ನವದೆಹಲಿ (ಆ. 07): ಕಾಂಗ್ರೆಸ್ಸನ್ನು ಮುಗಿಸುವುದು ಕೊನೆಗೆ ಕಾಂಗ್ರೆಸ್ಸಿನವರೇ. ಹೀಗೊಂದು ಮಾತು ಚುನಾವಣೆ ಸಂದರ್ಭದಲ್ಲಿ ಸದಾ ಚಾಲ್ತಿಯಲ್ಲಿರುತ್ತದೆ. ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಕಾಂಗ್ರೆಸ್‌ ಪಕ್ಷವೀಗ ಅಂತರ್ಯುದ್ಧದ ಸ್ಥಿತಿಯಲ್ಲಿದೆ. ಕರ್ನಾಟಕ, ಮಧ್ಯಪ್ರದೇಶ ಸರ್ಕಾರಗಳು ಕುಸಿದ ನಂತರ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ಸಂಕಷ್ಟದಲ್ಲಿದೆ. ಇದು ಸಾಲದೇನೋ ಎಂಬಂತೆ ಮೊನ್ನೆ ಸೋನಿಯಾ ಗಾಂಧಿ ಹಾಗೂ ಮನಮೋಹನ ಸಿಂಗ್‌ ಎದುರೇ ಕಾಂಗ್ರೆಸ್‌ ಸಂಸದರು ಕೂಗಾಡಿಕೊಂಡಿದ್ದು, ಹಿರಿಯರ ವಿರುದ್ಧ ಕಿರಿಯರು ಎಂಬ ಅರ್ಥಹೀನ ಕಿತ್ತಾಟ ಜೋರಾಗಿದೆ.

ಸೋನಿಯಾ ಕರೆದಿದ್ದ ಸಭೆಯಲ್ಲಿ ರಾಜೀವ್‌ ಗಾಂಧಿ ಆಪ್ತ ರಾಜೀವ್‌ ಸಾಟವ ಅವರು ಇವತ್ತಿನ ಕಾಂಗ್ರೆಸ್‌ನ ದುಸ್ಥಿತಿಗೆ ಮನಮೋಹನ ಸಿಂಗ್‌ ಕಾರಣ ಎಂದು ಹೇಳಿದ್ದಾರೆ. ಅಷ್ಟಕ್ಕೇ ನಿಲ್ಲದೇ ಬೇಗ ರಾಹುಲ್  ಗಾಂಧಿ ಮತ್ತೊಮ್ಮೆ ಅಧ್ಯಕ್ಷರಾಗಬೇಕು ಎಂದೂ ಹೇಳಿದ್ದಾರೆ. ಆದರೆ ಸೌಜನ್ಯಕ್ಕೂ ರಾಹುಲ್ ಬ್ರಿಗೇಡ್‌ನ ಕೂಗಿಗೆ ಹಿರಿಯರ ತಂಡದ ಆನಂದ ಶರ್ಮಾ ಅಥವಾ ಮನಿಷ್‌ ತಿವಾರಿ ಬೆಂಬಲಿಸಿ ಮಾತನಾಡಲಿಲ್ಲ. ಬದಲಾಗಿ ಹೊರಗೆ ಬಂದು ರಾಹುಲ… ಬೆಂಬಲಿಗರಿಗೆ ಟ್ವೀಟರ್‌ ಮೂಲಕ ಛೀಮಾರಿ ಹಾಕಿದ್ದಾರೆ.ಹಿಂದೊಮ್ಮೆ ಕಾಂಗ್ರೆಸ್‌ನ ಸೋಲಿನ ಹೊಣೆಯನ್ನು ಪಿ.ವಿ.ನರಸಿಂಹ ರಾವ್‌ ಮತ್ತು ಸೀತಾರಾಮ… ಕೇಸರಿ ಹೆಗಲಿಗೆ ಕಟ್ಟಿದ್ದ ಗಾಂಧಿ ಪರಿವಾರ ವಾದಿಗಳು ಈಗ ಎಲ್ಲದಕ್ಕೂ ಮನಮೋಹನ ಕಾರಣ, ರಾಹುಲ್ ಅಲ್ಲ, ಹೀಗಾಗಿ ಮತ್ತೊಮ್ಮೆ ಮಗದೊಮ್ಮೆ ರಾಹುಲ್‌ರನ್ನು ತನ್ನಿ ಎಂದು ಹೇಳಲು ಶುರುಮಾಡಿದ್ದಾರೆ.

ರಾಮ ಮಂದಿರ ಹೋರಾಟ: ಆ ಕಾಲದ ಮಸುಕು ನೆನಪುಗಳು!

ಒಮ್ಮೆ ರಾಹುಲ್ಗೆ ಅಧಿಕಾರ ಇಷ್ಟವಿಲ್ಲ ಅನ್ನೋದು, ಇನ್ನೊಮ್ಮೆ ಗಾಂಧಿ ಪರಿವಾರದವರು ಯಾರೂ ಪಕ್ಷದ ನೇತೃತ್ವ ವಹಿಸೋದಿಲ್ಲ ಅನ್ನೋದು, ಮಗದೊಮ್ಮೆ ರಾಜೀನಾಮೆ ಕೊಟ್ಟಒಂದು ವರ್ಷದಲ್ಲಿ ರಾಹುಲ್ ಮತ್ತೆ ಅಧ್ಯಕ್ಷರಾಗಬೇಕು ಅನ್ನೋದು ಇವೆಲ್ಲ ನೋಡಿದರೆ ಸದ್ಯದ ಗಾಂಧಿ ಪರಿವಾರಕ್ಕೆ ಮೋದಿಯವರನ್ನು ಸೋಲಿಸುವ ಸಾಮರ್ಥ್ಯ ಮತ್ತು ಇಚ್ಛಾಶಕ್ತಿ ಎರಡೂ ಇಲ್ಲ ಎನಿಸುತ್ತದೆ. ಯಾರು ಚಪ್ಪಾಳೆ ಹೊಡೆಸಿಕೊಳ್ಳುತ್ತಾರೋ ಅವರು ಬೈಗುಳ ಕೇಳಲೂ ತಯಾರಿರಬೇಕು. ಆದರೆ ಕಾಂಗ್ರೆಸ್‌ನಲ್ಲಿ ಚಪ್ಪಾಳೆಗೆ ಗಾಂಧಿ ಕುಟುಂಬದವರೇ ಆಗಿಬೇಕು, ಬೈಗುಳಕ್ಕೆ ಮಾತ್ರ ಬೇರೆಬೇರೆಯವರು ಬೇಕು ಎಂಬಂತಾಗಿದೆ.

ಹಿರಿಯರು-ಕಿರಿಯರ ಜಗಳ ಇದೆಯೇ?

ಹಿಂದೆ ನೆಹರೂ ಹಾಗೂ ಶಾಸ್ತ್ರೀಜಿ ಕಾಲವಾದ ನಂತರ ಇಂದಿರಾ ಗಾಂಧಿ ಮತ್ತು ಆಗಿನ ಕಾಂಗ್ರೆಸ್‌ನ ಹಿರಿಯರ ನಡುವೆ ಜಗಳ ನಡೆದಿತ್ತು. ಮೊರಾರ್ಜಿ ದೇಸಾಯಿ, ನಿಜಲಿಂಗಪ್ಪ, ಕಾಮರಾಜ್‌, ವೀರೇಂದ್ರ ಪಾಟೀಲ್‌ರಂಥ ಅತಿರಥ ಮಹಾರಥರ ಜೊತೆಗೆ ಗುದ್ದಾಡಿ ಇಂದಿರಾ ಗಾಂಧಿ ಅವರು ಪಕ್ಷದಿಂದ ಉಚ್ಚಾಟಿತರಾಗಿಯೂ ಪ್ರಧಾನಿ ಪದವಿ ಉಳಿಸಿಕೊಂಡಿದ್ದರು. ಆದರೆ ಈಗ ಪಕ್ಷವನ್ನು ನಡೆಸುತ್ತಿರುವುದು ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿ. ಆದರೂ ಪಕ್ಷದಲ್ಲಿ ಹಿರಿಯರ ಮತ್ತು ಕಿರಿಯರ ನಡುವೆ ಗುದ್ದಾಟ ಎಂದು ಯಾಕೆ ಬಿಂಬಿಸಲಾಗುತ್ತಿದೆ ಎಂದು ಯಾರಿಗೂ ಅರ್ಥವಾಗುತ್ತಿಲ್ಲ. ಆಗ ಇಂದಿರಾ ಕಾಲದಲ್ಲಿ ಕಾಂಗ್ರೆಸ್‌ನ ಏಕ ಚಕ್ರಾಧಿಪತ್ಯವಿತ್ತು. ಈಗ ಕಾಂಗ್ರೆಸ್‌ ಸತತ ಎರಡು ರಾಷ್ಟ್ರೀಯ ಚುನಾವಣೆ ಸೋತಿದೆ. ಅಷ್ಟೇ ಅಲ್ಲ ಎದುರುಗಡೆ ತಳಮಟ್ಟದಿಂದ ಬಂದು ದಿಲ್ಲಿಯಲ್ಲಿ ಗಟ್ಟಿಯಾಗಿ ಬೇರೂರಿರುವ ಮೋದಿ ಇದ್ದಾರೆ. ಕಾಂಗ್ರೆಸ್‌ಗೆ ಈಗ ಬೇಕಿರುವುದು ಕೆಲಸಕ್ಕೆ ಬಾರದ ಕಾಲ್ಪನಿಕ ಜಗಳಗಳಲ್ಲ, ಬದಲಾಗಿ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಗಟ್ಟಿನಾಯಕತ್ವ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿದಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

ಕಾಂಗ್ರೆಸ್‌ನ ಇಂದಿನ ಪರಿಸ್ಥಿತಿಗೆ ಪ್ರಮುಖ ಕಾರಣ ಬೇರೆನಲ್ಲ, ಇದು! 

"