ಪ್ರಶಾಂತ್ ನಾತು, ಇಂಡಿಯಾ ಗೇಟ್

ಅದು 1984 ಇಂದಿರಾ ಗಾಂಧಿ ಹತ್ಯೆ ಆದಾಗ ಮೊದಲ ಬಾರಿ ಹುಬ್ಬಳ್ಳಿಯ ಅಕ್ಕ ಪಕ್ಕದ ಮನೆಗಳಲ್ಲಿ ಟಿ ವಿ ಸೆಟ್ಸ್ ಗಳನ್ನು ನೋಡಿದ್ದು.ಆಗ ನನಗಿನ್ನೂ 6 ವರ್ಷ ವಯಸ್ಸು.ರಾತ್ರೋ ರಾತ್ರಿ ನಮ್ಮ ಮನೆ ಪಕ್ಕದಲ್ಲಿ ಸಿಖ್ಖರು ವಾಸಿಸುವ 3 ಅಂತಸ್ತಿನ ಬಿಲ್ಡಿಂಗ್ ಗೆ ಪೊಲೀಸ ಬಂದೋಬಸ್ತ್.ಆಗ ಯಾಕೆ ಏನು ಎಂಬುದು ಗೊತ್ತಿರಲಿಲ್ಲ.ಆದರೆ ಅದೇ ಸಬ್ ಲೋಕ್ ಎನ್ನುವ ಸಿಖ್ ಪರಿವಾರದವರ ಮನೆಯಲ್ಲಿ ಪೋರ್ಟಬಲ್ ಕಪ್ಪು ಬಿಳುಪು ಟಿ ವಿ ಯಲ್ಲಿ ಇಂದಿರಾ ಚಿತೆಗೆ ರಾಜೀವ್ ಅಗ್ನಿ ಇಟ್ಟ ನೆನಪು.ಆದರೆ ಮುಂದೆ ನಡೆದ ಚುನಾವಣೆ ಬಗ್ಗೆ ಏನು ನೆನಪಿಲ್ಲ.ಆದರೆ ಅತ್ಯಂತ ಸುಂದರ ಸ್ತೂರದ್ರೂಪಿ ಯುವಕ ರಾಜೀವ ಗಾಂಧಿ ಪ್ರಧಾನಿ ಆಗಿದ್ದರು ಎಂದು ಸಂಯುಕ್ತ ಕರ್ನಾಟಕದಲ್ಲಿ ಓದಿದ ನೆನಪಿದೆ.ಆಗೆಲ್ಲ ಸಂಘದ ಪ್ರಚಾರಕರಾದ ಮಂಗೇಶ ಬೆಂಡೆ ಮಿಸ್ಕಿನ ಕಾಕಾ ಹರಿ ಭಾವು ವಝೆ ಇವರಲ್ಲ ವಾರಕ್ಕೊಮ್ಮೆ ಮನೆಗೆ ಊಟಕ್ಕೆ ಬರುತ್ತಿದ್ದರು.ಹೀಗಾಗಿ ವಾರಕ್ಕೊಮ್ಮೆ ಮನೆಯಲ್ಲಿ ಸಂಘದ ಕಾರ್ಯಕರ್ತರು ಬಂದಾಗ ರಾಜೀವ್ ಗಾಂಧಿ ಶಾ ಬಾನೋ ರಾಮ ಮಂದಿರ ಇವೆಲ್ಲ ಚರ್ಚೆ ತಂದೆ ಜೊತೆ ಮಾತನಾಡುತ್ತಿದ್ದ ನೆನಪು.ಆದರೆ ಆಗ ಇದೆಲ್ಲ ಅರ್ಥ ವಾಗುತ್ತಿರಲಿಲ್ಲ.ಆದರೆ ನಮ್ಮ ತಂದೆ ನಾವು ಶಾಲೆಗೆ ಹೋಗುತ್ತಿದ್ದಾಗ ಮಂದಿರವಲ್ಲೇ ಕಟ್ಟುವೆವು ಎಂಬ ಸ್ತಿಕರ್ ಅನ್ನು ಬಾಗಿಲಿಗೆ ಅಂಟಿಸಿದ ನೆನಪು.ಹುಬ್ಬಳ್ಳಿ ಮೊದಲಿನಿಂದಲೂ ಸ್ವಲ್ಪ ಹಿಂದೂ ಮುಸ್ಲಿಮರ ದ್ರಷ್ಟಿಯಿಂದ ಸೂಕ್ಶ್ಮ ಶಹರ.ಹೀಗಾಗಿ ರಾಮ ಮಂದಿರ ಹೋರಾಟ ತಾರಕಕ್ಕೆ ಏರಿದಾಗ ನಾವು ವಾಸಿಸುವ ಚನ್ನಪೇಟೆ ಯಲ್ಲಿ ತಿಕ್ಕಾಟ ಚಾಕು ಹಾಕುವುದು ಕರ್ಫ್ಯು ಸಾಮಾನ್ಯ ಸಂಗತಿ ಆಗಿತ್ತು.

ನಮ್ಮ ಮನೆ ಪಕ್ಕದಲ್ಲೆ ಎಂ ಟಿ ಎಸ್ ಕಾಲೋನಿ.ಅಲ್ಲಿ ಅನಂತ ಕುಮಾರ ಪ್ರಹ್ಲಾದ ಜೋಶಿ ಅವರ ಮನೆಯಿತ್ತು.ಹೀಗಾಗಿ ವಿಶ್ವ ಹಿಂದೂ ಪರಿಷತ್ ನಂತರ ಬಿಜೆಪಿ ಮಂದಿರ ಹೋರಾಟವನ್ನು ಕೈಗೆತ್ತಿ ಕೊಂಡಾಗ ಸಹಜವಾಗಿ ನಮ್ಮ ಅರವಿಂದ ನಗರದಲ್ಲಿ ಚಟುವಟಿಕೆ ನಡೆಯುತ್ತಿದ್ದವು.ನಮ್ಮ ಮನೆ ಎದುರಿನಿಂದ ರಾಮ ಮಂದಿರಕ್ಕೆ ಶಿಲೆ ಕಳಿಸುವ ಮೆರವಣಿಗೆ ಇನ್ನು ನೆನಪಿದೆ.ನಾನು 7 ನೇ ಇಯತ್ತೆ ಇರಬಹುದೇನೋ. ಈಗ ಬಿಜೆಪಿ ಯಲ್ಲಿರುವ ರವಿಕುಮಾರ ಸುಭಾಷ ಸಿಂಗ್ ಜಮಾದಾರ  ಇವರೆಲ್ಲ ಸೇರಿ ರಾಮ ಭಜನೆ ಮಾಡಿಸುತ್ತಾ ಇಟ್ಟಿಗೆ ಒಂದರ ಮೆರವಣಿಗೆ ಮಾಡಿಸಿದ್ದರು.ನಾನು ಕೂಡ ಮನೆಯಿಂದ ತಾಳ ತೆಗೆದುಕೊಂಡು ಹೋಗಿ ಭಾಗವಹಿಸಿದ್ದೆ.ಇದರ ಹಿಂದಿನ ರಾಜಕೀಯ ಅವತ್ತು ಅರ್ಥ ಆಗುತ್ತಿರಲಿಲ್ಲ.ಆದರೆ ಹಿಂದೂ ಗಳ ದೇಶದಲ್ಲಿ ಮರ್ಯಾದಾ ಪುರುಷೋತ್ತಮ ನಿಗೆ ಮಂದಿರ ಇಲ್ಲವೇ ಎಂದು ಭಾಷಣ ಕೇಳಿದರೆ ಹೌದಲ್ಲ ತಾರ್ಕಿಕ ವಾಗಿ ಸರಿಯಿದೆ ಎನಿಸುತ್ತಿತ್ತು.

ಅಯೋಧ್ಯೆಯಲ್ಲಿ ರಾಮನಾಮ ಜಪ ಮೊಳಗಿಸಿದ ಮೋದಿ, ಶ್ರವಣ ಬೆಳಗೊಳದ ಉಲ್ಲೇಖ!

ಆದರೆ ಟಿ ವಿ ನ್ಯೂಸ್ ಚಾನೆಲ್ ಗಳು ಇರದೇ ಇದ್ದ ಕಾಲದಲ್ಲಿ ರಾಮನ ಹೋರಾಟವನ್ನು ಮನೆ ಮನೆಗೆ ತಲುಪಿಸಿದ್ದು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ತರುತ್ತಿದ್ದ ವಿಡಿಯೋ ಕ್ಯಾಸೆಟ್ ಗಳು.ಮನೆ ಹತ್ತಿರ ಯಾರಾದರೂ ಟಿ ವಿ ಇದ್ದವರ ಮನೆಯಲ್ಲಿ ವಿ ಸಿ ಆರ್ ಬಾಡಿಗೆ ತಂದು ಜೈನ್ ಟಿ ವಿ ಅವರು ನಿರ್ಮಿಸಿದ ವಿಡಿಯೋ ಗಳು ಉತ್ತರ ಪ್ರದೇಶದ ಪೂರ್ತಿ ಚಿತ್ರಣ ಕೊಡುತ್ತಿದ್ದವು.ಅಡ್ವಾಣಿ ಅಟಲ್ ಜಿ ಉಮಾ ಭಾರತಿ ಕಲ್ಯಾಣ ಸಿಂಗ್ ಅಶೋಕ ಸಿಂಘಾಲ ವಿನಯ ಕಟಿಯಾರ್  ರನ್ನು ಮೊದಲು ನೋಡಿದ್ದು ಅದೇ ವಿಡಿಯೋ ಕ್ಯಾಸೆಟ್ ಗಳಲ್ಲಿ.ಆ ಕ್ಯಾಸೆಟ್ ಗಳು ಮನೆ ಮನೆಗೆ ರಾಮನನ್ನು ತಲುಪಿಸಿದ್ದವು.ಆಗಷ್ಟೇ ದೂರ ದರ್ಶನದಲ್ಲಿ ರಾಮಯಾಣ ನೋಡಿದ್ದರಿಂದ ಸಹಜ ವಾಗಿ ಭಾವನೆಗಳು ತಾರಕಕ್ಕೆ ಏರುತ್ತಿದ್ದವು.

ರಾಮ ಮಂದಿರ ರಥ ಯಾತ್ರೆ ಇಂದ  ಸ್ಫೂರ್ತಿ ಗೊಂಡು ಮುರಳಿ ಮನೋಹರ ಜೋಶಿ ಆರಂಭಿಸಿದ ಯಾತ್ರೆ ಹುಬ್ಬಳ್ಳಿ ಯಲ್ಲಿ ರಾಷ್ಟ್ರ ಧ್ವಜ ಹೋರಾಟವನ್ನು ರೂಪಿಸಿತ್ತು.ಅನಂತ ಕುಮಾರ ಹೆಗಡೆ ಪ್ರಹ್ಲಾದ ಜೋಶಿ ಅರವಿಂದ ಲಿಂಬಾವಳಿ ರವಿಕುಮಾರ ಇವೆರೆಲ್ಲ ನಾಯಕರಾಗಿ ರೂಪು ಗೊಂಡು ಜನರಿಗೆ ತಲುಪಿದ್ದು ಇದೇ ಹೋರಾಟದ ಕಾರಣ ದಿಂದ.ಅಯೋಧ್ಯೆಯ ಹೋರಾಟ ಮತ್ತು ಈದಗಾ ಮೈದಾನದ ಹೋರಾಟಗಳು ಹುಬ್ಬಳ್ಳಿ ಮತ್ತು ಮುಂಬೈ ಕರ್ನಾಟಕದ ಭಾಗದಲ್ಲಿ ಹಿಂದುತ್ವದ ಭಾವನೆಗಳನ್ನು ಕೆರಳಿಸಿದ್ದವು.

ರಾಮ ಮಂದಿರ ಭೂಮಿ ಪೂಜೆ; ಮರಳು ಶಿಲ್ಪದ ಮೂಲಕ ಸುದರ್ಶನ್ ಪಟ್ನಾಯಕ್ ನಮನ!

ಅವತ್ತು ದಿಸೆ0ಬರ್ 6 1992.ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ರಣಜಿ ಮ್ಯಾಚು ಏರ್ಪಾಡಾಗಿತ್ತು.ರಣಜಿಗೆ ಸುನಿಲ್ ಜೋಶಿ ಪಾದಾರ್ಪಣೆ ಅವತ್ತು.ನೆಹರು ಮೈದಾನದಲ್ಲಿ ರಾಹುಲ್ ದ್ರಾವಿಡ್ ವೆಂಕಟೇಶ್ ಪ್ರಸಾದ್ ರಘುರಾಮ್ ಭಟ್ ಬ್ರಜೇಶ ಪಟೇಲ್ ಕರ್ನಾಟಕದ ಪರವಾಗಿ ಆಡುತ್ತಿದ್ದರು.ಒಮ್ಮೆಲೇ ಮೈದಾನಕ್ಕೆ ಬಂದ ಪೊಲೀಸರು ಪಂದ್ಯ ರದ್ದು ಪಡಿಸಲು ಹೇಳಿದರು.ಊರಲ್ಲಿ ಅಂಗಡಿ ಮುಗ್ಗಟ್ಟು ಗಳು ಬಂದ ಆಗಿದ್ದವು.ನೆಹರು ಮೈದಾನ ದಿಂದ ಅರವಿಂದ ನಗರದವರೆಗೆ ನಡೆದು ಕೊಂಡು ಬಂದಾಗ ಗಲ್ಲಿ ಗಲ್ಲಿ ಗಳಲ್ಲಿ ಪೊಲೀಸರು.ಚನ್ನ ಪೇಟೆಯಲ್ಲಿ ಪತೆ ಗಾರ ಸ್ವಕುಳ ಸಾಲಿ ಸಮುದಾಯದ ಹುಡುಗರು ಸಿಹಿ ಹಂಚುತ್ತಿದ್ದರೆ ಎದುರುಗಡೆಯ ಮುಸ್ಲಿಂ ಬಾಹುಳ್ಯದ ರಸ್ತೆಗಳಲ್ಲಿ ಮೌನ.ಸ್ವಲ್ಪ ಪೊಲೀಸರು ಆ ಕಡೆ ತಿರುಗಿದರೆ ಗಲಾಟೆ ಆಗುತ್ತದೆ ಎಂಬುದು ನಮ್ಮ ಅರಿವಿಗೂ ಬರುತ್ತಿತ್ತು.ಆದರೆ ಒಮ್ಮೆ ಮನೆ ಸೇರಿದಾಗ ನಂತರ ಕರ್ಫ್ಯು ಹಾಕಲಾಗಿದೆ ಮನೆಯಿಂದ ಹೊರಗೆ ಬರಬೇಡಿ ಎಂದು ಪೊಲೀಸ ಜೀಪ್ ಗಳು ಕೂಗುತ್ತಾ ಹೋಗುತ್ತಿದ್ದವು.ಕರ್ಫ್ಯು ನಲ್ಲಿ ಮನೆ ಎದುರು ಹಾಫ್ ಪಿಚ್ ಕ್ರಿಕೆಟ್ ಆಡಿದ್ದೆ ಆಡಿದ್ದು.ಪೊಲೀಸ ಜೀಪ್ ಸಪ್ಪಳ ಕೇಳಿದರೆ ಒಳಗಡೆ ಓಡುತ್ತಿದ್ದೆವು.ನನ್ನ ಶಾಲೆಯಲ್ಲಿ ಒಬ್ಬ ಗಾಲಿಬ್ ಎಂಬ ಗೆಳೆಯನಿದ್ದ ಆತ ನನಗೆ ಬಹುತ್ ಗಲತ್ ಹೂವಾ ಪ್ರಶಾಂತ ಎಂದೆಲ್ಲ ಹೇಳುತ್ತಿದ್ದ ನೆನಪು.ಆದರೆ ಮಸೀದಿ ಬೀಳಿಸಿದ್ದು ಹಿಂದೂ ಗಳಲ್ಲಿ ವಿಜಯೋತ್ಸವಕ್ಕೆ ಕಾರಣವಾಗಿತ್ತು.ಕಾನೂನು ಸುಪ್ರೀಂ ಕೋರ್ಟ್ ಜಾತ್ಯಾತೀತತೆ ಇವೆಲ್ಲ ಅರ್ಥ ಆಗುತ್ತಿರಲಿಲ್ಲ ಆಗ.ಆದರೆ ದಂಗೆ ಗಳು ಒಳ್ಳೆಯದಲ್ಲ ಎಂಬುದಷ್ಟೇ ಅರ್ಥವಾಗುತ್ತಿತ್ತು.

ಮುಂದೆ 2010 ರಲ್ಲಿ ಅಲಹಾಬಾದ್ ಹೈ ಕೋರ್ಟ್ ನ ತೀರ್ಪು ಬರುವ ಮುಂಚೆ ಅಯೋಧ್ಯೆಗೆ ಹೋದಾಗ ಕಾರಸೇವಕ ಪುರಂ ನಲ್ಲಿ 2 ಗಂಟೆ ನಿಂತು ಹುಬ್ಬಳ್ಳಿ ಇಂದ ಬಂದ ಇಟ್ಟಿಗೆ ಇದೆಯಾ ಎಂದು ಹುಡುಕಾಡಿದ್ದೆ.ಆದರೆ ಅದು ಸಿಕ್ಕಿರಲಿಲ್ಲ.ಆದರೆ ಕನ್ನಡದಲ್ಲಿ ಶ್ರೀ ರಾಮ ಎಂದು ಬರೆದ ಇಟ್ಟಿಗೆಗಳು ನೋಡಲು ಸಿಕ್ಕಿದ್ದವು.

ರಾಮಮಂದಿರ ನಿರ್ಮಾಣ ನಮ್ಮೆಲ್ಲರ ಸಂತೋಷದ ಘಳಿಗೆ: ಹೆಚ್.ಡಿ.ಕುಮಾರಸ್ವಾಮಿ

ಇವತ್ತು ಎಲ್ಲವೂ ಸುಖಾಂತ್ಯವಾಗಿ ರಾಮ ಮಂದಿರಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ.ತುರ್ತು ಪರಿಸ್ಥಿತಿ ಹೋರಾಟ ನಡೆದಾಗ ನಾವಿನ್ನೂ ಹುಟ್ಟಿರಲಿಲ್ಲ.ಆದರೆ ಅಯೋಧ್ಯೆ ಹೋರಾಟ ನಮ್ಮ ನೆನಪಿನಲ್ಲಿ ಮಸುಕು ಮಸಾಕಾಗಿ ಯಾವತ್ತೂ ಇರಲಿದೆ.ಆಂದೋಲನಗಳು ಚಳುವಳಿಗಳು ವರ್ತಮಾನದಲ್ಲಿ     ಸಾಮಾಜಿಕ ಮತ್ತು  ರಾಜಕೀಯ ಅರಿವನ್ನು ಹೆಚ್ಚಿಸುತ್ತವೆ .ಅಷ್ಟೇ ಅಲ್ಲ ಸಮಾಜಕ್ಕೆ ಪ್ರಬುದ್ಧ ನಾಯಕರನ್ನು ಕೂಡ ಕೊಡುತ್ತವೆ ಅನಿಸುತ್ತದೆ.ಆದರೆ ಚಳುವಳಿಯಲ್ಲಿ ಭಾಗವಹಿಸಿದ ಭಾವನಾತ್ಮಕ ನಾಯಕರು ಎಲ್ಲರೂ ಒಳ್ಳೆಯ ಆಡಳಿತ ಗಾರರೆ ಆಗುತ್ತಾರೆ ಎಂದೇನೂ ಇಲ್ಲ.