ನವದೆಹಲಿ(ಜು.19): ಅಮೆರಿಕದ ಜೊತೆಗಿನ ತನ್ನ ಸಂಬಂಧವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿರುವ ಭಾರತ, ಇದೀಗ ಅಮೆರಿಕದ ಸಂಗ್ರಹಾಗಾರಗಳಲ್ಲೇ ತನ್ನ ಪಾಲಿನ ಕಚ್ಚಾತೈಲ ದಾಸ್ತಾನ ಮಾಡಲು ಮುಂದಾಗಿದೆ. ಇದೀಗ ಅಂತಾರಾಷ್ಟ್ರೀಯ ತೈಲ ದರ ಈಗ ಕಡಿಮೆ ಇದ್ದು, ತನ್ನ ಪಾಲಿನ ತೈಲವನ್ನು ಅಮೆರಿಕದಲ್ಲಿ ದಾಸ್ತಾನು ಮಾಡಿದರೆ ಲಾಭವಾಗುತ್ತದೆ ಹಾಗೂ ಮುಂದೊಂದು ದಿನ ತೈಲ ಪೂರೈಕೆಯಲ್ಲಿ ವ್ಯತ್ಯಾಸವಾದರೆ ಅಥವಾ ದರ ಏರಿದರೆ, ಈ ತೈಲ ದಾಸ್ತಾನು ದೇಶದ ನೆರವಿಗೆ ಬರಲಿದೆ ಎಂಬ ಲೆಕ್ಕಾಚಾರ ಇದರ ಹಿಂದಿದೆ.

ಕಚ್ಚಾತೈಲ ಸಂಗ್ರಹಾಗಾರ ಸಮೀಪ ವಿಚಿತ್ರ ವಾಸನೆ: ಅನಿಲ ಸೋರಿಕೆ ಭೀತಿ

ಶುಕ್ರವಾರ ಭಾರತದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಹಾಗೂ ಅಮೆರಿಕದ ಇಂಧನ ಸಚಿವ ಡ್ಯಾನ ಬ್ರೌನ್‌ಲಿಟ್‌, ಆನ್‌ಲೈನ್‌ ಮೂಲಕ ಇಂಧನ ಸಹಭಾಗಿತ್ವ ಕುರಿತಾದ ಸಭೆ ನಡೆಸಿದರು. ಈ ವೇಳೆ ಭಾರತವು ಅಮೆರಿಕದ ತೈಲ ಸಂಗ್ರಹಾಗಾರದಲ್ಲಿ ತೈಲ ಸಂಗ್ರಹ ಮಾಡುವ ಚರ್ಚೆ ನಡೆಯಿತು.

ದೇಶಕ್ಕೆ ಸಹಸ್ರಾರು ಕೋಟಿ ಉಳಿಸಿದ ಮಂಗಳೂರು!

ಸದ್ಯ ಭಾರತ ಸರ್ಕಾರವು ತುರ್ತು ಬಳಕೆಗೆ ಅಗತ್ಯವಾದ ಪ್ರಮಾಣ ಅಂದರೆ ದೇಶಾದ್ಯಂತ 9.5 ದಿನಕ್ಕೆ ಬೇಕಾಗುವ 5.33 ದಶಲಕ್ಷ ಟನ್‌ಗಳಷ್ಟುಕಚ್ಚಾತೈಲ ಸಂಗ್ರಹಕ್ಕೆ ವ್ಯವಸ್ಥೆ ಹೊಂದಿದೆ. ಅವುಗಳನ್ನು ವಿಶಾಖಪಟ್ಟಣ ಮತ್ತು ಕರ್ನಾಟಕದ ಮಂಗಳೂರು ಮತ್ತು ಪಾದೂರಿನ ಭೂಗತ ಸಂಗ್ರಹಾಗಾರಗಳಲ್ಲಿ ಇಡಲಾಗಿದೆ. ಇದಲ್ಲದೆ ಒಡಿಶಾ ಮತ್ತು ಪಾದೂರಿನಲ್ಲಿ ತಲಾ ಇನ್ನೂ ಒಂದು ಸಂಗ್ರಹಾಗಾರ ನಿರ್ಮಾಣಕ್ಕೆ ಅನುಮತಿ ನೀಡಿದೆ. ಇದು ಇನ್ನೂ 12 ದಿನಗಳ ಅಗತ್ಯವನ್ನು ಪೂರೈಸುತ್ತದೆ. ಇದರ ಹೊರತಾಗಿ ಇದೀಗ ಅಮೆರಿಕದಲ್ಲೂ ಸಂಗ್ರಹಾಗಾರ ಹೊಂದಲು ನಿರ್ಧರಿಸಿದೆ. ಯಾವುದೇ ದೇಶ ಕನಿಷ್ಠ 90 ದಿನಗಳಿಗೆ ಆಗುವಷ್ಟುಸಂಗ್ರಹ ಹೊಂದಿದ್ದರೆ ಸುರಕ್ಷಿತ ಮಟ್ಟಎಂದು ಪರಿಗಣಿಸಲಾಗುತ್ತದೆ.