ಸಾಗರದ ಗಜಾನನ ಶರ್ಮಾರ ಇನ್ನಷ್ಟು ಬೇಕೆನ್ನ ಹಾಡಿಗೆ ರಾಮ ಮಂದಿರ ಟ್ರಸ್ಟ್ ಮೆಚ್ಚುಗೆ
ರಾಮನ ಧ್ಯಾನದಲ್ಲಿ ಡಾ. ಗಜಾನನ ಶರ್ಮಾ ಅವರು ಬರೆದ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ' ಗೀತೆ ಅಯೋಧ್ಯೆಯ ಮಡಿಲಲ್ಲಿ ಮೊಳಗಿ ಶ್ರೀರಾಮನಿಗೆ ಅರ್ಪಿತವಾಗಿದೆ.
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಈ ಹಾಡು ಕರ್ನಾಟಕದ ಎಲ್ಲ ಹಿಂದೂಗಳ ಮನಸ್ಸಿಗೆ ನೆಮ್ಮದಿ ತಂದುಕೊಡುತ್ತಿದೆ. ಅದನ್ನು ಕೇಳುತ್ತಿದ್ದರೇ ಒಂದು ಭಾವಪೂರ್ಣ ಜಗತ್ತು ತೆರೆದುಕೊಳ್ಳುತ್ತದೆ. ನಮ್ಮದೇನಿಲ್ಲ, ಎಲ್ಲ ಶ್ರೀರಾಮಚಂದ್ರನದೇ ಎಂದು ಅರ್ಪಿಸಿಕೊಂಡು ಬಾಳಬೇಕೆಂದು ಎಂಥ ನಾಸ್ತಿಕನಿಗೂ ಅನ್ನಿಸುತ್ತದೆ.
ಇಂಥದೊಂದು ಅದ್ಭುತ ಗೀತೆಯ ರಚನೆಕಾರರು ಸಾಗರ ತಾಲೂಕಿನ ಹುಕ್ಕಲು ಗ್ರಾಮದ ಗಜಾನನ ಶರ್ಮಾ. ಇದೀಗ ಈ ಹಾಡನ್ನು ಅಯೋಧ್ಯೆಯ ರಾಮಮಂದಿರ ಆವರಣದಲ್ಲಿ ಪ್ರಸಾರ ಮಾಡಲಾಗಿದೆ ಎಂದರೆ ಕೇವಲ ಶರ್ಮಾರದ್ದಲ್ಲ, ಕನ್ನಡಿಗರದ್ದು ಎಂಥ ಸುಕೃತವಲ್ಲವೇ?
ಹೌದು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿಯಾಗಿರುವ ಡಾ. ಗಜಾನನ ಶರ್ಮಾ ಅವರ ಈ ಗೀತೆ 'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ'ವನ್ನು ಅಯೋಧ್ಯೆಯ ರಾಮಮಂದಿರ ಆವರಣದಲ್ಲಿ ಪ್ರಸಾರ ಮಾಡಲಾಗಿದೆ. ಈ ಬಗ್ಗೆ ಶ್ರೀ ರಾಮಜನ್ಮಭೂಮಿ ಟ್ರಸ್ಟ್ ಕನ್ನಡದಲ್ಲಿ ಟ್ವೀಟ್ ಮಾಡಿ, 'ಪ್ರಭು ಶ್ರೀರಾಮಚಂದ್ರನ ಕುರಿತಾದ ಹೃದಯಕ್ಕೆ ಹತ್ತಿರವಾದ ಈ ಮನೋಜ್ಞ ಗೀತೆಯ ರಚನೆಗಾಗಿ ಡಾ. ಗಜಾನನ ಶರ್ಮರಿಗೆ ಅಭಿನಂದನೆಗಳು! ಜೈ ಶ್ರೀ ರಾಮ್!' ಎಂದಿದೆ. \
ರಾಮಮಂದಿರ ಪ್ರಾಣ ಪ್ರತಿಷ್ಠೆಗೆ ಶೃಂಗೇರಿ ಮಠದ ವಿರೋಧವಿಲ್ಲ, ಇದು ಧರ್ಮ ದ್ವೇಷಿಗಳ ಪಿತೂರಿ!
ರಾಮನ ಧ್ಯಾನದಲ್ಲಿ ಶರ್ಮಾ ಅವರು ಬರೆದ ಈ ಗೀತೆ ಅಯೋಧ್ಯೆಯ ಮಡಿಲಲ್ಲಿ ಮೊಳಗಿ ಶ್ರೀರಾಮನಿಗೆ ಅರ್ಪಿತವಾಗಿದೆ. ಗೀತೆಯು ರಾಮ ಎಂಬ ಹೆಸರೇ ಮನಸ್ಸಿಗೆ ಎಂಥ ಆರಾಮ ತರುತ್ತದೆ ಎಂದು ವಿವರಿಸುತ್ತದೆ. ರಾಮನಂತೆ ಕಷ್ಟ ಸಹಿಸುವ ಸಹನೆ, ಒಳಿತಿನೆಡೆ ಸಾಗುವ ಸ್ಥಿರ ಮನಸ್ಸು, ಸದಾ ಅವನ ಸಂಗ, ಕೃಪೆ ಬಯಸುವಂಥ ಹಾಡಿನಲ್ಲಿ ರಾಮನ ಜೀವನ ಹಾಗೂ ಅಲ್ಲಿ ಬಂದ ಪಾತ್ರಗಳೂ ಬರುತ್ತವೆ. ರಾಮನೊಂದಿಗೆ ಒಡನಾಡಿದ ಆ ಪಾತ್ರಗಳಿಗೆ ಸಿಕ್ಕಂಥ ಪುಣ್ಯ ತನಗೂ ದೊರೆಯುವಂತೆ ಮಾಡು ಎಂದು ಶ್ರೀ ರಾಮನಲ್ಲಿ ಮೊರೆವ ಮನಸ್ಸಿದೆ.
ಇಂಥದೊಂದು ಅದ್ಭುತ ಗೀತೆ ರಚನೆಯಾದಾಗಿನಿಂದಲೂ ಕನ್ನಡಿಗರ ಮನೆಗಳಲ್ಲಿ ಮೊಳಗುತ್ತಿತ್ತು. ಇದೀಗ ಅಯೋಧ್ಯೆಯ ರಾಮಮಂದಿರ ಆವರಣದಲ್ಲಿ ಮೊಳಗಿ ರಾಮನಿಗೆ ಅರ್ಪಿತವಾಗಿದೆ.
ಗಜಾನನ ಶರ್ಮಾ ಮೈಸೂರಿನ ಎನ್‌ಐಇ ಕಾಲೇಜಿನಿಂದ ಎಂ ಟೆಕ್ ಪದವಿ, ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಎಂಎ, ಹಂಪಿಯ ಕನ್ನಡ ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಶರ್ಮಾ ಅವರ ಪುತ್ರ ಸಾಕೇತ ಶರ್ಮಾ ಹಾಡಿದ ಈ ಗೀತೆಯ ಲಿಂಕ್ ಇಲ್ಲಿದೆ..