ತೆರಿಗೆ ಹೇರಿಕೆ ಸೇರಿದಂತೆ ವ್ಯಾಪಾರಕ್ಕೆ ಸಂಬಂಧಿಸಿದ ಅಮೆರಿಕ-ಭಾರತ ನಡುವಿನ ಮಾತುಕತೆ ಇನ್ನೂ ಪ್ರಗತಿಯಲ್ಲಿದ್ದು, 6ನೇ ಸುತ್ತಿನ ಮಾತುಕತೆಗಾಗಿ ಅಮೆರಿಕದ ಮುಖ್ಯ ಸಂಧಾನಕಾರ ಬ್ರೆಂಡನ್ ಲಿಂಚ್ ಸೋಮವಾರ ರಾತ್ರಿ ಭಾರತಕ್ಕೆ ಆಗಮಿಸಿದ್ದಾರೆ. ಇವರು ಭಾರತದ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಲಿದ್ದಾರೆ.
ನವದೆಹಲಿ: ತೆರಿಗೆ ಹೇರಿಕೆ ಸೇರಿದಂತೆ ವ್ಯಾಪಾರಕ್ಕೆ ಸಂಬಂಧಿಸಿದ ಅಮೆರಿಕ-ಭಾರತ ನಡುವಿನ ಮಾತುಕತೆ ಇನ್ನೂ ಪ್ರಗತಿಯಲ್ಲಿದ್ದು, 6ನೇ ಸುತ್ತಿನ ಮಾತುಕತೆಗಾಗಿ ಅಮೆರಿಕದ ಮುಖ್ಯ ಸಂಧಾನಕಾರ ಬ್ರೆಂಡನ್ ಲಿಂಚ್ ಸೋಮವಾರ ರಾತ್ರಿ ಭಾರತಕ್ಕೆ ಆಗಮಿಸಿದ್ದಾರೆ. ಇವರು ಭಾರತದ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಲಿದ್ದಾರೆ.
ರಷ್ಯಾದಿಂದ ತೈಲ ಆಮದನ್ನು ತಗ್ಗಿಸದ ಕಾರಣ ಟ್ರಂಪ್ ಭಾರತದ ಮೇಲೆ ಶೇ.50ರಷ್ಟು ತೆರಿಗೆ ಹೇರಿರುವ ಹೊರತಾಗಿಯೂ ಉಭಯ ದೇಶಗಳ ನಡುವೆ ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆ ನಡೆಯುತ್ತಿದೆ. ಈಗಾಗಲೇ ಈ ಸಂಬಂಧ 5 ಸುತ್ತಿನ ಮಾತುಕತೆಗಳು ನಡೆದಿದ್ದು, ಆ.25ರಿಂದ 29ರ ವರೆಗೆ 6ನೇ ಸುತ್ತಿನ ಸಭೆ ನಡೆಯಬೇಕಿತ್ತು. ಆದರೆ ಶೇ.50ರಷ್ಟು ತೆರಿಗೆ ಹೇರಿಕೆಯಿಂದಾಗಿ ಅದು ಮುಂದೂಡಿಕೆಯಾಗಿದ್ದು, ಈಗ ನಡೆಯಲಿದೆ.
ಪ್ರಸ್ತುತ ಜಾರಿಯಲ್ಲಿರುವ ತೆರಿಗೆಯಿಂದ ಭಾರತದ ರಫ್ತಿಗೆ ಭಾರೀ ಪೆಟ್ಟು ಬಿದ್ದಿದ್ದು, ಅದು ಮೊದಲಿನಂತಾಗಲು ಈ ಮಾತುಕತೆ ಅತ್ಯಗತ್ಯ. ಇತ್ತೀಚೆಗೆ ಟ್ರಂಪ್‌ರ ವರ್ತನೆಯಲ್ಲೂ ಬದಲಾವಣೆಯಾಗುತ್ತಿದ್ದು, ಅವರು ಭಾರತದ ಪರ ಕೊಂಚ ಮೃದುಧೋರಣೆ ತೋರಲು ಆರಂಭಿಸಿದ್ದಾರೆ. ಇದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೂ ಸ್ಪಂದಿಸಿದ್ದಾರೆ. ಹೀಗಿರುವಾಗ ನಡೆಯಲಿರುವ ಈ ಸಭೆ ಭಾರತಕ್ಕೆ ಲಾಭದಾಯಕವಾಗುವ ನಿರೀಕ್ಷೆಯಿದೆ.
ನವರೋ ಉದ್ಧಟತನ:
ಒಂದು ಕಡೆ ಅಧ್ಯಕ್ಷ ಟ್ರಂಪ್ ಭಾರತದತ್ತ ಸ್ನೇಹಹಸ್ತ ಚಾಚಿ ಸಂಬಂಧ ಸುಧಾರಣೆಯನ್ನು ಎದುರುನೋಡುತ್ತಿದ್ದರೆ, ಅವರ ಆರ್ಥಿಕ ಸಲಹೆಗಾರ ಪೀಟರ್ ನವರೋ ಮಾತ್ರ ತಮ್ಮ ಉದ್ಧಟತನವನ್ನು ಬಿಟ್ಟಿಲ್ಲ. ಇದೀಗ ಭಾರತ-ಅಮೆರಿಕ ಮಾತುಕತೆಯ ಬಗ್ಗೆ ಮಾತನಾಡಿ, ‘ಭಾರತವೇ ಮಣಿದು ಮಾತುಕತೆಗೆ ಬರುತ್ತಿದೆ’ ಎಂದು ಹೇಳಿದ್ದಾರೆ.
ಚೀನಾ ಮೇಲೆ ಶೇ.50-100 ತೆರಿಗೆ : ನ್ಯಾಟೋಗೆ ಟ್ರಂಪ್ ಕರೆ
ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಸುತ್ತಿರುವ ಚೀನಾ ಮೇಲೆ ಶೇ.50ರಿಂದ 100ರಷ್ಟು ತೆರಿಗೆ ವಿಧಿಸುವಂತೆ, ರಷ್ಯಾದಿಂದ ತೈಲ ಖರೀದಿಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ನ್ಯಾಟೋ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯಾಟೋ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.
ಅಮೆರಿಕವು ರಷ್ಯಾ ವಿರುದ್ಧ ನಿರ್ಣಾಯಕ ನಿರ್ಬಂಧ ಹೇರಲು ಸಿದ್ಧವಾಗಿದೆ. ಆದರೆ, ಇದಕ್ಕಾಗಿ ಯುರೋಪಿನ ಸಹಯೋಗಿ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಬೇಕು ಮತ್ತು ಈ ಸಮನ್ವಯದ ಕ್ರಮದಲ್ಲಿ ಕೈಜೋಡಿಸಬೇಕು. ಉಕ್ರೇನ್-ರಷ್ಯಾ ಯುದ್ಧ ಮುಕ್ತಾಯಗೊಳ್ಳುವವರೆಗೆ ಚೀನಾದ ಮೇಲೆ ಭಾರೀ ತೆರಿಗೆ ಹಾಕಬೇಕು ಎಂದು ತಮ್ಮ ಸಾಮಾಜಿಕ ಜಾಲತಾಣ ಟ್ರುಥ್ ಸೋಷಿಯಲ್‌ನಲ್ಲಿ ಎಲ್ಲಾ ನ್ಯಾಟೋ ದೇಶಗಳು ಹಾಗೂ ವಿಶ್ವವನ್ನುದ್ದೇಶಿಸಿ ಬರೆದುಕೊಂಡಿದ್ದಾರೆ.
‘ನೀವು ಯಾವಾಗ ಹೇಳುತ್ತೀರೋ ಆಗ ನಾನು ನಿರ್ಬಂಧ ವಿಧಿಸಲು ಸಿದ್ಧನಿದ್ದೇನೆ. ನ್ಯಾಟೋ ಒಂದು ಗುಂಪಾಗಿ ಚೀನಾದ ಮೇಲೆ ದಂಡನೆಯ ಕ್ರಮವಾಗಿ ತೆರಿಗೆ ವಿಧಿಸಬೇಕು. ಚೀನಾವು ರಷ್ಯಾದ ಮೇಲೆ ಭಾರೀ ನಿಯಂತ್ರಣ ಹೊಂದಿದೆ. ಈ ತೆರಿಗೆ ಯುದ್ಧ ಮುಗಿಯುವವರೆಗೆ ಮತ್ತು ಸೇನೆಯನ್ನು ಸಂಪೂರ್ಣವಾಗಿ ವಾಪಸ್ ಪಡೆದು ಶಾಂತಿ ಸ್ಥಾಪನೆಯಾಗುವವರೆಗೆ ಮುಂದುವರಿಯಬೇಕು’ ಎಂದು ಅವರು ಹೇಳಿದ್ದಾರೆ.


