ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರು ದೇಶಗಳ ಮೇಲೆ ಹೊಸ ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ. ಈ ತೆರಿಗೆಯು ಅಮೆರಿಕದ ವ್ಯಾಪಾರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶ ಹೊಂದಿದೆ.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 6 ದೇಶಗಳ ಮೇಲೆ ಟ್ಯಾರಿಫ್ ವಿಧಿಸಿ ಘೋಷಿಸಿದ್ದಾರೆ. ಈ ಹೊಸ ತೆರಿಗೆಗಳು 1ನೇ ಆಗಸ್ಟ್ 2025ರಿಂದ ಜಾರಿಗೆ ಬರಲಿದೆ. ದಕ್ಷಿಣ ಕೊರಿಯಾ ಮತ್ತು ಜಪಾನ್ ಸೇರಿದಂತೆ ಇತರ 14 ದೇಶಗಳ ಮೇಲೆ ಟ್ರಂಪ್ ತೆರಿಗೆಯನ್ನು ಘೋಷಿಸಿದ್ದಾರೆ. ಇದೀಗ ಹೊಸ ಆರು ದೇಶಗಳನ್ನು ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಆ 6 ದೇಶಗಳು ಯಾವವು? ಟ್ಯಾರಿಫ್ ಎಷ್ಟು ಎಂಬುದರ ಮಾಹಿತಿ ಇಲ್ಲಿದೆ.
ಯಾವ ದೇಶಗಳಿಗೆ ಎಷ್ಟು ತೆರಿಗೆ?
ಫಿಲಿಪೈನ್ಸ್: 25%
ಬ್ರೂನಿ: 25%
ಮೊಲ್ಡೊವಾ: 25%
ಇರಾಕ್: 30%
ಅಲ್ಜೀರಿಯಾ: 30%
ಲಿಬಿಯಾ: 30%
ಡೊನಾಲ್ಡ್ ಟ್ರಂಪ್ ಆರು ದೇಶಗಳ ನಾಯಕರಿಗೆ ಹೊಸ ತೆರಿಗೆಯ ಮಾಹಿತಿಯುಳ್ಳ ಅಧಿಕೃತ ಪತ್ರವನ್ನು ರವಾನಿಸಿದ್ದಾರೆ. ಇರಾಕ್, ಅಲ್ಜಿರಿಯಾ ಮತ್ತು ಲಿಬಿಯಾ ಮೇಲಿನ ಶೇ.30ರಷ್ಟು ಸುಂಕ ಅತ್ಯಧಿಕವಾಗಿದೆ. ಅಮೆರಿಕದ ವ್ಯಾಪಾರ ಹಿತಾಸಕ್ತಿಗಳನ್ನು ರಕ್ಷಿಸಲು ಈ ಕ್ರಮ ಅಗತ್ಯ ಎಂದು ಡೊನಾಲ್ಡ್ ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಭಾರತದ ಮೇಲೆ ಶೇ.10 ಸುಂಕ
ಒಂದು ದಿನ ಮುಂಚೆಯೇ ಬ್ರಿಕ್ಸ್ ದೇಶಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದಿಂದ ಬರುವ ಸರಕುಗಳ ಮೇಲೆ ಶೇ.10ರಷ್ಟು ಸುಂಕ ವಿಧಿಸುವದಾಗಿ ಟ್ರಂಪ್ ಘೋಷಿಸಿದ್ದಾರೆ.
ಅಮೆರಿಕದಲ್ಲಿ ತಾಮ್ರದ ಮೇಲೆ ಶೇ. 50 ರಷ್ಟು ಸುಂಕ ವಿಧಿಸಲಾಗುವುದು. ಒಂದು ವರ್ಷದೊಳಗೆ ಔಷಧ ಉತ್ಪನ್ನಗಳ ಮೇಲಿನ ಸುಂಕವು ಶೇ. 200 ರಷ್ಟು ಹೆಚ್ಚಾಗಬಹುದು ಎಂದು ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ. ವ್ಯಾಪಾರ ನೀತಿಗಳಲ್ಲಿನ ಈ ಬದಲಾವಣೆಗಳು ಅಂತರರಾಷ್ಟ್ರೀಯ ವ್ಯವಹಾರದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಈ ಸುಂಕಗಳಿಂದ ಅಮೆರಿಕದ ಕಂಪನಿಗಳನ್ನು ರಕ್ಷಿಸುವುದು ನಮ್ಮ ಉದ್ದೇಶವಾಗಿದೆ. ಈ ಕ್ರಮಗಳು ಅಮೆರಿಕದ ಖರೀದಿದಾರರಿಗೆ ವಸ್ತುಗಳನ್ನು ದುಬಾರಿಯನ್ನಾಗಿ ಮಾಡುತ್ತದೆ ಮತ್ತು ವ್ಯಾಪಾರದಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಅನೇಕ ಅರ್ಥಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
