ನವದೆಹಲಿ [ಜ.15]:  ‘ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರಿಬ್ಬರಿಗೆ, ಆ ವಿಮಾನದ ಪೈಲಟ್‌ ಬೆದರಿಕೆ ಹಾಕಿ ಜೈಲಿಗೆ ಕಳಿಸುವ ಎಚ್ಚರಿಕೆ ನೀಡಿದ’ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೈಲಟ್‌ನನ್ನು ವಿಚಾರಣೆ ಮುಗಿಯುವ ತನಕ ಇಂಡಿಗೋ ಅಮಾನತಿನಲ್ಲಿರಿಸಿದೆ.

‘ನಾನು ಚೆನ್ನೈನಿಂದ ನನ್ನ 75 ವರ್ಷದ ತಾಯಿಯನ್ನು ಕರೆದುಕೊಂಡು ವಿಮಾನದಲ್ಲಿ ಬಂದೆ. ತಾಯಿಗೆ ನಡೆಯಲು ಆಗದ ಕಾರಣ ಏರ್‌ಪೋರ್ಟ್‌ಗೆ ಗಾಲಿಕುರ್ಚಿಯನ್ನು ತರಲಾಗಿತ್ತು. ವಿಮಾನ ಇಳಿಯುವ ಸಂದರ್ಭದಲ್ಲಿ ವಿಮಾನದಲ್ಲೇ ಗಾಲಿಕುರ್ಚಿ ತೆಗೆದುಕೊಂಡು ಬರಲು ಅವಕಾಶ ನೀಡಿ. ನನ್ನ ತಾಯಿಯನ್ನು ಕುಳ್ಳಿರಿಸಿ ಕರೆದುಕೊಂಡು ಹೋಗುವೆ ಎಂದು ಪೈಲಟ್‌ ಜಯಕೃಷ್ಣಗೆ ಮನವಿ ಮಾಡಿದೆ. ಆಗ ಆತ ನಮಗೆ ಬೆದರಿಕೆ ಹಾಕಿದ ಹಾಗೂ ರಾತ್ರಿಯಿಡೀ ಜೈಲಲ್ಲೇ ಕಳೆಯುತ್ತೀರಿ ಹುಷಾರ್‌ ಎಂದ’ ಎಂದು ಸುಪ್ರಿಯಾ ಉನ್ನಿ ನಾಯರ್‌ ಎಂಬ ಪತ್ರಕರ್ತೆ ಟ್ವೀಟ್‌ ಮಾಡಿದ್ದಾರೆ.

ಡ್ರೈವಿಂಗ್ ವೇಳೆ ಸೆಲ್ಫಿ ವಿಡಿಯೋ; ಸಂಜನಾಗೆ ನೋಟಿಸ್...

ಅಲ್ಲದೆ, ‘ನೀವು ಕೇವಲ 2 ಸಾವಿರ ಕೊಟ್ಟು ವಿಮಾನ ಪ್ರಯಾಣಕ್ಕೆ ಬಂದಿದ್ದೀರಿ. ಇಡೀ ವಿಮಾನವೇನೂ ನಿಮ್ಮದಲ್ಲ. ಇನ್ನು ಮುಂದೆ ವಿಮಾನ ಏರದಂತೆ ಮಾಡಿಬಿಡ್ತೀನಿ. ನಾನು ಈ ವಿಮಾನದ ಪೈಲಟ್‌. ನಾನು ನಿಮ್ಮನ್ನು ಬೆದರಿಸ್ತೇನೆ. ನನಗೇನೂ ನೀವು ಮಾಡ್ಕೋಳೋಕಾಗಲ್ಲ’ ಎಂದು ಕೂಗಾಡಿದ ಎಂದೂ ಸುಪ್ರಿಯಾ ಆರೋಪಿಸಿದ್ದಾರೆ.

ಈ ಟ್ವೀಟ್‌ ಗಮನಿಸಿದ ಕೇಂದ್ರ ವಿಮಾನಯಾನ ಸಚಿವ ಹರ್ದೀಪ್‌ ಪುರಿ, ‘ಕ್ರಮ ಜರುಗಿಸಿ’ ಎಂದು ಇಂಡಿಗೋಗೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಇಂಡಿಗೋ, ‘ಪ್ರಕರಣದ ತನಿಖೆ ಕೈಗೊಂಡಿದ್ದೇವೆ. ಅಲ್ಲಿಯವರೆಗೆ ಪೈಲಟ್‌ನನ್ನು ಅಮಾನತಿನಲ್ಲಿ ಇರಿಸಲಾಗಿದೆ’ ಎಂದಿದೆ.