ಅಂತಾರಾಷ್ಟ್ರೀಯ ಏರಿಳಿತಗಳು, ವ್ಯಾಪಾರ ಆಘಾತಗಳ ನಡುವೆಯೂ ನಡುವೆಯೂ 2026-27ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿಯೇ ಇರಲಿದೆ. ಏಪ್ರಿಲ್‌ನಿಂದ ಆರಂಭವಾಗಲಿರುವ ಮುಂದಿನ ವಿತ್ತ ವರ್ಷದಲ್ಲಿ ದೇಶ ಶೇ.6.8ರಿಂದ ಶೇ.7.2ರ ನಡುವೆ ಆರ್ಥಿಕ ಬೆಳವಣಿಗೆ ದಾಖಲಿಸಲಿದೆ ಎಂದು ಅಂದಾಜಿಸಲಾಗಿದೆ.

ನವದೆಹಲಿ: ಅಂತಾರಾಷ್ಟ್ರೀಯ ಏರಿಳಿತಗಳು, ವ್ಯಾಪಾರ ಆಘಾತಗಳ ನಡುವೆಯೂ ನಡುವೆಯೂ 2026-27ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿಯೇ ಇರಲಿದೆ. ಏಪ್ರಿಲ್‌ನಿಂದ ಆರಂಭವಾಗಲಿರುವ ಮುಂದಿನ ವಿತ್ತ ವರ್ಷದಲ್ಲಿ ದೇಶ ಶೇ.6.8ರಿಂದ ಶೇ.7.2ರ ನಡುವೆ ಆರ್ಥಿಕ ಬೆಳವಣಿಗೆ ದಾಖಲಿಸಲಿದೆ ಎಂದು ಅಂದಾಜಿಸಲಾಗಿದೆ.ಸಂಸತ್ತಿನಲ್ಲಿ ಗುರುವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ ಪೂರ್ವ ಹಣಕಾಸು ಸರ್ವೆಯಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ಆಶಾದಾಯಕ ಚಿತ್ರಣ ನೀಡಲಾಗಿದೆ.

ವರ್ಷಾಂತ್ಯದಲ್ಲಿ ಟ್ರೇಡ್‌ ಡೀಲ್‌:

ಅಮೆರಿಕದ ಜತೆಗೆ ನಡೆಯುತ್ತಿರುವ ವ್ಯಾಪಾರ ಒಪ್ಪಂದ ಮಾತುಕತೆ ಈ ವರ್ಷದಲ್ಲಿ ಅಂತಿಮ ರೂಪಕ್ಕೆ ಬರುವ ನಿರೀಕ್ಷೆ ಇದ್ದು, ಇದು ಅನಿಶ್ಚಿತತೆಯನ್ನು ಕೊಂಚ ಮಟ್ಟಿಗೆ ತಗ್ಗಿಸಬಹುದು ಎಂದು ಹೇಳಿದೆ.

ಜಿರಾಮ್‌ಜಿಗೆ ಸಮರ್ಥನೆ:

ಈ ಹಿಂದಿನ ನರೇಗಾ ಯೋಜನೆಯ ಅಡಿ 100 ದಿನಗಳ ಕಾಲ ಜನರಿಗೆ ಉದ್ಯೋಗ ಒದಗಿಸಲಾಗುತ್ತಿರಲಿಲ್ಲ. ಕೆಲಸದ ಬೇಡಿಕೆಯಲ್ಲಿ ಗಮನಾರ್ಹ ಕುಸಿತು ಉಂಟಾಗಿತ್ತು. ಹೀಗಾಗಿ ಅದನ್ನು ಪರಿಷ್ಕರಿಸಿ ಹೊಸ ಜಿ ರಾಮ್‌ ಜಿ ಕಾಯ್ದೆ ಜಾರಿಗೊಳಿಸಲಾಯಿತು ಎಂದು ಸಮೀಕ್ಷೆ ತಿಳಿಸಿದೆ.

ರುಪಾಯಿ ಮೌಲ್ಯ ದೇಶದ ಆರ್ಥಿಕತೆಯ ಪ್ರತಿಬಿಂಬವಲ್ಲ:

ಡಾಲರ್‌ನ ಎದುರು 92 ರು.ಗೆ ಕುಸಿದಿರುವ ಭಾರತೀಯ ರುಪಾಯಿಯ ಮೌಲ್ಯವು ಭಾರತದ ಆರ್ಥಿಕತೆಯನ್ನು ಪ್ರತಿಫಲಿಸುವುದಿಲ್ಲ. ರುಪಾಯಿ ಮೌಲ್ಯ ಕುಸಿತದಿಂದ ಅಮೆರಿಕದಿಂದ ಹೆಚ್ಚುವರಿ ತೆರಿಗೆ ಭೀತಿ ಎದುರಿಸುತ್ತಿರುವ ಭಾರತಕ್ಕೆ ಅನುಕೂಲವೇ ಆಗುತ್ತಿದೆ. ಆದರೆ, ವಿದೇಶಿ ಹೂಡಿಕೆಯ ಹರಿವನ್ನು ಇದು ತಡೆಯುತ್ತಿದೆ. ಹೆಚ್ಚಿನ ಮೌಲ್ಯದ ಕಚ್ಚಾ ತೈಲ ಆಮದಿನಿಂದ ಸದ್ಯ ಹಣದುಬ್ಬರದ ಆತಂಕ ಇಲ್ಲ. ದೇಶದ ಆರ್ಥಿಕ ಬೆಳವಣಿಗೆ ಚೆನ್ನಾಗಿದೆ, ಆರ್ಥಿಕ ಮುನ್ನೋಟ ಕೂಡ ಆಶಾದಾಯಕವಾಗಿದೆ, ಹಣದುಬ್ಬರ ನಿಯಂತ್ರಣದಲ್ಲಿದೆ.

ವಿತ್ತೀಯ ಕೊರತೆ ಶೇ.4.4ಕ್ಕೆ ತಗ್ಗಿಸುವಲ್ಲಿ ಯಶಸ್ವಿ ಹೆಜ್ಜೆ:

ಈ ಹಣಕಾಸು ವರ್ಷದಲ್ಲಿ ಶೇ.4.4ರ ವಿತ್ತೀಯ ಕೊರತೆಯ ಗುರಿ ಸಾಧಿಸುವ ದಾರಿಯಲ್ಲಿ ಸರ್ಕಾರ ಯಶಸ್ವಿಯಾಗಿ ಸಾಗುತ್ತಿದೆ. 2025ನೇ ಹಣಕಾಸು ವರ್ಷದಲ್ಲಿ ಸರ್ಕಾರ ಜಿಡಿಪಿಯ ಶೇ.4.9 ವಿತ್ತೀಯ ಕೊರತೆಯ ಗುರಿ ನಿಗದಿ ಮಾಡಿತ್ತು. ಆದರೆ, ಅದನ್ನು ಶೇ.4.8ಕ್ಕೆ ಇಳಿಸಿ ಉತ್ತಮ ಸಾಧನೆ ತೋರಿತ್ತು. 2021ನೇ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು ಶೇ.9.2ರಷ್ಟಿದ್ದ ವಿತ್ತೀಯ ಕೊರತೆಯನ್ನು 2026ನೇ ಹಣಕಾಸು ವರ್ಷದಲ್ಲಿ ಶೇ.4.4ಕ್ಕೆ ಇಳಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಈ ಮೂಲಕ ಆದಾಯ-ಖರ್ಚಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಸರ್ಕಾರ ಯಶಸ್ವಿಯಾಗುತ್ತಿದೆ.

ಯೂರಿಯಾ ಮಾರಾಟದರ ಕೊಂಚ ಏರಿಕೆಗೆ ಸಲಹೆ:

ದೇಶದಲ್ಲಿ ಅತಿಯಾದ ಯೂರಿಯಾ ಬಳಕೆಯಿಂದ ದೇಶದಲ್ಲಿ ಎನ್‌ಪಿಕೆ(ಸಾರಜನಕ, ರಂಜಕ, ಪೊಟ್ಯಾಷಿಯಂ) ಅನುಪಾತ ಹದಗೆಟ್ಟಿದೆ. 2009-10ರಲ್ಲಿ ಈ ಅನುಪಾತ 4:3.2:1 ಇದ್ದದ್ದು 2023-24ರಲ್ಲಿ 10.9:4.1:1 ತಲುಪಿದೆ. ಸಬ್ಸಿಡಿ ದರದ ಯೂರಿಯಾದ ಅತಿಯಾದ ಬಳಕೆ ಇದಕ್ಕೆ ಕಾರಣ. ಮೂಮೂಲಿಯಾಗಿ ಬಹುತೇಕ ಹೆಚ್ಚಿನ ಬೆಳೆಗಳು ಮತ್ತು ಮಣ್ಣಿಗೆ ಈ ಪ್ರಮಾಣ 4:2:1 ಇದ್ದರೆ ಸಾಕು. ಎನ್‌ಪಿಕೆ ಅನುಪಾತ ಸರಿಪಡಿಸಲು 2018ರಿಂದ ಬದಲಾವಣೆ ಕಾಣದ ಯೂರಿಯಾ ಚಿಲ್ಲರೆ ಮಾರಾಟದ ದರವನ್ನು ಕೊಂಚಮಟ್ಟಿಗೆ ಏರಿಕೆ ಮಾಡಬೇಕಿದೆ. ಸದ್ಯ ಯೂರಿಯಾ ಬೆಲೆ 45 ಕೆ.ಜಿ. ಚೀಲ 242 ರು. ಇದೆ.

ಜಂಕ್ ಫುಡ್‌ ಜಾಹೀರಾತಿಗೆ ರಾತ್ರಿ 6ರಿಂದ 11ರವೆರೆಗೆ ನಿರ್ಬಂಧ:

ಹೆಚ್ಚಿನ ಕೊಬ್ಬು, ಉಪ್ಪು, ಸಕ್ಕರೆ ಬಳಸಿದ ಅಲ್ಟ್ರಾಪ್ರೊಸೆಸ್ಡ್‌ (ತೀವ್ರ ಸಂಸ್ಕರಿತ) ಅಥವಾ ಜಂಕ್‌ಫುಡ್ ಆಹಾರಗಳ ಪಾಲಿಗೆ ವಿಶ್ವದಲ್ಲೇ ಭಾರತವು ಅತಿದೊಡ್ಡ ಮಾರುಕಟ್ಟೆಯಾಗುತ್ತಿದೆ. ಈ ರೀತಿಯ ಆಹಾರವಸ್ತುಗಳ ಜಾಹೀರಾತುಗಳಿಗೆ ಬೆಳಗ್ಗೆ 9ರಿಂದ ರಾತ್ರಿ 11 ಗಂಟೆವರೆಗೆ ನಿರ್ಬಂಧ ಹೇರುವ ಅಗತ್ಯವಿದೆ. ಇದರ ಜತೆಗೆ ಶಿಶು ಮತ್ತು ಮಕ್ಕಳ ಹಾಲು ಮತ್ತು ಪಾನೀಯಗಳ ಮಾರ್ಕೆಟಿಂಗ್‌ ಮೇಲೆ ನಿರ್ಬಂಧ ಹೇರುವ ಅಗತ್ಯವೂ ಇದೆ. ಅಂದಾಜಿನ ಪ್ರಕಾರ ದೇಶದಲ್ಲಿ 2020ರಲ್ಲಿ 3.3 ಕೋಟಿ ಮಕ್ಕಳು ಸ್ಥೂಲಕಾಯದಿಂದ ಬ‍ಳಲುತ್ತಿದ್ದರೆ, 2035ರಲ್ಲಿ ಈ ಸಂಖ್ಯೆ 8.3 ಕೋಟಿ ತಲುಪಲಿದೆ. ಹೀಗಾಗಿ ಚಿಲಿಯಂಥ ದೇಶಗಳ ಮಾದರಿಯಲ್ಲಿ ಮಾಧ್ಯಮಗಳಲ್ಲಿ ಇಂಥ ಆಹಾರಗಳ ಜಾಹೀರಾತಿಗೆ ನಿರ್ಬಂಧ ಹೇರಬೇಕು.