ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಚೀನಾ ಮತ್ತು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಂತಿಗಾಗಿ ಶಕ್ತಿ ಅಗತ್ಯ ಎಂದು ಹೇಳಿದ ಅವರು, ಭಾರತದ ಹೊಸ ರಕ್ಷಣಾ ವ್ಯವಸ್ಥೆ 'ಸುದರ್ಶನ ಚಕ್ರ' 2035ರ ವೇಳೆಗೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.
ನವದೆಹಲಿ, (ಆ.26): ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರು ಚೀನಾ ಮತ್ತು ಪಾಕಿಸ್ತಾನಕ್ಕೆ ನೇರ ಸಂದೇಶ ರವಾನಿಸಿದ್ದಾರೆ. 'ಶಕ್ತಿ ಇಲ್ಲದೆ ಶಾಂತಿ ಕೇವಲ ಕಲ್ಪನೆ' ಎಂದು ಖಡಕ್ ಎಚ್ಚರಿಕೆ ನೀಡಿರುವ ಅವರು, ಭಾರತ ಶಾಂತಿಪ್ರಿಯ ರಾಷ್ಟ್ರವಾದರೂ, ತನ್ನ ಭದ್ರತೆಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಾಂತಿಯನ್ನು ಕಾಪಾಡಿಕೊಳ್ಳಲು ಶಕ್ತಿ ಅಗತ್ಯ, 'ಶಾಂತಿಯನ್ನು ಬಯಸಿದರೆ, ಯುದ್ಧಕ್ಕೆ ಸಿದ್ಧರಾಗಿರಿ' ಎಂದು ಲ್ಯಾಟಿನ್ ಗಾದೆಯನ್ನು ಉಲ್ಲೇಖಿಸಿದ್ದಾರೆ.
ಆಪರೇಷನ್ ಸಿಂದೂರ್‌ನಿಂದ ಕಲಿತ ಪಾಠಗಳು
ಜನರಲ್ ಚೌಹಾಣ್ ಅವರು ಆಪರೇಷನ್ ಸಿಂದೂರ್ ಬಗ್ಗೆ ಮಾತನಾಡುತ್ತಾ, ಇದು ಆಧುನಿಕ ಸಂಘರ್ಷವಾಗಿದ್ದು, ಇದರಿಂದ ಪ್ರಮುಖ ಪಾಠಗಳನ್ನು ಕಲಿಯಲಾಗಿದೆ ಎಂದು ತಿಳಿಸಿದ್ದಾರೆ. ಅನೇಕ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ ಮತ್ತು ಕೆಲವು ಪ್ರಗತಿಯಲ್ಲಿವೆ. ಈ ಕಾರ್ಯಾಚರಣೆಯ ಉದ್ದೇಶವು ಕೇವಲ ಚರ್ಚೆಯಲ್ಲ, ಬದಲಿಗೆ ಭವಿಷ್ಯದ ಕಾರ್ಯತಂತ್ರವನ್ನು ರೂಪಿಸುವುದಾಗಿದೆ ಎಂದಿದ್ದಾರೆ.
ಸುದರ್ಶನ ಚಕ್ರ: ಭಾರತದ ರಕ್ಷಣೆಯ ಹೊಸ ಆಯಾಮ
ಭಾರತದ ಹೊಸ ರಕ್ಷಣಾ ವ್ಯವಸ್ಥೆ 'ಸುದರ್ಶನ ಚಕ್ರ'ದ ಬಗ್ಗೆ ಮಾತನಾಡಿದ ಸಿಡಿಎಸ್, ಇದು 2035ರ ವೇಳೆಗೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ. ಪ್ರಧಾನ ಮಂತ್ರಿಗಳು ಆಗಸ್ಟ್ 15 ರಂದು ಇದನ್ನು ಪ್ರಸ್ತಾಪಿಸಿದ್ದರು. ಈ ವ್ಯವಸ್ಥೆಯು ದೇಶದ ಪ್ರಮುಖ ಮಿಲಿಟರಿ, ನಾಗರಿಕ ಮತ್ತು ರಾಷ್ಟ್ರೀಯ ತಾಣಗಳನ್ನು ಸುರಕ್ಷಿತಗೊಳಿಸಲಿದ್ದು, ಭಾರತದ ರಕ್ಷಣಾ ಕಾರ್ಯತಂತ್ರಕ್ಕೆ ಹೊಸ ದಿಕ್ಕನ್ನು ನೀಡಲಿದೆ. ಆಧುನಿಕ ಸವಾಲುಗಳನ್ನು ಎದುರಿಸಲು ಕೇವಲ ಶಾಂತಿಯ ಬಯಕೆ ಸಾಕಾಗುವುದಿಲ್ಲ. ಕಾರ್ಯತಂತ್ರದ ಶಕ್ತಿ ಮತ್ತು ಸಿದ್ಧತೆಯೊಂದಿಗೆ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಜನರಲ್ ಚೌಹಾಣ್ ಪುನರುಚ್ಚರಿಸಿದ್ದಾರೆ.
