ನವದೆಹಲಿ (ಜು. 13): ಗಡಿಯಿಂದ ಆಚೆಗೆ ಇದೇ ಮೊದಲ ಬಾರಿಗೆ ಭಾರತೀಯ ರೈಲೊಂದು ಸಂಚಾರ ಆರಂಭಿಸಿದೆ. ಬಾಂಗ್ಲಾದೇಶಕ್ಕೆ ಇದೇ ಮೊದಲ ಬಾರಿಗೆ ರೈಲಿನ ಮೂಲಕ ಪ್ರಸಿದ್ಧ ಗುಂಟೂರು ಮೆಣಸಿನಕಾಯಿಯನ್ನು ರಫ್ತು ಮಾಡಲಾಗಿದೆ. ವಿಶೇಷ ಸರಕು ರೈಲಿನಲ್ಲಿ ಮೆಣಸಿನಕಾಯಿನ್ನು ಅಲ್ಲಿಗೆ ಕಳಿಸಲಾಗಿದೆ.

ಆಂಧ್ರಪ್ರದೇಶದ ಗುಂಟೂರು ರೈತರು ಹಾಗೂ ವರ್ತಕರು ಈ ಮುನ್ನ ರಸ್ತೆ ಮುಖಾಂತರ ಮೆಣಸಿನಕಾಯಿಯನ್ನು ಸಣ್ಣ ಪ್ರಮಾಣದಲ್ಲಿ ಬಾಂಗ್ಲಾದೇಶಕ್ಕೆ ಕಳಿಸುತ್ತಿದ್ದರು. ಅದರೆ ಕೊರೋನಾ ವೈರಸ್‌ ಲಾಕ್‌ಡೌನ್‌ ಕಾರಣ ರಸ್ತೆ ಸಂಚಾರ ಹಾಗೂ ರೈಲು ಸಂಚಾರ ನಿಂತು ಹೋಯಿತು.

ಇದರಿಂದಾಗಿ ರೈತರು ಹಾಗೂ ವರ್ತಕರಿಗೆ ರಫ್ತು ಸಮಸ್ಯೆಯಾಯಿತು. ಹೀಗಾಗಿ ರೈಲ್ವೆ ಅಧಿಕಾರಿಗಳು ವರ್ತಕರನ್ನು ಸಂಪರ್ಕಿಸಿ, ರೈಲು ಮೂಲಕ ಉತ್ಪನ್ನ ಸಾಗಿಸಬಹುದು ಎಂದು ತಿಳಿಸಿದರು. ಈ ಪ್ರಕಾರ, ಗುಂಟೂರು ಸನಿಹದ ರೆಡ್ಡಿಪಾಳೆಂನಿಂದ ಬಾಂಗ್ಲಾದೇಶದ ಬೆನಾಪೋಲ್‌ಗೆ ಭಾರೀ ಪ್ರಮಾಣದ ಮೆಣಸಿನಕಾಯಿಯನ್ನು ಜುಲೈ 10ರಂದು ವಿಶೇಷ ರೈಲಿನಲ್ಲಿ ರಫ್ತು ಮಾಡಲಾಗಿದೆ.

ರೈಲು ಹೊರಡುವ 2 ನಿಮಿಷ ಮುನ್ನ ಇನ್ನು ಗಂಟೆ ಮೊಳಗುತ್ತೆ!

ರೈಲಿನಲ್ಲಿ ರಫ್ತು ಮಾಡುವುದರಿಂದ ಸಾಗಣೆ ವೆಚ್ಚ ತಗ್ಗಿದೆ. ಲಾರಿಗಳಲ್ಲಿ ಸಾಗಿಸಬೇಕಾದಾಗ ಟನ್‌ಗೆ 7 ಸಾವಿರ ರು. ಖರ್ಚಾಗುತ್ತಿತ್ತು. ಆದರೆ ರೈಲಿನಲ್ಲಿ ಸಾಗಿಸಿದ್ದರಿಂದ ಟನ್‌ಗೆ ಕೇವಲ 4,608 ರು. ಖರ್ಚಾಗಿದೆ. ಪ್ರತಿ ಗೂಡ್ಸ್‌ ಬೋಗಿಯಲ್ಲಿ 466 ಚೀಲಗಳಂತೆ 16 ಬೋಗಿಗಳಲ್ಲಿ 384 ಟನ್‌ ಮೆಣಸಿನಕಾಯಿ ಸಾಗಿಸಲಾಗಿದೆ.

ಕರ್ನಾಟಕದ ಬ್ಯಾಡಗಿ ರೀತಿ ಗುಂಟೂರು ಸುತ್ತಮುತ್ತಲಿನ ಭಾಗ ಮೆಣಸಿನಕಾಯಿ ಬೆಳೆಯುವುದಕ್ಕೆ ಪ್ರಸಿದ್ಧಿ ಪಡೆದಿದ್ದು, ಅದಕ್ಕೆಂದೇ ಇದಕ್ಕೆ ಗುಂಟೂರು ಮೆಣಸಿನಕಾಯಿ ಎಂದೇ ಕರೆಯಲಾಗುತ್ತದೆ.