ಡಿಸೆಂಬರ್ 4 ರಂದು ಆಚರಿಸಲಾಗುವ ಭಾರತೀಯ ನೌಕಾಪಡೆಯ ದಿನವು 1971ರ ಯುದ್ಧದ 'ಆಪರೇಷನ್ ಟ್ರೈಡೆಂಟ್' ಯಶಸ್ಸನ್ನು ಸ್ಮರಿಸುತ್ತದೆ. ಈ ಲೇಖನವು ನೌಕಾ ದಿನದ ಇತಿಹಾಸ, ಅದರ ಮಹತ್ವ, ಮತ್ತು 'ಸ್ವಾವಲಂಬಿ' ಥೀಮ್‌ನೊಂದಿಗೆ ಕೇರಳದಲ್ಲಿ ನಡೆದ ನೌಕಾಪಡೆಯ ಸಾಮರ್ಥ್ಯ ಪ್ರದರ್ಶನದ ವಿವರಗಳನ್ನು ಒದಗಿಸುತ್ತದೆ.

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತೀಯ ನೌಕಾಪಡೆಯ ದಿನ ನಮ್ಮ ರಾಷ್ಟ್ರೀಯ ಕ್ಯಾಲೆಂಡರ್‌ನಲ್ಲಿ ಅತ್ಯಂತ ಸ್ಫೂರ್ತಿದಾಯಕ ದಿನಗಳಲ್ಲಿ ಒಂದಾಗಿದೆ. ಈ ದಿನ ಸಮುದ್ರದಲ್ಲಿ ಭಾರತದ ಧೈರ್ಯ, ಬದ್ಧತೆ, ಮತ್ತು ಹೆಚ್ಚುತ್ತಿರುವ ಸಾಮರ್ಥ್ಯವನ್ನು ಸಂಭ್ರಮಿಸಲಾಗುತ್ತದೆ. ಬಿಳಿ ಸಮವಸ್ತ್ರದಲ್ಲಿರುವ ನಮ್ಮ ನೌಕಾಪಡೆಯ ವೀರ ಪುರುಷ ಮತ್ತು ಮಹಿಳಾ ಯೋಧರು ಪ್ರತಿಯೊಬ್ಬ ಭಾರತೀಯನ ಸುರಕ್ಷತೆಗಾಗಿ, ದೇಶದ ಸಮುದ್ರ ಗಡಿಗಳನ್ನು ರಕ್ಷಿಸಲು ಹಗಲು ಇರುಳೆನ್ನದೆ ದುಡಿಯುವುದನ್ನು ನಮಗೆ ಈ ದಿನ ನೆನಪಿಸುತ್ತದೆ. ನೌಕಾಪಡೆಯ ದಿನಾಚರಣೆಯ ಕಥನ ಕೇವಲ ಯುದ್ಧ ಮತ್ತು ಗೆಲುವಿಗೆ ಸೀಮಿತವಾಗಿಲ್ಲ. ಬದಲಿಗೆ, ಇದು ಹೆಮ್ಮೆ, ಶಿಸ್ತು ಮತ್ತು ಬದ್ಧತೆಯ ದಿನವೂ ಹೌದು.

ರಾಯಲ್ ಇಂಡಿಯನ್ ನೌಕಾಪಡೆಗೆ ಹೆಚ್ಚಿನ ಭಾರತೀಯರನ್ನು ತಲುಪುವ ಉದ್ದೇಶದಿಂದ, ದೇಶ ರಕ್ಷಣೆಯಲ್ಲಿ ನೌಕಾಪಡೆಯ ಪಾತ್ರದ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಅಕ್ಟೋಬರ್ 21, 1944ರಂದು ಮೊದಲ ನೌಕಾಪಡೆಯ ದಿನವನ್ನು ಭಾರತದಲ್ಲಿ ಆಚರಿಸಲಾಯಿತು. ಬಂದರು ನಗರಗಳಲ್ಲಿ ಪೆರೇಡ್‌ಗಳನ್ನು ಆಯೋಜಿಸಲಾಯಿತು. ಇನ್ನು ಒಳಗಿನ ನಗರಗಳಲ್ಲಿ ಸಭೆಗಳನ್ನು ಆಯೋಜಿಸಲಾಯಿತು. ಇದಕ್ಕೆ ಅಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಯಿತು. ಜನರು ತಮ್ಮ ನೌಕಾಪಡೆಯನ್ನು ಸನಿಹದಿಂದ ನೋಡಿ ಅತ್ಯಂತ ಉತ್ಸಾಹಗೊಂಡಿದ್ದರು. ಆದ್ದರಿಂದ ಮೊದಲ ನೌಕಾಪಡೆಯ ದಿನಾಚರಣೆ ಅಸಾಧಾರಣ ಯಶಸ್ಸು ಕಂಡಿತು. ಈ ಧನಾತ್ಮಕ ಪ್ರತಿಕ್ರಿಯೆಯನ್ನು ಗಮನಿಸಿ, ಇಂತಹ ಆಚರಣೆಯನ್ನು ಪ್ರತಿವರ್ಷವೂ ನಡೆಸುವ ನಿರ್ಧಾರಕ್ಕೆ ಬರಲಾಯಿತು. ಆದರೆ, ಕೊಂಚ ತಣ್ಣನೆಯ ವಾತಾವರಣ ಇರುವ ಡಿಸೆಂಬರ್ ತಿಂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಆಚರಿಸಲು ಯೋಜಿಸಲಾಯಿತು. ಆದ್ದರಿಂದ, 1945ರ ನೌಕಾಪಡೆಯ ದಿನವನ್ನು ಡಿಸೆಂಬರ್ 1ರಂದು ಬಾಂಬೆ ಮತ್ತು ಕರಾಚಿಗಳಲ್ಲಿ ಆಚರಿಸಲಾಯಿತು.

ಕಾಲ ಕಳೆದಂತೆ, ನೌಕಾಪಡೆಯ ದಿನ ಹೆಚ್ಚು ಹೆಮ್ಮೆಯ ಆಚರಣೆಯಾಗತೊಡಗಿತು. 1972ರ ತನಕ ನೌಕಾಪಡೆಯ ದಿನವನ್ನು ಡಿಸೆಂಬರ್ 15ರಂದು ಆಚರಿಸಲಾಯಿತು. ಅದರ ಸುತ್ತಲಿನ ವಾರವನ್ನು ನೌಕಾಪಡೆಯ ವಾರವನ್ನಾಗಿ ಆಚರಿಸಲಾಗುತ್ತಿತ್ತು. ಆದರೆ, 1971ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಭಾರತ ಅಸಾಧಾರಣ ಗೆಲುವು ಸಾಧಿಸಿದ ಬಳಿಕ, ಈ ಆಚರಣೆಯಲ್ಲಿ ಬದಲಾವಣೆಗಳಾದವು. ಮೇ 1972ರಲ್ಲಿ, ನೌಕಾಪಡೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಒಂದು ಐತಿಹಾಸಿಕ ನಿರ್ಣಯ ಕೈಗೊಳ್ಳಲಾಯಿತು. ಭಾರತ ಯುದ್ಧದಲ್ಲಿ ಕೈಗೊಂಡ ಯಶಸ್ವೀ ನೌಕಾ ಕಾರ್ಯಾಚರಣೆಯನ್ನು ಸ್ಮರಿಸುವ ಸಲುವಾಗಿ ನೌಕಾ ದಿನಾಚರಣೆಯನ್ನು ಡಿಸೆಂಬರ್ 4ರಂದು ಆಚರಿಸಲು ತೀರ್ಮಾನಿಸಲಾಯಿತು.

ಇದರ ಹಿಂದಿ‌ನ ಕಾರಣ ಅಷ್ಟೇ ರೋಚಕವೂ, ಮರೆಯಲು ಸಾಧ್ಯವಿಲ್ಲದ್ದೂ ಆಗಿತ್ತು. ಡಿಸೆಂಬರ್ 4, 1971ರಂದು ಭಾರತೀಯ ನೌಕಾಪಡೆ ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ದಾಳಿ ನಡೆಸಿತು. ತನ್ನ ಕರಾರುವಾಕ್ಕು ಯೋಜನೆ ಮತ್ತು ಭೀತಿರಹಿತ ದಾಳಿಗೆ ಹೆಸರಾದ ಈ ಕಾರ್ಯಾಚರಣೆ ಸಮುದ್ರದಲ್ಲಿ ಯುದ್ಧದ ಚಿತ್ರಣವನ್ನೇ ಬದಲಿಸಿತು. ಭಾರತೀಯ ನೌಕಾಪಡೆಯ ಕ್ಷಿಪಣಿ ಬೋಟುಗಳು ಪಾಕಿಸ್ತಾನದ ಇಂಧನ ಕೇಂದ್ರಗಳು, ನೌಕೆಗಳು ಮತ್ತು ದಡದಲ್ಲಿದ್ದ ನೆಲೆಗಳ ಮೇಲೆ ದಾಳಿ ನಡೆಸಿ, ಅಸಾಧಾರಣ ವಿನಾಶ ಸೃಷ್ಟಿಸಿದವು. ಈ ದಾಳಿಗಳು ಪಾಕಿಸ್ತಾನದ ನೌಕಾಬಲವನ್ನು ಮುರಿದು, ಭಾರತಕ್ಕೆ ಅರಬ್ಬೀ ಸಮುದ್ರದ ಮೇಲೆ ಸಂಪೂರ್ಣ ನಿಯಂತ್ರಣ ಒದಗಿಸಿತು. ಇದು ಭಾರತದ ಮೊದಲ ನೌಕಾ ಆಕ್ರಮಣವಾಗಿದ್ದು, ಭಾರತದ ಅಸಾಧಾರಣ ಶೌರ್ಯ ಮತ್ತು ಕೌಶಲಗಳಿಗೆ ಇಂದಿಗೂ ಸಾಕ್ಷಿಯಾಗಿದೆ.

ಇದೇ ಸಮಯದಲ್ಲಿ, ಭಾರತದ ವಿಮಾನವಾಹಕ ನೌಕೆಯಾಗಿದ್ದ ಐಎನ್ಎಸ್ ವಿಕ್ರಾಂತ್ ಮೂಲಕ ನಡೆಸಲಾದ ವಾಯು ದಾಳಿಗಳು ಚಿತ್ತಗಾಂಗ್ ಮತ್ತು ಖುಲ್ನಾದಲ್ಲಿದ್ದ ಶತ್ರುಗಳ ವಾಯುನೆಲೆಗಳನ್ನು ನಾಶಪಡಿಸಿದವು. ಈ ಪ್ರದೇಶಗಳು ಇಂದು ಸ್ವತಂತ್ರ ಬಾಂಗ್ಲಾದೇಶದ ಭಾಗವಾಗಿವೆ. ಈ ಕಾರ್ಯಾಚರಣೆಗಳು ಬಂಗಾಳ ಕೊಲ್ಲಿಯಲ್ಲಿ ಶತ್ರುಗಳ ರಕ್ಷಣೆಯನ್ನು ದುರ್ಬಲಗೊಳಿಸಿ, ಪೂರ್ವದಲ್ಲಿ ಭಾರತದ ಯಶಸ್ಸಿಗೆ ಬೆಂಬಲ ನೀಡಿದವು. ಸಮುದ್ರ ಮತ್ತು ವಾಯು ಪಡೆಗಳ ನಡುವಿನ ಸಮನ್ವಯ ಭಾರತದ ಹೆಚ್ಚುತ್ತಿರುವ ಸಾಮರ್ಥ್ಯ ಮತ್ತು ಬದ್ಧತೆಗೆ ಸಾಕ್ಷಿಯಾಗಿದ್ದವು. ಆದ್ದರಿಂದಲೇ ಡಿಸೆಂಬರ್ 4 ಕೇವಲ ಒಂದು ದಿನಾಂಕವಲ್ಲ. ಬದಲಿಗೆ, ಭಾರತೀಯ ನೌಕಾಪಡೆಯ ಶ್ರೇಷ್ಠತೆ, ಧೈರ್ಯ ಮತ್ತು ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ.

ಇಂದು ನೌಕಾಪಡೆಯ ದಿನ ಕೇವಲ ಆ ಯುದ್ಧದ ಗೆಲುವಿನ ಸ್ಮರಣೆಗೆ ಮಾತ್ರವೇ ಸೀಮಿತವಾಗಿಲ್ಲ. ಅದರೊಡನೆ, ಭಾರತದ ಸಮುದ್ರ ಗಡಿಗಳನ್ನು ರಕ್ಷಿಸುವ ಯೋಧರನ್ನು ಸಂಭ್ರಮಿಸಲೂ ಈ ದಿನ ಮುಡಿಪಾಗಿದೆ. ನೌಕಾಪಡೆಯ ದಿನ ಯೋಧರ ಶಿಸ್ತು, ತ್ಯಾಗ, ಮತ್ತು ಕರ್ತವ್ಯದತ್ತ ಅವರ ಬದ್ಧತೆಯನ್ನು ಗೌರವಿಸುತ್ತದೆ. ಭಾರತೀಯ ನೌಕಾಪಡೆಯ ಪಾತ್ರಗಳು ಯುದ್ಧವನ್ನೂ ಮೀರಿವೆ. ನೈಸರ್ಗಿಕ ವಿಕೋಪದ ಸಂದರ್ಭಗಳಲ್ಲಿ ಜೀವ ರಕ್ಷಣೆ, ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆ, ಮತ್ತು ಭಾರತ ಹಾಗೂ ಜಗತ್ತಿನ ನಡುವೆ ಸಂಪರ್ಕ ಕಲ್ಪಿಸುವ ವ್ಯಾಪಾರ ಮಾರ್ಗಗಳ ಸುರಕ್ಷತೆಗೆ ನೌಕಾಪಡೆ ಕಾರ್ಯಾಚರಿಸುತ್ತದೆ. ಡಿಸೆಂಬರ್ 1ರಿಂದ 7ರ ತನಕ ನೌಕಾಪಡೆಯ ವಾರವನ್ನು ಆಚರಿಸಲಾಗುತ್ತದೆ.‌ ಇದು ಸಮಸ್ತ ಭಾರತೀಯರಿಗೆ ನೌಕಾಪಡೆಯ ಕಾರ್ಯ ಮತ್ತು ಭಾರತವನ್ನು ಸುರಕ್ಷಿತವಾಗಿಡುವ ತಂತ್ರಜ್ಞಾನಗಳನ್ನು ಅರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.

ಈ ವರ್ಷದ ನೌಕಾಪಡೆಯ ದಿನವನ್ನು 'ಕಾಂಬ್ಯಾಟ್ ರೆಡಿ, ಕೊಹೆಸಿವ್ ಆ್ಯಂಡ್ ಸೆಲ್ಫ್ ರಿಲಯಂಟ್' (ಸಮರ ಸನ್ನದ್ಧ, ಒಗ್ಗಟ್ಟು ಮತ್ತು ಸ್ವಾವಲಂಬಿ) ಎಂಬ ಥೀಮ್ ಅಡಿಯಲ್ಲಿ ಆಯೋಜಿಸಲಾಗುತ್ತಿದೆ. ಇದು ಯಾವುದೇ ಸವಾಲಿಗೂ ಸದಾ ಸಿದ್ಧವಾಗಿರಬೇಕಾದುದರ ಮಹತ್ವವನ್ನು, ಒಂದು ತಂಡವಾಗಿ ಕಾರ್ಯಾಚರಿಸುವ ಅವಶ್ಯಕತೆಯನ್ನು, ಮತ್ತು ದೇಶೀಯ ತಂತ್ರಜ್ಞಾನದ ಮೇಲಿನ ಅವಲಂಬನೆಯ ಅಗತ್ಯವನ್ನು ತಿಳಿಸುತ್ತದೆ. ಈ ವರ್ಷ, ಹೆಚ್ಚಿನ ಗಮನ ಭಾರತೀಯ ನಿರ್ಮಾಣದ ಆಯುಧ ವ್ಯವಸ್ಥೆಗಳ ಪ್ರದರ್ಶನ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂವನೆಗಾಗಿ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಪ್ರಚುರಪಡಿಸುವತ್ತ ನೀಡಲಾಗಿದೆ.

ಭಾರತೀಯ ನೌಕಾಪಡೆಯ ಕಾರ್ಯಾಚರಣಾ ಪ್ರದರ್ಶನ 2025 ಕೇರಳದ ತಿರುವನಂತಪುರದ ಶಣ್ಮುಗಂ ಸಮುದ್ರ ತೀರದಲ್ಲಿ ಡಿಸೆಂಬರ್ 3, 4ರಂದು ಆಯೋಜಿಸಲಾಗಿದೆ. ಭಾರತದ ಈ ಸಮುದ್ರ ಸಾಮರ್ಥ್ಯ ಪ್ರದರ್ಶನ ಯುದ್ಧ ನೌಕೆಗಳು, ಜಲಾಂತರ್ಗಾಮಿಗಳು, ಮತ್ತು ನೌಕಾಪಡೆಯ ವಿಮಾನಗಳ ಪ್ರದರ್ಶನಗಳನ್ನು ಒಳಗೊಂಡಿದೆ. ಭಾರತದ ಸರ್ವ ಸೇನಾಪಡೆಗಳ ಮುಖ್ಯಸ್ಥರೂ ಆದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿದ್ದಾರೆ. ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರು ಸಮಾರಂಭದ ಆಯೋಜಕರಾಗಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರೂ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.

ಡಿಸೆಂಬರ್ 3ರಂದು ಸಾವಿರಾರು ಜನರು ಷಣ್ಮುಗಂ ಸಮುದ್ರ ತೀರದಲ್ಲಿ ಸೇರಿ, ನೌಕಾಪಡೆಯ ಅಸಾಧಾರಣ ಸಾಮರ್ಥ್ಯ ಪ್ರದರ್ಶನಕ್ಕೆ ಸಾಕ್ಷಿಯಾದರು. ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣಗೊಂಡಿರುವ ಭಾರತದ ಪ್ರಥಮ ದೇಶೀಯ ನಿರ್ಮಾಣದ ವಿಮಾನ ವಾಹಕ ನೌಕೆಯಾದ ಐಎನ್ಎಸ್ ವಿಕ್ರಾಂತ್ ಸಮಾರಂಭದ ಕೇಂದ್ರಬಿಂದುವಾಗಿತ್ತು. ನೌಕೆಯ ಡೆಕ್‌ನಿಂದ ಜಿಗಿದ ಯುದ್ಧ ವಿಮಾನಗಳು ಪ್ರೇಕ್ಷಕರ ಕೌತುಕ ಹೆಚ್ಚಿಸಿದವು. 20ರಷ್ಟು ಯುದ್ಧ ನೌಕೆಗಳು, ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಸೇರಿದಂತೆ 32 ಏರ್‌ಕ್ರಾಫ್ಟ್‌ಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಮಾರ್ಕೋಸ್ ಕಮಾಂಡೋಗಳ ಕಡಲ್ಗಳ್ಳತನ ನಿರೋಧಕ ಕಾರ್ಯಾಚರಣಾ ಪ್ರದರ್ಶನ, ಸಂಯೋಜಿತ ಹಾರಾಟ, ಮುಂಚೂಣಿ ಫ್ರಿಗೇಟ್‌ಗಳು ಮತ್ತು ಕಾರ್ವೆಟ್‌ಗಳ ಪ್ರದರ್ಶ‌ನಗಳು ನೆರವೇರಿದವು.

ಈ ಸಮಾರಂಭ ಕೇವಲ ಸಾಮರ್ಥ್ಯದ ಪ್ರದರ್ಶನವಾಗಿರಲಿಲ್ಲ. ಇದು ಭಾರತದ ಅಂತಸ್ಸತ್ವವನ್ನೂ ತೋರಿಸಿತ್ತು. ಸೀ ಕ್ಯಾಡೆಟ್ ಕಾರ್ಪ್ಸ್‌ನ ಹಾರ್ನ್‌ಪೈಪ್ ಡ್ಯಾನ್ಸ್, ಸಾಂಸ್ಕೃತಿಕ ಕಾರ್ಯಕ್ರಮಗಳು, ಮತ್ತು ಸುಂದರ ಸಿಡಿಮದ್ದು ಪ್ರದರ್ಶನಗಳು ಸಂಜೆಯನ್ನು ಸುಂದರಗೊಳಿಸಿದವು. ಪ್ರಮುಖ ನೌಕಾನೆಲೆಗಳ ಹೊರಗೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ನೌಕಾಪಡೆ ತನ್ನ ಜಗತ್ತನ್ನು ಜನರ ಬಳಿಗೆ ಒಯ್ಯಲು ಸಾಧ್ಯವಾಯಿತು.

ನೌಕಾಪಡೆಯ ದಿನಾಚರಣೆ ಕೇವಲ ಮಿಲಿಟರಿ ಆಚರಣೆಯಲ್ಲ. ಇದು ಕರ್ತವ್ಯ, ತಂಡ ಕಾರ್ಯ, ಮತ್ತು ರಾಷ್ಟ್ರೀಯ ಹೆಮ್ಮೆಯ ಸ್ಮರಣೆಯೂ ಹೌದು. ನೌಕಾಪಡೆಯ ದಿನ ಸೈನಿಕರು ಮತ್ತು ಪ್ರಜೆಗಳನ್ನು ರೂಪಿಸುವ ಧೈರ್ಯ ಮತ್ತು ಶಿಸ್ತಿನಂತಹ ಮೌಲ್ಯಗಳನ್ನು ಕಲಿಸುತ್ತದೆ. ತ್ರಿವರ್ಣ ಧ್ವಜವನ್ನು ಹೊಂದಿರುವ ನೌಕೆಗಳು ಸಮುದ್ರದಲ್ಲಿ ಸಾಗುವಾಗ, ಅದು ಕೇವಲ ಶಕ್ತಿ ಪ್ರದರ್ಶನ ಮಾತ್ರವಲ್ಲದೆ, ಭಾರತದ ಅಂತಸ್ಸತ್ವದ, ಭೀತಿರಹಿತತೆ ಮತ್ತು ಸ್ವಾವಲಂಬನೆಯ ಪ್ರದರ್ಶನವೂ ಹೌದು.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)