ನ್ಯೂಯಾರ್ಕ್(ಮೇ.12): ಕೊರೋನಾ ವೈರಸ್ 2ನೇ ಅಲೆ ಭಾರತವವನ್ನು ಬುಡ ಮೇಲು ಮಾಡಿದೆ. ಸಾಂಕ್ರಾಮಿಕ ರೋಗ ಎದುರಿಸಲು, ನಿಭಾಯಿಸಲು ಹಾಗೂ ನಿಯಂತ್ರಿಸಲು ದೇಶ ಹರಸಾಹಸ ಪಡುತ್ತಿದೆ. ಭಾರತದ ಈ ಸ್ಥಿತಿಗೆ, ಕೊರೋನಾ ಗೆದ್ದು ಬಿಟ್ಟೆವು ಎಂಬ ತಪ್ಪು ಊಹೆ, ಎಚ್ಚರಿಕೆ ಮರೆತು ಜನರು ಸಹಜ ಸ್ಥಿತಿಗೆ ಮರಳಿದ ಕಾರಣ 2ನೇ ಅಲೆ ಈ ಮಟ್ಟಿಗೆ ಭೀಕರತೆ ಸೃಷ್ಟಿಸಿದೆ ಎಂದು ಅಮೆರಿಕ ಉನ್ನತ ಸಾಂಕ್ರಾಮಿಕ ರೋಗ ತಜ್ಞ ಹಾಗೂ ಅಧ್ಯಕ್ಷ ಜೋ ಬೈಡನ್ ವೈದ್ಯಕೀಯ ಸಲಹೆಗಾರ ಡಾ. ಆ್ಯಂಥೋನಿ ಫೌಸಿ ಹೇಳಿದ್ದಾರೆ.

2ನೇ ಡೋಸ್ ವಿಳಂಬವಾದರೆ ಆತಂಕ ಬೇಡ; ತಜ್ಞರ ವರದಿಯಿಂದ ನಿಟ್ಟುಸಿರು ಬಿಟ್ಟ ಜನ!

ಕೆಲ ದೇಶಗಳಿಗೆ ಕೊರೋನಾ ಮೊದಲ ಅಲೆ ಭೀಕರವಾಗಿ ಅಪ್ಪಳಿಸಿತ್ತು. ಆದರೆ ಭಾರತಕ್ಕೆ ಹೆಚ್ಚಿನ ಅಪಾಯ ಇರಲಿಲ್ಲ. ಮೊದಲ ಅಲೆಯನ್ನು ಕಟ್ಟು ನಿಟ್ಟಿನ ನಿಯಮದಿಂದ ಭಾರತ ಯಶಸ್ವಿಯಾಗಿ ನಿಭಾಯಿಸಿತ್ತು. ಪರಿಣಾಮ ಕೊರೋನಾ ಗೆದ್ದು ಬಿಟ್ಟಿದ್ದೇವೆ ಎಂಬ ತಪ್ಪು ಕಲ್ಪನೆಯಲ್ಲಿ ಭಾರತ ಸಹಜ ಸ್ಥಿತಿಗೆ ಮರಳಿತ್ತು. ಪರಿಣಾಮ ಎರಡನೇ ಅಲೆಯನ್ನು ಎದುರಿಸಲು ಸಾಧ್ಯವಾಗದೇ ಇದೀಗ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಫೌಸಿ ಹೇಳಿದ್ದಾರೆ.

ಆಡಳಿತ ವರ್ಗ ದೇಶದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಕೆಲಸ ಮಾಡಬೇಕು. ಜನರು ಈ ಸಂಕಷ್ಟದ ಸಮಯದಲ್ಲಿ ಪರಿಸ್ಥಿತಿಗೆ ತಕ್ಕಂತೆ ವರ್ತಿಸಬೇಕು. ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ಕೊರೋನಾ ಮಾರ್ಗಸೂಚಿಗಳ ಕಟ್ಟು ನಿಟ್ಟಿನ ಪಾಲನೆ, ಕೊರೋನಾ ಲಸಿಕೆ ಪಡೆಯುವಿಕೆ ಸೇರಿದಂತೆ ಹಲವು ಕ್ರಮಗಳಿಂದ ಮಾತ್ರ ಕೊರೋನಾ ನಿಯಂತ್ರಣ ಸಾಧ್ಯ ಎಂದು ಫೌಸಿ ಹೇಳಿದ್ದಾರೆ.

ಹೊಸ ರೂಪಾಂತರಿ ಪತ್ತೆಯಾದ ದೇಶದ ಜೊತೆ ವೈರಸ್ ಹೆಸರು ಜೋಡಿಸುವುದಿಲ್ಲ; WHO ಸ್ಪಷ್ಟನೆ

ಭಾರತದಿಂದ ನಾವೆಲ್ಲರೂ ಪಾಠ ಕಲಿಯಬೇಕಿದೆ. ಇದು ಎಲ್ಲರಿಗೂ ಎಚ್ಚರಿಕೆ ಗಂಟೆಯಾಗಿದೆ. ಕೊರೋನಾ 2ನೇ ಅಥವಾ 3ನೇ ಅಲೆ ಅಂತ್ಯಗೊಂಡರೂ ಕೊರೋನಾ ಅಧ್ಯಾಯ ಮುಗಿದಿದೆ ಎಂದು ಭಾವಿಸುವುದು ತಪ್ಪು. ಕಾರಣ ಇಡಿ ವಿಶ್ವದಿಂದ ಕೊರೋನಾ ಸಂಪೂರ್ಣ ನಿರ್ಮೂಲನೆಯಾಗಬೇಕು. ಇಷ್ಟಾದರೂ ಎಚ್ಚರಿಕೆ ಮರೆತರೆ ಮತ್ತೊಮ್ಮೆ ಅಪಾಯ ತಪ್ಪಿದ್ದಲ್ಲ ಎಂದು ಫೌಸಿ ಹೇಳಿದ್ದಾರೆ.