ನವದೆಹಲಿ(ಸೆ.07): ಚೀನಾ ಜತೆಗೆ ಗಡಿ ಸಂಘರ್ಷ ಮುಂದುವರಿದಿರುವಾಗಲೇ, ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವದ್ದಾಗಿರುವ ರಸ್ತೆಯೊಂದನ್ನು ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಸದ್ದಿಲ್ಲದೆ ಬಹುತೇಕ ಪೂರ್ಣಗೊಳಿಸಿದೆ. ತುರ್ತು ಸಂದರ್ಭಗಳಲ್ಲಿ ಸೇನಾ ಪಡೆಗಳನ್ನು ಅತ್ಯಂತ ತ್ವರಿತವಾಗಿ ಗಡಿಗೆ ರವಾನಿಸಲು ಈ ರಸ್ತೆ ಸಹಕಾರಿಯಾಗಲಿದೆ.

ಮನಾಲಿಯಿಂದ ಲೇಹ್‌ಗೆ ತಲುಪಲು ಹಾಲಿ 12ರಿಂದ 14 ತಾಸುಗಳಷ್ಟುಸುದೀರ್ಘ ಸಮಯ ಹಿಡಿಯುತ್ತಿದೆ. 258 ಕಿ.ಮೀ. ಉದ್ದವಿರುವ ನಿಮ್ಮು- ಪದಂ- ದಾರ್ಚಾ ರಸ್ತೆಯ ಮೂಲಕ ಹೋದರೆ 6ರಿಂದ 7 ತಾಸುಗಳಲ್ಲಿ ಗಮ್ಯ ತಲುಪಬಹುದು. ಸದ್ಯ ಶ್ರೀನಗರ- ಕಾರ್ಗಿಲ್‌- ಲೇಹ್‌ ಹಾಗೂ ಮನಾಲಿ ಸರ್ಚು- ಲೇಹ್‌ ರಸ್ತೆಗಳನ್ನು ಯೋಧರು ಬಳಸುತ್ತಿದ್ದಾರೆ. ಆದರೆ ಈ ರಸ್ತೆಗಳು ಅಂತಾರಾಷ್ಟ್ರೀಯ ಗಡಿಗೆ ಸನಿಹದಲ್ಲಿರುವುದರಿಂದ ಶತ್ರುಪಡೆಗಳು ಸುಲಭವಾಗಿ ಕಣ್ಣಿಡಬಹುದಾಗಿದೆ. ಆದರೆ ಹೊಸ ರಸ್ತೆ ಶತ್ರುಪಡೆಗಳ ಕಣ್ಣಿಗೆ ಕಾಣಿಸುವುದಿಲ್ಲ.

ಉಳಿದ ಎರಡು ರಸ್ತೆಗಳನ್ನು ಪ್ರತಿ ವರ್ಷ ನವೆಂಬರ್‌ನಿಂದ 6-7 ತಿಂಗಳ ಕಾಲ ಹಿಮಪಾತದ ಕಾರಣ ಮುಚ್ಚಲಾಗುತ್ತದೆ. ಆದರೆ ಹೊಸ ರಸ್ತೆಯನ್ನು ವರ್ಷವಿಡೀ ಬಳಸಬಹುದು. 30 ಕಿ.ಮೀ. ಕೆಲಸ ಮಾತ್ರ ಬಾಕಿ ಇದ್ದು, ರಸ್ತೆಯನ್ನು ಬಳಕೆಗೆ ಮುಕ್ತಗೊಳಿಸಲಾಗಿದೆ.