ಜಾಗತಿಕ ಮಾನದಂಡ GMT ಬದಲು ಮಹಾಕಾಲ್ ಸ್ಟಾಂಡರ್ಟ್ ಟೈಮ್ (MST) ಪ್ರಸ್ತಾವನೆ ಇಟ್ಟ ಭಾರತ, ಜಾಗತಿಕ ಮಟ್ಟದಲ್ಲಿ ಸಮಯ ಹೇಳುವಾಗ ಜಿಎಂಟಿ ಎಂದು ಬಳಸಲಾಗುತ್ತದೆ. ಇದು ಬ್ರಿಟಿಷರು ಆಡಳಿತದಲ್ಲಿ ಕೊಟ್ಟ ಹೆಸರು, ಆದರೆ ಇನ್ನು ಜಾಗತಿಕವಾಗಿ ಮಹಾಕಾಲ್ ಸ್ಟಾಂಡರ್ಟ್ ಟೈಮ್ ಅಂಗೀಕರಿಸಲು ಪ್ರಸ್ತಾವನೆ ಇಡಲಾಗಿದೆ.
ನವದೆಹಲಿ (ಏ.05) ಜಾಗತಿಕ ಮಟ್ಟದಲ್ಲಿ ಸಮಯ ಹೇಳುವಾಗ ಜಿಎಂಟಿ ಎಂದು ಬಳಸಲಾಗುತ್ತದೆ. ಪ್ರಮುಖವಾಗಿ ಭಾರತದ ಸಮಯ ಐಎಸ್‌ಟಿ ( ಇಂಡಿಯನ್ ಸ್ಟಾಂಡರ್ಟ್ ಟೈಮ್) ಎಂದು ಉಲ್ಲೇಖಿಸಲಾಗುತ್ತದೆ. ಇನ್ನು ಜಾಗತಿಕ ಸಮಯವನ್ನು ಗ್ರೀನ್‌ವಿಚ್ ಮೀನ್ ಟೈಮ್ ಎಂದು ಪರಿಗಣಿಸಲಾಗಿದೆ. ಇದು ಬ್ರಿಟಿಷರ ಆಡಳಿತದಲ್ಲಿ ಅವರ ಆಡಳಿತ ಅನುಕೂಲಕ್ಕಾಗಿ ಅಂಗೀಕರಿಸಿದ ರೇಖಾ ಸಮಯ. ಆದರೆ ಸಮಯದಲ್ಲಿ ಅತ್ಯಂತ ನಿಖರವಾಗಿ ಹಾಗೂ ಪ್ರಾಚೀನ ಸೂರ್ಯಸಿದ್ಧಾಂತದಲ್ಲಿ ಉಲ್ಲೇಖಿಸಿರುವ ಉಜ್ಜಯಿನಿಯನ್ನು ಕಾಲಗಣನೆಯ ಮೂಲ ಕೇಂದ್ರ ಪರಿಗಣಿಸಲಾಗಿತ್ತು. ಇದೀಗ ಮತ್ತೆ ಇದೇ ಉಜ್ಜನಿಯನ್ನು ಕಾಲಗಣನೆಯ ಕೇಂದ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ಹೊಸ ಪ್ರಸ್ತಾವನೆ ಮುಂದಿಟ್ಟಿದೆ.
ಮಹಾಕಾಲ್ ಸ್ಟಾಂಡರ್ಟ್ ಟೈಮ್
ಗ್ರೀನ್‌ವಿಚ್ ಮೀನ್ ಟೈಮ್ (GMT ) ಬದಲು ಮಹಾಕಾಲ್ ಸ್ಟಾಂಡರ್ಟ್ ಟೈಮ್ (MST) ಜಾಗತಿಕ ಕಾಲಗಣನೆಯ ಮಾನದಂಡವಾಗಬೇಕು ಅನ್ನೋದು ಭಾರತದ ಪ್ರಸ್ತಾವನೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಪ್ರಸ್ತಾವನೆಯನ್ನು ಮಂದಿಟ್ಟಿದ್ದಾರೆ. ಭಾರತದ ಪ್ರಾಚೀನತೆಯಲ್ಲೇ ಉಜ್ಜಯಿನಿ ಕಾಲಗಣನೆಯ ಪ್ರಧಾನ ಕೇಂದ್ರವಾಗಿತ್ತು. ಭಾರತದ ಖಗೋಳಶಾಸ್ತ್ರದ ಹಿರಿಮೆಯನ್ನು ಮರುಪಚಿಯಸುವ ಮಹತ್ತರ ಯೋಜನೆಯು ಈ ಪ್ರಸ್ತಾವನೆಯಲ್ಲಿದೆ. ಮಹಾಕಾಲ ಕ್ಷೇತ್ರವಿರುವ ಉಜ್ಜಯಿನಿಯನ್ನು ಕಾಲಗಣನ ಕೇಂದ್ರವಾಗಿ ಮರುಸ್ಥಾಪಿಸಬೇಕು ಅನ್ನೋದು ಈ ಪ್ರಸ್ತಾವನೆಯಲ್ಲಿದೆ.
MST ಜಾಗತಿಕ ಕಾಲಗಣನೆ ಯಾಕೆ ಆಗಬೇಕು
1884ರಲ್ಲಿ ಗ್ರೀನ್‌ವಿಚ್ ಪ್ರದೇಶವನ್ನು ಶೂನ್ಯ ರೇಖಾಂಶವೆಂದು ಘೋಷಿಸಲಾಯಿತು. ಹೀಗಾಗಿ ಗ್ರೀನ್‌ವಿಚ್ ಸಮಯದ ಆಧಾರದಲ್ಲಿ ಜಾಗತಿಕ ಸಮಯ ಹೇಳುವ ಪದ್ಧತಿ ಜಾರಿಗೆ ಬಂದಿತ್ತು. ಇದಕ್ಕೂ ಮೊದಲೇ ಭಾರತದ ಉಜ್ಜಯಿನಿ ಕಾಲಗಣನೆಯ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸುತ್ತಿತ್ತು. ಕಾರಣ, ಉಜ್ಜಯಿನಿ ಭೂಮಿಯ ಶೂನ್ಯ ರೇಖಾಂಶ ಹಾಗೂ ಕರ್ಕಾಟಕ ಸಕ್ರಾಂತಿ ವೃತ್ತ (Tropic of Cancer) ಸಂಧಿಸುವ ಸ್ಥಳದಲ್ಲಿದೆ. ಅತ್ಯಂತ ನಿಖರವಾಗಿ ಸಮಯ ಹಾಗೂ ಖಗೋಳಗಳ ನಿಖರತೆಯನ್ನು ಹೇಳಲಾಗಿದೆ ಅನ್ನೋದು ಸೂರ್ಯಸಿದ್ಧಾಂತ ಗ್ರಂಥದಲ್ಲಿ ಉಲ್ಲೇಖವಿದೆ. ಇದೇ ಕಾರಣದಿಂದ ಬ್ರಹ್ಮಗುಪ್ತ ಸೇರಿದಂತೆ ಇತರ ಖಗೋಳಶಾಸ್ತ್ರಜ್ಞರು ಪ್ರಾಚೀನ ಕಾಲದಲ್ಲಿ ಇದೇ ಉಜ್ಜಯಿನಿಯನ್ನು ಕೇಂದ್ರ ಸ್ಥಳವನ್ನಾಗಿ ಮಾಡಿದ್ದರು.
ಎಂಎಸ್‌ಟಿ ಧಾರ್ಮಿಕ ನಂಬಿಕೆಯಲ್ಲ ಇದು ವೈಜ್ಞಾನಿಕವಾಗಿ ಪ್ರತಿಪಾದಿಸಿದ ವಿಚಾರ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಸೂರ್ಯೋದ, ಸೂರ್ಯಾಸ್ತಮಾನಗಳ ಆಧಾರದಲ್ಲಿ ಭಾರತದಲ್ಲಿ ನಿಖರವಾಗಿ ಸಮಯ ಹೇಳಲಾಗುತ್ತದೆ. ಕಾಲಗಣನೆಯ ಆಧಾರದಲ್ಲಿ ಗ್ರಹಗಳ ಚಲನೆ ನಿಖರವಾಗಿ ಹೇಳಲಾಗುತ್ತದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.


