Asianet Suvarna News Asianet Suvarna News

'ಗಾಂಧಿಯ ಚರಕದಿಂದ ಬಂತಂತೆ ಸ್ವಾತಂತ್ರ್ಯ..!' ಬಿಜೆಪಿ ಶಾಸಕನ ಎದುರೇ ಮಹಾತ್ಮ ಗಾಂಧಿಗೆ ಅವಮಾನ!

ಮಧ್ಯಪ್ರದೇಶದ ಸಿಯೋನಿಯಲ್ಲಿ ನಡೆದ ಬಿಜೆಪಿ ವಿಕಾಸ್ ಯಾತ್ರೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿಗೆ ಅವಮಾನ ಮಾಡಿದ ಘಟನೆ ನಡೆದಿದೆ. ಬಿಜೆಪಿ ಶಾಸಕನ ಸಮ್ಮುಖದಲ್ಲಿಯೇ ಪುಟ್ಟಹುಡುಗನೊಬ್ಬ ರಾಷ್ಟ್ರಪಿತನ ಕುರಿತಾಗಿ ಅವಹೇಳನಕಾರಿ ಪದ್ಯವನ್ನು ಹೇಳಿದ್ದಾನೆ.

Insult of Mahatma Gandhi in front of BJP MLA Dinesh Rai Munmun in Madhya Pradesh san
Author
First Published Feb 7, 2023, 6:19 PM IST

ಭೋಪಾಲ್‌ (ಫೆ.7): ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದಿಂದ ನಡೆಯುತ್ತಿರುವ ಬಿಜೆಪಿ ವಿಕಾಸ್‌ ಯಾತ್ರೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿಗೆ ಅವಮಾನ ಮಾಡಿದ ಘಟನೆ ನಡೆದಿದೆ. ಮಧ್ಯಪ್ರದೇಶದ ಸಿಯೋನಿಯಲ್ಲಿ ಈ ಘಟನೆ ನಡೆದಿದೆ. ಬಿಜೆಪಿ ಶಾಸಕನ ಸಮ್ಮುಖದಲ್ಲಿ ನಡೆದ ವಿಕಾಸ್‌ ಯಾತ್ರೆ ಕಾರ್ಯಕ್ರಮದಲ್ಲಿ ರಾಷ್ಟ್ರಪಿತನ ಕುರಿತಾಗಿ ಪುಟ್ಟ ಹುಡುಗನೊಬ್ಬ ಅವಹೇಳನಕಾರಿ ಪದ್ಯವನ್ನು ಹೇಳಿದ್ದಾನೆ. ಈ ಪದ್ಯದಲ್ಲಿ ಬಿಜೆಪಿ ಶಾಸಕ ಸೇರಿದಂತೆ ಎಲ್ಲರೂ ಚಪ್ಪಾಳೆ ಬಾರಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಸಿಯೋನಿಯ ಬಿಜೆಪಿ ಶಾಸಕ ದಿನೇಶ್‌ ರೈ ಮುನ್‌ಮುನ್‌ ಜೊತೆಗೆ ಪಕ್ಷದ ಅನೇಕ ನಾಯಕರು ಸಿಎಂ ರೈಸ್‌ ಶಾಲೆಯಲ್ಲಿ ನಡದ ಕಾರ್ಯಕ್ರ ವೇದಿಕೆಯಲ್ಲಿದ್ದರು. ಗಾಂಧಿ ಕುರಿತ ಕವಿತೆ ಕೇಳಿದ ಬಿಜೆಪಿ ಮುಖಂಡರು ಜೋರಾಗಿ ಚಪ್ಪಾಳೆ ತಟ್ಟಿ ಮಗುವನ್ನು ಅಭಿನಂದಿಸಿದರು. 'ಮಹಿಳೆಯರು ಬೆಂಕಿಯನ್ನು ಉರಿಯುತ್ತಿದ್ದರೆ, ಗಾಂಧಿ ಮೌನವಾಗಿದ್ದರೂ, ನಮಗೆ ಅಕ್ಬರ್‌ ಗ್ರೇಟ್‌ ಎಂದು ಕಲಿಸಲಾಯಿತು. ಹಾಗಿದ್ದರೆ ಮಹಾರಾಣ ಪ್ರತಾಪ್‌ ಯಾರು ಎಂದು ತಿಳಿಸಲೇ ಇಲ್ಲ' ಎನ್ನುವ ಸಾಲುಗಳನ್ನು ಹೊಂದಿದ್ದ ಕವಿತೆಯನ್ನು ಪುಟ್ಟ ಹುಡುಗ ಹೇಳಿದ್ದಾನೆ.


ಮಧ್ಯಪ್ರದೇಶ ಸರ್ಕಾರದ ವಿಕಾಸ್‌ ಯಾತ್ರೆ ಸೋಮವಾರದಿಂದ ಸಿಯೋನಿಯಲ್ಲಿ ಆರಂಭವಾಗಿದೆ. ಕಾರ್ಯಕ್ರಮದಲ್ಲಿ ವೇದಿಕೆಯ ಮೇಲಿದ್ದ ಮಗುವಿನ ಕವನವನ್ನು ಕೇಳಿ ಶಿಕ್ಷಣ ಇಲಾಖೆಯಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ನಿಯೋಜನೆಗೊಂಡಿರುವ ಬಿಆರ್‌ಸಿ ಸುನೀಲ್ ರೈ ಕೂಡ ಮೆಚ್ಚುಗೆ ಸೂಚಿಸಿರುವುದು ಕಂಡುಬಂದಿದೆ. 'ನಮ್ಮ ಬೀದಿಗಳಲ್ಲಿ ಶವಗಳು ಕೊಳೆಯುತ್ತಲೇ ಇದ್ದವು, ಆಗಲೂ ಗಾಂಧಿ ಮೌನವಾಗಿಯೇ ಇದ್ದರು. ನಮಗೆ ಗಾಂಧಿಯ ಚರಕದಿಂದ ಸ್ವಾತಂತ್ರ್ಯ ಬಂತೆಂದು ಹೇಳಿಕೊಡಲಾಯಿತು. ಆದರೆ, ಗಲ್ಲಿಗೇರಿಸಲ್ಪಟ್ಟ 25 ವರ್ಷಗಳ ಯುವಕರು ಯಾರು?' ಎನ್ನುವ ಸಾಲುಗಳು ಆ ಕವಿತೆಯಲ್ಲಿದೆ.

ಈ ವಿಚಾರದಲ್ಲಿ ಸಿಯೋನಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಕುಮಾರ್ ಖುರಾನಾ ಮಾತನಾಡಿ, ಬಿಜೆಪಿ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಒಂದೆಡೆ ಮಹಾತ್ಮ ಗಾಂಧಿಯನ್ನು ಪೂಜಿಸುತ್ತಾರೆ. ಇನ್ನೊಂದೆಡೆ ಗಾಂಧೀಜಿಯವರನ್ನು ಅವಮಾನಿಸುವ ಕೆಲಸವನ್ನೂ ಮಾಡುತ್ತಾರೆ. ಬಿಜೆಪಿ ನಾಯಕರು ಕೇವಲ ರಾಜಕೀಯ ಲಾಭ-ನಷ್ಟಕ್ಕೆ ತಕ್ಕಂತೆ ಯಾವುದೇ ಮಹಾಪುರುಷರನ್ನು ಅವಮಾನಿಸುವುದನ್ನು ಬಿಡೋದಿಲ್ಲ ಎಂದು ಟೀಕಿಸಿದ್ದಾರೆ.

ಮೂಲ ಹಿಂದಿಯಲ್ಲಿ ಪುಟ್ಟ ಹುಡುಗ ಹೇಳಿದ್ದ ಕವಿತೆಯ ಭಾವಾರ್ಥ ಹೀಗಿತ್ತು:

ಮಹಿಳೆಯರು ಬೆಂಕಿಯಲ್ಲಿ ಉರಿಯುತ್ತಿದ್ದರು, ಗಾಂಧಿ ಆಗಲೂ ಮೌನವಾಗಿದ್ದರು
ನಮಗೆ ಮಹಾರಾಣ ಪ್ರತಾಪ್‌ಗಿಂತ ಅಕ್ಬರ್‌ ದ ಗ್ರೇಟ್‌ ಎಂದು ಹೇಳಿಕೊಡಲಾಯಿತು
ನಮ್ಮ ಬೀದಿಗಳಲ್ಲಿ ಶವಗಳು ಕೊಳೆಯುತ್ತಿದ್ದವು, ಆಗಲೂ ಗಾಂಧಿ ಮೌನವಾಗಿದ್ದರು
ನಮಗೆ ಗಾಂಧಿಯ ಚರಕದಿಂದ ಸ್ವಾತಂತ್ರ್ಯ ಬಂತೆಂದು ಹೇಳಿಕೊಡಲಾಯಿತು
ಹಾಗಿದ್ದರೆ, ಗಲ್ಲಿಗೇರಿಸಲ್ಪಟ್ಟ 24-25 ವರ್ಷದ ಯುವಕರು ಯಾರು?
ಇಂದಿಗೂ ಕೂಡ ಗಾಂಧಿ ಸಾಕಿದ್ದ ಆಡುಗಳನ್ನು ಕಟ್ಟಲು ಬಳಸಿದ್ದ ಬಳ್ಳಿಗಳನ್ನು ರಕ್ಷಿಸಿ ಇಡಲಾಗಿದೆ
ಆದರೆ, ಭಗತ್‌ ಸಿಂಗ್‌, ರಾಜ್‌ಗುರು, ಸುಖ್‌ದೇವ್‌ ಅವರು ನಗುತ್ತಲೇ ಕೊರೊಳೊಡ್ಡಿದ ನೇಣುಹಗ್ಗಗಳು ಎಲ್ಲಿಗೆ ಹೋದವು.
ಹೇ ಉಕ್ಕಿನಂಥ ದೇಶವೇ, ನನಗೆ ಅಳು ಬರಲಿಲ್ಲ,  ಸಾವಿರ ಬಾರಿ ಪ್ರಯತ್ನಿಸಿದರೂ ಮುಖ ಮುಚ್ಚಿಕೊಂಡರೂ ನಿದ್ದೆ ಬರಲಿಲ್ಲ
ನೇಣುಗಂಬದಲ್ಲಿ ಎಷ್ಟೆಲ್ಲಾ ಹಗ್ಗಗಳಿದ್ದವೂ, ಎಷ್ಟೆಲ್ಲಾ ಗುಂಡುಗಳಿದ್ದವು
ಇಷ್ಟೆಲ್ಲಾ ಇದ್ದಾಗ ಸಾಹೇಬರೇ ಗಾಂಧಿಯ ಚರಕದಿಂದಲೇ ಸ್ವಾತಂತ್ರ್ಯ ಬಂತೆಂದು ನೀವೇಕೆ ಸುಳ್ಳು ಹೇಳುತ್ತೀರಿ!

ಬಿಪಿನ್‌ ರಾವತ್‌ರನ್ನು 'ರಸ್ತೆ ಬದಿಯ ಗೂಂಡಾ' ಎಂದಿದ್ದ ಕಾಂಗ್ರೆಸ್‌ಗೆ ಮುಷರಫ್‌ ಶಾಂತಿಧೂತ!

ವಿಕಾಸ ಯಾತ್ರೆಯ ಸಮಾರೋಪ ಸಂದರ್ಭದಲ್ಲಿ ಕಬೀರ ವಾರ್ಡ್ ದುಂಡ ಸಿಯೋನಿಯ ಸಿಎಂ ರೈಸ್ ವಿದ್ಯಾಲಯದಲ್ಲಿ ಶಾಲಾ ಬಾಲಕ ಈ ಕವಿತೆ ಹೇಳೀದ್ದಾನೆ ಎಂದು ಕಾಂಗ್ರೆಸ್‌ ಮುಖಂಡರು ತಿಳಿಸಿದ್ದಾರೆ. ಇದರಲ್ಲಿ ಮಹಾತ್ಮಾ ಗಾಂಧೀಜಿಯ ಕುರಿತಾಗಿ ಸಾಕಷಷ್ಟು ಸುಳ್ಳು ಮಾಹಿತಿಗಳಿದ್ದವು. ಇಂಥ ಪದ್ಯ ಹಾಡಿದ ಮಗುವಿಗೆ ಶಾಸಕ ದಿನೇಶ್ ರೈ ಮುನ್‌ಮುನ್‌ ಬಹುಮಾನ ಕೂಡ ನೀಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾಪುರುಷರ ಬಗ್ಗೆ ಶಾಲಾ ಮಕ್ಕಳಿಗೆ ತಪ್ಪು ಇತಿಹಾಸ ಹೇಳುವ ಮೂಲಕ ಬಿಜೆಪಿ ನಾಯಕರು ಮತ್ತು ಅದೇ ಸಿದ್ಧಾಂತದ ಶಿಕ್ಷಕರು ಜನರಿಗೆ ಯಾವ ಸಂದೇಶವನ್ನು ನೀಡಲು ಬಯಸುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್‌ ಟೀಕಿಸಿದೆ.

ಘಟಿಕೋತ್ಸವದ ವೇಳೆ ಭಾರತೀಯ ಉಡುಗೆ ಜೊತೆ ಅಂಗವಸ್ತ್ರ ಧರಿಸಿ ಬನ್ನಿ: ದೆಹಲಿ ವಿವಿ ಆದೇಶ!

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ, ಅದು ಮಗುವೊಂದು ಹೇಳಿರುವ ಪದ್ಯ. ಅವರ ದೃಷ್ಟಿಕೋನಗಳು ವಿಭಿನ್ನವಾಗಿರುತ್ತದೆ. ಮಕ್ಕಳ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ಶಾಲಾ ಮಟ್ಟದಲ್ಲಿಯೇ ಇದರ ಬಗ್ಗೆ ಪರಿಹಾರವಾಗುತ್ತದೆ. ನೀವು ರಾಜಕಾರಣ ಮಾಡೋದಿದ್ದರೆ, ಅದಕ್ಕೆ ನಾವಿದ್ದೇವೆ. ನಮ್ಮೊಂದಿಗೆ ಮಾಡಿ. ಮಕ್ಕಳ ವಿಚಾರಗಳು ಇಲ್ಲಿ ತರಬೇಡಿ. ಇಲ್ಲಿನ ಮಕ್ಕಳ ವಿಚಾರದಲ್ಲಿ ರಾಜಕೀಯ ತಂದರೆ ಇಡೀ ಜಿಲ್ಲೆ ನಿಮ್ಮನ್ನು ಕ್ಷಮಿಸೋದಿಲ್ಲ ಎಂದು ದಿನೇಶ್‌ ರೈ ಮುನ್‌ಮುನ್‌ ಹೇಳಿದ್ದಾರೆ.

Follow Us:
Download App:
  • android
  • ios