ಪಾಕಿಸ್ತಾನದೊಂದಿಗಿನ ಕದನ ವಿರಾಮದ ನಂತರ ಪ್ರಧಾನಿ ಮೋದಿಯವರ ಭಾಷಣವು ಭಾರತದ ರಕ್ಷಣಾ ಷೇರುಗಳ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ಸ್ವದೇಶಿ ರಕ್ಷಣಾ ಉಪಕರಣಗಳಿಗೆ ಒತ್ತು ನೀಡಿದ ಬೆನ್ನಲ್ಲೇ ಈ ಏರಿಕೆಯಾಗಿದೆ.
ನವದೆಹಲಿ: ಪಾಕಿಸ್ತಾನದೊಂದಿಗಿನ ಕದನ ವಿರಾಮದ ಬೆನ್ನಲ್ಲೇ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಮೊದಲ ಭಾಷಣ, ಭಾರತದ ರಕ್ಷಣಾ ಷೇರು ಪೇಟೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದ್ದು, ಅದು ಮಂಗಳವಾರ ಶೇ.7ರಷ್ಟು ಏರಿಕೆ ಕಂಡಿದೆ. ಭಾಷಣದಲ್ಲಿ ಪ್ರಧಾನಿ ಮೋದಿ, ಸೈನಿಕ ಶಕ್ತಿಯಲ್ಲಿ ಸ್ವಾವಲಂಬನೆ ಮತ್ತು ಸ್ವದೇಶಿ ರಕ್ಷಣಾ ಉಪಕರಣಗಳಿಗೆ ಒತ್ತು ನೀಡಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ಭಾರತ್ ಎಲೆಕ್ಟ್ರಾನಿಕ್ಸ್ (ಬಿಇಎಲ್) ಬೆಲೆ ಶೇ.4.5ರಷ್ಟು ಏರಿಕೆಯಾಗಿ, ಪ್ರತಿ ಷೇರಿಗೆ 337.30 ರು. ಆಗಿದೆ. ಭಾರತ್ ಡೈನಾಮಿಕ್ಸ್‌ನ ಷೇರುಮೌಲ್ಯದಲ್ಲಿ ಶೇ.7.8ರಷ್ಟು ಹೆಚ್ಚಳವಾಗಿದೆ. ಹಿಂದುಸ್ತಾನ್ ಏರೋಬಾಟಿಕ್ಸ್ ಲಿ. (ಎಚ್.ಎಎಲ್) ಶೇ.4ರಷ್ಟು ಏರಿದೆ. ಪಾಕ್ ಬಳಸಿದ ಚೀನಾ, ಅಮೆರಿಕ, ಟರ್ಕಿ ನಿರ್ಮಿತ ಅಸ್ತ್ರಗಳನ್ನು ಭಾರತದ ರಕ್ಷಣಾ ವ್ಯವಸ್ಥೆ ಧ್ವಂಸಗೊಳಿಸಿದ್ದರಿಂದ ಅವುಗಳ ಮೇಲಿನ ವಿಶ್ವಾಸ ಹೆಚ್ಚಿದ್ದೂ ಸಹ ಈ ಏರಿಕೆಗೆ ಕಾರಣ ಎನ್ನಲಾಗಿದೆ.
ಪಿಒಕೆ ಖಾಲಿ ಮಾಡಿ: ಪಾಕ್‌ಗೆ ಭಾರತ
ನವದೆಹಲಿ: ಭಾರತ ಮತ್ತು ಪಾಕ್ ನಡುವೆ ಬಾಕಿ ಇರುವ ಏಕೈಕ ವಿಷಯವೆಂದರೆ ಪಾಕ್ ಆಕ್ರಮಿತ ಕಾಶ್ಮೀರದ ಹಸ್ತಾಂತರ ಎಂದು ಭಾರತ ಪುನರುಚ್ಚರಿಸಿದೆ. ಈ ಮೂಲಕ ಪಿಒಕೆ ಖಾಲಿ ಮಾಡಿ ಎಂಬ ಸಂದೇಶವನ್ನು ಪಾಕಿಸ್ತಾನಕ್ಕೆ ಮತ್ತೊಮ್ಮೆ ರವಾನಿಸಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪಾಕಿಸ್ತಾನಕ್ಕೆ ಈ ಸಂದೇಶ ರವಾನಿಸಿದ್ದಾರೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಪರಿಹರಿಸಿಕೊಳ್ಳಬೇಕು ಎಂಬುದು ನಮ್ಮ ದೀರ್ಘಕಾಲದ ರಾಷ್ಟ್ರೀಯ ನಿಲುವು. ಅದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ ಅಮೆರಿಕ ಅಧ್ಯಕ್ಷ ಟ್ರಂಪ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 'ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಚಾರಕ್ಕೆ ಟ್ರಂಪ್ ಮಧ್ಯಸ್ಥಿಕೆ ಬೇಕಿಲ್ಲ ಎಂದರು. ಯಾವುದೇ ಸಮಸ್ಯೆಗಳನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಪರಿಹರಿಸಬೇಕು ಎಂಬುದು ನಮ್ಮ ದೀರ್ಘಕಾಲದ ರಾಷ್ಟ್ರೀಯ ನಿಲುವು, ಆ ನೀತಿ ಬದಲಾಗಿಲ್ಲ. ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿ ಕೊಂಡಿರುವ ಭಾರತೀಯ ಪ್ರದೇಶವನ್ನು ಬಿಟ್ಟುಕೊಡುವುದೊಂದೇ ಬಾಕಿ ಇರುವ ವಿಷಯ' ಎಂದರು.
ಭಾರತವು ಪರಮಾಣು ಬೆದರಿಕೆಗೆ ಮಣಿಯುವುದಿಲ್ಲ ಮತ್ತು ಅದನ್ನು ಬಳಸಿಕೊಂಡು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಡೆಸಲು ಬಿಡುವುದಿಲ್ಲ ಎಂಬ ದೃಢ ನಿಲುವನ್ನು ಹೊಂದಿದೆ ಎಂದರು. ಜೊತೆಗೆ, ಪಾಕಿಸ್ತಾನದ ಅಣ್ವಸ್ತ್ರ ಸಂಗ್ರಹಾಗಾರಗಳ ಬಳಿ ದಾಳಿ ಆಗಿದೆಯೇ ಇಲ್ಲವೇ ಎಂಬುದನ್ನು ಪಾಕಿಸ್ತಾನವೇ ಸ್ಪಷ್ಟಪಡಿಸಬೇಕು ಎಂದು ಜೈಸ್ವಾಲ್ ಹೇಳಿದರು.
ಭಾರತದ ದಾಳಿಗೆ 11 ಯೋಧರು, 40 ನಾಗರಿಕರು ಬಲಿ: ಪಾಕಿಸ್ತಾನ
ಇಸ್ಲಾಮಾಬಾದ್: ಭಾರತ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ತನ್ನ ಸೇನೆಯ 11 ಯೋಧರು ಮತ್ತು 40 ನಾಗರಿಕರು ಬಲಿಯಾಗಿದ್ದಾರೆ. ಒಟ್ಟು 121 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಇದೇ ಮೊದಲ ಬಾರಿಗೆ ಹೇಳಿದೆ. ಈ ಮೂಲಕ ತನ್ನ ಯೋಧರ ಸಾವನ್ನು ಖಚಿತಪಡಿಸಿದೆ. ಎರಡು ದೇಶಗಳ ನಡುವೆ ಕದನ ವಿರಾಮ ಘೋಷಣೆಯ ಮೂರು ದಿನದ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನ ಸೇನೆ, 'ಭಾರತವು ಮೇ 6 - 7 ರ ರಾತ್ರಿ ನಮ್ಮ ದೇಶದ ವಿರುದ್ಧ ನಡೆಸಿದ ಅಪ್ರಚೋದಿತ ಮತ್ತು ಖಂಡನೀಯ ದಾಳಿಯಲ್ಲಿ 11 ಸೈನಿಕರು, 7 ಮಹಿಳೆಯರು ಮತ್ತು 15 ಮಕ್ಕಳು ಸೇರಿದಂತೆ 40 ನಾಗರಿಕರು ಬಲಿಯಾಗಿದ್ದಾರೆ. 121 ಮಂದಿ ಗಾಯಗೊಂಡಿದ್ದು, ಅದರಲ್ಲಿ ಸೇನೆಯ 78 ಮಂದಿ ಸೇರಿದ್ದಾರೆ ಎಂದಿದೆ.


