ಕಳೆದ ಒಂದೂವರೆ ತಿಂಗಳಲ್ಲಿ ಚೀನಾದ ಯುದ್ಧವಿಮಾನಗಳು ವಾಯುಪ್ರದೇಶವನ್ನು ಉಲ್ಲಂಘಿಸಿವೆ. ಚೀನಾದ ಸೇನಾ ಅಧಿಕಾರಿಗಳ ವಿರುದ್ಧ ಭಾರತ ಈ ಕುರಿತಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದೊಂದು ಪ್ರಚೋದನಕಾರಿ ಕೃತ್ಯ ಎಂದು ಬಣ್ಣಿಸಿದೆ. ವಿಶೇಷ ಸೇನಾ ಮಾತುಕತೆಯ ಕುರಿತು ಸರ್ಕಾರಿ ಮೂಲಗಳು ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿವೆ. 

ನವದೆಹಲಿ (ಆ.5): ತೈವಾನ್‌ ಹಾಗೂ ಚೀನಾ ನಡುವಿನ ಬಿಕ್ಕಟ್ಟು ಉಲ್ಬಣವಾಗಿರುವ ನಡುವೆಯೇ ಭಾರತ ಹಾಗೂ ಚೀನಾ ನಡುವೆ ವಿಶೇಷ ಮಾತುಕತೆ ನಡೆದಿದೆ. ಮಂಗಳವಾರ, ಪೂರ್ವ ಲಡಾಖ್‌ನ ಚುಶುಲ್ ಮೊಲ್ಡೊದಲ್ಲಿ ಭಾರತ ಮತ್ತು ಚೀನಾ ನಡುವೆ ವಿಶೇಷ ಮಾತುಕತೆ ನಡೆದಿದೆ. ಇದರಲ್ಲಿ ಕಳೆದ 45 ದಿನಗಳಲ್ಲಿ ಚೀನಾದ ವಾಯುಸೇನೆ ವಾಯು ಮಿತಿಯನ್ನು ಉಲ್ಲಂಘಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಚೀನಾದ ಯುದ್ಧವಿಮಾನಗಳು ಭಾರತದ ವಾಯುಗಡಿಯನ್ನು ಪ್ರವೇಶ ಮಾಡಿದ ಸಂದರ್ಭದಲ್ಲಿ ಭಾರತದ ವಾಯುಪಡೆಯ ಯುದ್ಧವಿಮಾನಗಳು ಕಾರ್ಯೋನ್ಮುಖವಾಗಿ ಈ ವಿಮಾನಗಳನ್ನು ಅಲ್ಲಿಂದ ಓಡಿಸಿದ್ದವು. ವಿಶ್ವಾಸ ವೃದ್ಧಿಸುವ ಕ್ರಮವಾಗಿ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) 10 ಕಿಮೀ ವ್ಯಾಪ್ತಿಯಲ್ಲಿ ಯುದ್ಧ ವಿಮಾನ ಹಾರಾಟಕ್ಕೆ ಭಾರತ ಮತ್ತು ಚೀನಾ ಒಪ್ಪಿಕೊಂಡಿದ್ದವು. ಆದರೆ ಚೀನಾದ ವಿಮಾನಗಳು ಕಳೆದ ಒಂದೂವರೆ ತಿಂಗಳಲ್ಲಿ ಅದನ್ನು ಉಲ್ಲಂಘನೆ ಮಾಡಿವೆ. ಚೀನಾದ ಸೇನಾ ಅಧಿಕಾರಿಗಳ ವಿರುದ್ಧ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದೊಂದು ಪ್ರಚೋದನಕಾರಿ ಕೃತ್ಯ ಎಂದು ಬಣ್ಣಿಸಿದೆ. ವಿಶೇಷ ಸೇನಾ ಮಾತುಕತೆಯ ಕುರಿತು ಸರ್ಕಾರಿ ಮೂಲಗಳು ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿವೆ. ವಾಯುಪ್ರದೇಶ ಉಲ್ಲಂಘನೆಯಂತಹ ಪ್ರಚೋದನಕಾರಿ ಚಟುವಟಿಕೆಗಳಿಂದ ದೂರವಿರುವಂತೆ ಭಾರತದ ಚೀನಾದ ಸೇನೆಗೆ ಹೇಳಿದೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಮಾತುಕತೆಯಲ್ಲಿ ಏರ್ ಕಮಾಂಡರ್ ಶರ್ಮಾ ಉಪಸ್ಥಿತರಿದ್ದರು, ವಿಶೇಷ ಸೇನಾ ಮಾತುಕತೆಯಲ್ಲಿ ಉಭಯ ದೇಶಗಳ ವಾಯುಪಡೆ ಅಧಿಕಾರಿಗಳು ಭಾಗವಹಿಸಿದ್ದರು. ಇವರಲ್ಲದೆ ಸೇನಾಧಿಕಾರಿಗಳೂ ಉಪಸ್ಥಿತರಿದ್ದರು. ಏರ್‌ ಕಮಾಂಡರ್‌ ಅಮಿತ್‌ ಶರ್ಮಾ ಭಾರತದ ಕಡೆಯಿಂದ ಉಪಸ್ಥಿತರಿದ್ದರೆ, ಚೀನಾದ ಕಡೆಯಿಂದ ಇದೇ ಸ್ಥರದ ಅಧಿಕಾರಿ ಭಾಗಿಯಾಗಿದ್ದವು. ಲೆಫ್ಟಿನೆಂಟ್ ಜನರಲ್ ಎ ಸೆಂಗುಪ್ತಾ ನೇತೃತ್ವದ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಅಡಿಯಲ್ಲಿ ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಯೊಬ್ಬರು ಭಾರತೀಯ ಸೇನೆಯನ್ನು ಪ್ರತಿನಿಧಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ತೈವಾನ್‌ ಭಾಗದಲ್ಲಿ ಉದ್ವಿಗ್ನ: ತೈವಾನ್ ದೇಶಕ್ಕೆ ಅಮೆರಿಕದ ಸಂಸತ್‌ನ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಭೇಟಿ ನೀಡಿದ್ದಕ್ಕೆ ಕೆಂಡಾಮಂಡಲವಾಗಿರುವ ಚೀನಾ ಗುರುವಾರದಿಂದ ತೈವಾನ್‌ ಬಳಿಯ ಆರು ಭಾಗದಲ್ಲಿ ಸೇನಾ ಕಸರತ್ತು ಆರಂಭಿಸಿತ್ತು. ಚೀನಾ ಹಾರಿಸಿದ್ದ 11 ಡಾಂಗ್‌ಫೆಂಗ್‌ ಖಂಡಾಂತರ ಕ್ಷಿಪಣಿಗಳ ಪೈಕಿ 5 ಕ್ಷಿಪಣಿಗಳು ಜಪಾನ್‌ನ ವಿಶೇಷ ಆರ್ಥಿಕ ವಲಯದಲ್ಲಿ ಬಿದ್ದಿದ್ದವು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಜಪಾನ್‌, ಈ ತಕ್ಷಣವೇ ಯುದ್ಧಭ್ಯಾಸವನ್ನು ನಿಲ್ಲಿಸುವಂತೆ ಚೀನಾಕ್ಕೆ ಆಗ್ರಹಿಸಿತ್ತು. ಅದರೊಂದಿಗೆ ಜಪಾನ್‌ನಲ್ಲಿರುವ ಚೀನಾ ರಾಯಭಾರಿಯನ್ನು ಕರೆದು ತನ್ನ ಆಕ್ರೋಶ ಹೊರಹಾಕಿತ್ತು.

ತೈವಾನ್‌ ಕಡೆ 5 ಕ್ಷಿಪಣಿ ಹಾರಿಸಿದ ಚೀನಾ, ಜಪಾನ್‌ನ ಆರ್ಥಿಕ ವಲಯದಲ್ಲಿ ಬ್ಲಾಸ್ಟ್‌!

ಹವಮಾನ, ಸೇನಾ ಮಾತುಕತೆ ರದ್ದು ಮಾಡಿದ ಚೀನಾ: ನ್ಯಾನ್ಸಿ ಪೆಲೋಸಿ ಭೇಟಿ ನೀಡಿದ ಬೆನ್ನಲ್ಲಿಯೇ ಅಮೆರಿಕದ ಜೊತೆಗಿನ ಹವಾಮಾನ ಹಾಗೂ ಸೇನಾ ಮಾತುಕತೆಯನ್ನು ಚೀನಾ ರದ್ದು ಮಾಡಿದೆ. ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯ ನಂತರ ಹಲವಾರು ರಕ್ಷಣಾ ಸಭೆಗಳನ್ನು ರದ್ದುಗೊಳಿಸುವುದಾಗಿ ಮತ್ತು ಯುಎಸ್ ಜೊತೆಗಿನ ಪ್ರಮುಖ ಹವಾಮಾನ ಮಾತುಕತೆಗಳನ್ನು ಸ್ಥಗಿತಗೊಳಿಸುವುದಾಗಿ ಚೀನಾ ಶುಕ್ರವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇದರೊಂದಿಗೆ ನ್ಯಾನ್ಸಿ ಪೆಲೋಸಿ ಅವರ ಮೇಲೆ ಚೀನಾ ಅನಿರ್ದಿಷ್ಟ ನಿರ್ಬಂಧಗಳನ್ನು ಘೋಷಿಸಿದೆ. ಚೀನಾದ ಕಳವಳವನ್ನು ಪೆಲೋಸಿ ಕಡೆಗಣಿಸಿದ್ದಾರೆ ಮತ್ತು ಬೀಜಿಂಗ್ ಹೇಳಿಕೊಳ್ಳುವ ಸ್ವಯಂ-ಆಡಳಿತ ದ್ವೀಪಕ್ಕೆ ತನ್ನ ಭೇಟಿಗೆ ದೃಢವಾದ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ಹೇಳಿಕೆಯು ಶುಕ್ರವಾರ ಹೇಳಿದೆ.

ಚೀನಾದ ಪತ್ರಕರ್ತನನ್ನು ಮದುವೆಯಾಗಿದ್ದಾರಾ ಅಮೆರಿಕದ ನ್ಯಾನ್ಸಿ ಪೆಲೋಸಿ..?

ತೈವಾನ್‌ ಅನ್ನು ಪ್ರತ್ಯೇಕಿಸಲು ಬಿಡೋದಿಲ್ಲ: ಚೀನಾ ತಮ್ಮ ಮೇಲೆ ನಿರ್ಬಂಧ ಹೇರಿದ ಬೆನ್ನಲ್ಲಿಯೇ ಮಾತನಾಡಿರುವ ಸ್ಪೀಕರ್‌ ನ್ಯಾನ್ಸಿ ಪೆಲೋಸಿ, ಯಾವುದೇ ಕಾರಣಕ್ಕೂ ತೈವಾನ್‌ ದೇಶವನ್ನು ಪ್ರತ್ಯೇಕ ಮಾಡಲು ಚೀನಾಗೆ ಬಿಡೋದಿಲ್ಲ ಎಂದು ಹೇಳಿದ್ದಾರೆ. ತೈವಾನ್‌ ದೇಶಕ್ಕೆ ಬೇರೆ ದೇಶದ ಪ್ರತಿನಿಧಿಗಳು ಭೇಟಿ ನೀಡುವುದು ಹಾಗೂ ಮಾತುಕತೆ ಮಾಡುವುದನ್ನು ಚೀನಾ ನಿರ್ಬಂಧಿಸಬಹುದು. ಆದರೆ, ಇದರ ಯಾವ ಕಾರಣದಿಂದಲೂ ತೈವಾನ್‌ ಅನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಪೆಲೋಸಿ ಹೇಳಿದ್ದಾರೆ.