ಭಾರತವೇನಾದರೂ ಬಲಿಷ್ಠವಾದರೆ ಏನಾಗಬಹುದು ಎಂಬ ಆತಂಕದಿಂದ ನಮ್ಮ ದೇಶದ ಮೇಲೆ ತೆರಿಗೆ ಹಾಕಲಾಗಿದೆ. ಇಂಥ ಕ್ರಮಗಳು ಸ್ವಾರ್ಥದಿಂದ ಪ್ರೇರಿತವಾಗಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಖ್ಯಸ್ಥ ಮೋಹನ್‌ ಭಾಗವತ್‌ ಅಸಮಾಧಾನ ಹೊರಹಾಕಿದ್ದಾರೆ.

ನಾಗ್ಪುರ (ಸೆ.13): ಭಾರತವೇನಾದರೂ ಬಲಿಷ್ಠವಾದರೆ ಏನಾಗಬಹುದು ಎಂಬ ಆತಂಕದಿಂದ ನಮ್ಮ ದೇಶದ ಮೇಲೆ ತೆರಿಗೆ ಹಾಕಲಾಗಿದೆ. ಇಂಥ ಕ್ರಮಗಳು ಸ್ವಾರ್ಥದಿಂದ ಪ್ರೇರಿತವಾಗಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಖ್ಯಸ್ಥ ಮೋಹನ್‌ ಭಾಗವತ್‌ ಅಸಮಾಧಾನ ಹೊರಹಾಕಿದ್ದಾರೆ. ಈ ಮೂಲಕ ಶೇ.50ರಷ್ಟು ತೆರಿಗೆ ವಿರುದ್ಧ ಅಮೆರಿಕದ ಹೆಸರೆತ್ತದೆ ತಿರುಗೇಟು ನೀಡಿದ್ದಾರೆ.

ಇಲ್ಲಿ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅವರು, ಒಂದು ವೇಳೆ ಭಾರತ ಬೆಳವಣಿಗೆ ಹೊಂದಿದರೆ ನಮ್ಮ ಸ್ಥಿತಿ ಏನಾಗಬಹುದು ಎಂಬ ಆತಂಕ ಜಗತ್ತಿನ ಜನರಿಗಿದೆ. ಇದೇ ಕಾರಣಕ್ಕೆ ಭಾರತದ ವಸ್ತುಗಳ ಮೇಲೆ ತೆರಿಗೆ ಹಾಕಲಾಗಿದೆ. ಆದರೆ ನಾವು ಅಂಥದ್ದು ಏನೂ ಮಾಡಿಲ್ಲ. ಅವರು ಏಳು ಸಮುದ್ರದ ಆಚೆ ಇರುವಾಗ, ಯಾವುದೇ ನೇರ ಸಂಪರ್ಕವೂ ಇಲ್ಲದಾಗ ಆತಂಕ ಪಡುತ್ತಿರುವುದು ಯಾಕೆ ಎಂದು ಇದೇ ವೇಳೆ ಪ್ರಶ್ನಿಸಿದರು

ಯಾವ ಶತ್ರುವೂ ಇರುವುದಿಲ್ಲ

ಜನ ಹಾಗೂ ದೇಶಗಳು ನೈಜತೆ ಅರ್ಥಮಾಡಿಕೊಳ್ಳದ ಹೊರತು ಸಮಸ್ಯೆ ಎದುರಿಸುತ್ತಲೇ ಇರಬೇಕಾಗುತ್ತದೆ. ಸಹಾನುಭೂತಿ ಮತ್ತು ಆತಂಕ ಮೆಟ್ಟಿನಿಂತಾಗ ನಮಗೆ ಯಾವ ಶತ್ರುವೂ ಇರುವುದಿಲ್ಲ. ಒಂದು ವೇಳೆ ಮನುಷ್ಯರು ‘ನಾನು’ ಎಂಬುದನ್ನು ಬಿಟ್ಟು ‘ನಾವು’ ಎಂಬ ಮನೋಭಾವ ಬೆಳೆಸಿಕೊಂಡರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಪರೋಕ್ಷವಾಗಿ ಅಮೆರಿಕಕ್ಕೆ ಟಾಂಗ್‌ ನೀಡಿದರು.

ಜಗತ್ತು ಇದೀಗ ಪರಿಹಾರಗಳನ್ನು ಹುಡುಕುತ್ತಿದೆ. ಸರಿಯಾದ ದೃಷ್ಟಿಕೋನದ ಕೊರತೆಯಿಂದಾಗಿ ಜಗತ್ತು ಮುಂದಿನ ದಾರಿ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದ ಅವರು, ಭಾರತವು ವಿಶ್ವದ ಸಮಸ್ಯೆಗೆ ಪರಿಹಾರ ಹುಡುಕುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ವಿಶ್ವವನ್ನು ಬೆಳವಣಿಗೆಯ ಪಥದಲ್ಲಿ ಕೊಂಡೊಯ್ಯಲಿದೆ ಎಂದರು.