ಅಮೆರಿಕದ ಶಾಲೆಯೊಂದರಲ್ಲಿ ಹಿಂದೂಗಳ ಪವಿತ್ರ ಸ್ವಸ್ತಿಕ ಚಿಹ್ನೆಯನ್ನು ಹಿಟ್ಲರ್‌ನ ನಾಜಿ ಚಿಹ್ನೆ ಎಂದು ತಪ್ಪಾಗಿ ಬೋಧಿಸುತ್ತಿದ್ದರ ವಿರುದ್ಧ ಭಾರತೀಯ ಮೂಲದ ವಿದ್ಯಾರ್ಥಿನಿ ಮೀರಾ ತ್ರಿವೇದಿ ಧ್ವನಿ ಎತ್ತಿದಳು. ತನ್ನ ಸುದೀರ್ಘ ಹೋರಾಟ ಮತ್ತು ಐತಿಹಾಸಿಕ ಪುರಾವೆಗಳ ಮೂಲಕ, ಆಕೆ ಶಾಲಾ ಪಠ್ಯಕ್ರಮದಲ್ಲಿನ ತಪ್ಪನ್ನು ಸರಿಪಡಿಸುವಲ್ಲಿ ಯಶಸ್ವಿಯಾದಳು.
ನ್ಯೂಜೆರ್ಸಿ: ಅಮೆರಿಕದ ಶಾಲೆಯೊಂದರಲ್ಲಿ ಭಾರತ ಮೂಲದ ವಿದ್ಯಾರ್ಥಿನಿಯೊಬ್ಬಳು ತನ್ನ ಧರ್ಮದ ಪವಿತ್ರ ಚಿಹ್ನೆಗಾಗಿ ನಡೆಸಿದ ಬೌದ್ಧಿಕ ಹೋರಾಟ ಈಗ ಜಾಗತಿಕ ಮಟ್ಟದಲ್ಲಿ ಎಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ. ಹಿಂದೂಗಳ ಪವಿತ್ರ ಚಿಹ್ನೆಯಾದ ಸ್ವಸ್ತಿಕವನ್ನು ಹಿಟ್ಲರ್‌ನ ನಾಜಿ ಸಿಂಬಲ್ ಎಂದು ತಪ್ಪಾಗಿ ಪಾಠ ಮಾಡುತ್ತಿದ್ದ ಶಿಕ್ಷಕಿಗೆ ತಕ್ಷಣವೇ ಮೇಲೆದ್ದು ನಿಂತು ವಿರೋಧಿಸಿದ್ದಲ್ಲದೆ, ಪಠ್ಯದಲ್ಲಿನ ಈ ತಪ್ಪು ವ್ಯಾಖ್ಯಾನವನ್ನು ಸರಿಪಡಿಸಬೇಕು ಎಂದು ಪಟ್ಟು ಹಿಡಿದು ಜಯಗಳಿಸಿದ ಬಾಲಕಿಯೇ ಭಾರತೀಯ ಮೂಲದ ಮೀರಾ ತ್ರಿವೇದಿ.
ತರಗತಿಯಲ್ಲಿ ಆರಂಭವಾದ ಸತ್ಯದ ಹೋರಾಟ
ನ್ಯೂಜೆರ್ಸಿಯಲ್ಲಿ ವಾಸವಾಗಿರುವ ಮೀರಾ ತ್ರಿವೇದಿ, ಬಾಲ್ಯದಿಂದಲೂ ತನ್ನ ಮನೆಯಲ್ಲಿ ನಡೆಯುವ ಪ್ರತಿಯೊಂದು ಪವಿತ್ರ ಮತ್ತು ಶುಭ ಸಂದರ್ಭಗಳಲ್ಲಿ 'ಸ್ವಸ್ತಿಕ' ಚಿಹ್ನೆಯನ್ನು ಬಳಸುವುದನ್ನು ನೋಡುತ್ತಾ ಬೆಳೆದವಳು. ಅವಳು ಎಂಟನೇ ತರಗತಿಯಲ್ಲಿದ್ದಾಗ ಶಾಲೆಯಲ್ಲಿ ಇತಿಹಾಸದ ಭಾಗವಾಗಿ ಹತ್ಯಾಕಾಂಡದ (Holocaust) ಬಗ್ಗೆ ಅಧ್ಯಯನ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಶಿಕ್ಷಕರು ಹಿಟ್ಲರ್‌ನ ದ್ವೇಷದ ಚಿಹ್ನೆಯನ್ನು 'ಸ್ವಸ್ತಿಕ' ಎಂದೇ ಉಲ್ಲೇಖಿಸಿ ಪಾಠ ಮಾಡುತ್ತಿದ್ದರು. ಹಿಟ್ಲರ್‌ನ ಚಿಹ್ನೆಯನ್ನು ಪಾಶ್ಚಿಮಾತ್ಯರು 'ನಾಜಿ ಸ್ವಸ್ತಿಕ' ಎಂದು ಕರೆಯುತ್ತಾರೆ ಎಂಬುದು ಮೀರಾಗೆ ತಿಳಿದಿತ್ತಾದರೂ, ಶಿಕ್ಷಕರು ಶಾಲಾ ಪಠ್ಯದಲ್ಲಿ ಭಾರತೀಯರ ಪವಿತ್ರ ಚಿಹ್ನೆಯ ಹೆಸರನ್ನೇ ಅದಕ್ಕೆ ಬಳಸಿ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂಬುದನ್ನು ಅರಿತ ಮೀರಾಗೆ ತೀವ್ರ ಆಘಾತವನ್ನುಂಟು ಮಾಡಿತು.
ತಕ್ಷಣವೇ ಧೈರ್ಯ ಮಾಡಿ ಶಿಕ್ಷಕಿಯ ಬಳಿ ಹೋದ ಮೀರಾ, ಹಿಟ್ಲರ್ ಬಳಸಿದ್ದು ಸ್ವಸ್ತಿಕ ಅಲ್ಲ, ಅದು 'ಹಕೆನ್‌ಕ್ರೂಜ್' (Hooked Cross). ಭಾರತೀಯರ ಪವಿತ್ರ ಸ್ವಸ್ತಿಕಕ್ಕೂ ಅದಕ್ಕೂ ಬಹಳ ವ್ಯತ್ಯಾಸವಿದೆ, ದಯವಿಟ್ಟು ಇದನ್ನು ಸರಿಪಡಿಸಿ ಎಂದು ವಿನಂತಿಸಿದಳು. ಆದರೆ ಶಿಕ್ಷಕಿ ಅದನ್ನು ಒಪ್ಪಲು ಸಿದ್ಧರಿರಲಿಲ್ಲ. "ನೋಡು ಮೀರಾ, ಈಗಾಗಲೇ ಬಹಳಷ್ಟು ವಿದ್ಯಾರ್ಥಿಗಳು ನನ್ನ ಬಳಿ ಬಂದು ಈ ಬಗ್ಗೆ ಹೇಳಿದ್ದಾರೆ. ಆದರೆ ಇದನ್ನು ಬದಲಾಯಿಸುವ ಯಾವುದೇ ಅಗತ್ಯ ನನಗೆ ಕಾಣಿಸುತ್ತಿಲ್ಲ" ಎಂದು ನಿರ್ಲಕ್ಷ್ಯದ ಉತ್ತರ ನೀಡಿದರು. ಅಲ್ಲಿಂದ ಅಮೆರಿಕದ ಶಿಕ್ಷಣ ವ್ಯವಸ್ಥೆಯಲ್ಲಿ ಹಿಂದೂಗಳ ಬಗ್ಗೆ ದ್ವೇಷ ಉಂಟುಮಾಡುವ ಧಾರ್ಮಿಕ ಚಿಹ್ನೆಯ ತಪ್ಪು ವ್ಯಾಖ್ಯಾನವನ್ನು ಸರಿಪಡಿಸಲು ಮೀರಾಳ ಸುದೀರ್ಘ ಹೋರಾಟ ಆರಂಭವಾಯಿತು.
'ನಾವು ಮಾತನಾಡದಿದ್ದರೆ ನಮ್ಮ ಚಿಹ್ನೆಯನ್ನು ಕಸಿದುಕೊಳ್ಳುತ್ತಾರೆ'
ಪ್ರಸ್ತುತ ಹತ್ತನೇ ತರಗತಿಯಲ್ಲಿ ಓದುತ್ತಿರುವ ಮೀರಾ, ಉತ್ತರ ಅಮೆರಿಕಾದ ಹಿಂದೂಗಳ ಒಕ್ಕೂಟದ (CoHNA) ಸಕ್ರಿಯ ಸದಸ್ಯೆಯೂ ಆಗಿದ್ದಾಳೆ. ಆರಂಭದಲ್ಲಿ ಅವಳ ಸಹಪಾಠಿಗಳೇ ಅವಳನ್ನು ವಿಚಿತ್ರವಾಗಿ ನೋಡಿದರು ಮತ್ತು ಈ ವಿಷಯವನ್ನು ಏಕೆ ಇಷ್ಟೊಂದು ದೊಡ್ಡದು ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿ ಟೀಕಿಸಿದರು. ಆದರೆ ಮೀರಾ ತನ್ನ ನಿಲುವಿಗೆ ಬದ್ಧಳಾಗಿದ್ದಳು.
"ನಮ್ಮ ಪವಿತ್ರ ಚಿಹ್ನೆಗಳ ಪರವಾಗಿ ನಾವು ಮಾತನಾಡದಿದ್ದರೆ ಇನ್ಯಾರು ಮಾತನಾಡುತ್ತಾರೆ? ನಾವು ಹೀಗೆಯೇ ಸುಮ್ಮನಿದ್ದರೆ, ಒಂದು ದಿನ ನಮ್ಮ ಧಾರ್ಮಿಕ ಚಿಹ್ನೆಯನ್ನು ನಮ್ಮಿಂದ ಕಸಿದುಕೊಳ್ಳಲಾಗುತ್ತದೆ. ಅಷ್ಟೇ ಅಲ್ಲ, ನಮ್ಮ ಮನೆಯ ಮುಂದೆ ಪವಿತ್ರ ಸ್ವಸ್ತಿಕ ಚಿಹ್ನೆ ಬಳಸಿದ್ದಕ್ಕಾಗಿ ನಮ್ಮನ್ನು ಜೈಲಿಗೆ ಹಾಕುವ ದಿನಗಳು ಬರಬಹುದು" ಎಂದು ಮೀರಾ ತನ್ನ ಆತಂಕ ಹಂಚಿಕೊಂಡಿದ್ದಾಳೆ. ಈಗ ಮೀರಾಳ ಬೆಂಬಲಕ್ಕೆ ಹಿಂದೂ ಮತ್ತು ಬೌದ್ಧ ವಿದ್ಯಾರ್ಥಿಗಳ ದೊಡ್ಡ ಪಡೆಯೇ ನಿಂತಿದೆ.
ಶಾಲಾ ಮಂಡಳಿಗೆ ಪ್ರಬಲ ಪ್ರೆಸೆಂಟೇಶನ್ ನೀಡಿದ ಬಾಲಕಿ
ಭಾರತದಲ್ಲಿ ಜನಿಸಿದ ಮೀರಾಳ ಪೋಷಕರು ಆಕೆಯ ಬೆಂಬಲಕ್ಕೆ ಗಟ್ಟಿಯಾಗಿ ನಿಂತರು. ಹಿಟ್ಲರನ 'ಹಕೆನ್‌ಕ್ರೂಜ್' ಮತ್ತು ಹಿಂದೂಗಳ ಪವಿತ್ರ 'ಸ್ವಸ್ತಿಕ'ದ ನಡುವಿನ ಇತಿಹಾಸ ಹಾಗೂ ವ್ಯತ್ಯಾಸಗಳ ಎಲ್ಲಾ ವಿಷಯವನ್ನು ತಿಳಿದುಕೊಳ್ಳಲು ಆಕೆಯ ತಂದೆ ಸಹಾಯ ಮಾಡಿದರು. ಅಷ್ಟೇ ಅಲ್ಲದೆ, ಭಾರತದಲ್ಲಿದ್ದ ಅವರ ಕುಟುಂಬದ ಆಲ್ಬಮ್‌ಗಳಿಂದ ಹಬ್ಬ-ಹರಿದಿನಗಳಲ್ಲಿ ಸ್ವಸ್ತಿಕ ಚಿಹ್ನೆಯನ್ನು ಪೂಜಿಸುವ ಛಾಯಾಚಿತ್ರಗಳನ್ನು ತರಿಸಿಕೊಂಡಳು.
ಕೆಲವು ಶಿಕ್ಷಕರು ಮೀರಾಳ ಹೋರಾಟಕ್ಕೆ ಆಂತರಿಕವಾಗಿ ಬೆಂಬಲ ನೀಡಿದರಾದರೂ, ಶಾಲಾ ಪಠ್ಯಕ್ರಮ ಮತ್ತು ನಾಮಕರಣವನ್ನು ಬದಲಾಯಿಸಲು ತಮಗಿರುವ ಇತಿಮಿತಿಗಳನ್ನು ಒಪ್ಪಿಕೊಂಡರು. ಜೊತೆಗೆ ಈ ವಿಷಯವಾಗಿ ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸುವಂತೆ ಮೀರಾಗೆ ಸಲಹೆ ನೀಡಿದರು. ಇದರ ಬೆನ್ನಲ್ಲೇ ಮೀರಾ ಇಡೀ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮತ್ತು ಅಲ್ಲಿನ ಜಿಲ್ಲಾಧಿಕಾರಿಗಳ ಮುಂದೆ ಐತಿಹಾಸಿಕ ಪುರಾವೆಗಳೊಂದಿಗೆ ಅತ್ಯಂತ ಪರಿಣಾಮಕಾರಿ ಪ್ರೆಸೆಂಟೇಶನ್ (Presentation) ನೀಡಿದಳು. ಬಾಲಕಿಯ ಸತ್ಯಶೋಧನೆ ಮತ್ತು ಬಲವಾದ ವಾದವನ್ನು ಪುರಸ್ಕರಿಸಿದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಅಂತಿಮವಾಗಿ ತಮ್ಮ ತಪ್ಪನ್ನು ಅರಿತುಕೊಂಡು ಪಠ್ಯದಲ್ಲಿ ಬದಲಾವಣೆ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದರು.
ಅಮೆರಿಕದಲ್ಲಿ ಜನಾಂಗೀಯ ನಿಂದನೆಗೆ ಬ್ರೇಕ್ ಹಾಕುವ ಪ್ರಯತ್ನ
ಅಮೆರಿಕದಲ್ಲಿ ಭಾರತೀಯರು ಮತ್ತು ಭಾರತೀಯ ಮೂಲದ ಜನರು ಸಾಂಸ್ಕೃತಿಕವಾಗಿ ಹಲವು ಸವಾಲುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಇಂತಹ ತಪ್ಪು ವ್ಯಾಖ್ಯಾನಗಳು ಹಿಂದೂಗಳ ಮೇಲಿನ ದ್ವೇಷವನ್ನು ಮತ್ತಷ್ಟು ಪ್ರಚೋದಿಸುತ್ತವೆ ಎಂಬುದು ಮೀರಾಳ ವಾದ. ತಾನು ಕೂಡ ಶಾಲೆಯಲ್ಲಿ ಹಿಂದೂ ಧರ್ಮದ ಕಾರಣಕ್ಕಾಗಿ, ಹಸುಗಳನ್ನು ಮತ್ತು ಗಣೇಶನನ್ನು ಪೂಜಿಸುವುದಕ್ಕಾಗಿ ಪರೋಕ್ಷವಾಗಿ ಹಲವು ಬಾರಿ ಬೆದರಿಕೆ ಹಾಗೂ ನಿಂದನೆಗಳನ್ನು ಎದುರಿಸಿದ್ದಾಗಿ ಮೀರಾ ಬೇಸರದಿಂದ ಹೇಳಿದ್ದಾಳೆ. ಆದರೆ ಇಂತಹ ಅಜ್ಞಾನ ಮತ್ತು ತಾರತಮ್ಯಕ್ಕೆ ಈಗ ಕಾಲ ಕೂಡಿಬಂದಿದ್ದು, ಇದು ಇಲ್ಲಿಗೇ ಕೊನೆಗೊಳ್ಳಬೇಕು ಎಂದು ಸಾರಿದ್ದಾಳೆ. ಧರ್ಮದ ಅಸ್ಮಿತೆಯನ್ನು ಜಾಗತಿಕ ವೇದಿಕೆಯಲ್ಲಿ ಸಾಬೀತುಪಡಿಸಿದ ಈ ಬಾಲಕಿಯ ಧೀಮಂತ ನಡೆಗೆ ಜಗತ್ತಿನಾದ್ಯಂತ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.


