ಇಲ್ಲಿನ ಬೈಸರನ್‌ ಹುಲ್ಲುಗಾವಲು ಪ್ರದೇಶದಲ್ಲಿ ಉಗ್ರರಿಂದ ಭೀಕರ ನರಮೇಧ ನಡೆದ ಬೆನ್ನಲ್ಲೇ ಜಮ್ಮು ಕಾಶ್ಮೀರಕ್ಕೆ ದೌಡಾಯಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಖುದ್ದು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. 

ಪಹಲ್ಗಾಂ (ಏ.24): ಇಲ್ಲಿನ ಬೈಸರನ್‌ ಹುಲ್ಲುಗಾವಲು ಪ್ರದೇಶದಲ್ಲಿ ಉಗ್ರರಿಂದ ಭೀಕರ ನರಮೇಧ ನಡೆದ ಬೆನ್ನಲ್ಲೇ ಜಮ್ಮು ಕಾಶ್ಮೀರಕ್ಕೆ ದೌಡಾಯಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಖುದ್ದು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ತಮ್ಮ ಎದುರು ನ್ಯಾಯಕ್ಕಾಗಿ ರೋದಿಸಿದ ಸಂತ್ರಸ್ತರನ್ನು ಸಂತೈಸಿ, ‘ಭಾರತ ಭಯೋತ್ಪಾದನೆಯ ಎದುರು ಬಾಗುವುದಿಲ್ಲ’ ಎಂದು ಗುಡುಗಿದ್ದಾರೆ. ಉಗ್ರರ ಗುಂಡಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಬಳಿಕ ಸಂತ್ರಸ್ತರ ಕುಟುಂಬದವರನ್ನು ಭೇಟಿಯಾದರು.

ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವಿನಲ್ಲಿ ಕಂಬನಿಗರೆದು ಗೋಳಾಡುತ್ತಿದ್ದವರ ದುಃಖಕ್ಕೆ ಮಿಡಿದ ಸಚಿವರು, ಮಕ್ಕಳ ತಲೆ ಸವರಿ ಧೈರ್ಯ ತುಂಬಿದರು. ನೆರವಿನ ನಿರೀಕ್ಷೆಯಲ್ಲಿ ತಮ್ಮೆದುರು ಕೈಮುಗಿದ ವೃದ್ಧರಿಗೆ ಅಭಯ ನೀಡಿದರು. ಇದೇ ವೇಳೆ, ‘ದಾಳಿಯ ಹಿಂದಿರುವ ಉಗ್ರರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಭದ್ರತಾ ಪಡೆಗಳು ಅಪರಾಧಿಗಳಿಗೆ ತಕ್ಕ ಪಾಠ ಕಲಿಸಿ, ನ್ಯಾಯ ಒದಗಿಸುತ್ತಾರೆ’ ಎಂದು ಅವರು ಭರವಸೆ ನೀಡಿದರು.

ಮೊದಲಿಗೆ, ಶ್ರೀನಗರದ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಮೃತ ದೇಹಗಳಿಗೆ ಹೂಮಾಲೆ ಅರ್ಪಿಸುವ ಮೂಲಕ ಅಮಿತ್‌ ಶಾ, ಉಗ್ರದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಹೆಲಿಕಾಪ್ಟರ್‌ನಲ್ಲಿ, ದಾಳಿ ನಡೆದ ಬೈಸರನ್‌ಗೆ ತೆರಳಿದ ಅವರು, ಭದ್ರತಾ ಅಧಿಕಾರಿಗಳಿಂದ ಘಟನೆ ಕುರಿತ ಮಾಹಿತಿಗಳನ್ನು ಪಡೆದರು. ಬಳಿಕ ದಿಲ್ಲಿಗೆ ಮರಳಿದರು. ಉಗ್ರದಾಳಿಯ ಮಾಹಿತಿ ಪಡೆಯುತ್ತಿದ್ದಂತೆ ಮಂಗಳವಾರ ಸಂಜೆ ಶ್ರೀನಗರಕ್ಕೆ ಬಂದಿಳಿದಿದ್ದ ಅಮಿತ್‌ ಶಾ, ಲೆಫ್ಟಿನೆಂಟ್ ಗವರ್ನರ್ ಮನೋಜ್‌ ಸಿನ್ಹಾ ಅವರ ಜತೆ ಭದ್ರತೆ ಪರಿಶೀಲನಾ ಸಭೆ ನಡೆಸಿದ್ದರು.

ಭಾರತ ಕುಗ್ಗಲ್ಲ: ಕಾಶ್ಮೀರದ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಭಾರತ ಕುಗ್ಗುವುದಿಲ್ಲ, ಬದಲಾಗಿ ಭಯೋತ್ಪಾದನೆ ವಿರುದ್ಧ ಹೋರಾಟದ ನಮ್ಮ ಸಂಕಲ್ಪ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇಂತಹ ದುಷ್ಟತನದ ವಿರುದ್ಧ ಕೇಂದ್ರ ಸರ್ಕಾರ ಸಮರ್ಥ ಹೋರಾಟ ನಡೆಸಲು ಬದ್ಧವಿದೆ. ಭಯೋತ್ಪಾದನೆಯನ್ನು ನಾವೆಂದೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಭಯೋತ್ಪಾದನೆ ಮಟ್ಟಹಾಕಲು ಕೇಂದ್ರಕ್ಕೆ ಎಲ್ಲ ಸಹಕಾರ: ಮಲ್ಲಿಕಾರ್ಜುನ ಖರ್ಗೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಈ ಭಯೋತ್ಪಾದಕ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಅಮಿತ್ ಶಾ ಅವರು ಉನ್ನತ ಮಟ್ಟದ ಸಭೆ ಕರೆದು ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಗಹನ ಚರ್ಚೆ ನಡೆಸಿದ್ದಾರೆ. ಅಲ್ಲದೇ, ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಮತ್ತು ಅಲ್ಲಿನ ಡಿಜಿಪಿ ಜತೆಗೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದರು.