Asianet Suvarna News Asianet Suvarna News

ಭೂಕಂಪದಿಂದ ನಲುಗಿದ ಆಫ್ಘಾನ್‌ಗೆ ಭಾರತ ತುರ್ತು ನೆರವು, ಕಾಬೂಲ್‌ನಲ್ಲಿ ರಾಯಭಾರ ಕಚೇರಿ ಆರಂಭ!

  • ಮಾನವೀಯತೆ ಆಧಾರದಲ್ಲಿ ಆಫ್ಘಾನ್‌ಗೆ ಭಾರತದ ನೆರವು
  • ಕಾಬೂಲ್ ತಲುಪಿದ ಭಾರತದ ತಾಂತ್ರಿಕ ತಂಡ
  •  ತಾಲಿಬಾನ್‌ನ ಹಿರಿಯ ಸದಸ್ಯರ ಜೊತೆ ಮಾತುಕತೆ
India stands by afghanistan ready to provide all assistance at earliest reopens embassy in Kabul ckm
Author
Bengaluru, First Published Jun 23, 2022, 9:32 PM IST

ನವದೆಹಲಿ(ಜೂ.23): ಆಫ್ಘಾನಿಸ್ತಾನದ ಭೀಕರ ಭೂಕಂಪಕ್ಕೆ 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 700ಕ್ಕೂ ಹೆಚ್ಚು ಮುಂದಿ ಗಾಯಗೊಂಡಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಆಫ್ಘಾನಿಸ್ತಾನಕ್ಕೆ ಭೂಕಂಪ ಮತ್ತೊಂದು ಹೊಡೆತ ನೀಡಿದೆ. ಇದರ ನಡುವೆ ಭಾರತ ಸರ್ಕಾರ ಮಾನವೀಯತೆ ಆಧಾರದಲ್ಲಿ ನೆರೆ ರಾಷ್ಟ್ರಕ್ಕೆ ನೆರವು ಘೋಷಿಸಿದೆ.

ಆಫ್ಘಾನ್ ಜನರೊಂದಿಗೆ ಭಾರತ ಐತಿಹಾಸಿಕ ಹಾಗೂ ನಾಗರೀಕ ಸಂಬಂಧ ಹೊಂದಿದೆ.  ಹೀಗಾಗಿ ಆಫ್ಘಾನಿಸ್ತಾನಕ್ಕೆ ಭಾರತ ನೆರವು ಘೋಷಿಸಿದೆ. ಆಫ್ಘಾನಿಸ್ತಾನದಲ್ಲಿ ವೈದ್ಯಕೀಯ, ಆಹಾರ ಸೇರಿದಂತೆ ಹಲವು ರೀತಿಯಲ್ಲಿ ನೆರವು ನೀಡಲು ಭಾರತ ಸಿದ್ಧವಾಗಿದೆ. ಇದಕ್ಕಾಗಿ ಸ್ಥಗಿತಗೊಂಡಿದ್ದ ಭಾರತದ ರಾಯಭಾರ ಕಚೇರಿಯನ್ನು ಮತ್ತೆ ಕಾಬೂಲ್‌ನಲ್ಲಿ ಆರಂಭಿಸಲಾಗಿದೆ.

ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ, 950 ಜನರ ಸಾವು, ಸರ್ಕಾರದ ಹೇಳಿಕೆ!

ಭಾರತದ ತಾಂತ್ರಿಕ ತಂಡ ಇಂದು ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ಭೇಟಿ ನೀಡಿದೆ. ತಾಲಿಬಾನ್ ಆಕ್ರಮಣದ ಮೂಲಕ ಚುನಾಯಿತ ಸರ್ಕಾರವನ್ನು ಬಂದೂಕಿನ ಮೂಲಕ ಒಡಿಸಿ ತಾಲಿಬಾನ್ ಆಡಳಿತ ಆರಂಭಿಸಿತ್ತು. ಆ ವೇಳೆ ಸೃಷ್ಟಿಯಾದ ಭಯಭೀತದ ವಾತಾವರಣದಲ್ಲಿ ಭಾರತ ಕಾಬೂಲ್‌ನಲ್ಲಿರುವ ರಾಯಭಾರ ಕಚೇರಿಯನ್ನು ಮುಚ್ಚಿತ್ತು. ಇದೀಗ ಮತ್ತೆ ರಾಯಭಾರ ಕಚೇರಿಯನ್ನು ಭಾರತ ತೆರೆದಿದೆ.

ಮಾನವೀಯ ನೆರವಿನ ಪರಿಣಾಮಕಾರಿ ವಿತರಣೆ, ಮೇಲ್ವಿಚಾರಣೆ ಹಾಗೂ ತಾಲಿಬಾನ್ ಸರ್ಕಾರದ ಜೊತೆ ಸಮನ್ವಯ ಸಾಧಿಸಲು ಮುಂದಾಗಿದೆ. ಇಷ್ಟೇ ಅಲ್ಲ ಆಫ್ಘಾನಿಸ್ತಾನ ಜನರೊಂದಿಗೆ ಭಾರತ ಸುದೀರ್ಘ ಇತಿಹಾಸ ಹೊಂದಿದೆ. ಹೀಗಾಗಿ ಆಫ್ಘಾನ್ ಜನರಿಗೆ ನೆರವು ನೀಡಲು ಎಲ್ಲಾ ಕ್ರಮಗಳನ್ನು ಭಾರತ ಕೈಗೊಳ್ಳುತ್ತಿದೆ.

ನೆರವು ವಿತರಣಾ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತೊಂದು ಭಾರತೀಯ ತಂಡವು ಕಾಬೂಲ್‌ಗೆ ಭೇಟಿ ನೀಡಿದೆ. ಈ ವೇಳೆ ತಾಲಿಬಾನ್ ಹಿರಿಯ ಸದಸ್ಯರ ಜೊತೆ ಭೇಟಿ ಮಾಡಿ ಮಾತುಕತೆ ನಡೆಸಿದೆ. ಈ ವೇಳೆ ಭದ್ರತೆ ಕುರಿತು ಚರ್ಚೆ ನಡೆಸಲಾಗಿದೆ.

ಆಫ್ಘಾನ್ ಜೊತೆ ಭಾರತ ಹಲವು ಪಾಲುದಾರಿಕೆಯನ್ನು ಹೊಂದಿದೆ. ಆಫ್ಘಾನಿಸ್ತಾನದಲ್ಲಿ ಭಾರತ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಈ ಪಾಲುದಾರಿಕೆಯನ್ನು ಮುನ್ನಡೆಸಲು ಭಾರತ ಸಿದ್ಧವಾಗಿದೆ ಎಂದಿದೆ. 

ತಾಲಿಬಾನ್‌ ಜತೆ ಭಾರತೀಯ ಅಧಿಕಾರಿಗಳ ಮೊದಲ ಭೇಟಿ!

ಭೂಕಂಪಕ್ಕೆ ತತ್ತರಿಸಿದ ಆಫ್ಘಾನ್
ಅಷ್ಘಾನಿಸ್ತಾನದಲ್ಲಿ ಬುಧವಾರ ರಿಕ್ಟರ್‌ ಮಾಪಕದಲ್ಲಿ 6.1 ತೀವ್ರತೆಯಿದ್ದ ಭಾರೀ ಭೂಕಂಪ ಸಂಭವಿಸಿದೆ. ಕಳೆದ 2 ದಶಕಗಳಲ್ಲೇ ಅತ್ಯಂತ ಎನ್ನಲಾದ ಈ ಭೀಕರ ಭೂಕಂಪದಲ್ಲಿ 1000ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ.

ಆಷ್ಘಾನಿಸ್ತಾನದಲ್ಲಿ ಜನರಿಗೆ ಯಾವುದೇ ವೈದ್ಯಕೀಯ ನೆರವು ಸಿಗುವ ಸಾಧ್ಯತೆ ಕಷ್ಟವಿರುವ ಕಾರಣ ಮತ್ತು ಕುಗ್ರಾಮಗಳಿಂದ ನಿಖರ ಮಾಹಿತಿ ಬರುವುದು ಕಷ್ಟವಾಗಿರುವ ಕಾರಣ ಸಾವು-ನೋವಿನಲ್ಲಿ ಭಾರೀ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ. ಇದೇ ವೇಳೆ ನೆರೆಯ ಪಾಕಿಸ್ತಾನದ ಗಡಿ ಭಾಗಗಳಲ್ಲೂ ಭಾರೀ ಭೂಕಂಪನವಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಭೂಕಂಪದಲ್ಲಿ ಸಂತ್ರಸ್ತರಾಗಿರುವವರ ನೆರವಿಗೆ ಧಾವಿಸುವಂತೆ ತಾಲಿಬಾನ್‌ ಆಡಳಿತವು ಮನವಿ ಮಾಡಿದೆಯಾದರೂ, ಸದ್ಯ ಆಷ್ಘಾನಿಸ್ತಾನದಲ್ಲಿ ಯಾವುದೇ ವಿದೇಶಿ ನೆರವಿನ ಸಂಸ್ಥೆಗಳು ಇಲ್ಲದ ಕಾರಣ ಮತ್ತು ವಿದೇಶಗಳಿಂದಲೂ ಅಲ್ಲಿಗೆ ತಕ್ಷಣ ನೆರವು ಸಿಗುವ ಸಾಧ್ಯತೆ ಇಲ್ಲದಿಲ್ಲವಾದ ಕಾರಣ, ಸಂತ್ರಸ್ತರ ಪರಿಸ್ಥಿತಿ ಭೀಕರವಾಗಿದೆ ಎನ್ನಲಾಗಿದೆ.

Follow Us:
Download App:
  • android
  • ios