ಮನೀಶ್ ಸಿಸೋಡಿಯಾ ಬಂಧನ ವಿರೋಧಿಸಿ ದೇಶಾದ್ಯಂತ ಆಪ್ ಪ್ರತಿಭಟನೆ!
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಸಿಬಿಐ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧಿಸಿದೆ. ಆದರೆ ಈ ಬಂಧನದಿಂದ ಆಪ್ ಕೆರಳಿದೆ. ಇದು ರಾಜಕೀಯ ಪ್ರೇರಿತ ಬಂಧನ ಎಂದು ದೇಶಾದ್ಯಂತ ಭಾರಿ ಪ್ರತಿಭಟನೆ ನಡೆಸಿದೆ. ದೆಹಲಿ, ಪಂಜಾಬ್, ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಆಪ್ ಹೋರಾಟ ತೀವ್ರಗೊಳಿಸಿದೆ.ಇತ್ತ ಸಿಬಿಐ ಕಚೇರಿಗೆ ಆಪ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ.
ನವದೆಹಲಿ(ಫೆ.27): ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ ಇದೀಗ ಕೇಂದ್ರ ಬಿಜೆಪಿ ಹಾಗೂ ಆಮ್ ಆದ್ಮಿ ಪಾರ್ಟಿ ನಡುವಿನ ಹೋರಾಟಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಈ ಬಂಧನವನ್ನು ಸ್ವತಃ ಸಿಬಿಐ ಅಧಿಾಕಾರಿಗಳೇ ವಿರೋಧಿಸಿದ್ದಾರೆ. ಆದರೆ ರಾಜಕೀಯ ಒತ್ತಡದ ಕಾರಣ ಆಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.ಇತ್ತ ಸಿಬಿಐ ಅಧಿಕಾರಿಗಳು ಮನೀಶ್ ಸಿಸೋಡಿಯಾರನ್ನು ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ಭಾರಿ ಭದ್ರತೆಯೊಂದಿಗೆ ಅಧಿಕಾರಿಗಳು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಇತ್ತ ಆಪ್ ಕಾರ್ಯಕರ್ತರು ದೇಶಾದ್ಯಂತ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಭಾನುವಾರ ಸತತ 8 ಗಂಟೆ ವಿಚಾರಣೆ ಬಳಿಕ ಸಿಸೋಡಿಯಾರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಇದು ಹೈಡ್ರಾಮಕ್ಕೆ ಕಾರಣವಾಗಿತ್ತು.
ದೆಹಲಿ, ಪಂಜಾಬ್, ಬೆಂಗಳೂರು, ಭೋಪಾಲ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ಹಮ್ಮಿಕೊಂಡಿದೆ.ಇತ್ತ ದೆಹಲಿಯ ಸಿಬಿಐ ಕಚೇರಿ, ದೆಹಲಿ ಬಿಜೆಪಿ ಕಚೇರಿ ಸೇರಿದಂತೆ ಹಲವು ಭಾಗದಲ್ಲಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ತೀವ್ರಗೊಳಿಸಿದೆ. ಹಲೆವೆಡೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಆದರೆ ಪ್ರತಿಭಟನಾಕಾರರು ಬ್ಯಾರಿಕೇಡ್ ಜಿಗಿದು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ದೆಹಲಿಯ ಹಲವು ಭಾಗದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ!
ದೆಹಲಿ ಅಬಕಾರಿ ನೀತಿ ಜಾರಿ ಹಾಗೂ ಬಾರ್ ಲೈಸೆನ್ಸ್ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ದಿಲ್ಲಿ ಅಬಕಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧಿಸಲಾಗಿದೆ. ರಾತ್ರಿ 7.15ರ ಸುಮಾರಿಗೆ ಸಿಸೋಡಿಯಾರನ್ನು ಬಂಧಿಸಲಾಯಿತು.
2021-22ರಲ್ಲಿ ದಿಲ್ಲಿಯ ಆಪ್ ಸರ್ಕಾರ ಹೊಸ ಅಬಕಾರಿ ನೀತಿ ಜಾರಿ ಮಾಡಿತ್ತು. ಈಗ 400ಕ್ಕೂ ಹೆಚ್ಚು ಅಬಕಾರಿ ಲೈಸೆನ್ಸ್ ಹಂಚಲಾಗಿತ್ತು. ‘ಈ ವೇಳೆ ಲೈಸೆನ್ಸ್ ಶುಲ್ಕ ಮನ್ನಾ ಸೇರಿ ಅನೇಕ ಅಕ್ರಮ ಮಾಡಲಾಗಿತ್ತು. ಅಲ್ಲದೆ ಲಂಚ ಪಡೆದು ನಿಮಯ ಮೀರಿ ತಮಗೆ ಬೇಕಾದವರಿಗೆ ಲೈಸೆನ್ಸ್ ಹಂಚಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ 2600 ಕೋಟಿ ರು. ನಷ್ಟವಾಗಿದೆ’ ಎಂದು ಸರ್ಕಾರದ ಕಾರ್ಯದರ್ಶಿ ನೀಡಿದ ವರದಿ ಆಧರಿಸಿ ಉಪರಾಜ್ಯಪಾಲರು ತನಿಖೆಗೆ ಶಿಫಾರಸು ಮಾಡಿದ್ದರು. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸುತ್ತಿದ್ದು, ಪ್ರಕರಣದಲ್ಲಿ ಈಗಾಗಲೇ ಅಬಕಾರಿ ಸಚಿವ ಸತ್ಯೇಂದ್ರ ಜೈನ್ ಬಂಧನವಾಗಿದೆ.
ಮನೀಶ್ ಸಿಸೋಡಿಯಾಗೆ ಗೂಢಚರ್ಯೆ ಹಗರಣ ಉರುಳು: ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಅಸ್ತು
ವಿಚಾರಣೆಗೆ ಹಾಜರಾಗುವ ಮೊದಲು ತಾವು ಬಂಧನಕ್ಕೆ ಒಳಗಾಗುವ ಸಾಧ್ಯತೆಗಳಿವೆ ಎಂದು ಸಿಸೋಡಿಯಾ ಹೇಳಿದ್ದರು. ‘ಸುಳ್ಳು ಕೇಸುಗಳಲ್ಲಿ ನಾನು ಜೈಲಿಗೆ ಹೋಗಲು ಹೆದರಿಕೊಳ್ಳುವುದಿಲ್ಲ. ಬಿಜೆಪಿ ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಕ್ಕಿಸಲು ಪ್ರಯತ್ನಿಸುತ್ತಿದೆ. 7-8 ತಿಂಗಳು ಜೈಲಿಗೆ ಹೋದರೂ ಯೋಚಿಸಬೇಡಿ. ನನ್ನ ಅಸ್ವಸ್ಥ ಪತ್ನಿಯ ಆರೋಗ್ಯ ನೋಡಿಕೊಳ್ಳಿ’ ಎಂದು ಕಾರ‍್ಯಕರ್ತರಿಗೆ ಕರೆ ನೀಡಿದ್ದರು. ಇದೇ ವೇಳೆ, ಸಿಬಿಐ ವಿಚಾರಣೆ ಖಂಡಿಸಿ ಆಪ್‌ನ ಸಂಸದರು, ಶಾಸಕರು, ಕಾರ್ಯಕರ್ತರು ಸಿಬಿಐ ಕಚೇರಿ ಎದುರು ಬೆಳಗ್ಗೆ ಪ್ರತಿಭಟನೆ ನಡೆಸಿದ್ದರು. ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.