ಪೆಹಲ್ಗಾಂ ದಾಳಿ ಬಳಿಕ ಪಾಕಿಸ್ತಾನಿಯರ ಹಲವು ಯೂಟ್ಯೂಬ್, ಸೋಶಿಯಲ್ ಮೀಡಿಯಾ ಖಾತೆಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿತ್ತು. ಇದೀಗ ಈ ನಿಷೇಧ ತೆರವುಗೊಳಿಸಿದೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ನವದೆಹಲಿ (ಜು.02) ಪೆಹಲ್ಗಾಂ ಭಯೋತ್ಪಾದಕ ದಾಳಿ ಬಳಿಕ ಭಾರತ ಹಲವು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿತ್ತು. ಆಪರೇಶನ್ ಸಿಂದೂರ್ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿತ್ತು. ಇಷ್ಟೇ ಅಲ್ಲ ಸಿಂದೂ ನದಿ ಒಪ್ಪಂದವನ್ನು ರದ್ದುಗೊಳಿಸಿತ್ತು. ಜೊತೆಗೆ ಭಾರತದ ವಿರುದ್ಧ ದ್ವೇಷ ಹರಡುತ್ತಿದ್ದ, ಸುಳ್ಳು ಮಾಹತಿ, ಪ್ರಚೋದನೆ ನೀಡುತ್ತಿದ್ದ ಪಾಕಿಸ್ತಾನಿ ಸೆಲೆಬ್ರೆಟಿಗಳು ಸೇರಿದಂತೆ ಹಲವರ ಸೋಶಿಯಲ್ ಮೀಡಿಯಾ ಖಾತೆ, ಯೂಟ್ಯೂಬ್ ಚಾನೆಲ್, ವೆಬ್‌ಸೈಟ್‌ಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿತ್ತು. ಆದರೆ ಇದೀಗ ದಿಢೀರ್ ಈ ನಿಷೇಧ ತೆರವು ಮಾಡಿದೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಲ ಖಾತೆಗಳು ಮೇಲಿನ ನಿಷೇಧ ತೆರವು

ಪಾಕಿಸ್ತಾನಿಯರ ಖಾತೆಗಳ ಮೇಲಿನ ಬ್ಲಾಕ್ ತೆರೆವುಗೊಳಿಸುತ್ತಿದ್ದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಪರೇಶನ್ ಸಿಂದೂರ್ ಪೂರ್ಣಗೊಂಡಿಲ್ಲ. ಭಯೋತ್ಪಾದಕ ಸಂಪೂರ್ಣ ನಿರ್ನಾಮ ಮಾಡುವವರೆಗೆ ಭಾರತ ವಿರಮಿಸುವುದಿಲ್ಲ ಎಂದಿದೆ. ಇದರ ನಡುವೆ ಪಾಕಿಸ್ತಾನಿಯರ ಖಾತೆಗಳ ಬ್ಲಾಕ್ ತೆರವು ಸರಿಯಾದ ನಿರ್ಧಾರವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ಕೆಲ ಮೂಲಗಳು, ಎಲ್ಲಾ ಖಾತೆಗಳ ಮೇಲಿನ ಬ್ಲಾಕ್ ತೆರವು ಮಾಡಿಲ್ಲ. ಕೆಲವೇ ಕೆಲವು ಖಾತೆಗಳ ಬ್ಲಾಕ್ ತೆರವು ಮಾಡಲಾಗಿದೆ ಎಂದಿದೆ.

ಸರ್ಕಾರದ ಮಾಹಿತಿ ಪ್ರಕಾರ ಆಪರೇಶನ್ ಸಿಂದೂರ್ ವೇಳೆ ಹಾಗೂ ಅದಕ್ಕೂ ಮೊದಲು ಬ್ಲಾಕ್ ಮಾಡಿದ ಖಾತೆಗಳ ಪೈಕಿ ಇನ್ನೂ 14,000 ಖಾತೆಗಳ ಮೇಲಿನ ನಿಷೇಧ ತೆರವು ಮಾಡಿಲ್ಲ ಎಂದಿದೆ. ಆಪರೇಶನ್ ಸಿಂದೂರ್ ವೇಳೆ ಕೆಲ ಖಾತೆಗಳನ್ನು ಬ್ಲಾಕ್ ಮಾಡಲಾಗಿತ್ತು. ಅವರ ಹೇಳಿಕೆ ಆಧಾರದಲ್ಲಿ ಬ್ಲಾಕ್ ಮಾಡಲಾಗಿತ್ತು. ಆದರೆ ಖಾತೆ ಮೂಲಕ ಭಾರತ ವಿರೋಧಿ ನಿಲುವು ತೆಗೆದುಕೊಂಡಿರಲಿಲ್ಲ. ಇಂತಹ ಖಾತೆಗಳ ಮೇಲೆ ಬ್ಲಾಕ್ ತೆರವು ಮಾಡಲಾಗಿದೆ ಎಂದಿದೆ.

ಪಾಕಿಸ್ತಾನಿ ಸೆಲೆಬ್ರೆಟಿಗಳ ಖಾತೆ ಮೇಲಿನ ನಿಷೇಧ ತೆರವು

ಪಾಕಿಸ್ತಾನಿ ಹಲವು ಸೆಲೆಬ್ರೆಟಿಗಳ ಖಾತೆ ಮೇಲಿನ ನಿಷೇಧ ತೆರವು ಮಾಡಲಾಗಿದೆ. ಸಾಬಾ ಖಾಮರ್, ಮಾರ್ವಾ ಹೊಕನೆ, ಅಹದ್ ರಾಜಾ ಮಿರ್, ಹನಿಯಾ ಅಮಿರ್, ಯಮುನಾ ಜೈದಿ, ಜಾನಿಶ್ ತೈಮೂರ್ ಸೇರಿದಂತೆ ಹಲವರ ಖಾತೆಗಳು ಸಕ್ರಿಯವಾಗಿದೆ. ಇನ್ನು ಕ್ರಿಕೆಟಿಗರಾದ ಶೋಯೆಬ್ ಅಕ್ತರ್, ಶಾಹಿದಿ ಅಫ್ರಿದಿ ಖಾತೆಗಳು ಸಕ್ರಿಯವಾಗಿದೆ.

ಭಾರತ ವಿರುದ್ದ ಸುದ್ದಿ ಹರಡಿದ ಚಾನೆಲ್ ಬ್ಯಾನ್ ಮಾಡಿತ್ತು ಭಾರತ

ಆಪರೇಶನ್ ಸಿಂದೂರ್ ವೇಳೆ ಭಾರತ ವಿರುದ್ಧ ಪಾಕಿಸ್ತಾನದ ಹಲವು ಮಾಧ್ಯಮಗಳು ಸುದ್ದಿ ಬಿತ್ತರಿಸಿತ್ತು. ತಪ್ಪು ಮಾಹಿತಿ, ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಭಾರತೀಯರಲ್ಲಿ ಅನುಮಾನ ಮೂಡುವಂತೆ ಸುದ್ದು ಪ್ರಸಾರ ಮಾಡಿತ್ತು. ಹೀಗಾಗಿ ಕೇಂದ್ರ ಸರ್ಕಾರ ಡಾನ್ ನ್ಯೂಸ್. ಜಿಯೋ ನ್ಯೂಸ್, ಸಾಮಾ ಟಿವಿ, ಜಿಎನ್ಎನ್ ಸೇರಿದಂತೆ ಹಲವು ಟಿವಿಗಳನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿತ್ತು.

ಪೆಹಲ್ಗಾಂ ದಾಳಿಯಿಂದ ಕಠಿಣ ಕ್ರಮಕೈಗೊಂಡಿದ್ದ ಭಾರತ

ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ತಾಣ ಪೆಹಲ್ಗಾಂನಲ್ಲಿ ಭಯೋತ್ಪಾದಕರು ಏಕಾಏಕಿ ದಾಳಿ ನಡೆಸಿದ್ದರು. ಅಮಾಯಕ ಪ್ರವಾಸಿಗರ ಮೇಲೆ ದಾಳಿ ಮಾಡಲಾಗಿತ್ತು. ಹಿಂದೂಗಳನ್ನು ಟಾರ್ಗೆಟ್ ಮಾಡಿ ನಡೆಸಿದ ದಾಳಿಯಲಲ್ಲಿ 26 ಭಾರತೀಯರು ಮೃತಪಟ್ಟಿದ್ದರು. ಭಾರತೀಯ ಮಹಿಳೆಯರ ಸಿಂದೂರ ಅಳಿಸಿದ ಉಗ್ರರ ವಿರುದ್ಧ ಭಾರತ ಆಪರೇಶನ್ ಸಿಂದೂರ್ ಮೂಲಕ ಉತ್ತರ ನೀಡಿತ್ತು. ಆಪರೇಶನ್ ಸಿಂದೂರ್ ಮೂಲಕ ಪಾಕಿಸ್ತಾನ ಪೋಷಿತ 9 ಉಗ್ರ ನೆಲೆ ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿತ್ತು. ಈ ದಾಳಿಯಲ್ಲಿ 9 ಉಗ್ರರ ನೆಲೆಗಳು ಸಂಪೂರ್ಣ ನಾಶವಾಗಿತ್ತು.