ಏಷ್ಯಾಕಪ್‌ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಸರ್ಕಾರ ಅನುಮತಿ ನೀಡಿದ್ದರೂ, ದ್ವಿಪಕ್ಷೀಯ ಸರಣಿಗಳಿಗೆ ನಿರ್ಬಂಧ ಮುಂದುವರಿಯಲಿದೆ.

ನವದೆಹಲಿ: ಭಾರೀ ಕುತೂಹಲಕ್ಕೆ ಕಾರಣವಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್‌ ಟಿ20 ಕ್ರಿಕೆಟ್‌ ಪಂದ್ಯಕ್ಕೆ ಕೇಂದ್ರ ಸರ್ಕಾರ ಬುಧವಾರ ಹಸಿರು ನಿಶಾನೆ ತೋರಿದೆ. ಆದರೆ ಉಭಯ ತಂಡಗಳ ನಡುವೆ ಕ್ರಿಕೆಟ್‌ ಸೇರಿ ಯಾವುದೇ ಕ್ರೀಡೆಯಲ್ಲಿ ದ್ವಿಪಕ್ಷೀಯ ಸರಣಿ ನಡೆಯಲ್ಲ ಎಂದು ಕ್ರೀಡಾ ಸಚಿವಾಲಯ ಸ್ಪಷ್ಟಪಡಿಸಿದೆ.

ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಭೀಕರ ಹತ್ಯಾಕಾಂಡ ಬಳಿಕ ಭಾರತ ತಂಡ ಪಾಕ್‌ ವಿರುದ್ಧ ಕ್ರಿಕೆಟ್‌ ಆಡುವ ಬಗ್ಗೆ ಭಾರೀ ಚರ್ಚೆಯಾಗಿತ್ತು. ಈ ನಡುವೆ ಲೆಜೆಂಡ್ಸ್‌ ಕ್ರಿಕೆಟ್‌ ಲೀಗ್‌ನಲ್ಲಿ ಭಾರತ ತಂಡ ಪಾಕ್‌ ವಿರುದ್ಧ ಪಂದ್ಯ ಬಹಿಷ್ಕರಿಸಿತ್ತು. ಹೀಗಾಗಿ ಏಷ್ಯಾಕಪ್‌ನಲ್ಲಿ ಭಾರತ ತಂಡ ಪಾಕ್‌ ವಿರುದ್ಧ ಆಡಲಿದೆಯೇ ಎಂಬ ಕುತೂಹಲವಿತ್ತು. ಇದಕ್ಕೆ ಕ್ರೀಡಾ ಸಚಿವಾಲಯ ಸ್ಪಷ್ಟನೆ ನೀಡಿದೆ.

ಭಾರತದ ಅಂತಾರಾಷ್ಟ್ರೀಯ ಕ್ರೀಡೆಗಳಿಗೆ ಸಂಬಂಧಿಸಿದಂತೆ ಸಚಿವಾಲಯವು ಹೊಸ ನೀತಿಯನ್ನು ಪ್ರಕಟಿಸಿತು. ಇದನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ನೀತಿ ತಕ್ಷಣವೇ ಜಾರಿಗೆ ಬರಲಿದೆ ಎಂದೂ ತಿಳಿಸಿದೆ. ‘ಏಷ್ಯಾಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡುವುದನ್ನು ನಾವು ತಡೆಯುವುದಿಲ್ಲ. ಒಲಿಂಪಿಕ್ ಚಾರ್ಟರ್‌ಗೆ ನಾವು ಬದ್ಧವಾಗಿರುವುದರಿಂದ ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಪಾಕ್‌ ವಿರುದ್ಧ ಆಡದಂತೆ ತಡೆಯಲ್ಲ. ಆದರೆ ಟೂರ್ನಿ ಪಾಕಿಸ್ತಾನದಲ್ಲಿ ನಡೆಯುವುದಿದ್ದರೆ ಮಾತ್ರ ನಿರ್ಧಾರ ಬದಲಾಗಲಿದೆ. ಭಾರತದಲ್ಲಿ ಬಹುರಾಷ್ಟ್ರೀಯ ಟೂರ್ನಿ ನಡೆದರೆ ಪಾಕಿಸ್ತಾನ ಆಟಗಾರರಿಗೆ ಪಾಲ್ಗೊಳ್ಳಲು ಅವಕಾಶವಿದೆ’ ಎಂದಿದೆ.

ಬಹುರಾಷ್ಟ್ರೀಯ ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ), ಏಷ್ಯನ್ ಕ್ರಿಕೆಟ್‌ ಕೌನ್ಸಿಲ್‌(ಎಸಿಸಿ) ಆಯೋಜಿಸುವ ಟೂರ್ನಿ. ಒಲಿಂಪಿಕ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌, ಏಷ್ಯನ್‌ ಗೇಮ್ಸ್‌ಗಳಲ್ಲೂ ಈ ಎರಡು ದೇಶಗಳು ಪರಸ್ಪರ ಆಡುವುದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.

‘ಬಹುರಾಷ್ಟ್ರೀಯ ಟೂರ್ನಿಗಳಲ್ಲಾದರೂ ನಮ್ಮ ಅಥ್ಲೀಟ್‌ಗಳನ್ನು ತೊಂದರೆಗೆ ಸಿಲುಕಿಸುವುದಿಲ್ಲ. ಎಷ್ಟೇ ಆದರೂ ಪಾಕಿಸ್ತಾನ ಕಸದ ತೊಟ್ಟಿ ಎಂಬುದನ್ನು ಘೋಷಿಸಲು ಹಿಂಜರಿಯುವುದಿಲ್ಲ ಹಾಗೂ ಮೆರ್ಸಿಡಸ್‌ನಂತೆ ಹೊಳೆಯುವ ಭಾರತಕ್ಕೆ ಕೊಳೆ ಅಂಟಿಸಬಹುದು’ ಎಂದು ಸಚಿವಾಲಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಾಗಿದೆ.

ಈ ಬಾರಿ ಏಷ್ಯಾಕಪ್‌ ಸೆ.9ರಿಂದ 28ರ ತನಕ ಯುಎಇ ದೇಶದಲ್ಲಿ ನಡೆಯಲಿದೆ. ಭಾರತ ಸೆ.14ರಂದು ಲೀಗ್‌ ಹಂತದ ಪಂದ್ಯದಲ್ಲಿ ದುಬೈನಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಬಳಿಕ ಸೂಪರ್‌-4 ಹಂತದಲ್ಲೂ ಈ ಎರಡು ತಂಡಗಳು ಮುಖಾಮುಖಿಯಾಗುವ ನಿರೀಕ್ಷೆಯಿದೆ.

ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ:

ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್‌ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಕುಮಾರ್(ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.

ದ್ವಿಪಕ್ಷೀಯ ಸರಣಿಯ ಬ್ಯಾನ್‌ ಮುಂದುವರಿಕೆ

ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ-ಪಾಕ್‌ ಆಡಲು ಒಪ್ಪಿಗೆ ಸೂಚಿಸಿದ್ದರೂ, ದ್ವಿಪಕ್ಷೀಯ ಸರಣಿ ನಡೆಯುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಉಭಯ ದೇಶಗಳ ನಡುವೆ ಕೊನೆ ಬಾರಿ 2012ರಲ್ಲಿ ಕ್ರಿಕೆಟ್‌ ಸರಣಿ ನಡೆದಿತ್ತು. ‘ಯಾವುದೇ ಕ್ರೀಡೆಯಲ್ಲಿ ಭಾರತ-ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆಯಲ್ಲ. ಭಾರತ ತಂಡ ಪಾಕ್‌ಗೆ, ಪಾಕ್‌ ತಂಡ ಭಾರತಕ್ಕೆ ಆಗಮಿಸಲು ಒಪ್ಪಿಗೆ ಇಲ್ಲ. ದ್ವಿಪಕ್ಷೀಯ ಸರಣಿಯನ್ನು ಅಮೆರಿಕದಲ್ಲಿ ನಡೆಸಿದರೂ ನಾವು ಆಡುವುದಿಲ್ಲ’ ಎಂದು ಸಚಿವಾಲಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು, 2 ದೇಶಗಳ ನಡುವಿನ ಸಂಬಂಧ ಸುಧಾರಿಸಿದರೆ ನೀತಿಯಲ್ಲಿ ಬದಲಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯದ ಮಟ್ಟಿಗೆ ಅದು ಅಸಾಧ್ಯ ಎಂದಿದ್ದಾರೆ.