ನವದೆಹಲಿ(ಮಾ.21): ದೇಶದಲ್ಲಿ ಮತ್ತೊಮ್ಮೆ ಕೊರೋನಾ ಆರ್ಭಟ ಆರಂಭವಾಗಿದ್ದು, ಶನಿವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 40,953 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಈ ವರ್ಷದ ಈವರೆಗಿನ ಮತ್ತು ಕಳೆದ ವರ್ಷದ 111 ದಿನಗಳ ಗರಿಷ್ಠ ಸಂಖ್ಯೆಯಾಗಿದೆ.

ಕಳೆದ ವರ್ಷ ನವೆಂಬರ್‌ 29ರಂದು ದೇಶದಲ್ಲಿ 41,810 ಕೇಸುಗಳು ದೃಢವಾಗಿದ್ದವು. ಅದಾದ ನಂತರದ ಅತಿ ಹೆಚ್ಚಿನ ಪ್ರಕರಣಗಳು ಶನಿವಾರ ದೃಢಪಟ್ಟಿವೆ.

ಇದೇ ವೇಳೆ ದೆಹಲಿ, ಮಹಾರಾಷ್ಟ್ರ, ಪಂಜಾಬ್‌, ಕರ್ನಾಟಕ, ಗುಜರಾತ್‌, ತಮಿಳುನಾಡು, ಮಧ್ಯಪ್ರದೇಶ, ಹರಾರ‍ಯಣಗಳಲ್ಲಿ ದೈನಂದಿನ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಮಹಾರಾಷ್ಟ್ರ (62%), ಕೇರಳ (8.8%), ಪಂಜಾಬ್‌ (5.3%)ನಲ್ಲಿ ಶೇ.76.22ರಷ್ಟುಕೇಸುಗಳು ಇವೆ. ಈ ನಡುವೆ ಕೇರಳದಲ್ಲಿ ಸೋಂಕು ಪ್ರಮಾಣ ತಗ್ಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಸಕ್ರಿಯ ಕೇಸು 2.88 ಲಕ್ಷಕ್ಕೆ:

ದೇಶದಲ್ಲಿ ಕಳೆದ 10 ದಿನಗಳಿಂದ ಸೋಂಕು ಪ್ರಮಾಣ ಆತಂಕಕಾರಿಯಾಗಿ ಹೆಚ್ಚುತ್ತಿದ್ದು, ಫೆಬ್ರವರಿ 15ರಂದು ಕೇವಲ 1.35 ಲಕ್ಷಕ್ಕೆ ಇಳಿದಿದ್ದ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ ಈಗ 2.88 ಲಕ್ಷಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಚೇತರಿಕೆಯಾಗುವವರ ಪ್ರಮಾಣ ಶೇ.96.12ಕ್ಕೆ ಕುಸಿದಿದೆ. ಇನ್ನೂ ಆತಂಕಕಾರಿ ವಿಷಯ ಎಂದರೆ ಭಾರತದಲ್ಲಿ ಕಳೆದ 3 ದಿನದಲ್ಲಿ 1 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ. ಶುಕ್ರವಾರ 39,726, ಗುರುವಾರ 35,871 ಕೇಸುಗಳು ದೃಢವಾಗಿವೆ.

ಇದೇ ವೇಳೆ ಶನಿವಾರ ಬೆಳಗ್ಗೆ 8 ಗಂಟೆಯವರೆಗಿನ 24 ತಾಸಿನ ಅವಧಿಯಲ್ಲಿ 188 ಮಂದಿ ಸೋಂಕಿಗೆ ಬಲಿಯಾಗಿದ್ದು, ಈ ಪೈಕಿ ಮಹಾರಾಷ್ಟ್ರದಲ್ಲಿ 70 ಮಂದಿ, ಪಂಜಾಬ್‌ 38 ಹಾಗೂ ಕೇರಳದಲ್ಲಿ 18 ಮಂದಿ ಸಾವಿಗೀಡಾಗಿದ್ದಾರೆ. ಭಾರತದಲ್ಲಿ ಈವರೆಗೆ 1,15,55,284 ಜನರಿಗೆ ಕೊರೋನಾ ಸೊಂಕು ತಗುಲಿದೆ. ಇವರಲ್ಲಿ 1,11,07,332 ಜನರು ಗುಣಮುಖರಾಗಿದ್ದಾರೆ. 1,59,558 ಜನರು ಬಲಿಯಾಗಿದ್ದಾರೆ.