ಅಮೆರಿಕದ ಸುಂಕ ಹೆಚ್ಚಳದ ನಂತರ, ಭಾರತವು ರಷ್ಯಾ ನೇತೃತ್ವದ ಯುರೇಷಿಯನ್ ಆರ್ಥಿಕ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದವು ಭಾರತದ ಜವಳಿ ಮತ್ತು ಔಷಧ ವಲಯಕ್ಕೆ ಹೊಸ ಮಾರುಕಟ್ಟೆಗಳನ್ನು ತೆರೆಯಲಿದ್ದು, ಅಮೆರಿಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು 'ಸತ್ತ ಆರ್ಥಿಕತೆ' ಎಂದು ಕರೆದು, ಅಮೆರಿಕದ ಸುಂಕವನ್ನು ಶೇ.50ಕ್ಕೆ ಹೆಚ್ಚಿಸುವ ಘೋಷಣೆಯ ನಂತರ, ಭಾರತ ದಿಟ್ಟ ಹೆಜ್ಜೆ ಇಟ್ಟಿದೆ. ಭಾರತ-ಅಮೆರಿಕ ವ್ಯಾಪಾರ ಮಾತುಕತೆಗಳು ಸ್ಥಗಿತಗೊಂಡಿರುವ ಬೆನ್ನಲ್ಲೇ, ಭಾರತವು ರಷ್ಯಾ ನೇತೃತ್ವದ ಯುರೇಷಿಯನ್ ಆರ್ಥಿಕ ಒಕ್ಕೂಟ (EAEU) ಜೊತೆ ಮುಕ್ತ ವ್ಯಾಪಾರ ಒಪ್ಪಂದ (FTA) ಮಾತುಕತೆಗಳನ್ನು ಪ್ರಾರಂಭಿಸಿದೆ.

ಬುಧವಾರ ಮಾಸ್ಕೋದಲ್ಲಿ ಈ ಒಪ್ಪಂದದ ನಿಯಮಗಳಿಗೆ ಸಹಿ ಹಾಕಲಾಯಿತು. ಭಾರತದ ಪರವಾಗಿ ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಜಯ್ ಬದು ಮತ್ತು EAEUನ ವ್ಯಾಪಾರ ವಿಭಾಗದ ಉಪ ನಿರ್ದೇಶಕ ಮಿಖಾಯಿಲ್ ಚೆರೆಂಕೋವ್ ಸಹಿ ಹಾಕಿದರು.

ಈ ಒಪ್ಪಂದವು ಭಾರತದ ಜವಳಿ ಮತ್ತು ಔಷಧ ವಲಯಕ್ಕೆ ಹೊಸ ಮಾರುಕಟ್ಟೆಗಳನ್ನು ತೆರೆಯಲಿದೆ. 2024ರಲ್ಲಿ ಭಾರತ-EAEU ವ್ಯಾಪಾರ $69 ಬಿಲಿಯನ್ ತಲುಪಿದ್ದು, 2023ಕ್ಕಿಂತ ಶೇ.7ರಷ್ಟು ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಪ್ರಧಾನಿ ವ್ಲಾಡಿಮಿರ್ ಪುಟಿನ್ ಮತ್ತು ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ.

ಈ ಕಾರ್ಯತಂತ್ರದ ನಡೆಯಿಂದ ಭಾರತವು ಅಮೆರಿಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮುಂದಾಗಿದೆ. ಆದರೆ, ಸವಾಲುಗಳೂ ಇವೆ. ರಷ್ಯಾದಿಂದ ಭಾರತದ ಆಮದು (ವಿಶೇಷವಾಗಿ ತೈಲ) ಶೇ.35-40ರಷ್ಟು ಹೆಚ್ಚಿದ್ದು, ರಫ್ತು ಕೇವಲ $4.88 ಬಿಲಿಯನ್‌ಗೆ ಏರಿಕೆಯಾಗಿದೆ. ಇದರಿಂದ ವ್ಯಾಪಾರ ಕೊರತೆ $60 ಬಿಲಿಯನ್ ದಾಟಿದೆ. ಈ FTA ಒಪ್ಪಂದ ಜಾರಿಗೆ ಬಂದರೆ, ಟ್ರಂಪ್‌ನ ಟೀಕೆಗೆ ಭಾರತ ಆರ್ಥಿಕವಾಗಿ ತಿರುಗೇಟು ನೀಡಿದಂತಾಗುತ್ತದೆ. ಇದು ಅಮೆರಿಕದ ಒತ್ತಡದಿಂದ ಹೊರಬರಲು ಮತ್ತು ಹೊಸ ಮಾರುಕಟ್ಟೆಗಳನ್ನು ಕಂಡುಕೊಳ್ಳಲು ಭಾರತಕ್ಕೆ ಸಹಾಯವಾಗಲಿದೆ.