಅಲ್ಲಿ ಐಸಿಸ್ ಉಗ್ರರು ಬಂದು ಕುಳಿತಿದ್ದರು. ಹೀಗಾಗಿ ಇಸ್ರೇಲ್ ಗಾಜಾದ ಒಳಕ್ಕೆ ಪ್ರವೇಶಿಸಬೇಕಾದರೆ ಪರ್ಯಾಯ ಯೋಚನೆ ಏನು ಅನ್ನುವುದು ಮುಖ್ಯ ಆಗುತ್ತದೆ. ಇವತ್ತು ಹಮಾಸ್ ದಾಳಿ ನಂತರ ನಾಗರಿಕ ಸಮಾಜದ ಅನುಕಂಪ ಇಸ್ರೇಲ್ ಜೊತೆಗಿದೆ. ಒಂದು ವೇಳೆ ಗಾಜಾ ಒಳಗಡೆ ಏನಾದರೂ ಇಸ್ರೇಲ್‌ನಿಂದ ಅತಿರೇಕಗಳು ಸಂಭವಿಸಿದರೆ ಅನುಕಂಪ ಪ್ಯಾಲೆಸ್ತೀನ್ ಕಡೆ ತಿರುಗಲೂಬಹುದು. ಗಾಜಾ ದಾಳಿ ಅರಬ್ ರಾಷ್ಟ್ರಗಳನ್ನು ಇಸ್ರೇಲ್ ವಿರುದ್ಧ ಒಟ್ಟಿಗೆ ತರಬಹುದು. ಅದು ಮತ್ತೊಂದು ಸುತ್ತಿನ ಅರಬ್-ಇಸ್ರೇಲ್ ಯುದ್ಧಕ್ಕೆ ತಿರುಗಿದರೆ ಅದರ ರಾಜಕೀಯ ಆರ್ಥಿಕ ಪರಿಣಾಮಗಳು ವಿಪರೀತ. ಹೀಗಾಗಿ ಅದು ಆಗದಂತೆ ತಡೆಯಲು ಅಮೆರಿಕ ಪ್ರಯತ್ನ ಪಡುತ್ತಿದೆ.
ಸುಮ್ನೆ ಅಲ್ಲ ಹಿಟ್ಲರ್ ಯಹೂದಿಗಳ ಮರಣಹೋಮ ಮಾಡಿದ್ದು ಎಂದ ಬ್ಯಾಂಕ್ ಉದ್ಯೋಗಿ ಮನೆಗೆ
ಇಸ್ರೇಲ್-ಅರಬ್ ಸಂಘರ್ಷದ ಕತೆ
75 ವರ್ಷದ ಹಿಂದೆ ಒಂದು ಮನೆಯ ಚಾವಿಯನ್ನು ಇಬ್ಬರಿಗೆ ಕೊಟ್ಟು, ಇಬ್ಬರ ಕೈಯಲ್ಲೂ ಒಂದೊಂದು ಬಂದೂಕು ಇಟ್ಟು ಹೋದ ಪಶ್ಚಿಮದ ರಾಷ್ಟ್ರಗಳು ಈಗ ಎಲ್ಲಿ ಸಂಘರ್ಷ ತಮ್ಮ ಮನೆ ಹತ್ತಿರಕ್ಕೂ ಬರಬಹುದು ಎಂದು ಇಸ್ರೇಲ್- ಹಮಾಸ್ ನಡುವೆ ಸೀಮಿತ ಯುದ್ಧ ಓಕೆ, ಮಹಾ ಯುದ್ಧ ಮಾತ್ರ ಬೇಡ ಅನ್ನುತ್ತಿವೆ. ಈ ಸಂಘರ್ಷದಲ್ಲಿ ಯಾರು ಸರಿ, ಯಾರು ತಪ್ಪು ಎನ್ನುವುದೇ ಅರ್ಥಹೀನ ಪ್ರಶ್ನೆ. ಏಕೆಂದರೆ ನೀವು 2000 ವರ್ಷ ಹಿಂದೆ ಹೋಗಲು ತಯಾರು ಇದ್ದರೆ, ಇಸ್ರೇಲ್ ಸರಿ. ನೀವು ಬರೀ 800 ವರ್ಷ ಹಿಂದೆ ಹೋಗಲು ಮಾತ್ರ ತಯಾರು ಇದ್ದರೆ, ಪ್ಯಾಲೆಸ್ತೀನ್ ಸರಿ. ಆದರೆ ಇವತ್ತು ಸರಿ- ತಪ್ಪುಗಳ ವ್ಯಾಖ್ಯೆ ನೀವು ಯಾವ ಧರ್ಮದ ದುರ್ಬೀನು ಹಾಕಿ ನೋಡುತ್ತಿದ್ದೀರೋ ಅದರ ಮೇಲೆ ಹೆಚ್ಚು ಅವಲಂಬಿತವಾಗಿದೆ. ನೀವು ಮುಸ್ಲಿಂ ಆಗಿದ್ದರೆ, ಪ್ಯಾಲೆಸ್ತೀನ್ ಸರಿ. ನೀವು ಯಹೂದಿ ಅಥವಾ ಕ್ರಿಶ್ಚಿಯನ್ ಆಗಿದ್ದರೆ, ಇಸ್ರೇಲ್ ಮಾಡುತ್ತಿರುವುದು ಅಸ್ತಿತ್ವದ ದೃಷ್ಟಿಯಿಂದ ಸರಿ. ಆದರೆ ಈ ಧರ್ಮ ಆಧಾರಿತ ದೃಷ್ಟಿಕೋನಗಳು ಸಂಘರ್ಷದ ಕಣ್ಣು ಮುಚ್ಚಾಲೆಗೆ ಉಪಯೋಗವೇ ಹೊರತು ಸಮಸ್ಯೆ ಪರಿಹಾರ ಆಗಬೇಕಾದರೆ ಧರ್ಮ ಯಾವುದು ಇದ್ದರೇನು ಕೂಡಿ ಬಾಳಬೇಕು, ಬಾಳುವುದು ಸಾಧ್ಯವಿದೆ ಎಂಬ ವಾಸ್ತವದ ಅರಿವು, ಆ ವಾಸ್ತವ ಅರ್ಥ ಆಗದೇ ಪಶ್ಚಿಮ ಏಷ್ಯಾದ ಸಂಕಟ ಬಗೆಹರಿಯುವುದು ಸಾಧ್ಯವಿಲ್ಲ.
ಬ್ರಿಟಿಷರು ಮಾಡಿದ ಎಡವಟ್ಟು
ಮೊದಲನೇ ಮಹಾಯುದ್ಧದ ನಂತರ ಯಾವಾಗ ಒಟ್ಟೋಮನ್ ಸಾಮ್ರಾಜ್ಯ ಕುಸಿದುಬಿತ್ತೋ ಆಗಿನಿಂದಲೇ 2000 ವರ್ಷ ತಾಯಿ ನೆಲದಿಂದ ದೂರ ಇದ್ದ ಯಹೂದಿಗಳು ವಾಪಸ್ ಬಂದು ಒಂದು ದೇಶವಾಗಿ ಬದುಕುವ ಕನಸು ಕಂಡರು. ಅದು ಮೂರ್ತ ರೂಪ ಪಡೆದದ್ದು ಎರಡನೇ ಮಹಾಯುದ್ಧದ ನಂತರವೇ. ದಕ್ಷಿಣ ಏಷ್ಯಾದಲ್ಲಿ ಯಾವುದೇ ಮುಂದಾಲೋಚನೆ ಇಲ್ಲದೆ ಧರ್ಮಗಳ ಆಧಾರದ ಮೇಲೆ ಭಾರತ-ಪಾಕಿಸ್ತಾನವನ್ನು ತುಂಡು ಮಾಡಿದ ಬ್ರಿಟಿಷರು, ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್- ಪ್ಯಾಲೆಸ್ತೀನ್ ಎಂಬ ಎರಡು ದೇಶಗಳನ್ನು ಭೂಪಟದ ಮೇಲೆ ಗೆರೆ ಎಳೆದು ‘ಈಗ ನಿಮ್ಮದು ನೀವು ನೋಡಿಕೊಳ್ಳಿ’ ಎಂದು ಲಂಡನ್‌ಗೆ ಹೊರಟು ಹೋದರು. ಅವತ್ತೇ ಕುಳಿತು ಎರಡು ರಾಷ್ಟ್ರಗಳನ್ನು ಸರಿಯಾಗಿ ವಿಂಗಡಿಸಿ ಹೋಗಿದ್ದರೆ ಇವತ್ತು ಬಂದೂಕು ಹಿಡಿದು ಇದು ನಮ್ಮದು- ನಿಮ್ಮದು ಎಂಬ ಸಂಘರ್ಷದ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಒಂದಿಷ್ಟು ಸೂಕ್ಷ್ಮವಾಗಿ ನೋಡಿದರೆ ಪಶ್ಚಿಮದ ದೇಶಗಳಿಗೆ ಮತ್ತು ಅಮೆರಿಕಕ್ಕೆ ದಕ್ಷಿಣ ಏಷ್ಯಾದಲ್ಲಿ ಭಾರತ-ಪಾಕ್ ಸಂಘರ್ಷದ ಕಾರಣದಿಂದ ಮತ್ತು ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್- ಪ್ಯಾಲೆಸ್ತೀನ್ ಸಂಘರ್ಷದ ಕಾರಣದಿಂದ ಮಧ್ಯ ಪ್ರವೇಶಿಸಲು ಆಗಾಗ ಅವಕಾಶ ಸಿಗುತ್ತದೆ.
ಒಂದು ಇತಿಹಾಸದ ಸತ್ಯ ಏನೆಂದರೆ, ಯೇಸುವಿನ ಪೂರ್ವಜರಾದ ಅಬ್ರಹಾಂ ವಂಶಜ ಯಹೂದಿಗಳನ್ನು ಮೊದಲು ದೇಶ ಭ್ರಷ್ಟಗೊಳಿಸಿದ್ದು ಕ್ರಿಶ್ಚಿಯನ್ ಸಾಮ್ರಾಜ್ಯಗಳು. ನಂತರ ಅಳಿದುಳಿದ ಯಹೂದಿಗಳನ್ನು ಅವರ ದೇವಾಲಯಗಳ ಸಮೇತ ನಾಮಾವಶೇಷಗೊಳಿಸಿದ್ದು ಅಬ್ರಹಾಂನನ್ನು ಪ್ರವಾದಿ ಎಂದು ಒಪ್ಪಿಕೊಳ್ಳುವ ಮುಸ್ಲಿಂ ಸಾಮ್ರಾಜ್ಯಗಳು. ಅದಾದ ಮೇಲೆ ದೇಶಭ್ರಷ್ಟರಾಗಿದ್ದ ಯಹೂದಿಗಳ ನರಮೇಧ ನಡೆದದ್ದು ಕ್ರಿಶ್ಚಿಯನ್ ದೇಶಗಳಲ್ಲಿ. ನಂತರ ಈ ತಪ್ಪಿಗೆ ಪ್ರಾಯಶ್ಚಿತ್ತ ಎಂಬಂತೆ ಪಶ್ಚಿಮದ ದೇಶಗಳು ಇಸ್ರೇಲ್ ರಾಷ್ಟ್ರ ಮಾಡಲು ಅವಕಾಶ ಕೊಟ್ಟಿದ್ದು 800 ವರ್ಷಗಳಿಂದ ಯಹೂದಿಗಳನ್ನು ರಾಜಕೀಯವಾಗಿ ಗಂಭೀರತೆಯಿಂದ ನೋಡಿಯೇ ಇರದಿದ್ದ ಅರಬ್ ಮುಸ್ಲಿಮರ ನೆಲದಲ್ಲಿ. ಈ ಹಿಂದಿನ ಸಂಘರ್ಷ ಯಾಕೆ ನಡೆದಿತ್ತು ಎಂದು ಅರ್ಥ ಮಾಡಿಕೊಂಡರೆ ಮಾತ್ರ ಈಗಿನದು ಯಾಕೆ ಹೀಗೆ ಎಂದು ಅರ್ಥ ಆಗುತ್ತದೆ.
ಅರಬ್ ದೇಶಗಳ ದ್ವಂದ್ವ ನಿಲುವು
1948ರಲ್ಲಿ ವಿಶ್ವಸಂಸ್ಥೆ ಇಸ್ರೇಲ್- ಪ್ಯಾಲೆಸ್ತೀನ್ ದೇಶಗಳನ್ನು ಅಧಿಕೃತವಾಗಿ ಘೋಷಿಸಿದಾಗ ಇಸ್ರೇಲ್ ಹ್ಞೂಂ ಅಂದಿತು. ಆದರೆ ಅಕ್ಕಪಕ್ಕದ ಸಿರಿಯಾ, ಜೋರ್ಡನ್, ಈಜಿಪ್ಟ್‌ನಂತಹ ರಾಷ್ಟ್ರಗಳ ಮಾತು ಕೇಳಿದ ಪ್ಯಾಲೆಸ್ತೀನಿಯರು ಇಸ್ರೇಲ್‌ನ ಅಸ್ತಿತ್ವ ಒಪ್ಪಿಕೊಳ್ಳಲಿಲ್ಲ. ದೇಶ ರಚನೆ ಆದಾಗಲೇ ಜೋರ್ಡನ್ ಪೂರ್ವ ಜೆರುಸಲೇಂ ಮೇಲೆ ದಾಳಿ ಮಾಡಿ ಯಹೂದಿಗಳ ಪಶ್ಚಿಮ ಗೋಡೆ, ಮುಸ್ಲಿಮರ ಪವಿತ್ರ ಮಸೀದಿ ಮತ್ತು ಇಸಾಯಿಗಳ ಚರ್ಚ್ ಅನ್ನು ತನ್ನ ವಶದಲ್ಲಿ ಇಟ್ಟುಕೊಂಡಿತ್ತು. ಈಜಿಪ್ಟ್ ಗಾಜಾದ ಭಾಗವನ್ನು, ಸಿರಿಯಾ ಲೆಬನಾನ್‌ನ ಅಕ್ಕಪಕ್ಕದ ಪ್ರದೇಶವನ್ನು ವಶಪಡಿಸಿಕೊಂಡವು. ಅದನ್ನು ಪ್ಯಾಲೆಸ್ತೀನಿಯರು ಪ್ರಶ್ನಿಸಿದಾಗ, ಈ ಯಹೂದಿಗಳನ್ನು ಪೂರ್ತಿ ಹೊರಗೆ ಹಾಕೋಣ, ಆಮೇಲೆ ಪೂರ್ತಿ ನಿಯಂತ್ರಣ ನಿಮಗೆ ಕೊಡುತ್ತೇವೆ ಎಂದು 1967ರವರೆಗೆ ಸಾಗ ಹಾಕಿದರು. 6 ದಿನಗಳ ಯುದ್ಧದಲ್ಲಿ ಪುನರಪಿ ಈ ಎಲ್ಲಾ ಭಾಗಗಳನ್ನು ಇಸ್ರೇಲ್ ನಿಯಂತ್ರಣಕ್ಕೆ ತೆಗೆದುಕೊಂಡಿತು. ಈಗಲೂ ಈಜಿಪ್ಟ್, ಲೆಬನಾನ್, ಜೋರ್ಡನ್‌ಗಳಿಗೆ ಯಹೂದಿಗಳ ವಿರುದ್ಧ ಹೋರಾಡಲು ಪ್ಯಾಲೆಸ್ತೀನ್ ಬೇಕು. ಆದರೆ ಅಲ್ಲಿನ ನಿರಾಶ್ರಿತರಿಗೆ ತನ್ನ ಬಾಗಿಲು ತೆರೆಯಲು ಈ ದೇಶಗಳು ತಯಾರಿಲ್ಲ. ಪಶ್ಚಿಮ ಏಷ್ಯಾದ ಯಜಮಾನಿಕೆ ಬೇಕೆನ್ನುವ ಸುನ್ನಿ ಬಾಹುಳ್ಯದ ಸೌದಿ ಅರೇಬಿಯಾ, ಶಿಯಾ ಬಾಹುಳ್ಯದ ಇರಾನ್ ದೇಶಗಳು ಕೂಡ ನಿರಾಶ್ರಿತರ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿಲ್ಲ. ಸಿರಿಯಾ, ಇರಾಕ್, ಇರಾನ್, ಮೊರಾಕ್ಕೋ, ಅಲ್ಜೀರಿಯಾ, ಲಿಬಿಯಾ, ಅಫ್ಘಾನಿಸ್ತಾನದಿಂದ ಹೋದ ನಿರಾಶ್ರಿತರಿಗೆ ಆಶ್ರಯ ನೀಡಿ ಸಮಸ್ಯೆ ಎದುರಿಸುತ್ತಿರುವುದು ಯುರೋಪ್‌ನ ಪ್ರಜಾಪ್ರಭುತ್ವ ರಾಷ್ಟ್ರಗಳು. ಇದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಬಹಳ ಮುಖ್ಯ.
ನ್ಯೂಸ್ ನಿರೂಪಕಿಯ ಸೀರೆ ನೋಡಿ ಸಿಡಿಸಿಡಿಯಾದ ಇಸ್ರೇಲ್ ಅಧಿಕಾರಿ: ವೀಡಿಯೋ
ಭಾರತಕ್ಕೆ ಸಾಧ್ಯ, ಇಸ್ರೇಲಿಗೆ ಅಸಾಧ್ಯ
ಅರಬ್‌ನಲ್ಲಿ ಹುಟ್ಟಿದ ಏಕ ದೇವೋಪಾಸನೆಯನ್ನು ಒಪ್ಪಿಕೊಂಡ ಯಹೂದಿಗಳು, ಇಸಾಯಿಗಳು ಮತ್ತು ಮುಸಲ್ಮಾನರ ದೇವ ತತ್ವ ಒಂದೇ. ಆದರೆ ಧರ್ಮ ಬೇರೆ ಅನ್ನುವ ಕಾರಣದಿಂದ ಒಬ್ಬರೊಬ್ಬರ ಮೇಲೆ ನಡೆಸಿದ ಅತಿರೇಕಗಳು, ಹತ್ಯೆಗಳು ಇತಿಹಾಸದಲ್ಲಿ ದಾಖಲು ಆಗುತ್ತಲೇ ಇವೆ. ಇನ್ನು ರಷ್ಯಾ, ಚೀನಾದಲ್ಲಿ ಬೆಳೆದ ಸಾಮ್ಯವಾದ ‘ನನ್ನ ರಾಜಕೀಯ ಆಲೋಚನೆ ಬೇರೆ, ನಿನ್ನ ಆಲೋಚನೆ ಬೇರೆ’ ಅನ್ನುವ ಕಾರಣದಿಂದ ನಡೆಸಿದ ನರಮೇಧಗಳು ಕಣ್ಣ ಮುಂದಿವೆ. ಆದರೆ ಭಾರತದ ನೆಲದಲ್ಲಿ ಹುಟ್ಟಿದ ಸನಾತನ ಜೈನ, ಬೌದ್ಧ, ಸಿಖ್ ಧರ್ಮಗಳ ನಡುವೆ ಏನೇ ತಾತ್ವಿಕ ಭಿನ್ನಾಭಿಪ್ರಾಯಗಳು ಇದ್ದರೂ ಕೂಡ ಎಂದೂ ಹಿಂಸಾತ್ಮಕ ಸಂಘರ್ಷ ನಡೆದಿಲ್ಲ. ಅಪರೂಪಕ್ಕೊಮ್ಮೆ ತಿಕ್ಕಾಟ ನಡೆದಿದ್ದರೂ ಸಾವಿರಾರು ವರ್ಷಗಳಿಂದ ಇಲ್ಲಿ ಸಹಬಾಳ್ವೆ ಇದೆ. ದಾಳಿಕೋರರಾಗಿ ಬಂದ ಶಕರು, ಹೂನರು ಇಲ್ಲಿನ ನೆಲದಲ್ಲಿ ಒಂದಾದರೆ, ಆಮೇಲೆ ಬಂದ ಮುಸ್ಲಿಂ ಧರ್ಮ, ಇಸಾಯಿ ಧರ್ಮ ತನ್ನ ಪ್ರತ್ಯೇಕ ಆಸ್ತಿತ್ವದೊಂದಿಗೆ ಇಲ್ಲಿಯವೇ ಆಗಿಹೋಗಿವೆ. ಆದರೆ ಆ ಸಹಬಾಳ್ವೆ ಜೆರುಸಲೇಂನಲ್ಲಿ ಯಾಕೆ ಸಾಧ್ಯ ಆಗುತ್ತಿಲ್ಲ ಎನ್ನುವುದನ್ನು ಜಗತ್ತು ಯೋಚಿಸಬೇಕಿದೆ.