ನವದೆಹಲಿ(ಜ. 02) ಭಾರತೀಯ ರೈಲ್ವೆ ಇದೀಗ ಮತ್ತಷ್ಟು ಹತ್ತಿರವಾಗಿದೆ. ಸಹಾಯವಾಣಿಗಳ ತಲೆಬಿಸಿ ತಪ್ಪಿಸಿ ಎಲ್ಲದಕ್ಕೂ ಒಂದೇ ನಂಬರ್ ಮಾಡಿದೆ'.

 ಭಾರತೀಯ ರೈಲುಗಳ ಬಗ್ಗೆ ಮಾಹಿತಿಯನ್ನು ಪ್ರಯಾಣಿಕರು ಇದೀಗ ಕುಳಿತಲ್ಲೇ ತಿಳಿದುಕೊಳ್ಳಬಹುದು. ಅದಕ್ಕಾಗಿ ನೂರೆಂಟು ನಂಬರ್ ಗಳನ್ನು ಹುಡುಕಾಡುವ ಅಗತ್ಯವಿಲ್ಲ. ಇನ್ನು ಮುಂದೆ ಒಂದೇ ಸಂಖ್ಯೆಗೆ ಡೈಲ್ ಮಾಡಿದರೆ ಸಾಕು. ಹೌದು ಇನ್ನು ಮುಂದೆ 139ಕ್ಕೆ ಕರೆ ಮಾಡಿದರೆ ಭಾರತೀಯ ರೈಲ್ವೆಯ ಸಮಗ್ರ ಮಾಹಿತಿ ಪಡೆದುಕೊಳ್ಳಬಹುದು. ಅನುಮಾನ ಇದ್ದರೆ ಬಗೆಹರಿಸಿಕೊಳ್ಳಬಹುದು.

ಭಾರತೀಯ ರೈಲ್ವೆ  139 ಅಂಕೆಯನ್ನು ತನ್ನ ಅಧಿಕೃತ ಸಹಾಯವಾಣಿ ಎಂದು ಜನವರಿ 2 ರಿಂದ ಘೋಷಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಒಂದೇ ಸಂಖ್ಯೆಯಲ್ಲಿ ಎಲ್ಲ ರೀತಿಯ ರೈಲ್ವೆ ಸೇವೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದೆ.

139ಕ್ಕೆ ಡಯಲ್ ಮಾಡಿದ ನಂತರ ಅಲ್ಲಿ ನಿಮಗೆ ಆಯ್ಕೆಗಳನ್ನು ನೀಡಲಾಗುತ್ತದೆ.  ಭದ್ರತೆ ಮತ್ತು ವೈದ್ಯಕೀಯ ಸೇವೆ ಬಗ್ಗೆ ಮಾಹಿತಿ ಪಡೆಯಲು 1ನ್ನು ಒತ್ತಬೇಕು.  ರೈಲಿನ ವೇಳಾಪಟ್ಟಿ, ಪಿಎನ್ಆರ್ ಮಾಹಿತಿಗಾಗಿ 2ನ್ನು ಒತ್ತಬೇಕು ಎಂದು ಸೂಚಿಸಲಾಗುತ್ತದೆ. 

ರೈಲುಗಳ ವೇಳಾಪಟ್ಟಿ, ಪಿಎನ್ಆರ್ ಸ್ಟೇಟಸ್, ಟಿಕೆಟ್ ಬುಕ್ಕಿಂಗ್, ದರ ಪರಿಶೀಲನೆ, ಟಿಕೆಟ್ ಕ್ಯಾನ್ಸಲ್ ಡುವ ಬಗ್ಗೆ ಮಾಹಿತಿ ಪಡೆಯಲು 2ನ್ನು ಒತ್ತಬೇಕು. ಇದೇ ಸಂಖ್ಯೆ ಅಡಿಯಲ್ಲಿ ಅಲರಾಂ ಸೇವೆ, ಆಹಾರ ಪೂರೈಕೆ ವ್ಹೀಲ್ ಚೇರ್ ಬುಕ್ಕಿಂಗ್ ಸೇವೆಯನ್ನು ಕೂಡಾ ನೀಡಲಾಗುತ್ತದೆ.

ರೈಲು ದುಬಾರಿ, ದರಪಟ್ಟಿ ಇಲ್ಲಿದೆ

ಇನ್ನೂ ದೂರು ಸಲ್ಲಿಸಬೇಕು ಎಂದಾದರೆ ಅಲ್ಲಿಯೂ ಆಯ್ಕೆಗಳನ್ನು ನೀಡಲಾಗಿದೆ.  ಆಹಾರ ಪೂರೈಕೆಯಲ್ಲಿನ ಲೋಪದ ಬಗ್ಗೆ ದೂರು ಸಲ್ಲಿಸಲು 3ನ್ನು ಒತ್ತಬೇಕು. ಸಾಮಾನ್ಯ ದೂರಿಗಾಗಿ 4, ಮುಂಜಾಗರುಕತೆ ದೂರು ಸಲ್ಲಿಸಲು 5ನ್ನು ಒತ್ತುವಂತೆ ಕೋರಲಾಗಿದೆ. ಇದರ ಜೊತೆಗೆ ಅಪಘಾತ ಸಂದರ್ಭದಲ್ಲಿ ವಿಚಾರಣೆಗಾಗಿ 6ನ್ನು ಒತ್ತಬೇಕು. ಸಹಾಯವಾಣಿ ಪ್ರತಿನಿಧಿಯ ಜೊತೆ ಮಾತನಾಡಿಲು 9 ನ್ನು ಡಯಲ್ ಮಾಡಲು ತಿಳಿಸಲಾಗುತ್ತದೆ.

ಈ ಹಿಂದೆ ಭಾರತೀಯ ರೈಲ್ವೆಗೆ ಅನೇಕ ಸಹಾಯವಾಣಿಗಳು ಇದ್ದವು. ಹಳೆಯ 136, 1072, 9717630982, 58888, 138, 152210, 1800111321 ಸಹಾಯವಾಣಿಗಳು ಇನ್ನು ಮುಂದೆ ಕೆಲಸ ಮಾಡುವುದಿಲ್ಲ. 139 ಸಹಾಯವಾಣಿಯಲ್ಲಿ 12 ಭಾಷೆಗಳ ಸೇವೆ ಲಭ್ಯ ಇರುತ್ತದೆ.