ಅಮೆರಿಕದ ಸುಂಕ ಹೆಚ್ಚಳದ ವಿರುದ್ಧ ಆರ್‌ಎಸ್‌ಎಸ್ ಬೆಂಬಲಿತ ಸ್ವದೇಶಿ ಜಾಗರಣ್ ಮಂಚ್ ದೇಶಾದ್ಯಂತ ಬೃಹತ್ ಅಭಿಯಾನ ಆರಂಭಿಸಿದೆ. ಆಗಸ್ಟ್ 9 ರಿಂದ 'ಸ್ವದೇಶಿ ಸುರಕ್ಷಾ ಸ್ವಲಂಬನ್' ಹೆಸರಿನಲ್ಲಿ ಈ ಅಭಿಯಾನ ನಡೆಯಲಿದ್ದು, ವಿದೇಶಿ ಕಂಪನಿಗಳ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ.

ನವದೆಹಲಿ (ಆ.9): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇ.50ರಷ್ಟು ಸುಂಕ ವಿಧಿಸಿರುವುದನ್ನು ವಿರೋಧಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಬೆಂಬಲಿತ ಸ್ವದೇಶಿ ಜಾಗರಣ್ ಮಂಚ್ (ಎಸ್‌ಜೆಎಂ) 'ವಿದೇಶಿ ಕಂಪನಿಗಳು ಭಾರತವನ್ನು ತೊರೆಯಿರಿ' ಎಂಬ ಘೋಷಣೆಯೊಂದಿಗೆ ದೇಶಾದ್ಯಂತ ಬೃಹತ್ ಅಭಿಯಾನಕ್ಕೆ ಮುಂದಾಗಿದೆ.

ಈ ಅಭಿಯಾನವು 1942ರ ಬ್ರಿಟಿಷ್ ಕ್ವಿಟ್ ಇಂಡಿಯಾ ಚಳವಳಿಯ ಮಾದರಿಯಲ್ಲಿ ಆಗಸ್ಟ್ 9 ರಿಂದ 'ಸ್ವದೇಶಿ ಸುರಕ್ಷಾ ಸ್ವಲಂಬನ್' ಹೆಸರಿನಲ್ಲಿ ಪ್ರಾರಂಭವಾಗಲಿದೆ. ಆಗಸ್ಟ್ 10ರ ಸಂಜೆ 5 ಗಂಟೆಗೆ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಸಾಂಕೇತಿಕ ಪ್ರತಿಭಟನೆಯನ್ನು ಆಯೋಜಿಸಲಾಗಿದೆ.

ಸ್ವದೇಶಿ ಜಾಗರಣ್ ಮಂಚ್‌ನ ರಾಷ್ಟ್ರೀಯ ಸಹ-ಸಂಚಾಲಕ ಡಾ. ಅಶ್ವನಿ ಮಹಾಜನ್, ಅಮೆಜಾನ್, ಫ್ಲಿಪ್‌ಕಾರ್ಟ್, ವಾಲ್‌ಮಾರ್ಟ್, ಕೋಕಾ-ಕೋಲಾ, ಪೆಪ್ಸಿ, ಕೆಎಫ್‌ಸಿ ಮುಂತಾದ ಅಮೆರಿಕನ್ ಕಂಪನಿಗಳ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ದೇಶವಾಸಿಗಳಿಗೆ ಕರೆ ನೀಡಿದ್ದಾರೆ.

ಸ್ವದೇಶಿ ಉತ್ಪನ್ನಗಳನ್ನ ಬಳಸಿ:

'ಸ್ವದೇಶಿ ಉತ್ಪನ್ನಗಳನ್ನು ಅಳವಡಿಸಿಕೊಳ್ಳಿ, ಭಾರತೀಯ ಇ-ಕಾಮರ್ಸ್ ವೇದಿಕೆಗಳನ್ನು ಬೆಂಬಲಿಸಿ,' ಎಂದು ಅವರು ಮನವಿ ಮಾಡಿದ್ದಾರೆ. ಟ್ರಂಪ್ ಈ ಹಿಂದೆ ಶೇ.25ರಷ್ಟು ಸುಂಕ ವಿಧಿಸಿದ್ದರು, ಆದರೆ ಇತ್ತೀಚೆಗೆ ಇದನ್ನು ಶೇ.50ಕ್ಕೆ ಹೆಚ್ಚಿಸಿದ್ದಾರೆ, ಇದು ಯಾವುದೇ ದೇಶದ ಮೇಲೆ ಅಮೆರಿಕ ವಿಧಿಸಿದ ಅತ್ಯಧಿಕ ಸುಂಕವಾಗಿದೆ. ಈ ಸುಂಕವು ಆಗಸ್ಟ್ 30 ರಿಂದ ಜಾರಿಗೆ ಬರಲಿದೆ. ಸ್ವದೇಶಿ ಜಾಗರಣ್ ಮಂಚ್ ಈ ಅಭಿಯಾನದ ಮೂಲಕ ದೇಶದ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಸಹಕರಿಸಿ, ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಲು ಮತ್ತು ವಿದೇಶಿ ಕಂಪನಿಗಳ ಪ್ರಭಾವವನ್ನು ಕಡಿಮೆ ಮಾಡಲು ಕಾರ್ಯತಂತ್ರ ರೂಪಿಸಿದೆ.