* ಸದ್ದಿಲ್ಲದೆ ರನ್‌ವೇ, ಬಂದರುಕಟ್ಟೆನಿರ್ಮಿಸುತ್ತಿರುವ ಭಾರತ* ಚೀನಾ ಬಗ್ಗುಬಡಿಯಲು ತಂತ್ರ: ಅರಬ್‌ ಮಾಧ್ಯಮ ವರದಿ* ಮಾರಿಷಸ್‌ ದ್ವೀಪದಲ್ಲಿ ಭಾರತದ ನೌಕಾ ನೆಲೆ?

ನವದೆಹಲಿ(ಆ.07): ಹಿಂದೂ ಮಹಾಸಾಗರದ ಮೇಲೆ ಕಣ್ಣಿಟ್ಟು ಚೀನಾ ತನ್ನ ಚಟುವಟಿಕೆಗಳನ್ನು ತೀವ್ರಗೊಳಿಸಿರುವಾಗಲೇ, ಆ ಸಾಗರದ ನೈಋುತ್ಯ ದಿಕ್ಕಿನಲ್ಲಿರುವ, ಮಾರಿಷಸ್‌ ದೇಶಕ್ಕೆ ಸೇರಿದ ದ್ವೀಪವೊಂದರಲ್ಲಿ ಭಾರತ ಸದ್ದಿಲ್ಲದೆ ನೌಕಾ ನೆಲೆ ನಿರ್ಮಾಣ ಆರಂಭಿಸಿದೆ ಎಂದು ಅರಬ್‌ ಮಾಧ್ಯಮವೊಂದು ವರದಿ ಮಾಡಿದೆ. ಇದು ಸಂಚಲನಕ್ಕೆ ಕಾರಣವಾಗಿದೆ. ಈ ಕುರಿತು ಕೇಂದ್ರ ಸರ್ಕಾರವಾಗಲಿ, ನೌಕಾಪಡೆಯಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಉಪಗ್ರಹ ಚಿತ್ರಗಳು, ಹಣಕಾಸು ಮಾಹಿತಿ ಹಾಗೂ ಸ್ಥಳಕ್ಕೆ ತೆರಳಿ ತಾನು ಸಂಗ್ರಹಿಸಿರುವ ಸಾಕ್ಷ್ಯಗಳನ್ನು ಮಿಲಿಟರಿ ತಜ್ಞರು ವಿಶ್ಲೇಷಣೆಗೊಳಪಡಿಸಿದ್ದಾರೆ. ಮಾರಿಷಸ್‌ನ ದ್ವೀಪವಾಗಿರುವ ಅಗಾಲಗಾದಲ್ಲಿ ಭಾರತ ವಿಮಾನ ಇಳಿಸಲು ಏರ್‌ಸ್ಟ್ರಿಪ್‌ ನಿರ್ಮಾಣ ಮಾಡುತ್ತಿದೆ. ಭಾರತೀಯ ವಾಯುಪಡೆಯ ಕರಾವಳಿ ಗಸ್ತು ಕೆಲಸಕ್ಕೆ ಇದನ್ನು ಬಳಸುವುದು ಬಹುತೇಕ ನಿಶ್ಚಿತವಾಗಿದೆ ಎಂದು ಖತಾರ್‌ ಮೂಲದ ಅಲ್‌ ಜಝೀರಾ ಸುದ್ದಿವಾಹಿನಿ ವರದಿ ಮಾಡಿದೆ.

ಹಾಲಿ ಅಗಾಲಗಾದಲ್ಲಿ 800 ಮೀಟರ್‌ ಉದ್ದದ ಏರ್‌ ಸ್ಟ್ರಿಪ್‌ ಇದೆ. ಒಂದು ವೇಳೆ ಭಾರತದ ಕಾಮಗಾರಿ ಪೂರ್ಣಗೊಂಡರೆ, ವಿಶ್ವದ ಅತಿದೊಡ್ಡ ವಿಮಾನಗಳನ್ನೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇಳಿಸಿದಂತೆ ಅಗಾಲಗಾದಲ್ಲಿ ಲ್ಯಾಂಡ್‌ ಮಾಡಬಹುದು ಎಂದು ಹೇಳಿದೆ.

ಈ ನೌಕಾ ನೆಲೆಯನ್ನು ಹಡಗು ನಿಲ್ಲಿಸಲು ಹಾಗೂ ಪಿ-8ಐ ವಿಮಾನಗಳನ್ನು ಇಳಿಸಲು ಭಾರತ ಬಳಸಿಕೊಳ್ಳಲಿದೆ ಎಂದು ದೆಹಲಿಯ ಚಿಂತಕರ ಸಂಸ್ಥೆಯಾಗಿರುವ ಅಬ್ಸರ್ವರ್‌ ರೀಸಚ್‌ರ್‍ ಫೌಂಡೇಶನ್‌ನ ಅಸೋಸಿಯೇಟ್‌ ಫೆಲೋ ಅಭಿಷೇಕ್‌ ಮಿಶ್ರಾ ಹೇಳಿದ್ದಾರೆ ಎಂದು ವರದಿ ಹೇಳಿದೆ. ಪಿ-8ಐ ವಿಮಾನಗಳನ್ನು ಕರಾವಳಿ ಪಹರೆಗೆ ಭಾರತ ಬಳಸುತ್ತಿದೆ. ಸರ್ವೇಕ್ಷಣೆ, ಭೂಮಿಯ ಮೇಲಿನ ಗುರಿ ಹಾಗೂ ಸಬ್‌ ಮರೀನ್‌ ವಿರುದ್ಧದ ಕಾರ್ಯಾಚರಣೆಗೂ ಇದನ್ನು ಉಪಯೋಗಿಸಲಾಗುತ್ತದೆ.

ಈ ನಡುವೆ, ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಜಗನ್ನಾಥ್‌ ಅವರು ಮಿಲಿಟರಿ ಉದ್ದೇಶಕ್ಕೆ ಭಾರತ ರನ್‌ ನಿರ್ಮಾಣ ಮಾಡುತ್ತಿದೆ ಎಂಬ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಅಗಾಲಗಾದಲ್ಲಿ ಸೇನಾ ನೆಲೆ ಸ್ಥಾಪಿಸುವ ಕುರಿತು ಭಾರತ ಹಾಗೂ ಮಾರಿಷಸ್‌ ನಡುವೆ ಒಪ್ಪಂದವೇ ಆಗಿಲ್ಲ ಎಂದು ಅವರು ಇತ್ತೀಚೆಗೆ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಎಲ್ಲಿ ನಿರ್ಮಾಣ?

ಮಾರಿಷಸ್‌ಗೆ ಸೇರಿದ ಅಗಾಲಗಾ ದ್ವೀಪದಲ್ಲಿ. 12 ಕಿ.ಮೀ. ಉದ್ದದ 1.5 ಕಿ.ಮೀ. ಅಗಲದ ದ್ವೀಪ ಇದಾಗಿದ್ದು, ಮಾರಿಷಸ್‌ನ ಮುಖ್ಯ ಭೂಭಾಗದಿಂದ 1100 ಕಿ.ಮೀ. ದೂರದಲ್ಲಿದೆ. ಸುಮಾರು 300 ಮಂದಿ ಅಲ್ಲಿ ವಾಸವಾಗಿದ್ದಾರೆ.

ಹೇಗೆ ಪತ್ತೆ?

ಉಪಗ್ರಹ ಚಿತ್ರ, ಸ್ಥಳ ಪರಿಶೀಲನೆ ಆಧರಿಸಿ ಅಲ್‌ ಜಝೀರಾ ವರದಿ. ಸದ್ಯ ದ್ವೀಪದಲ್ಲಿ ನೂರಾರು ಭಾರತೀಯ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಏಕೆ ನಿರ್ಮಾಣ?

ತಜ್ಞರ ಪ್ರಕಾರ, ಕರಾವಳಿ ಕಾವಲು ಹಾಗೂ ಸರ್ವೇಕ್ಷಣೆಗೆ. ಜತೆಗೆ ಹಿಂದೂ ಮಹಾಸಾಗರದ ಮೇಲೆ ಕಣ್ಣಿಟ್ಟಿರುವ ಚೀನಾಕ್ಕೆ ಸಡ್ಡು ಹೊಡೆದು ಬಲ ವೃದ್ಧಿಸಿಕೊಳ್ಳಲು.