ನವದೆಹಲಿ(ಡಿ.02): ಉಗ್ರರು ಗಡಿಯ ಒಳಕ್ಕೆ ನುಸುಳಲು ಸುರಂಗ ಕೊರೆಯುವುದು ಹೊಸದೇನೂ ಅಲ್ಲ. ಆದರೆ, ಈ ಬಾರಿ ಬಿಎಸ್‌ಎಫ್‌ ಪಡೆ ಸ್ವತಃ ಸುರಂಗ ಮಾರ್ಗದ ಮೂಲಕ ಪಾಕ್‌ ಗಡಿಯ ಒಳಕ್ಕೆ ನುಸುಳಿ ಸಾಕ್ಷ್ಯವನ್ನು ಸಂಗ್ರಹಿಸಿದೆ.

ನ.19ರಂದು ಜಮ್ಮು- ಕಾಶ್ಮೀರದ ಸಾಂಬಾ ಸೆಕ್ಟರ್‌ನ ನಗ್ರೋಟಾದಲ್ಲಿ ನಾಲ್ವರು ಜೈಷ್‌ ಎ ಮೊಹಮ್ಮದ್‌ ಉಗ್ರರ ಎನ್‌ಕೌಂಟರ್‌ ಪ್ರಕರಣದ ಜಾಡು ಹಿಡಿದು ಹೊರಟ ಬಿಎಸ್‌ಎಫ್‌ ತಂಡಕ್ಕೆ ಅಂತಾರಾಷ್ಟಿ್ರಯ ಗಡಿಯಲ್ಲಿ ಸುರಂಗದ ಮುಖವೊಂದು ಪತ್ತೆ ಆಗಿತ್ತು. ಜೊತೆಗೆ ಮೃತ ಉಗ್ರರಿಂದ ವಶಪಡಿಸಿಕೊಳ್ಳಲಾದ ಮೊಬೈಲ್‌ನಲ್ಲಿ ಎಲೆಕ್ಟ್ರಾನಿಕ್‌ ಹಾಗೂ ಜಿಯೋಗ್ರಾಫಿಕಲ್‌ ಡೇಟಾವನ್ನು ಬಳಕೆ ಮಾಡಿದ್ದು ಕಂಡು ಬಂದಿತ್ತು. ಹೀಗಾಗಿ ಸುರಂಗದ ಮೂಲವನ್ನು ಹುಡುಕಲು ಮುಂದಾದ ಬಿಎಸ್‌ಎಫ್‌, ಉಗ್ರರು ತೋಡಿದ್ದ 200 ಮೀಟರ್‌ ಉದ್ದದ ಸುರಂಗದ ಮೂಲಕ ಪಾಕಿಸ್ತಾನದ ಗಡಿಯ ಒಳಕ್ಕೆ ತೆರಳಿ ವಿಡಿಯೋ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಗುಪ್ತಚರ ಸಂಸ್ಥೆಗಳ ನೆರವಿನೊಂದಿಗೆ ಚುರುಕಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುರಂಗ ಅಂತಾರಾಷ್ಟ್ರೀಯ ಗಡಿಯಿಂದ ಪಾಕ್‌ ಕಡೆಗೆ 160 ಮೀಟರ್‌ ಉದ್ದ ಹಾಗೂ ಗಡಿ ಬೇಲಿಯಿಂದ 70 ಮೀಟರ್‌ ಉದ್ದವಿದೆ. ಜೊತೆಗೆ 25 ಮೀಟರ್‌ ಆಳ ಇರುವುದು ಕಂಡುಬಂದಿದೆ. ಗಡಿಯೊಳಗೆ ನುಸುಳಲು ಉಗ್ರರು ಮೊದಲ ಬಾರಿ ಬಳಕೆ ಮಾಡಿದ ಸುರಂಗ ಇದಾಗಿದೆ. ಅಲ್ಲದೇ ಎಂಜಿನಿಯರಿಂಗ್‌ ಕೌಶಲ್ಯವನ್ನು ಬಳಸಿ ಯೋಜಿತವಾಗಿ ಸುರಂಗವನ್ನು ಕೊರೆಯಲಾಗಿದೆ. ಇದರ ಹಿಂದೆ ಸಂಘಟನೆಯೊಂದರ ಕೈವಾಡ ಇದೆ ಎಂದು ಸೇನೆಯ ಮೂಲಗಳು ತಿಳಿಸಿವೆ.