ಹೊಗಳದಿದ್ದರೂ, ತೆಗಳಬೇಡಿ, ಭಾರತೀಯರನ್ನು ಗೆಲ್ಲದೇ ಭಾರತವನ್ನು ಗೆಲ್ಲಲಾಗದು!
ಮೋದಿ ತಾವು ಭೇಟಿ ನೀಡಿದ ಲಕ್ಷದ್ವೀಪ ಕಡಲ ಕಿನಾರೆ ಸೌಂದರ್ಯದ ಫೋಟೋಗಳು ಅಲ್ಲಿಗೆ ಹೋಗಲೇ ಬೇಕೆಂದು ಮಾತ್ರ ಭಾರತೀಯರು ಯೋಚಿಸಿದ್ದಲ್ಲ, ಸದಾ ಚೀನಾ ಬೆಂಬಲವಾಗಿ ನಿಲ್ಲುವ ಮಾಲ್ಡೀವ್ಸ್ ಆರ್ಥಿಕತೆಯನ್ನು ಬುಡ ಮೇಲು ಮಾಡುವಂತಾಗಿದೆ.
- ರಾಜೀವ್ ಹೆಗ್ಡೆ
ಮೋದಿ ತಾವು ಭೇಟಿ ನೀಡಿದ ಲಕ್ಷದ್ವೀಪ ಕಡಲ ಕಿನಾರೆ ಸೌಂದರ್ಯದ ಫೋಟೋಗಳು ಅಲ್ಲಿಗೆ ಹೋಗಲೇ ಬೇಕೆಂದು ಮಾತ್ರ ಭಾರತೀಯರು ಯೋಚಿಸಿದ್ದಲ್ಲ, ಸದಾ ಚೀನಾ ಬೆಂಬಲವಾಗಿ ನಿಲ್ಲುವ ಮಾಲ್ಡೀವ್ಸ್ ಆರ್ಥಿಕತೆಯನ್ನು ಅಲ್ಲಾಡಿಸುವಂತಾಗಿದೆ!
ಇದನ್ನು ಭಾರತದ ಪವರ್ ಅಂತೀರೋ, ಮೋದಿ ಪವರ್ ಅಂತೀರೋ ಅನ್ನೋದು ನಿಮಗೆ ಬಿಟ್ಟ ವಿಚಾರ. ಆದರೆ ನಮ್ಮ ದೇಶದಲ್ಲಿ ಭಾರತೀಯತೆ ಬೆಳೆಯುತ್ತಿದೆ ಹಾಗೂ ಅದನ್ನು ಸಹಿಸಿಕೊಳ್ಳದ ಅತೃಪ್ತ ಆತ್ಮಗಳು ನಮ್ಮ ಸುತ್ತಲೇ ಇವೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಲಕ್ಷದ್ವೀಪದ ಕಡಲ ಕಿನಾರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದನ್ನು ಭಾರತದಲ್ಲೇ ಇರುವ ಕೆಲ ಅತೃಪ್ತರಿಗೆ ಸಹಿಸಿಕೊಳ್ಳಲಾಗಲಿಲ್ಲ. ಕೊನೆಗೆ ಈ ಕಿಚ್ಚು ಮಾಲ್ಡೀವ್ಸ್‌ವರೆಗೂ ಹೋಗಿ ಅಲ್ಲಿಯ ಮೂರು ಸಚಿವರ ತಲೆದಂಡ ಆಗುವರೆಗೆ ಹೋಯಿತು. ಇದರ ಜತೆಗೆ ಲಕ್ಷಾಂತರ ಜನರು ಲಕ್ಷದ್ವೀಪದ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದರೆ, ಸಾವಿರಾರು ಜನರು ಮಾಲ್ಡೀವ್ಸ್ ಪ್ರವಾಸವನ್ನೇ ಕೈಬಿಟ್ಟರು. ಇವೆಲ್ಲ ಕ್ರಿಯೆ, ಪ್ರತಿಕ್ರಿಯೆಗಳಲ್ಲಿ ಮೋದಿಯನ್ನು ಕನಸಿನಲ್ಲೂ ಟೀಕಿಸುವರಿಗೆ ಉತ್ತರ ದೊರೆತಿದೆ. ಆದರೆ ಮೋದಿ ಮಾತ್ರ ಎಂದಿನಂತೆ ಮೌನವಾಗಿದ್ದಾರೆ.
ಮಾಲ್ಡೀವ್ಸ್ ಸಚಿವರ ಜನಾಂಗೀಯ ಟ್ವೀಟ್: ಸಾಮಾಜಿಕ ಜಾಲತಾಣದಲ್ಲಿ #BoycottMaldives ಟ್ರೆಂಡ್
ಕಳೆದ ಚುನಾವಣೆಯ ಸಂದರ್ಭದಲ್ಲಿ ಬಂಡೀಪುರ ಅಭಯಾರಣ್ಯಕ್ಕೆ ಪ್ರಧಾನಿ ಭೇಟಿ ಕೊಟ್ಟಿದ್ದರು. ಕಳೆದ ವಾರ ನಾನು ಓದಿದ ಮಾಧ್ಯಮ ವರದಿ ಪ್ರಕಾರ, ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಆದಾಯ ದುಪ್ಪಟ್ಟಾಗಿದೆಯಂತೆ. ಈಗ ಲಕ್ಷದ್ವೀಪದ ಬಗೆಗೂ ಇದೇ ರೀತಿಯ ಬೆಳವಣಿಗೆಯಾಗುತ್ತಿದೆ. ಯಾವುದೇ ಒಂದು ದೇಶ, ಪ್ರವಾಸಿ ತಾಣವು ಹಾಗೇ ಸುಮ್ಮನೇ ಬ್ರಾಂಡ್ ಆಗುವುದಿಲ್ಲ. ಆ ದೇಶವು ಪ್ರೀತಿಸುವ ಜನರು ಹಾಗೂ ಇತರರು ತಮ್ಮ ದೇಶದ ನೆಲವನ್ನು ಅಷ್ಟು ಸುಂದರವಾಗಿ ಇತರರಿಗೆ ಪರಿಚಯಿಸಿದಾಗ ಮಾತ್ರ ಅದು ಸಾಧ್ಯ. ಆ ಕೆಲಸವನ್ನು ಪ್ರಧಾನಿ ಮೋದಿ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.ಮೋದಿಯನ್ನು ವೈಯಕ್ತಿಕವಾಗಿ ಟೀಕಿಸಿ ಅಥವಾ ಹೊಗಳಿ, ಅದು ಅವರವರಿಗೆ ಬಿಟ್ಟ ವಿಚಾರ. ಆದರೆ ದೇಶದ ಒಳಿತಿಗಾಗಿ ಅವರು ಕೈಗೊಂಡ ಕ್ರಮವನ್ನು ಟೀಕಿಸುತ್ತಾ, ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಾ ಕುಳಿತರೆ ಎಂದಿಗೂ ಮೋದಿಯನ್ನು ಸೋಲಿಸಲಾಗದು. ಇಂತಹ ಟೀಕಗಳು ಮೋದಿಯನ್ನು ಇನ್ನಷ್ಟು ಶಕ್ತಿಯುತಗೊಳಿಸುತ್ತವೆ.
ಕಳೆದೊಂದು ದಶಕದಲ್ಲಿ ಪ್ರಧಾನಿ ಮೋದಿ ಭಾರತ ಎನ್ನುವ ಬ್ರಾಂಡ್‌ನ ರಾಯಭಾರಿಯಾಗಿ ಕೆಲಸ ಮಾಡುತ್ತಿರುವುದು ಅಕ್ಷರಶಃ ಸತ್ಯ. ವಿದೇಶಿ ಗಣ್ಯರನ್ನು ದೆಹಲಿ ಹೊರತಾಗಿ ಬೇರೆ ನಗರಗಳಲ್ಲಿ ಸತ್ಕರಿಸುವುದು, ವಿದೇಶಗಳಿಗೆ ಹೋದಾಗ ಭಾರತದಲ್ಲಿ ಹೆಮ್ಮೆಯ ವಿಚಾರಗಳನ್ನು ಪ್ರಸ್ತಾಪಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸಿ ತಾಣಗಳ ಬಗ್ಗೆ ಆಗಾಗ ಪೋಸ್ಟ್ ಮಾಡುವುದು, ಭಾರತದ ವಿವಿಧ ರಾಜ್ಯಗಳಿಗೆ ಹೋದಾಗ ಅಲ್ಲಿಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಚಿತ್ರಗಳನ್ನು ಪೋಸ್ಟ್ ಮಾಡುವುದನ್ನು ಪ್ರಧಾನಿ ನರೇಂದ್ರ ಮೋದಿ ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದ್ದಾರೆ.
ಭಾರತದ ಜೊತೆ ಕ್ಯಾತೆ ನಡುವೆಯೇ ಮಾಲ್ಡೀವ್ಸ್ ಅಧ್ಯಕ್ಷರಿಂದ ಚೀನಾ ಭೇಟಿ
ಇದಲ್ಲದೇ ಜಿ೨೦ ಶೃಂಗಸಭೆಯಲ್ಲಿ ಭಾರತ ಹಾಗೂ ಅದರ ವೈವಿಧ್ಯತೆಯನ್ನು ಪ್ರದರ್ಶಿಸಿದ ವಿಚಾರ ಅದ್ಭುತವಾಗಿತ್ತು. ಭಾರತ ಮಂಟಪದಲ್ಲಿ ಭಾರತದ ವೈವಿಧ್ಯತೆಯನ್ನು ಪರಿಚಯ ಮಾಡಿಕೊಡಲು ಮೋದಿ ಸರ್ಕಾರ ವಿಶೇಷ ಪ್ರಯತ್ನವನ್ನು ಆಹಾರ, ಉಡುಗೆ, ಪ್ರವಾಸಿ ತಾಣಗಳ ಮಾಹಿತಿ ಸೇರಿ ಪ್ರತಿಯೊಂದರಲ್ಲೂ ವಿಶೇಷ ಕಾಳಜಿ ವಹಿಸಿತ್ತು. ಶೃಂಗಸಭೆಗಳನ್ನು ದೇಶದ ವಿವಿಧ ನಗರಗಳಲ್ಲಿ ಆಯೋಜಿಸಿ, ಭಾರತ ದರ್ಶನದ ಕೆಲಸ ಮಾಡಲಾಯಿತು. ಇದರ ಬೆನ್ನಲ್ಲೇ ಉದ್ಘಾಟನೆಯಾದ ನೂತನ ಸಂಸತ್ ಭವನದಲ್ಲೂ ಭಾರತದ ಪ್ರತಿ ರಾಜ್ಯ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ವಿವರಿಸಲಾಗಿದೆಯಂತೆ. ಅಂದರೆ ಈ ಸರ್ಕಾರವು ತಾನು ಮಾಡುವ ಪ್ರಮುಖ ಕಾಯಕದಲ್ಲಿ ಭಾರತವನ್ನು ಕಾಣುವ ಪ್ರಯತ್ನ ಮಾಡಿದೆ.
ಆದರೆ ಅದಕ್ಕೆ ಪ್ರತಿಯಾಗಿ ಪ್ರತಿಪಕ್ಷ ನಾಯಕರು ವಿದೇಶಕ್ಕೆ ಹೋಗಿ ಭಾರತದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿಕೊಂಡು ಬರುತ್ತಿದ್ದಾರೆ. ಭಾರತಕ್ಕೆ ಬಂದು ಮೋದಿಯದ್ದು ಫೋಟೋಶೂಟ್ ಎಂದು ಆಡಿಕೊಳ್ಳುತ್ತಾರೆ. ಸ್ವಚ್ಛ ಭಾರತ ಕಾರ್ಯಕ್ರಮವು ಮೋದಿಯ ಪ್ರಚಾರಕ್ಕೆ ಮಾಡಿದ್ದು ಎನ್ನುತ್ತಾರೆ. ಆದರೆ ಸತ್ಯವೇನೆಂದರೆ ಇವೆಲ್ಲವೂ ಭಾರತಕ್ಕಾಗಿ ಇರುವುದೇ ಹೊರತು, ಮೋದಿಯ ಸ್ವಂತ ಮನೆಯ ಕಾರ್ಯಕ್ರಮವಲ್ಲ. ಈ ಕಾರ್ಯಕ್ರಮದಿಂದ ಮೋದಿಗೆ ಹಾಗೂ ಮೋದಿಯಿಂದ ಆ ಕಾರ್ಯಕ್ರಮಕ್ಕೆ ಲಾಭವಾಗುತ್ತಿದ್ದರೆ ಅದು ಅವರವರ ವೈಯಕ್ತಿಕ ವರ್ಚಸ್ಸಷ್ಟೇ. ಆದರೆ ಇದನ್ನು ಬಿಟ್ಟು ಸ್ವಚ್ಛ ಭಾರತವನ್ನು ಆಡಿಕೊಂಡರೆ ಜನರು ಪದೇಪದೆ ಚುನಾವಣೆಯಲ್ಲಿ ಸೋಲಿಸುತ್ತಾರೆ.
ಲಕ್ಷದ್ವೀಪ, ಬಂಡೀಪುರಕ್ಕೆ ಭೇಟಿ ನೀಡಿ ಫೋಟೋಶೂಟ್ ಮಾಡಿದ್ದನ್ನು ರಾಜಕೀಯವಾಗಿ ಟೀಕಿಸುವ ಬದಲಾಗಿ, ನೀವು ಭೇಟಿ ನೀಡಿ ನಿಮ್ಮ ಬೆಂಬಲಿಗರನ್ನು ಬರುವಂತೆ ಮಾಡಿ. ಇದರಲ್ಲಿ ದೇಶದ ಅಭಿವದ್ಧಿಯಿದೆ. ಬದಲಾಗಿ ದೇಶದೊಳಗೆ ಇದ್ದು, ನಯವಂಚಕರಾಗಬೇಡಿ. ಅಂದ್ಹಾಗೆ ಈ ವಿಚಾರವನ್ನು ಹಿಂದಿನ ಪ್ರಧಾನಿ, ಸರ್ಕಾರ ಮಾಡಿರಲೂಬಹುದು. ಆದರೆ ದೇಶದ ಜನಸಾಮಾನ್ಯರಿಗೆ ಗೊತ್ತಾಗಿಲ್ಲ. ಜನಸಾಮಾನ್ಯರಿಗೆ ಗೊತ್ತಾಗದಂತೆ ಗುಟ್ಟಾಗಿ ಮಾಡಿದರೆ, ಅದರಿಂದ ಒಂದು ಬ್ರಾಂಡ್ ಕಟ್ಟಲಾಗದು. ಈ ಫೋಟೋಶೂಟ್‌ನಿಂದ ಮೋದಿಯ ಬ್ರಾಂಡ್ ಜತೆಗೆ ಭಾರತದ ಬ್ರಾಂಡ್ ಬೆಳೆಯುವುದಾದರೆ ಸಮಸ್ಯೆ ಏನು? ಈ ಕೆಲಸವನ್ನು ಇತರರಿಗೂ ಮಾಡಲು ಅವಕಾಶವಿದೆ. ಅದಕ್ಕೆ ಮೋದಿ ಅಡ್ಡಿಯಾಗಿಲ್ಲ ತಾನೆ? ವಿಮಾನದಲ್ಲಿ ಜನ್ಮದಿನ ಆಚರಿಸಿಕೊಳ್ಳುವುದಕ್ಕೂ, ವಿದೇಶಕ್ಕೆ ಹೋಗಿ ಹೊಸ ವರ್ಷಾಚರಣೆ ಮಾಡಿ ಗುಟ್ಟಾಗಿ ಪಾರ್ಟಿ ಮಾಡುವುದಕ್ಕೂ ಹಾಗೂ ದೇಶದೊಳಗಿನ ಸೌಂದರ್ಯವನ್ನು ತೋರಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ವ್ಯತ್ಯಾಸ ಎಲ್ಲ ಬ್ರಾಂಡ್‌ಗಳಿಗೆ ಅರ್ಥವಾಗುವುದಿಲ್ಲ.
ಭಾರತೀಯರ ಕುರಿತು ಟೀಕೆ ಮಾಡಿದ ಮಾಲ್ಡೀವ್ಸ್ ಆಡಳಿತಾರೂಢ ಪಕ್ಷದ ಸದಸ್ಯ, ನೆಟ್ಟಿಗರು ಕೊಟ್ರು ಪರ್ಫೆಕ್ಟ್ ಉತ್ತರ!
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಧೋನಿಗೆ ಕೇಳಿದ್ದ ಪ್ರಶ್ನೆಗೆ ಉತ್ತರ ಹೀಗಿತ್ತು, ʼವಿದೇಶವನ್ನು ಸುತ್ತುವ ಆಲೋಚನೆ ಸಧ್ಯಕ್ಕಿಲ್ಲ. ಭಾರತದಲ್ಲೇ ನಾನು ನೋಡದ ಸಾಕಷ್ಟು ಅದ್ಭುತ ತಾಣಗಳಿವೆ. ಅವುಗಳನ್ನು ನೋಡಿ ಮುಗಿಸುತ್ತೇನೆʼ. ಇಂದು ಸಚಿನ್ ತೆಂಡೂಲ್ಕರ್ ಅವರು ಇದಕ್ಕೆ ಧ್ವನಿಗೂಡಿಸಿ, ʼಭಾರತವು ಆಕರ್ಷಕ ಕಡಲ ಕಿನಾರೆಗಳನ್ನು ಹೊಂದಿದೆʼ ಎಂದಿದ್ದಾರೆ. ಹೀಗೆಯೇ ಒಬ್ಬ ಸಮರ್ಥ ಬ್ರಾಂಡ್ ಅಂಬಾಸಿಡರ್ ಮಾತ್ರ ಭಾರತದೊಳಗಿನ ಶಕ್ತಿಯನ್ನು ಭಾರತೀಯರಿಗೂ ಅರಿವು ಮೂಡಿಸುವುದರ ಜತೆಗೆ, ವಿಶ್ವಕ್ಕೂ ತೋರಿಸಿಕೊಡಬಹುದು. ಆ ಕೆಲಸವನ್ನು ಮೋದಿ ಮಾಡುತ್ತಿದ್ದರೆ ಮೆಚ್ಚೋಣ. ಉಳಿದವರು ಮೋದಿಯನ್ನು ಹೊಗಳಬೇಕಿಲ್ಲ. ಆದರೆ ತೆಗಳುವ ಸಂದರ್ಭದಲ್ಲಿ ನನ್ನ ಭಾರತಕ್ಕೆ ಅವಮಾನ ಮಾಡುವ ಕೆಲಸ ಮಾಡಬೇಡಿ. ʼಕೈಲಾಗದವರು ಮೈ ಪರಚಿಕೊಂಡಂತೆʼ ಎನ್ನುವುದನ್ನು ಪದೇಪದೆ ಪರಚಿಕೊಂಡು ಸಾಬೀತು ಮಾಡಬೇಡಿ.
ಕೊನೆಯದಾಗಿ: ಖುದ್ದು ಬ್ರಾಂಡ್ ಆಗಿರುವವರು ಮಾತ್ರ ಬ್ರಾಂಡ್ ಅಂಬಾಸಿಡರ್ ಆಗಬಹುದು. ಉಳಿದವರು ರೀಲಾಂಚ್ ಆಗುತ್ತಾ ಟೀಕೆ ಮಾಡುವುದರಲ್ಲೇ ಖುಷಿ ಪಡಬೇಕಾಗುತ್ತದೆ.
ಭಾರತೀಯರನ್ನು ಗೆಲ್ಲದೇ ಭಾರತವನ್ನು ಗೆಲ್ಲಲಾಗದು!