ನವದೆಹಲಿ(ಜು.13): ಚೀನಾದ ಜೊತೆಗೆ ಗಡಿ ಸಂಘರ್ಷ ಜಾರಿಯಲ್ಲಿರುವ ವೇಳೆಯಲ್ಲೇ ಭಾರತೀಯ ಸೇನೆ ಅಮೆರಿಕದಿಂದ 72 ಸಾವಿರ ಸಿಗ್‌-716 ರೈಫಲ್‌ಗಳನ್ನು ಖರೀದಿಸಲು ನಿರ್ಧರಿಸಿದೆ. ಈಗಾಗಲೇ 72 ಸಾವಿರ ಸಿಗ್‌-716 ರೈಫಲ್‌ಗಳನ್ನು ಅಮೆರಿಕದ ಕಂಪನಿಯು ಭಾರತಕ್ಕೆ ಪೂರೈಸಿದ್ದು, ಅದರ ಬೆನ್ನಲ್ಲೇ ಮತ್ತೆ ಅಷ್ಟೇ ಸಂಖ್ಯೆಯ ರೈಫಲ್‌ ಖರೀದಿಗೆ ಭಾರತ ಮುಂದಾಗಿದೆ.

ಹೊಸತಾಗಿ ಬರುವ ರೈಫಲ್‌ಗಳು ಭಾರತೀಯ ಸೇನೆಯಲ್ಲಿ ಹಾಲಿ ಬಳಕೆಯಲ್ಲಿರುವ ಹಾಗೂ ಭಾರತದಲ್ಲೇ ಉತ್ಪಾದನೆಯಾಗುವ ಇನ್ಸಾಸ್‌ ರೈಫಲ್‌ಗಳ ಜಾಗದಲ್ಲಿ ಬಳಕೆಯಾಗಲಿವೆ. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗೆ ಹಾಗೂ ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯಾಚರಣೆ ನಡೆಸಲು ಈ ರೈಫಲ್‌ಗಳನ್ನು (ಒಟ್ಟು 1.5 ಲಕ್ಷ) ಬಳಸಲಾಗುತ್ತದೆ. ಇನ್ನುಳಿದ ಸೇನಾಪಡೆಗಳಿಗೆ ಎಕೆ-203 ರೈಫಲ್‌ಗಳನ್ನು ನೀಡಲಾಗುತ್ತದೆ. ಎಕೆ-203 ರೈಫಲ್‌ಗಳನ್ನು ಅಮೇಠಿಯಲ್ಲಿರುವ ಸೇನಾ ಕಾರ್ಖಾನೆಯಲ್ಲಿ ಭಾರತ ಮತ್ತು ರಷ್ಯಾದ ಜಂಟಿ ಸಹಭಾಗಿತ್ವದಲ್ಲಿ ತಯಾರಿಸಲಾಗುತ್ತಿದೆ.

ರಾಜ್ಯಕ್ಕೆ ಮತ್ತೆ ಲಾಕ್‌ಡೌನ್ ಸಂಕಷ್ಟ, ವಿದಾಯ ಹೇಳ್ತಾರಾ ಅನುಷ್ಕಾ? ಜು.13ರ ಟಾಪ್ 10 ಸುದ್ದಿ!

ಭಾರತೀಯ ಸೇನೆಯಲ್ಲಿ ಬಳಕೆಯಲ್ಲಿರುವ ಇನ್ಸಾಸ್‌ ರೈಫಲ್‌ಗಳು ಹಳತಾಗಿದ್ದು, ಅವು ಇಂದಿನ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿಲ್ಲ. ಇವುಗಳನ್ನು ಬದಲಿಸಲು ಇತ್ತೀಚೆಗಷ್ಟೆಭಾರತವು ಇಸ್ರೇಲ್‌ನಿಂದ 16000 ಲೈಟ್‌ ಮಶೀನ್‌ ಗನ್‌ಗಳನ್ನು ತರಿಸಿಕೊಳ್ಳಲು ಕೂಡ ಒಪ್ಪಂದ ಮಾಡಿಕೊಂಡಿದೆ.