ಇಲ್ಲೊಂದು ಕಡೆ ವೃದ್ಧ ಮಹಿಳೆಯೊಬ್ಬರು ತಾವು 28 ವರ್ಷಗಳ ಹಿಂದೆ ವೈದ್ಯರ ಬಳಿ ಮಾಡಿದ್ದ ಸಾಲವನ್ನು ಇತ್ತೀಚೆಗೆ ತೀರಿಸಿದ್ದು, ಅವರ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಲವರು ಸಾಲ ಕೊಟ್ಟರೆ ವರ್ಷಗಳೇ ಕಳೆದರೂ ವಾಪಸ್ ನೀಡುವುದಿಲ್ಲ, ಕಷ್ಟಕಾಲದಲ್ಲಿ ಸಹಾಯವಾಗಲಿ ಎಂದು ನೀಡಿದ ಹಣವನ್ನು ಮರಳಿಸದೇ ತಲೆ ತಪ್ಪಿಸಿಕೊಂಡು ಓಡಾಡುವವವರೇ ಹೆಚ್ಚು. ಆದರೆ ಇನ್ನು ಕೆಲವರು ಕಟ್ಟಾ ಸ್ವಾಭಿಮಾನಿಗಳು, ಪರರ ವಸ್ತು ಪಾಷಾಣಕ್ಕೆ ಸಮವೆಂದೇ ಭಾವಿಸಿ ಬದುಕುವವರು. ಯಾರೊಂದಿಗಾದರೂ ಒಂದು ರೂಪಾಯಿ ಸಾಲ ಪಡೆದರು ಕೊಟ್ಟು ಮುಗಿಸುವವರೆಗೆ ಅವರಿಗೆ ಸಮಾಧಾನವಿಲ್ಲದಂತಹ ಮನಸ್ಥಿತಿಯವರು. ಆದರೂ ಕಂಗೆಟ್ಟ ಆರ್ಥಿಕ ಸ್ಥಿತಿ, ಅನಾರೋಗ್ಯದಿಂದಾಗಿ ಕೆಲವರಿಗೆ ಮಾಡಿದ ಸಾಲವನ್ನು ತೀರಿಸಲಾಗುವುದಿಲ್ಲ. ಆದರೂ ಸ್ವಾಭಿಮಾನಿಗಳೆನಿಸಿದ ಜನ ಯಾರದೋ ಸಾಲವಿಟ್ಟು ಕೊಂಡಿದ್ದರೆ ಸಾಯುವವರೆಗೆ ಕೊರಗುತ್ತಾರೆ. ಹೇಗಾದರೂ ಆ ಸಾಲವನ್ನು ತೀರಿಸಿ ಬಿಡಬೇಕು ಎಂದು ಯೋಚಿಸುತ್ತಲೇ ಇರುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ವೃದ್ಧ ಮಹಿಳೆಯೊಬ್ಬರು ತಾವು 28 ವರ್ಷಗಳ ಹಿಂದೆ ವೈದ್ಯರ ಬಳಿ ಮಾಡಿದ್ದ ಸಾಲವನ್ನು ಇತ್ತೀಚೆಗೆ ತೀರಿಸಿದ್ದು, ಅವರ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು ಈ ಪ್ರಪಂಚದಲ್ಲಿ ಇಂತಹವರು ಕೂಡ ಇರುತ್ತಾರೆ. ಅಂದಹಾಗೆ ಈ ಸ್ವಾಭಿಮಾನಿ ಮಹಿಳೆಯ ಹೆಸರು ಕೆ ಡಿಜಿನ್ಲಿಯು, ಮೂಲತಃ ಅವರೊಬ್ಬ ಅಸ್ಸಾಂನ ರೊಂಗ್ಮೈ ನಾಗಾ ಬುಡಕಟ್ಟು ಸಮುದಾಯದ ಮಹಿಳೆ. ಅವರು ಇತ್ತೀಚೆಗೆ ತಮಗೆ 28 ವರ್ಷದ ಹಿಂದೆ ಚಿಕಿತ್ಸೆ ನೀಡಿ ಜೀವ ಉಳಿಸಿದ ಆಸ್ಪತ್ರೆಗೆ ಬಂದು ಬಾಕಿ ಇದ್ದ ಬಿಲ್ ಪಾವತಿ ಮಾಡಿದ್ದಾರೆ.

1997 ನೇ ಇಸವಿಯಲ್ಲಿ ಈ ನಾಗಾ ಮಹಿಳೆ ಡಿಜಿನ್ಲಿಯು ಅವರು, ಗರ್ಭಾಶಯದ ಫೈಬ್ರಾಯ್ಡ್(uterine fibroids) ಮತ್ತು ಅಂಡಾಶಯದ ಸಿಸ್ಟ್‌ (ovarian cyst) ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಯೊಂದರಲ್ಲಿ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಸಮಯದಲ್ಲಿ ಅವರ ಈ ಶಸ್ತ್ರಚಿಕಿತ್ಸೆಗೆ 7 ಸಾವಿರ ರೂಪಾಯಿ ಬಿಲ್ ಆಗಿತ್ತು. ಆ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಅದು ದುಬಾರಿ ಮೊತ್ತವಾಗಿತ್ತು. ಹಾಗೂ ಸಣ್ಣ ರೈತಾಪಿ ಕುಟುಂಬವಾಗಿದ್ದ ಅವರಿಗೆ ಈ ಸಂಪೂರ್ಣ ಮೊತ್ತವನ್ನು ಪಾವತಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಆಸ್ಪತ್ರೆ ವೈದ್ಯರು ಕೂಡ ಕುಟುಂಬದ ಸ್ಥಿತಿ ಅರಿತು ಸಂಪೂರ್ಣ ಮೊತ್ತಕ್ಕೆ ಬೇಡಿಕೆ ಇಡದೇ ಅವರು ಕೊಟ್ಟ ಹಣವನ್ನು ಪಡೆದು ಸುಮ್ಮನಾಗಿದ್ದರು.

ಆದರೆ ಮಹಿಳೆ ಮಾತ್ರ ವೈದ್ಯರ ಉದಾರತೆಯನ್ನು ಮರೆತಿರಲಿಲ್ಲ, ಹಾಗೂ 28 ವರ್ಷಗಳ ನಂತರ ಬಂದು ವೈದ್ಯರಿಗೆ ಬಾಕಿ ನೀಡಬೇಕಿದ್ದ ಹಣವನ್ನು ನೀಡಿದ್ದಾರೆ. ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯ ಡಾ. ಅಜಿನ್ ಮಾರಿಂಗ್‌ಮೈ(Dr Azin Maringmei) ಎಂಬುವವರೇ ಈ ವಿಚಾರವನ್ನು ಅಸ್ಸಾಂನ ಮಾಧ್ಯಮ ಈಸ್ಟ್‌ಮೋಜೊ ಜೊತೆ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.

ನನಗೆ ಒಂದು ಅಪರಿಚಿತ ಸಂಖ್ಯೆಯಿಂದ ಒಂದು ದಿನ ಫೋನ್ ಕರೆ ಬಂತು. ಕರೆ ಮಾಡಿದವರು ತನ್ನನ್ನು ತಾನು, 1997ರಲ್ಲಿ ನೀವು ಶಸ್ತ್ರಚಿಕಿತ್ಸೆ ನಡೆಸಿದ ಮಹಿಳೆಯೊಬ್ಬರ ಕಿರಿಯ ಪುತ್ರ ಎಂದು ಹೇಳಿಕೊಂಡಿದ್ದರು. ಆದರೆ ನನಗೆ ಆ ಪ್ರಕರಣದ ಬಗ್ಗೆ ನೆನಪಿರಲಿಲ್ಲ, ಆದರೆ ಆ ಕುಟುಂಬ ನನ್ನನ್ನು ಬಹಳ ಕಾಲದಿಂದಲೂ ಹುಡುಕುತ್ತಿತ್ತು ಎಂಬುದು ನಂತರ ತಿಳಿಯಿತು ಎಂದು ವೈದ್ಯರು ಹೇಳಿದ್ದಾರೆ.

ಘಟನೆ ನಡೆದು 28 ವರ್ಷಗಳೇ ಕಳೆದಿವೆ. ಈಗ ಆಕೆ ತನ್ನ ವೈದ್ಯಕೀಯ ಬಿಲ್ ಪಾವತಿ ಮಾಡುವುದಕ್ಕಾಗಿ ಕೊನೆಗೂ ವೈದ್ಯರನ್ನು ಮಕ್ಕಳ ಮೂಲಕ ಸಂಪರ್ಕಿಸಿದ್ದು ಬಾಕಿ ಹಣವಾದ 1500 ರೂಪಾಯಿಯನ್ನು ಮಕ್ಕಳ ಮೂಲಕ ಗೂಗಲ್ ಪೇ ಮಾಡಿಸಿದ್ದಾರೆ. ಈ ಸ್ಟೋರಿ ಪ್ರಾಮಾಣಿಕತೆ, ಘನತೆ ಮತ್ತು ಕಾಲಾವನ್ನೂ ಮೀರಿದ ಬದುಕಿನ ಮೌಲ್ಯಗಳಿಗೆ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸ್ವಾಭಿಮಾನಿ ಮಹಿಳೆಯ ಕತೆ ಈಗ ವೈರಲ್ ಆಗಿದ್ದು, ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.