ಸ್ವದೇಶಿ ವಿಮಾನ ಉತ್ಪಾದನೆ: ಭಾರತೀಯ ಸೇನೆಗೆ ರತನ್ ಟಾಟಾ ಕೊಡುಗೆ ಅಷ್ಟಿಷ್ಟಲ್ಲ!
ಇಂದು ಭಾರತದ ಉದ್ಯಮಿ ರತನ್ ಟಾಟಾ ಅವರ ಹುಟ್ಟಿದಬ್ಬ. ಉಪ್ಪಿನಿಂದ ಹಿಡಿದು, ವಿಮಾನ ತಯಾರಾಕ ಉದ್ಯಮವನ್ನೂ ನಡೆಸುತ್ತಿರುವ ಟಾಟಾ ಅವರು ಭಾರತೀಯ ಏರ್‌ಕ್ರಾಫ್ಟಿಗೆ ನೀಡಿರುವ ಕೊಡುಗೆ ಅನನ್ಯ.
- ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
2021ರ ಅಕ್ಟೋಬರ್ ತಿಂಗಳಲ್ಲಿ, ಟಾಟಾ ಟ್ರಸ್ಟ್ಸ್ ಅಧ್ಯಕ್ಷರಾದ ರತನ್ ಟಾಟಾ ಅವರು ಸಿ-295 ವಿಮಾನವನ್ನು ಭಾರತದಲ್ಲಿ ಉತ್ಪಾದಿಸುವ ಸಲುವಾಗಿ ಟಾಟಾ - ಏರ್‌ಬಸ್ ಸಂಸ್ಥೆಗಳ ಜಂಟಿ ಸಹಯೋಗದ ಆರಂಭವನ್ನು ಶ್ಲಾಘಿಸಿದರು. ಈ ವಿಮಾನ ನಿರ್ಮಾಣ ಕಾರ್ಖಾನೆಯ ಸ್ಥಾಪನೆ ಭಾರತದಲ್ಲಿ ಖಾಸಗಿ ವಿಮಾನ ನಿರ್ಮಾಣ ವ್ಯವಸ್ಥೆಯನ್ನು ಆರಂಭಿಸಬೇಕೆಂಬ ರತನ್ ಟಾಟಾ ಅವರ ಹತ್ತು ವರ್ಷಗಳ ಹಿಂದಿನ ಕನಸನ್ನು ನನಸಾಗಿಸಿದೆ. ರತನ್ ಟಾಟಾ ಅವರು ಟಾಟಾ ಗ್ರೂಪ್ ಅಧ್ಯಕ್ಷರಾಗಿ 1991ರಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ, 2012 ಡಿಸೆಂಬರ್ 28ರಂದು ನಿವೃತ್ತರಾಗುವ ತನಕ ಟಾಟಾ ಗ್ರೂಪ್ ರಕ್ಷಣಾ ಉತ್ಪಾದನಾ ವಲಯದಲ್ಲಿ ಸಕ್ರಿಯವಾಗಿ ಭಾಗಿಯಾಗಿತ್ತು.
ರಕ್ಷಣಾ ವಲಯದಲ್ಲಿ (Defense Sector) ಟಾಟಾ ಗ್ರೂಪ್‌ನ ಪಾಲ್ಗೊಳ್ಳುವಿಕೆ 1940ರ ದಶಕದಲ್ಲೇ ಆರಂಭಗೊಂಡಿತ್ತು. ಎರಡನೇ ಮಹಾಯುದ್ಧದ (2nd World War) ಸಂದರ್ಭದಲ್ಲಿ, ಟಾಟಾ ಗ್ರೂಪ್ಸ್ ಆಯುಧಗಳಿಗೆ ಬೇಕಾದ ಉಕ್ಕಿನ ಪೂರೈಕೆ ನಡೆಸಿ, ಸೇನೆಗೆ ನೆರವಾಗಿತ್ತು. ಟಾಟಾ ಗ್ರೂಪ್ ಟಾಟಾನಗರ್ ಎಂದು ಕರೆಯಲಾದ ವೀಲ್ಡ್ ಆರ್ಮರ್ಡ್ ಕ್ಯಾರಿಯರ್ - ಇಂಡಿಯನ್ ಪ್ಯಾಟರ್ನ್ ಅಥವಾ ಎಸಿವಿ-ಐಪಿಯನ್ನು ಉತ್ಪಾದಿಸಿತ್ತು. ಭಾರತ 1947ರಲ್ಲಿ ಸ್ವತಂತ್ರಗೊಂಡ ಬಳಿಕ ಟಾಟಾ ಗ್ರೂಪ್ ಭಾರತದ ರಕ್ಷಣಾ ಸಾಗಾಟ, ಓಡಾಟದ ಅಗತ್ಯಗಳನ್ನು ಟಾಟಾ ಮೋಟಾರ್ಸ್ ಸಂಸ್ಥೆಯ ಮೂಲಕ ಪೂರೈಸತೊಡಗಿತು.
ತೆರೆಮೇಲೆ ರತನ್ ಟಾಟಾ ಬಯೋಪಿಕ್; ರಾಷ್ಟ್ರ ಪ್ರಶಸ್ತಿ ವಿಜೇತ ಡೈರೆಕ್ಟರ್ ಆಕ್ಷನ್ ಕಟ್
ಟಾಟಾ ಮೋಟಾರ್ಸ್ ಪ್ರಸ್ತುತ ಭಾರತದ ರಕ್ಷಣಾ ಉದ್ಯಮದ ಚಲನ ವಿಭಾಗದಲ್ಲಿ ಅತಿದೊಡ್ಡ ಖಾಸಗಿ ಪಾಲುದಾರ ಸಂಸ್ಥೆಯಾಗಿದೆ. ಇದು ಮಿಲಿಟರಿಯ ಬೃಹತ್ ಅಗತ್ಯಗಳಾದ ವಸ್ತುಗಳ ಸಾಗಾಟದಿಂದ ಮುಂಚೂಣಿಯ ಯುದ್ಧ ವಾಹನಗಳ ತನಕ ವಿವಿಧ ವಾಹನಗಳು, ಉಪಕರಣಗಳನ್ನು ಒದಗಿಸುತ್ತದೆ. ಟಾಟಾ ಮೋಟಾರ್ಸ್ ಲಘು ಮೋಟಾರ್ ವಾಹನಗಳಿಂದ ಭಾರೀ ಮೋಟಾರ್ ವಾಹನಗಳ ತನಕ, ರಕ್ಷಣಾ ಉದ್ಯಮಕ್ಕೆ ಸಂಬಂಧಿಸಿದ ಎಲ್ಲ ವಾಹನಗಳು, ಪ್ಯಾರಾ ಮಿಲಿಟರಿ ಮತ್ತು ಪೊಲೀಸ್ ವಾಹನಗಳನ್ನೂ ಉತ್ಪಾದಿಸುವ ಮೂಲಕ ಈ ವಲಯದಲ್ಲಿ ಅಪಾರವಾಗಿ ಬೆಳೆದಿದೆ. ಟಾಟಾ ಮೋಟಾರ್ಸ್ ಸಂಸ್ಥೆ ಪ್ಯಾರಾ ಮಿಲಿಟರಿ ಮತ್ತು ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಪೂರೈಸಿದ್ದು, ಹತ್ತಕ್ಕೂ ಹೆಚ್ಚು ಡಿಜಿಎಸ್&ಡಿ ರೇಟ್ ಕಾಂಟ್ರಾಕ್ಟ್‌ಗಳಲ್ಲಿ ಅತಿಹೆಚ್ಚು ವಾಹನಗಳ ಆಯ್ಕೆ ಹೊಂದಿರುವ ಏಕೈಕ ಓಇಎಂ ಆಗಿದೆ. ಭಾರತೀಯ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಗಳಿಗೆ ವಾಹನಗಳನ್ನು ಒದಗಿಸುವ ಜೊತೆಗೆ, ಟಾಟಾ ಮೋಟಾರ್ಸ್ ತನ್ನ ವಿಶಿಷ್ಟ ರಕ್ಷಣಾ ವಾಹನಗಳನ್ನು ಸಾರ್ಕ್, ಆಸಿಯಾನ್, ಆಫ್ರಿಕಾದ ದೇಶಗಳು ಮತ್ತು ಆಫ್ರಿಕಾದ ಯುದ್ಧ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಿಸುವ ವಿಶ್ವಸಂಸ್ಥೆಯ ಶಾಂತಿ ಸ್ಥಾಪನಾ ಪಡೆಗಳಿಗೂ ಒದಗಿಸುತ್ತದೆ.
ಟಾಟಾ ಸನ್ಸ್ ಸಂಸ್ಥೆಯ ಅಂಗಸಂಸ್ಥೆಯಾದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ ಲಿಮಿಟೆಡ್ 2011ರಲ್ಲಿ ಲಾಕ್‌ಹೀಡ್ ಮಾರ್ಟಿನ್ ಸಂಸ್ಥೆಯೊಡನೆ ಜಂಟಿ ಉದ್ಯಮವನ್ನು ಸ್ಥಾಪಿಸಿ, ಲಾಕ್‌ಹೀಡ್ ಸಂಸ್ಥೆಯ ಸಿ-130 ವಿಮಾನದ ಭಾಗಗಳನ್ನು ಭಾರತದಲ್ಲಿ ಉತ್ಪಾದಿಸುವ ನಿರ್ಧಾರ ಕೈಗೊಂಡಿತು.
ಚೀನಾ ಗಡಿ ಸಂಘರ್ಷ ಬೆನ್ನಲ್ಲೇ ತವಾಂಗ್‌ನಲ್ಲಿ 23 ಮೊಬೈಲ್ ಟವರ್
ಏಪ್ರಿಲ್ 2018ರಲ್ಲಿ, ಟಾಟಾ ಸನ್ಸ್ ಸಂಸ್ಥೆ ಏರೋಸ್ಪೇಸ್ (Aerospace) ಮತ್ತು ರಕ್ಷಣಾ ವಲಯದಲ್ಲಿನ ತನ್ನ ಹಲವು ಉದ್ಯಮಗಳನ್ನು ಟಾಟಾ ಏರೋಸ್ಪೇಸ್ ಆ್ಯಂಡ್ ಡಿಫೆನ್ಸ್ (ಟಾಟಾ ಎ&ಡಿ) ಎಂಬ ಏಕೈಕ ಸಂಸ್ಥೆಯೊಡನೆ ವಿಲೀನಗೊಳಿಸಲು ಆರಂಭಿಸಿತು. ಇದು ರಕ್ಷಣಾ ವಲಯದಲ್ಲಿ ರತನ್ ಟಾಟಾ ಅವರ ಪ್ರಯತ್ನಗಳನ್ನು ಪ್ರತಿನಿಧಿಸಿತ್ತು. ಟಾಟಾ ಎ&ಡಿ ಭೂ ಸಾಗಾಟ ವ್ಯವಸ್ಥೆಗಳು, ವಿಮಾನ, ಆಯುಧ ವ್ಯವಸ್ಥೆಗಳು, ಸೆನ್ಸರ್‌ಗಳು ಮತ್ತು ಕಮಾಂಡ್ ಕಂಟ್ರೋಲ್, ಸಂವಹನ (Communication), ಕಂಪ್ಯೂಟರ್ಸ್ (Computers) ಮತ್ತು ಗುಪ್ತಚರ (ಸಿ4ಐ) ವಿಭಾಗಗಳಲ್ಲಿ ಟಾಟಾ ಗ್ರೂಪಿನ ಪರಿಣತಿ, ಅನುಭವ ಮತ್ತು ಸಾಮರ್ಥ್ಯಗಳನ್ನು ಬಳಸಿಕೊಳ್ಳತೊಡಗಿತು.
ಟಾಟಾ ಎ&ಡಿಗೆ ಸೇರ್ಪಡೆಗೊಂಡ ಹಲವು ಸಂಸ್ಥೆಗಳು ಈಗಾಗಲೇ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಸಂಸ್ಥೆಗಳೊಡನೆ ಒಪ್ಪಂದ ನಡೆಸಿ, ಜಾಗತಿಕ ಪೂರೈಕೆ ಸರಪಳಿಯ ಭಾಗವಾಗಿದ್ದವು. ಕೆಲವು ಸಂದರ್ಭಗಳಲ್ಲಿ ಅವು ಜಾಗತಿಕವಾಗಿ ಏಕೈಕ ಪೂರೈಕೆದಾರರೂ ಆಗಿದ್ದರು. ಟಾಟಾ ಎ&ಡಿ ಭಾರತೀಯ ರಕ್ಷಣಾ ಪಡೆಗಳಿಗೆ ಸೂಕ್ತವಾಗುವ, ದೇಶೀಯ ನಿರ್ಮಾಣದ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಲು ಅಪಾರ ಹೂಡಿಕೆ ಕೈಗೊಳ್ಳಲಿದೆ. ಇದು ಸಂಸ್ಥೆಯ ದೀರ್ಘಕಾಲದ ಯೋಜನೆಯಾಗಿದೆ. ಟಾಟಾ ಎ&ಡಿ 6,000ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಒಂದುಗೂಡಿಸಿ, ತೆಲಂಗಾಣ, ಕರ್ನಾಟಕ, ಜಾರ್ಖಂಡ್, ಮತ್ತು ಮಹಾರಾಷ್ಟ್ರಗಳಲ್ಲಿ ಉತ್ಪಾದನಾ ಘಟಕ ಆರಂಭಿಸುವ ಉದ್ದೇಶ ಹೊಂದಿದೆ. ಅದರೊಡನೆ ಪ್ರಮುಖ ಜಾಗತಿಕ ರಕ್ಷಣಾ ಉತ್ಪನ್ನ ಉತ್ಪಾದಕರೊಡನೆ ಸಹಯೋಗ ಹೊಂದಲಿದೆ.
ಟಾಟಾ ಸನ್ಸ್ ಸಂಸ್ಥೆಯ ಮೂಲಸೌಕರ್ಯ ಮತ್ತು ರಕ್ಷಣೆ ಹಾಗೂ ಏರೋಸ್ಪೇಸ್ ವಿಭಾಗಗಳ ಮುಖ್ಯಸ್ಥರಾದ ಬನ್‌ಮಾಲಿ ಆಗ್ರಾವಾಲಾ ಅವರು ಟಾಟಾ ಎ&ಡಿ ಸಂಸ್ಥೆ ಹೆಚ್ಚು ಸಂಕೀರ್ಣವಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮತ್ತು ಸ್ಪರ್ಧಾತ್ಮಕವಾದ ಜಾಗತಿಕ ಪೂರೈಕೆ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಹೆಚ್ಚು ಸೂಕ್ತವಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ಟಾಟಾ ಎ&ಡಿ ಉದ್ಯಮವು ಭೂ ಸಾಗಾಟ, ವಾಯುಯಾನ ಪ್ಲಾಟ್‌ಫಾರಂಗಳು ಹಾಗೂ ವ್ಯವಸ್ಥೆಗಳು, ಆಯುಧ ವ್ಯವಸ್ಥೆಗಳು ಹಾಗೂ ಸಿ4ಐ ವಿಭಾಗಗಳನ್ನು ಒಳಗೊಂಡು ಸೇವೆ ಒದಗಿಸುತ್ತದೆ. ಟಾಟಾ ಸಂಸ್ಥೆ ಭಾರತದಲ್ಲಿ ರಕ್ಷಣಾ ಉದ್ಯಮ ಆರಂಭಿಸಿದ್ದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಹಾಗೂ ಇತರ ಸಾರ್ವಜನಿಕ ವಲಯದ (ಪಿಎಸ್‌ಯು) ಸಂಸ್ಥೆಗಳೊಡನೆ ಸಹಯೋಗ ಹೊಂದಿ ಕಾರ್ಯ ನಿರ್ವಹಿಸಲು ಉದ್ದೇಶಿಸಿದೆ.
ಈ ವಿಲೀನ ಪ್ರಕ್ರಿಯೆಯ ಬಳಿಕ, ಟಾಟಾ ಎ&ಡಿ ಒದಗಿಸುವ ಸೇವೆಗಳು ಹಾಗೂ ಸಂಸ್ಥೆಯ ಬಂಡವಾಳ ಮೂರು ವಿಭಿನ್ನ ಉದ್ಯಮಗಳಿಗಿಂತ ಹೆಚ್ಚಾಗಿದೆ.
ಭೂ ಸಾಗಾಟ ವಲಯದಲ್ಲಿ ಟಾಟಾ ಗ್ರೂಪ್, ಮಲ್ಟಿ ಆ್ಯಕ್ಸೆಲ್ ಕಾಂಬ್ಯಾಟ್ ಸಪೋರ್ಟ್ ವಾಹನಗಳು, ಲೈಟ್ ಸಪೋರ್ಟ್ ವಾಹನಗಳು, ಲೈಟ್ ಆರ್ಮರ್ಡ್ ವೆಹಿಕಲ್ಸ್, ಮೈನ್ ಪ್ರೊಟೆಕ್ಟೆಡ್ ವಾಹನಗಳು (ಎಂವಿಪಿ), ವೀಲ್ಡ್ ಆರ್ಮರ್ಡ್ ಆ್ಯಂಫಿಬಿಯಸ್ ಪ್ಲಾಟ್‌ಫಾರಂಗಳು (ಡಬ್ಲ್ಯುಎಚ್ಎಪಿ), ಲೈಟ್ ಆರ್ಮರ್ಡ್ ಮಲ್ಟಿ ರೋಲ್ ಕಾಂಬ್ಯಾಟ್ ವೆಹಿಕಲ್, ಹಾಗೂ ಟ್ರ್ಯಾಕ್ಡ್ ಆ್ಯಂಫಿಬಿಯಸ್ ಪ್ಲಾಟ್‌ಫಾರಂಗಳಾದ ಫ್ಯೂಚರ್ ರೆಡಿ ಕಾಂಬ್ಯಾಟ್ ವೆಹಿಕಲ್ (ಎಫ್ಆರ್‌ಸಿವಿ) ಹಾಗೂ ಫ್ಯೂಚರಿಸ್ಟಿಕ್ ಇನ್‌ಫ್ಯಾಂಟ್ರಿ ಕಾಂಬ್ಯಾಟ್ ವೆಹಿಕಲ್ (ಎಫ್ಐಸಿವಿ) ಗಳನ್ನು ಉತ್ಪಾದಿಸಿದೆ. ಟಾಟಾ ಮೋಟಾರ್ಸ್ ಭಾರತದ ಪ್ರಥಮ ಖಾಸಗಿ ಒರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನುಫ್ಯಾಕ್ಚರರ್ (ಒಇಎಂ) ಆಗಿದ್ದು, ಡಿಆರ್‌ಡಿಓ ಜೊತೆಗೂಡಿ ಜಂಟಿಯಾಗಿ ಡಬ್ಲ್ಯುಎಚ್ಎಪಿ, ವಿಚಕ್ಷಣೆ ನಡೆಸಬಲ್ಲ, ಎಲ್ಲ ಭೂಪ್ರದೇಶದಲ್ಲಿ ಕಾರ್ಯಾಚರಿಸಬಲ್ಲ, ಮಾರಣಾಂತಿಕವಾದ ಇನ್‌ಫ್ಯಾಂಟ್ರಿ ಕಾಂಬ್ಯಾಟ್ ವೆಹಕಲ್ ಅನ್ನು ನಿರ್ಮಿಸಿದೆ.
ಏರ್‌ಬೋರ್ನ್ ಪ್ಲಾಟ್‌ಫಾರಂಗಳು ಮತ್ತು ವ್ಯವಸ್ಥೆಗಳಲ್ಲಿ, ಕಂಪನಿ ರೋಟರಿ ಪ್ಲಾಟ್‌ಫಾರಂಗಳು, ಫಿಕ್ಸ್ಡ್ ವಿಂಗ್ ಪ್ಲಾಟ್‌ಫಾರಂಗಳು, ಮಾನವರಹಿತ ವ್ಯವಸ್ಥೆಗಳು, ಮಿಷನ್ ವ್ಯವಸ್ಥೆಗಳು ಮತ್ತು ಏವಿಯಾನಿಕ್ಸ್, ಹಾಗೂ ಅನ್ ಮ್ಯಾನ್ಡ್ ಏರಿಯಲ್ ವೆಹಿಕಲ್ಸ್ (ಯುಎವಿ) - ಮಿನಿ ಹಾಗೂ ಮೈಕ್ರೋ ಮತ್ತು ಸೇಫ್ಟಿ ಕ್ರಿಟಿಕಲ್ ಏರ್‌ಬೋರ್ನ್ ಕಂಪ್ಯೂಟರ್ ವ್ಯವಸ್ಥೆಗಳು ಹಾಗೂ ಮಾನವ ಸಹಿತ ಹಾಗೂ ಮಾನವ ರಹಿತ ಪ್ಲಾಟ್‌ಫಾರಂಗಳ ಸಂಬಂಧಿತ ಅಪ್ಲಿಕೇಶನ್‌ಗಳನ್ನು ನಿರ್ಮಿಸಿದೆ.
ರೇಡಾರ್‌ಗಳು, ಸೋನಾರ್‌ಗಳು, ಭೂ ಆಧಾರಿತ ವ್ಯವಸ್ಥೆಗಳ ಇಲೆಕ್ಟ್ರಾನಿಕ್ಸ್, ಇಲೆಕ್ಟ್ರೋ ಆಪ್ಟಿಕ್ಸ್ ವ್ಯವಸ್ಥೆಗಳು, ಗಡಿ ನಿರ್ವಹಣಾ ವ್ಯವಸ್ಥೆಗಳು, ಹೋಮ್‌ಲ್ಯಾಂಡ್ ಸೆಕ್ಯುರಿಟಿ ಸೆನ್ಸರ್‌ಗಳು, ವಾಯುಪಡೆ ಮತ್ತು ನೌಕಾಪಡೆಗಳನ್ನು ಒಳಗೊಂಡಂತೆ ಕಮಾಂಡ್ ಕಂಟ್ರೋಲ್ ಮತ್ತು ಕಾರ್ಯತಂತ್ರ ಸಂವಹನ ವ್ಯವಸ್ಥೆಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಗಳನ್ನು ಟಾಟಾ ಎ&ಡಿ ಆಯುಧ ವ್ಯವಸ್ಥೆ, ಸೆನ್ಸರ್‌ಗಳು ಮತ್ತು ಸಿ4ಐ ವಲಯದಲ್ಲಿ ನಿರ್ವಹಿಸುತ್ತದೆ.
ಸ್ವದೇಶಿ ನಿರ್ಮಿತ ಲಘು ಕಾಪ್ಟರ್‌ಗಳು ಇಂದು ಭಾರತೀಯ ವಾಯುಪಡೆಗೆ ಸೇರ್ಪಡೆ
ಟಾಟಾ ಎ&ಡಿ ತನಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಟಾಟಾ ಮೋಟಾರ್ಸ್‌ನ ರಕ್ಷಣಾ ವಿಭಾಗದಿಂದ, ಟಾಟಾ ಪವರ್‌ನ ಕಾರ್ಯತಂತ್ರದ ಇಂಜಿನಿಯರಿಂಗ್ ವಿಭಾಗದಿಂದ, ಟಿಎಎಲ್ ಮ್ಯಾನುಫಾಕ್ಚರಿಂಗ್ ಸಲ್ಯುಷನ್ಸ್ ಲಿಮಿಟೆಡ್ (ಟಾಟಾ ಮೋಟಾರ್ಸ್ ಅಂಗಸಂಸ್ಥೆ), ಹಾಗೂ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್‌ಗಳಿಂದ ವಿಲೀನದ ಬಳಿಕ ಪಡೆದುಕೊಂಡಿದೆ.
ರತನ್ ಟಾಟಾ ಓರ್ವ ದೂರದೃಷ್ಟಿ (Vision) ಹೊಂದಿರುವ ವ್ಯಕ್ತಿಯಾಗಿದ್ದು, ಅವರ ಆಡಳಿತ ಅವಧಿಯನ್ನು ಅವಲೋಕಿಸಿದರೆ ಸಂಸ್ಥೆಯಲ್ಲಿ ಯಾವ ತೊಂದರೆಯೂ ಕಂಡುಬಂದಿಲ್ಲ. ಅವರ ನಿರ್ವಹಣೆ ಮತ್ತು ನಾಯಕತ್ವದ ಕುರಿತು ಸಾಕಷ್ಟು ಶ್ಲಾಘನೆ ವ್ಯಕ್ತವಾಗುತ್ತದೆ. ಪ್ರಸ್ತುತ ಟಾಟಾ ಎ&ಡಿ ರಕ್ಷಣಾ ವಲಯದಲ್ಲಿ ಅವರಿಗೆ ಸೂಕ್ತ ಗೌರವವಾಗಲಿದೆ.