* ಸಕ್ರಿಯ ಕೇಸ್ 7.23 ಲಕ್ಷ: 204 ದಿನದ ಗರಿಷ್ಠ* ದೈನಂದಿನ ಪಾಸಿಟಿವಿಟಿ ದರ 13.2%ಗೆ ಏರಿಕೆ* ಮತ್ತೆ 1.79 ಲಕ್ಷ ಕೇಸ್: 7 ತಿಂಗಳ ಗರಿಷ್ಠ
ನವದೆಹಲಿ(ನ.11): ಭಾರತದಲ್ಲಿ ಕೋವಿಡ್-19 ಆರ್ಭಟ ಮುಂದುವರೆದಿದ್ದು, ಸೋಮವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 1,79,723 ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ 227 ದಿನಗಳ (7 ತಿಂಗಳು)ಗರಿಷ್ಠ ಸಂಖ್ಯೆಯಾಗಿದೆ. ಕಳೆದ ಮೇ 27ರಂದು ದೇಶದಲ್ಲಿ ಒಂದೇ ದಿನ 1.86 ಲಕ್ಷ ಕೇಸ್ ಪತ್ತೆಯಾಗಿತ್ತು. ಅದಾದ ಬಳಿಕ ಇಷ್ಟೊಂದು ಕೊರೋನಾ ಪ್ರಕರಣ ಪತ್ತೆಯಾಗುತ್ತಿರುವುದು ಇದೇ ಮೊದಲು.
ಇನ್ನು ಸೋಮವಾರ ಇದೇ ಅವಧಿಯಲ್ಲಿ 146 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3.57 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 4,83,936ಕ್ಕೆ ತಲುಪಿದೆ. ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 7.23ಲಕ್ಷಕ್ಕೆ ಏರಿಕೆಯಾಗಿದೆ. ಇದು ಕಳೆದ 204 ದಿನಗಳ ಗರಿಷ್ಠ ಸಂಖ್ಯೆ. ಚೇತರಿಕೆ ಪ್ರಮಾಣ ಶೇ.96.62ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇ.13.29ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 3.45 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ 151.94 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.
410 ಮಂದಿಗೆ ಒಮಿಕ್ರೋನ್ ಸೋಂಕು
ಸೋಮವಾರ ಒಟ್ಟು 410 ಒಮಿಕ್ರೋನ್ ರೂಪಾಂತರಿ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು ಒಮಿಕ್ರೋನ್ ಪ್ರಕರಣಗಳ ಸಂಖ್ಯೆ 4033ಕ್ಕೆ ಏರಿಕೆಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ 1,216, ರಾಜಸ್ಥಾನದಲ್ಲಿ 529, ದೆಹಲಿಯಲ್ಲಿ 513, ಕರ್ನಾಟಕದಲ್ಲಿ 441, ಕೇರಳದಲ್ಲಿ 333 ಮತ್ತು ಗುಜರಾತಿನಲ್ಲಿ 236 ಕೇಸ್ ಪತ್ತೆಯಾಗಿದೆ. ಒಟ್ಟು ಸೋಂಕಿತರ ಪೈಕಿ 1,552 ಮಂದಿ ಗುಣಮುಖರಾಗಿದ್ದಾರೆ.
