ನವದೆಹಲಿ (ಸೆ.8): ಪೂರ್ವ ಲಡಾಖ್‌ ಗಡಿಯಲ್ಲಿ ಭಾರತ ಹಾಗೂ ಚೀನಾ ನಡುವೆ ಸೃಷ್ಟಿಯಾಗಿರುವ ಸಂಘರ್ಷಕ್ಕೆ ಗುರುವಾರ ಪರಿಹಾರ ದೊರಕುವ ಆಶಾವಾದವೊಂದು ಗೋಚರಿಸಿದೆ. ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹಾಗೂ ಚೀನಾದ ವಿದೇಶ ಮಂತ್ರಿ ವಾಂಗ್‌ ಯಿ ಅವರು ರಷ್ಯಾದಲ್ಲಿ ಸಭೆ ಸೇರಿ ಈ ಕುರಿತು ಮಾತುಕತೆ ನಡೆಸಲಿದ್ದಾರೆ. ವಿವಾದಿತ ಪ್ರದೇಶಗಳಿಂದ ಸೇನಾ ಹಿಂತೆಗೆತ ಕುರಿತು ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಗರಿಗೆದರಿದೆ.

ಜೈಶಂಕರ್‌ ಅವರು ಮಂಗಳವಾರ ಸಂಜೆ ಮಾಸ್ಕೋದಲ್ಲಿ ಇಳಿಯಲಿದ್ದಾರೆ. ಅವರ ಜತೆಗೆ ಗುರುವಾರ ನಿಗದಿಯಾಗಿರುವ ಸಭೆಯಲ್ಲಿ ಪಾಲ್ಗೊಳ್ಳಲು ಬುಧವಾರ ರಾತ್ರಿ ಮಾಸ್ಕೋಗೆ ಆಗಮಿಸುವುದಾಗಿ ಚೀನಾದ ವಾಂಗ್‌ ಯಿ ಅವರು ಖಚಿತಪಡಿಸಿದ್ದಾರೆ. ಗಡಿಯ ಮುಂಚೂಣಿ ಪ್ರದೇಶಗಳಿಂದ ಸೇನೆ ಹಿಂತೆಗೆದುಕೊಳ್ಳುವ ಮೂಲಕ ಸಂಘರ್ಷದ ವಾತಾವರಣ ತಗ್ಗಿಸಲು ಉಭಯ ದೇಶಗಳು ಮುಂದಾಗುವ ಸಾಧ್ಯತೆ ಇದೆ.

ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹಾಗೂ ಚೀನಾದ ರಕ್ಷಣಾ ಸಚಿವ ವೆ ಫೆಂಗೆ ಅವರ ನಡುವೆ ಕಳೆದ ಶುಕ್ರವಾರ ಮುಖಾಮುಖಿ ಮಾತುಕತೆ ನಡೆದಿತ್ತಾದರೂ, ಬಿಕ್ಕಟ್ಟಿಗೆ ಮಂಗಳವಾಡುವಂತಹ ಫಲಪ್ರದ ಬೆಳವಣಿಗೆ ನಡೆದಿರಲಿಲ್ಲ.

ಗಡಿ ಸಮಸ್ಯೆ ಲಾಭ ಪಡೆಯಲು ಮುಂದಾದರೆ ಪಾಕ್‌ಗೆ ತಕ್ಕ ಶಾಸ್ತಿ

ಗಡಿಯಲ್ಲಿ ಕಳೆದ ಮೇ ತಿಂಗಳಿನಿಂದ ಸಂಘರ್ಷ ಇದೆ. ಕಳೆದ 50 ವರ್ಷಗಳಲ್ಲೇ ಮೊದಲ ಬಾರಿಗೆ ಉಭಯ ದೇಶಗಳ ಯೋಧರು ಘರ್ಷಣೆಗೆ ಬಲಿಯಾಗಿದ್ದಾರೆ. ಹಲವು ಸುತ್ತಿನ ಮಾತುಕತೆ ನಡೆದರೂ ಬಿಕ್ಕಟ್ಟು ಇತ್ಯರ್ಥವಾಗಿಲ್ಲ. ಈ ನಡುವೆ, ಆ.29-30ರಂದು ಚೀನಾ ಪಡೆಗಳು ಮತ್ತೆ ಭಾರತದತ್ತ ನುಗ್ಗಲು ಯತ್ನಿಸಿದಾಗ ಭಾರತೀಯರು ಹಿಮ್ಮೆಟ್ಟಿಸಿದ ಬೆಳವಣಿಗೆ ಬಳಿಕ ಗಡಿಯಲ್ಲಿ ಯುದ್ಧ ಸದೃಶ ವಾತಾವರಣ ಕಂಡುಬರುತ್ತಿದೆ.

ಈ ನಡುವೆ, ಲಡಾಖ್‌ ಸಂಘರ್ಷ ಹಾಗೂ ದಕ್ಷಿಣ ಚೀನಾ ಸಮುದ್ರ ವಿಚಾರವನ್ನು ಇಟ್ಟುಕೊಂಡು ಚೀನಾದಲ್ಲಿ ರಾಷ್ಟ್ರೀಯ ಭಾವ ಉದ್ದೀಪನಗೊಳಿಸಲು ಕಮ್ಯುನಿಸ್ಟ್‌ ಪಕ್ಷದ ಸರ್ಕಾರ ಪ್ರಯತ್ನಿಸಿತ್ತು. ಅದರಿಂದ ಪ್ರಯೋಜನವಾಗಿಲ್ಲ. ಹೀಗಾಗಿ ಚೀನಾ ನಿಲುವು ಬದಲಾಗಿದೆ ಎಂದೂ ಹೇಳಲಾಗುತ್ತಿದೆ.

ಪ್ಯಾಂಗಾಂಗ್ ಬಳಿ ಚೀನಾ ಕ್ಯಾತೆ: ಹಿರಿಯ ಅಧಿಕಾರಿಗಳ ಜೊತೆ ಧವನ್ ಮಾತುಕತೆ

ಯೋಧನ ಅಂತ್ಯಸಂಸ್ಕಾರಕ್ಕೆ ರಾಮ್‌ಮಾಧವ್‌: ಚೀನಾಕ್ಕೆ ಸೂಕ್ತ ಸಂದೇಶ ರವಾನೆ
ನವದೆಹಲಿ/ಲೇಹ್‌:
ಲಡಾಖ್‌ನ ದಕ್ಷಿಣ ಪ್ಯಾಂಗಾಂಗ್‌ನಲ್ಲಿ ಅತಿಕ್ರಮಕ್ಕೆ ಯತ್ನಿಸಿದ ಚೀನಾದ ದಾಳಿಯಲ್ಲಿ ಹುತಾತ್ಮರಾದ ಟಿಬೆಟ್‌ ಮೂಲದ ಭಾರತೀಯ ಯೋಧ ನಿಮಾ ತೆಂಜಿನ್‌ ಅವರ ಅಂತ್ಯಕ್ರಿಯೆ ಸೋಮವಾರ ನೆರವೇರಿತು. ಲಡಾಖ್‌ನ ಸೋನಮ್‌ಲಿಂಗ್‌ನಲ್ಲಿ ನಡೆದ ಅಂತಿಮ ಸಂಸ್ಕಾರದಲ್ಲಿ ಬಿಜೆಪಿ ಮುಖಂಡ ರಾಮ್‌ಮಾಧವ್‌ ಹಾಗೂ ಭಾರತದ ಸೇನಾ ಯೋಧರು ಭಾಗಿಯಾದರು. ಅಲ್ಲದೆ, ತೆಂಜಿನ್‌ ಅವರ ಕುಟುಂಬದವರನ್ನೂ ಭೇಟಿ ಮಾಡಿದ ಮಾಧವ್‌ ಅವರು ಸಾಂತ್ವನ ಹೇಳಿ ಧೈರ್ಯ ತುಂಬಿದರು. ತೆಂಜಿನ್‌ ಅವರು ವಿಕಾಸ್‌ ಬೆಟಾಲಿಯನ್‌ ಸ್ಪೆಷಲ್‌ ಫ್ರಾಂಟಿಯರ್‌ ಫೋರ್ಸ್‌(ಎಸ್‌ಎಫ್‌ಎಫ್‌) ಮುನ್ನಡೆಸುತ್ತಿದ್ದರು. ಭಾರತೀಯ ಸೇನೆಯ ರಹಸ್ಯ ಪಡೆಯಾದ ಇದನ್ನು, ಲಡಾಖ್‌ನಲ್ಲಿ ಚೀನಾ ಯೋಧರ ನಿಗ್ರಹಕ್ಕೆಂದು ಬಳಸಲಾಗುತ್ತಿದೆ.

ರಾಜನಾಥ್ ಭೇಟಿಯಾದ ಚೀನಾ ಸಚಿವ
ಪೂರ್ವ ಲಡಾಖ್‌ನಲ್ಲಿ ಉದ್ಭವಿಸಿರುವ ಗಡಿ ಬಿಕ್ಕಟ್ಟನ್ನು ಬಗೆಹರಿಸುವ ಕುರಿತಂತೆ ಇತ್ತೀಚೆಗೆ ರಷ್ಯಾ ಪ್ರವಾಸದಲ್ಲಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್‌, ಚೀನಾ ರಕ್ಷಣಾ ಸಚಿವ ಜನರಲ್‌ ವೀ ಫೆಂಘಿ ಜತೆ ಮಾತುಕತೆ ನಡೆಸಿದ್ದರು. ಕಳೆದ ಮೇ ತಿಂಗಳಿನಲ್ಲಿ ಉಭಯ ದೇಶಗಳ ನಡುವೆ ಗಡಿ ಸಂಘರ್ಷ ಸೃಷ್ಟಿಯಾದ ಬಳಿಕ ನಡೆದ ಮೊದಲ ಅತ್ಯುನ್ನತ ಮಟ್ಟದ ಸಭೆ ಇದಾಗಿತ್ತು. ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯ ಸಭೆಯಲ್ಲಿ ಪಾಲ್ಗೊಳ್ಳಲು ರಾಜನಾಥ್‌ ಹಾಗೂ ಫೆಂಘಿ ಅವರು ಮಾಸ್ಕೋಗೆ ತೆರಳಿದ್ದರು