ವಿದೇಶ ಪ್ರವಾಸ ಮಾಡಬೇಕು ಎಂಬುದು ಹಲವರ ಕನಸು. ಆದರೆ, ಕೈಯಲ್ಲಿ ಹಣವಿಲ್ಲದೆ ಸುತ್ತಾಡಲು ಸಾಧ್ಯವೇ? ಇಂತಹದ್ದೇ ಪ್ರಯತ್ನಕ್ಕೆ ಮುಂದಾದ ಭಾರತೀಯ ಯೂಟ್ಯೂಬರ್ ಟೀಕೆಗೆ ಒಳಗಾಗಿದ್ದಾನೆ. ಥೈಲ್ಯಾಂಡ್‌ನಲ್ಲಿ ಹಣವಿಲ್ಲದೆ ಪ್ರಯಾಣಿಸುತ್ತಿದ್ದ ಇತನಿಗೆ ಅಲ್ಲಿನ ಪೊಲೀಸರು ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ.

ವಿದೇಶ ಪ್ರವಾಸ ಮಾಡಬೇಕು ಎಂಬುದು ಹಲವರ ಕನಸು. ಆದರೆ, ಕೈಯಲ್ಲಿ ಹಣವಿಲ್ಲದೆ ಸುತ್ತಾಡಲು ಸಾಧ್ಯವೇ? ಇಂತಹದ್ದೇ ಪ್ರಯತ್ನಕ್ಕೆ ಮುಂದಾದ ಭಾರತೀಯ ಯೂಟ್ಯೂಬರ್ ಟೀಕೆಗೆ ಒಳಗಾಗಿದ್ದಾನೆ. ಥೈಲ್ಯಾಂಡ್‌ನಲ್ಲಿ ಹಣವಿಲ್ಲದೆ ಪ್ರಯಾಣಿಸುತ್ತಿದ್ದ ಇತನಿಗೆ ಅಲ್ಲಿನ ಪೊಲೀಸರು ಮತ್ತು ದೇವಾಲಯದ ಅಧಿಕಾರಿಗಳು ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ.

ಹಣವಿಲ್ಲದೆ ಥೈಲ್ಯಾಂಡ್ ಪ್ರವಾಸ, ದೇವಾಲಯದಲ್ಲಿ ರಾತ್ರಿ ಕಳೆಯಲು ಯತ್ನ!

ಬನ್ಶಿ ಎಂಬ ಭಾರತೀಯ ಯೂಟ್ಯೂಬರ್, 'Anything Banshi' ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾನೆ. ಸುಮಾರು 17,300 ಚಂದಾದಾರರನ್ನು ಹೊಂದಿರುವ ಇತ, ಅತ್ಯಂತ ಕಡಿಮೆ ಖರ್ಚಿನಲ್ಲಿ ಜಗತ್ತನ್ನು ಸುತ್ತುವ ಪ್ರಯತ್ನದಲ್ಲಿದ್ದಾನಂತೆ. ಥೈಲ್ಯಾಂಡ್‌ನ ಉಡಾನ್ ಥಾನಿ ಪ್ರಾಂತ್ಯದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಹಣವಿಲ್ಲದ ಕಾರಣ ರಾತ್ರಿ ಮಲುಗಲು ಬೌದ್ಧ ದೇವಾಲಯದಲ್ಲಿದ್ದನು. ಆಹಾರ, ವಸತಿ ಸೇರಿದಂತೆ ವಿವಿಧ ವಿಷಯಗಳಲ್ಲಿ ಅಪರಿಚಿತರ ಸಹಾಯವನ್ನು ಪಡೆಯುತ್ತಿದ್ದುದಾಗಿ ಅವರು ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ.

ಆದರೆ, ದೇವಾಲಯದ ಆವರಣದಲ್ಲಿ ಹೊರಗಿನವರು ರಾತ್ರಿ ತಂಗಲು ಅವಕಾಶವಿಲ್ಲ ಎಂದು ತಿಳಿಸಿದ ಪೊಲೀಸರು ಮತ್ತು ದೇವಾಲಯವನ್ನು ನಡೆಸುವರು ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಮಾತುಕತೆಯನ್ನು ಬನ್ಶಿ ತಮ್ಮ ವಿಡಿಯೋದಲ್ಲಿ ದಾಖಲಿಸಿದ್ದಾರೆ.

20 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ!

ವರದಿಗಳ ಪ್ರಕಾರ, ದೇವಾಲಯದ ಒಬ್ಬ ಸನ್ಯಾಸಿ ತಮಗೆ ರಾತ್ರಿ ಉಳಿಯಲು ಅವಕಾಶ ನೀಡಿದ್ದರು ಎಂದು ಬನ್ಶಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಹೀಗಾಗಿ, ದೇವಾಲಯದ ಆವರಣದಲ್ಲಿಯೇ ಉಳಿಯಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, 20 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆದರೂ ಅಧಿಕಾರಿಗಳು ಅವರ ಮನವಿಗೆ ಒಪ್ಪಿಗೆ ನೀಡಲಿಲ್ಲ. ಬದಲಾಗಿ, ಹತ್ತಿರದಲ್ಲಿದ್ದ ಬಜೆಟ್ ಹೋಟೆಲ್‌ನಲ್ಲಿ ಉಳಿದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅಲ್ಲಿ ಒಂದು ರಾತ್ರಿ ತಂಗಲು ಸುಮಾರು 400 ಥಾಯ್ ಬಹ್ತ್ ವೆಚ್ಚವಾಗಬಹುದು ಎಂದು ತಿಳಿಸಲಾಗಿದೆ.

ಅಷ್ಟೇ ಅಲ್ಲದೆ, ಹೋಟೆಲ್ ತಲುಪಲು ಸಹಾಯ ಮಾಡುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ತಮ್ಮ ಪ್ರಯಾಣದ ಖರ್ಚನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ಬನ್ಶಿ ಈ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಭಾರತೀಯ ಯೂಟ್ಯೂಬರ್ ವಿರುದ್ಧ ನೆಟ್ಟಿಗರ ಆಕ್ರೋಶ!

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿದೇಶಕ್ಕೆ ಪ್ರವಾಸ ಹೋಗುವಾಗ ಕನಿಷ್ಠ ವಸತಿ ಮತ್ತು ಆಹಾರದ ಖರ್ಚಿಗೆ ಹಣ ಹೊಂದಿರಬೇಕಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಸ್ಥಳೀಯ ಸಂಪ್ರದಾಯಗಳು, ಧಾರ್ಮಿಕ ಸ್ಥಳಗಳ ನಿಯಮಗಳು ಮತ್ತು ಅಲ್ಲಿನ ಜನರ ನಂಬಿಕೆಗಳನ್ನು ಗೌರವಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಬ್ಬ ನೆಟ್ಟಿಗರು, ಥಾಯ್ ಪೊಲೀಸರು ಯೂಟ್ಯೂಬರ್‌ನೊಂದಿಗೆ ತಾಳ್ಮೆಯಿಂದ ವರ್ತಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರವಾಸಿಗರು ತಮ್ಮ ಬಳಿ ಸಾಕಷ್ಟು ಹಣವಿಲ್ಲದೆ ಪ್ರಯಾಣಿಸುವುದು ಸೂಕ್ತವಲ್ಲ ಎಂದೂ ಹೇಳಿದ್ದಾರೆ.

ಮತ್ತೊಬ್ಬರು, “ನಾನು ಭಾರತೀಯನಾಗಿ ಈ ಯುವಕನ ವರ್ತನೆಯಿಂದ ಮುಜುಗರ ಅನುಭವಿಸುತ್ತಿದ್ದೇನೆ. ಹಣವಿಲ್ಲದಿದ್ದರೆ ಪ್ರಯಾಣದ ಯೋಜನೆಯನ್ನು ಮರುಪರಿಶೀಲಿಸಬೇಕು. ನಿಮ್ಮ ಬಗ್ಗೆ ಕಾಳಜಿ ತೋರಿದ ಥಾಯ್ ಪೊಲೀಸರಿಗೆ ಧನ್ಯವಾದಗಳು” ಎಂಬರ್ಥದಲ್ಲಿ ಟೀಕಿಸಿದ್ದಾರೆ.

ಇನ್ನು ಕೆಲವು ಬಳಕೆದಾರರು, ದೇವಾಲಯಗಳು ಪವಿತ್ರ ಸ್ಥಳಗಳಾಗಿದ್ದು, ಅವುಗಳನ್ನು ಉಚಿತ ವಸತಿ ತಾಣಗಳಂತೆ ಬಳಸಬಾರದು ಎಂದು ಹೇಳಿದ್ದಾರೆ. ಸಾರ್ವಜನಿಕ ಅಥವಾ ಧಾರ್ಮಿಕ ಸ್ಥಳಗಳಲ್ಲಿ ಉಳಿಯುವ ಮೊದಲು ಅಲ್ಲಿನ ಅಧಿಕಾರಿಗಳ ಅನುಮತಿ ಪಡೆಯುವುದು ಅಗತ್ಯ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.