ಭಾರತೀಯ ರೈಲ್ವೆಯು ದೂರದ ಪ್ರಯಾಣಿಕರ ಅನುಕೂಲಕ್ಕಾಗಿ 24 ಕೋಚ್‌ಗಳ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಸಿದ್ಧಪಡಿಸಲು ನಿರ್ಧರಿಸಿದೆ. ಚೆನ್ನೈನ ಐಸಿಎಫ್‌ಗೆ ಇಂತಹ 50 ರೈಲುಗಳನ್ನು ತಯಾರಿಸುವ ಗುರಿ ನೀಡಲಾಗಿದ್ದು, 2027ರ ಜೂನ್‌ನಲ್ಲಿ ಇವು ಸಂಚರಿಸುವ ನಿರೀಕ್ಷೆಯಿದೆ.

ನವದೆಹಲಿ (ಅ.14): ಈಗಾಗಲೇ 16 ಕೋಚ್‌ ಹೊಂದಿರುವ ವಂದೇ ಭಾರತ್‌ ಸ್ಲೀಪರ್‌ ರೈಲುಗಳನ್ನು ಸಿದ್ಧಪಡಿಸಿರುವ ಭಾರತೀಯ ರೈಲ್ವೆ, ಇದೀಗ 24 ಕೋಚ್‌ಗಳನ್ನು ಒಳಗೊಂಡ ವಂದೇ ಭಾರತ್‌ ಸ್ಲೀಪರ್‌ ರೈಲು ಸಿದ್ಧಪಡಿಸಲು ನಿರ್ಧರಿಸಿದೆ. ಇನ್ನೊಂದು ತಿಂಗಳಲ್ಲಿ ರೈಲಿನ ವಿನ್ಯಾಸ ಸಿದ್ಧವಾಗಲಿದೆ.

ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಗೆ ಇಂತಹ 50 ರೈಲು ಸೆಟ್‌ ತಯಾರಿಸುವ ಗುರಿ ನೀಡಲಾಗಿದೆ. ಅಧಿಕ ಪ್ರಯಾಣಿಕರನ್ನು ಹೊತ್ತು ಸಾಗಬಲ್ಲ ಈ ರೈಲುಗಳಲ್ಲಿ ಹೆಚ್ಚುವರಿ ಪ್ಯಾಂಟ್ರಿ ಕಾರ್, ಶೌಚಾಲಯ ಇರುವ ನಿರೀಕ್ಷೆಯಿದೆ. ಇವು 2027ರ ಜೂನ್‌ನಲ್ಲಿ ಸಂಚರಿಸುವ ಅಂದಾಜಿದೆ. ಮುಂಬರುವ ದಿನಗಳಲ್ಲಿ ಕನಿಷ್ಠ 200 ಸ್ಲೀಪರ್‌ ವಂದೇ ಭಾರತ್‌ ರೈಲ್ವೆ ಇಲಾಖೆಯ ಗುರಿ.

ದೂರದ ಪ್ರಯಾಣಿಕರಿಗೆ ಅನುಕೂಲ

16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲು ಸೆಟ್ ನಂತರ ಇದೀಗ ಭಾರತೀಯ ರೈಲ್ವೆಯು ರಾತ್ರಿ ಪ್ರಯಾಣದ ದೂರದ ಮಾರ್ಗಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ 24 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲುಗಳನ್ನ ಹಳಿಗಿಳಿಸಲು ಮುಂದಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಹೊಸ ರೈಲಿನ ವಿನ್ಯಾಸ ಕಾರ್ಯವನ್ನು ಅಂತಿಮಗೊಳಿಸಲಾಗುತ್ತಿದೆ ಮತ್ತು ಒಂದು ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ದೀರ್ಘ ಪ್ರಯಾಣವನ್ನು ಸುಧಾರಿಸಲು ಮುಂಬರುವ ವರ್ಷಗಳಲ್ಲಿ 200 ಕ್ಕೂ ಹೆಚ್ಚು ರೈಲುಗಳು ಹಳಿಗೆ ಇಳಿಯಲಿವೆ.

ಬಿಇಎಂಎಲ್, ಐಸಿಎಫ್ ಸಹಯೋಗದೊಂದಿಗೆ 10 ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌

ಬಿಇಎಂಎಲ್, ಐಸಿಎಫ್ ಸಹಯೋಗದೊಂದಿಗೆ 10 ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳನ್ನು ತಯಾರಿಸುತ್ತಿದೆ, ಆದರೆ ಇಂಡೋ-ರಷ್ಯಾದ ಜಂಟಿ ಉದ್ಯಮ ಕೈನೆಟ್‌ಗೆ ಇನ್ನೂ 120 ಉತ್ಪಾದಿಸುವ ಕಾರ್ಯವನ್ನು ವಹಿಸಲಾಗಿದೆ. ಹೆಚ್ಚುವರಿಯಾಗಿ, ಟಿಟಾಘರ್ ಮತ್ತು ಬಿಎಚ್‌ಇಎಲ್ ಅನ್ನು ಒಳಗೊಂಡಿರುವ ಒಕ್ಕೂಟವು 80 ಸ್ಲೀಪರ್ ರೈಲುಗಳನ್ನು ತಯಾರಿಸುತ್ತದೆ, ಆದರೆ ಐಸಿಎಫ್ ವಂದೇ ಭಾರತ್ ಸ್ಲೀಪರ್ ರೈಲಿನ ತನ್ನದೇ ಆದ ಆವೃತ್ತಿಯನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ.