ದೆಹಲಿಯಲ್ಲಿ ಮಂಕಿಪಾಕ್ಸ್ ಸೋಂಕಿಗೆ ತುತ್ತಾದ ವ್ಯಕ್ತಿ ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಪುರುಷರಷ್ಟೇ ಪಾಲ್ಗೊಂಡಿದ್ದ ಬ್ಯಾಚುಲರ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಎಂದು ತಿಳಿದುಬಂದಿದೆ.
ನವದೆಹಲಿ(ಜು.25): ಕೇರಳದಲ್ಲಿ ದೇಶದ ಮೊದಲು 3 ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾದ ನಂತರ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದೇಶ ಪ್ರಯಾಣ ಮಾಡದ ವ್ಯಕ್ತಿಯಲ್ಲೂ ಸೋಂಕು ಪತ್ತೆಯಾಗಿದೆ. ಇದು ದೇಶದ 4ನೇ ಮಂಕಿಪಾಕ್ಸ್ ಪ್ರಕರಣವಾಗಿದೆ. ಮೊದಲ ಮೂರು ಸೋಂಕಿತರು ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದ್ದರು. ಆದರೆ ನಾಲ್ಕನೇ ಪ್ರಕರಣ ಸ್ಥಳೀಯವಾಗಿಯೇ ಸೋಂಕು ಹಬ್ಬಿದ ಮೊದಲ ಪ್ರಕರಣವಾದ ಕಾರಣ ಹೆಚ್ಚಿನ ಆತಂಕ ಉಂಟಾಗಿದೆ.
ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಭಾನುವಾರ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿ, ದೇಶದಲ್ಲಿ ಮಂಕಿಪಾಕ್ಸ್ ಹರಡುವುದನ್ನು ತಡೆಯಲು ಕೈಗೊಂಡ ಕ್ರಮಗಳು, ಸೋಂಕು ವ್ಯಾಪಕವಾಗುವ ಸಂಭವನೀಯ ಸಮಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದೆ.
4ನೇ ಕೇಸು:
ದೆಹಲಿಯಲ್ಲಿ ಮಂಕಿಪಾಕ್ಸ್ ಸೋಂಕಿಗೆ ತುತ್ತಾದ ವ್ಯಕ್ತಿ ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಪುರುಷರಷ್ಟೇ ಪಾಲ್ಗೊಂಡಿದ್ದ ಬ್ಯಾಚುಲರ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಎಂದು ತಿಳಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯು ಪರಸ್ಪರ ಲೈಂಗಿಕ ಸಂಪರ್ಕ ಹೊಂದುವ ಪುರುಷರಲ್ಲಿ (ಸಲಿಂಗಿ- ಗೇ) ಮಂಕಿಪಾಕ್ಸ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಹೇಳಿಕೆ ಬೆನ್ನಲ್ಲೇ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ದೆಹಲಿಯ ವ್ಯಕ್ತಿಗೆ ಈ ಮಾರ್ಗದಿಂದ ಸೋಂಕು ತಗಲಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.
ಮಂಕಿಪಾಕ್ಸ್ ಪತ್ತೆಗೆ ಏರ್ಪೋರ್ಟ್, ಬಂದರಲ್ಲೇ ಪರೀಕ್ಷೆ ನಡೆಸಿ: ತಜ್ಞರು
ಪಶ್ಚಿಮ ದೆಹಲಿಯ 34 ವರ್ಷದ ವ್ಯಕ್ತಿಯಲ್ಲಿ ಮೂರು ದಿನಗಳ ಹಿಂದೆ ಮಂಕಿಪಾಕ್ಸ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆತನ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಶನಿವಾರ ಪಾಸಿಟಿವ್ ವರದಿ ಬಂದಿದ್ದು, ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ಚೇತರಿಸಿಕೊಳ್ಳುತ್ತಿದ್ದಾನೆ. ಆತನ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಶನಿವಾರವಷ್ಟೇ ಮಂಕಿಪಾಕ್ಸ್ ಸೋಂಕನ್ನು ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಿತ್ತು. ಈಗಾಗಲೇ 75 ದೇಶಗಳಿಗೆ ಮಂಕಿಪಾಕ್ಸ್ ಹರಡಿದ್ದು, 16000 ಮಂದಿಗೆ ಸೋಂಕು ತಗಲಿದೆ. ದೇಶದ ಮೊದಲ 3 ಪ್ರಕರಣಗಳು ಕೇರಳದಲ್ಲಿ ವಿದೇಶದಿಂದ ಆಗಮಿಸಿದವರಲ್ಲಿ ಪತ್ತೆಯಾಗಿತ್ತು.
ಇಡೀ ದೇಶಕ್ಕೇ ವ್ಯಾಪಿಸುತ್ತಾ ಮಂಕಿಪಾಕ್ಸ್? ICMR ವಿಜ್ಞಾನಿ ಹೇಳಿದ್ದೇನು?
ಅಪಾಯಕಾರಿ ಇಲ್ಲ, ಗಾಬರಿ ಬೇಡ: ತಜ್ಞರು
ಮಂಕಿಪಾಕ್ಸ್ ತೀವ್ರವಾಗಿ ಹರಡುವುದಿಲ್ಲ ಹಾಗೂ ಸೋಂಕು ಅಪರೂಪವಾಗಿ ಮಾರಣಾಂತಿಕವಾಗಿರುವ ಕಾರಣ ಭಯಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಸಲಿಂಗಕಾಮದಿಂದ ಹಬ್ಬುತ್ತೆ: ಡಬ್ಲ್ಯುಎಚ್‌ಒ
ಮಂಕಿಪಾಕ್ಸ್ ಸೋಂಕು ಸಲಿಂಗಿ ಪುರುಷರಲ್ಲಿ ಲೈಂಗಿಕ ಸಂಪರ್ಕದಿಂದ ಹರಡುವ ಸಾಧ್ಯತೆ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.
