ನವದೆಹಲಿ(ಡಿ.17): ಗಡಿಯಲ್ಲಿ ಕ್ಯಾತೆ ತೆಗೆದ ಚೀನಾಕ್ಕೆ 267 ಮೊಬೈಲ್‌ ಆ್ಯಪ್‌ಗಳನ್ನು ನಿಷೇಧಿಸುವ ಮೂಲಕ ಪಾಠ ಕಲಿಸಿದ್ದ ಭಾರತ ಸರ್ಕಾರ, ಇದೀಗ ಮತ್ತಷ್ಟುಶಾಕ್‌ ನೀಡುವ ಸಾಧ್ಯತೆ ಇದೆ.

ದೇಶದ ಟೆಲಿಕಾಂ ವಲಯದ ಭದ್ರತೆಯನ್ನು ಇನ್ನಷ್ಟುಹೆಚ್ಚಿಸುವ ನಿಟ್ಟಿನಲ್ಲಿ ‘ಭಾರತ ವಿಶ್ವಾಸಾರ್ಹ ಮೂಲ’ ಎಂಬ ಪಟ್ಟಿಯೊಂದನ್ನು ತಯಾರಿಸಲು ನಿರ್ಧರಿಸಿದೆ. ಭದ್ರತೆ ಕುರಿತಾದ ಕೇಂದ್ರದ ಸಂಪುಟ ಸಮಿತಿಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ವಿಶ್ವದ ಕಂಪನಿಗಳಲ್ಲಿ 20 ಲಕ್ಷ ಚೀನಾ ಸ್ಪೈಗಳು: ನೌಕರಿ ಜೊತೆ ಗೂಢಾಚಾರಿಕೆ!

ಈ ಹೊಸ ಪಟ್ಟಿಯಲ್ಲಿ ಭಾರತದ ಟೆಲಿಕಾಂ ವಲಯಕ್ಕೆ ಯಾವುದೇ ಅಪಾಯವಿಲ್ಲ ಎಂಬ ಕಂಪನಿಗಳನ್ನು ಮಾತ್ರವೇ ಸೇರಿಸಲಾಗುವುದು. ಹೀಗಾಗಿ ಪಟ್ಟಿತಯಾರಾದ ಬಳಿಕ ಭಾರತದ ಸರ್ಕಾರಿ ಅಥವಾ ಖಾಸಗಿ ಕಂಪನಿಗಳು ವಿಶ್ವಾಸಾರ್ಹ ಪಟ್ಟಿಯಲ್ಲಿರುವ ಕಂಪನಿಗಳಿಂದ ಮಾತ್ರವೇ ಟೆಲಿಕಾಂ ಉಪಕರಣ ಖರೀದಿ ಮತ್ತು ಸೇವೆ ಪಡೆಯುವ ಅವಕಾಶ ಇರುತ್ತದೆ.

ಉಳಿದ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಇವುಗಳೊಂದಿಗೆ ಯಾವುದೇ ಭಾರತೀಯ ಕಂಪನಿ ವ್ಯವಹಾರ ನಡೆಸುವಂತಿಲ್ಲ. ಕೇಂದ್ರದ ಈ ನಿರ್ಧಾರ, ಈಗಾಗಲೇ ಬೇಹುಗಾರಿಕೆಯ ಆರೋಪ ಎದುರಿಸುತ್ತಿರುವ ಚೀನಾ ಮೂಲದ ಹಲವು ಕಂಪನಿಗಳಿಗೆ ಶಾಕ್‌ ನೀಡುವ ಸಾಧ್ಯತೆ ಇದೆ.

ಚೀನಾ ಜೊತೆ ಗಡಿ ಸಂಘರ್ಷ: 15 ದಿನದ ಭಾರಿ ಯುದ್ಧಕ್ಕೆ ಶಸ್ತ್ರಾಸ್ತ್ರ ಸಂಗ್ರಹ!

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಇದೊಂದು ಮಹತ್ವದ ನಿರ್ಧಾರ. ಆದರೆ ಈ ನಿರ್ಧಾರವು ಹಾಲಿ ದೇಶದಲ್ಲಿ ಸೇವೆ ನೀಡುತ್ತಿರುವ ಕಂಪನಿಗಳ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪೂರ್ವ ಲಡಾಖ್‌ನಲ್ಲಿ ಚೀನಾ ಗಡಿ ಕ್ಯಾತೆ ತೆಗೆದ ಬಳಿಕ ಭಾರತ ಸರ್ಕಾರ ಹಂತಹಂತವಾಗಿ ಚೀನಾದ ಆ್ಯಪ್‌ಗಳನ್ನು ನಿಷೇಧಿಸುವ ಮೂಲಕ ಆರ್ಥಿಕ ಹೊಡೆತ ನೀಡುತ್ತಾ ಬಂದಿತ್ತು