ಚೀನಾದ ಪತ್ರಕರ್ತನನ್ನು ಮದುವೆಯಾಗಿದ್ದಾರಾ ಅಮೆರಿಕದ ನ್ಯಾನ್ಸಿ ಪೆಲೋಸಿ..?
ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದು ಇಂಟರ್‌ನೆಟ್‌ನಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದು, ಈ ಹಿನ್ನೆಲೆ ಅವರ ಕುರಿತು ಸಾಕಷ್ಟು ಸುದ್ದಿಗಳು ಸಹ ಹರಿದಾಡುತ್ತಿದೆ. ಈಗ ಅವರು ಚೀನಾದ ಪತ್ರಕರ್ತನನ್ನು ಮದುವೆಯಾಗಿದ್ದರು ಎಂದೂ ಹೇಳಲಾಗುತ್ತಿದ್ದು, ಈ ಸಂಬಂಧದ ಫೋಟೋವೊಂದು ವೈರಲ್ ಆಗಿದೆ.
ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟಿಟೀವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದು ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಚೀನಾ ಬಳಿಯ ದ್ವೀಪ ರಾಷ್ಟ್ರವಾದ ತೈವಾನ್, ತನ್ನದೇ ಭೂ ಪ್ರದೇಶ ಎನ್ನುವುದು ಕ್ಸಿ ಜಿನ್‌ಪಿಂಗ್ ಸರ್ಕಾರದ ವಾದ. ಈ ಹಿನ್ನೆಲೆ ನ್ಯಾನ್ಸಿ ಪೆಲೋಸಿ ಅಲ್ಲಿಗೆ ಭೇಟಿ ನೀಡಿದ್ದಕ್ಕೆ ಚೀನಾ ಕೆಂಡ ಕಾರುತ್ತಿದೆ. ಆದರೆ, ಈ ನಡುವೆ ನ್ಯಾನ್ಸಿ ಪೆಲೋಸಿ ಚೀನಾ ಪತ್ರಕರ್ತರೊಬ್ಬರನ್ನು ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು, ಅವರಿಬ್ಬರ ಫೋಟೋ ವೈರಲ್ ಆಗುತ್ತಿದೆ.
ನ್ಯಾನ್ಸಿ ಪೆಲೋಸಿ ಅವರದ್ದು ಎನ್ನಲಾದ ಮದುವೆಯ ಫೋಟೋವೊಂದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಅಮೆರಿಕದ ಸ್ಪೀಕರ್ ಅವರೊಂದಿಗೆ ಚೀನಾದ ಪತ್ರಕರ್ತ ಹು ಜಿಕ್ಸಿನ್ ಒಟ್ಟಾಗಿರುವ ಫೋಟೋ ವೈರಲ್ ಆಗುತ್ತಿದೆ. ಆದರೆ, ಇದು ಕಟ್ಟು ಕಥೆ ಎಂಬುದು ಸಾಬೀತಾಗಿದೆ. ಅಮೆರಿಕದ ಈ ಸ್ಪೀಕರ್ ತೈವಾನ್‌ಗೆ ಭೇಟಿ ನೀಡಿರುವುದು ಇಂಟರ್‌ನೆಟ್‌ನಲ್ಲಿ ಸಹ ಚರ್ಚೆ ಆಗುತ್ತಿದೆ. ತೈವಾನ್‌ಗೆ ಅಮೆರಿಕದ ಬೆಂಬಲ, ಈ ಭೇಟಿಯ ಪರ ಹಾಗೂ ವಿರೋಧದ ಬಗ್ಗೆ ಚರ್ಚೆಯೂ ನಡೆಯುತ್ತಿದೆ. ಇದರೊಂದಿಗೆ ಸುಳ್ಳು ಹೇಳಿಕೆಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪೈಕಿ ಅವರ ಲವ್ ಮ್ಯಾರೇಜ್ ಎನ್ನಲಾದ ಸುದ್ದಿ ಹೆಚ್ಚು ಪ್ರಚಲಿತದಲ್ಲಿದೆ.
ನ್ಯಾನ್ಸಿ ಪೆಲೋಸಿ ಭೇಟಿ ಬಳಿಕ ತೈವಾನ್ ಬಳಿ ಮಿಲಿಟರಿ ಕಸರತ್ತು ಆರಂಭಿಸಿದ ಚೀನಾ
ಫೋಟೋ ಎಡಿಟ್..!
ನ್ಯಾನ್ಸಿ ಪೆಲೋಸಿ ಹಾಗೂ ಹು ಕ್ಸಿಜಿನ್ ಅವರು ಯುವ ವಯಸ್ಸಿನಲ್ಲಿದ್ದಾಗ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ನ್ಯಾನ್ಸಿ ಪೆಲೋಸಿ ಹಾಗೂ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಮಾಜಿ ಎಡಿಟರ್ ಇನ್ ಚೀಫ್ ಅವರು ಜತೆಗಿರುವುದನ್ನು ತೋರಿಸುತ್ತದೆ. ಆದರೆ, ಇದು ಫೋಟೋಶಾಪ್ ಆಗಿದ್ದು, ಎರಡು ಹಳೆಯ ಫೋಟೋಗಳನ್ನು ಒಟ್ಟಿಗೆ ಜೋಡಿಸಿರುವುದು ಸಾಬೀತಾಗಿದೆ.
ಈ ಫೊಟೋದಲ್ಲಿರುವುದು ನ್ಯಾನ್ಸಿ ಪೆಲೋಸಿಯದ್ದೇ. ಆದರೆ, ಅವರು ಚೀನಾ ಪತ್ರಕರ್ತನ ಜತೆಗಿರಲಿಲ್ಲ. ಅವರ ಕುಟುಂಬದೊಂದಿಗಿನ ಫೋಟೋವನ್ನು ಇದರಲ್ಲಿ ಸೇರಿಸಲಾಗಿದೆ. ಈ ಫೋಟೋವನ್ನು ಈ ಹಿಂದೆ ಫ್ಲಿಕ್ಕರ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ನ್ಯಾನ್ಸಿ ಪೆಲೋಸಿ, ನಾನು ಯುವಕಿಯಾಗಿದ್ದಾಗ ಕುಟುಂಬದ ಜತೆಗೆ ಎಂದು ಫೋಟೋವನ್ನು ಹಂಚಿಕೊಂಡಿದ್ದರು.
ಇನ್ನು, ಫೋಟೋಶಾಪ್ ಮಾಡಲಾದ ಆ ಫೋಟೋದಲ್ಲಿ ಹು ಕ್ಸಿಜಿನ್ ಯುವಕರಾಗಿದ್ದ ಫೋಟೋ ಇದೆ. ಪತ್ರಕರ್ತರೇ ಒಮ್ಮೆ ಟ್ವೀಟ್ ಮಾಡಿದ್ದ ಆ ಫೋಟೋವನ್ನು ನ್ಯಾನ್ಸಿ ಪೆಲೋಸಿ ಅವರೊಂದಿಗೆ ಹೊಂದಿಸಿ ಫೋಟೋಶಾಪ್ ಮಾಡಿದ್ದಾರೆ. ಅಲ್ಲದೆ, ಇವರಿಬ್ಬರು ಪ್ರೇಮಿಸಿ ಮದುವೆಯಾಗಿದ್ದಾರೆ ಎಂದು ವೈರಲ್ ಆಗುತ್ತಿದೆ.
ಚೀನಾಗೆ ಸೆಡ್ಡು ನೀಡಲು ಭಾರತ - ಅಮೆರಿಕದಿಂದ ಮತ್ತೆ ಜಂಟಿ ಸಮರಾಭ್ಯಾಸ
ಕ್ಸಿಜಿನ್‌ಗಿಂತ 20 ವರ್ಷ ದೊಡ್ಡವರು ನ್ಯಾನ್ಸಿ ಪೆಲೋಸಿ..!
ರಿವರ್ಸ್ ಇಮೇಜ್ ಸರ್ಚ್ ಮೂಲಕ ಈ ಎರಡೂ ಫೋಟೋಗಳನ್ನು ಫೋಟೋಶಾಪ್ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಅಲ್ಲದೆ, ಪೆಲೋಸಿಗೆ ಸದ್ಯ 82 ವರ್ಷವಾಗಿದ್ದರೆ, ಹು ಕ್ಸಿಜಿನ್ ಅವರು ಪೆಲೋಸಿ ಅವರಿಗಿಂತ 20 ವರ್ಷ ಕಿರಿಯರು ಎಂದು ತಿಳಿದುಬಂದಿದೆ. 1960 ರಲ್ಲಿ ತೆಗೆದ ಫೋಟೋವೊಂದರಲ್ಲಿ ಜಾನ್ ಎಫ್. ಕೆನ್ನೆಡಿ ಅವರೊಂದಿಗೆ ನ್ಯಾನ್ಸಿ ಪೆಲೋಸಿ ಇದ್ದಾರೆ. ಅವರ ಮದುವೆಯ ಫೋಟೋ ಎಂದು ಹೇಳಲಾದ ಫೋಟೋ ಹಾಗೂ ಜಾನ್ ಎಫ್. ಕೆನ್ನೆಡಿ ಎರಡೂ ಫೋಟೋವನ್ನು ನೋಡಿದರೆ ನಾವು ಅವರ ವಯಸ್ಸಿನಲ್ಲಿ ಸಾಮ್ಯತೆಯನ್ನು ನೋಡಬಹುದು. ಆದರೆ, ಆ ವೇಳೆಗೆ ಕ್ಸಿಜಿನ್ ಇನ್ನೂ ಆಗ ತಾನೇ ಹುಟ್ಟಿದ್ದರು ಎಂದು ಹೇಳಬಹುದು.
ಪೆಲೋಸಿ ತೈವಾನ್‌ನಿಂದ ಹೋಗುವಾಗ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಅವರ ವಿಮಾನಕ್ಕೆ ಶೂಟ್ ಮಾಡಬೇಕು ಎಂದು ಕ್ಸಿಜಿನ್ ಹೇಳಿದ್ದರು. ಈ ಹಿನ್ನೆಲೆ ಅವರು ಪೆಲೋಸಿಯ ವಿರೋಧಿ ಎನ್ನಬಹುದಾಗಿದ್ದು, ಇವರಿಬ್ಬರ ಹಳೆಯ ಫೋಟೋವನ್ನು ಫೋಟೋಶಾಪ್ ಮಾಡಿ ಇಬ್ಬರೂ ಮದುವೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವು ನೆಟ್ಟಿಗರು ಹರಿಬಿಟ್ಟಿದ್ದಾರೆ ಎಂದು ನಿರ್ಧರಿಸಬಹುದು.