ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಸೌದಿ ಅರೇಬಿಯಾದ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. 

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಅಧಿಕವಾಗುತ್ತಿರುವ ಹೊತ್ತಿನಲ್ಲಿ ಸೌದಿ ಅರೇಬಿಯಾದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಅಡೆಲ್ ಅಲ್ಟುಬೈರ್‌ ಗುರುವಾರ ಭಾರತಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ ಹಾಗೂ ಉಗ್ರವಾದ ನಿಗ್ರಹಕ್ಕೆ ಬೆಂబల ವ್ಯಕ್ತಪಡಿಸಿದ್ದಾರೆ. ಈ ವೇಳೆ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ, ಭಾರತ ಮತ್ತು ಪಾಕ್ ನಡುವಿನ ಉದ್ವಿಗ್ನತೆ ಕಡಿಮೆ ಮಾಡುವ ಬಗ್ಗೆ ಅವರು ಮಾತುಕತೆ ನಡೆಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿರುವ ಜೈಶಂಕರ್, ಅಲ್ಟುಬೈರ್ ಅವರನ್ನು ಭೇಟಿಯಾಗಿ, ಭಯೋತ್ಪಾದನೆಯನ್ನು ದೃಢವಾಗಿ ಎದುರಿಸುವ ಬಗ್ಗೆ ಭಾರತದ ನಿಲುವನ್ನು ತಿಳಿಸಿದೆ ಎಂದರು. 

ಅತ್ತ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ನಿ ಕೂಡ ಭಾರತಕ್ಕೆ ಬಂದು ಜೈಶಂಕರ ಜತೆ ಚರ್ಚಿಸಿದ್ದಾರೆ. ಈ ನಡುವೆ, ಅಮೆರಿಕ ವಿದೇಶಾಂಗ ಸಚಿವ ರುಬಿರೋ, ಜೈಶಂಕರ ಜತೆ ಮಾತನಾಡಿ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ.

Scroll to load tweet…

ಶಾಂತಿ ಸ್ಥಾಪನೆ ಪಾಕ್ ಕೈಲಿದೆ: ಭಾರತ 
ನವದೆಹಲಿ: ಪಹಲ್ಲಾಂ ದಾಳಿ ನಡೆಸುವ ಮೂಲಕ ಪಾಕಿಸ್ತಾನ ಉದ್ವಿಗ್ನತೆಯನ್ನು ಉಲ್ಬಣಗೊಳಿಸಿತು. ಅದಕ್ಕೆ ಭಾರತ ಆಪರೇಷನ್ ಸಿಂದೂರದ ಮೂಲಕ ಉತ್ತರವನ್ನು ನೀಡಿತು. ಈಗ ಸಂಘರ್ಷ ನಿಯಂತ್ರಿಸುವ ಆಯ್ಕೆ ಪಾಕಿಸ್ತಾನದ ಕೈಯ್ಯಲ್ಲೇ ಇದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸಿ ಹೇಳಿದ್ದಾರೆ. ಗುರುವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಮ್ಮ ಉದ್ದೇಶ ಪರಿಸ್ಥಿತಿಯನ್ನು ಉಲ್ಬಣಗೊಳಿಸುವುದಲ್ಲ. ಅದನ್ನು ಪಾಕಿಸ್ತಾನ ಮಾಡುತ್ತಿದೆ. ನಾವು ಬರಿ ಪ್ರತಿಕ್ರಿಯಿಸುತ್ತಿದ್ದೇವೆ. ವಿಶ್ವಾದ್ಯಂತ ನಡೆದ ಉಗ್ರದಾಳಿಗಳಿಂದ ಪಾಕಿಸ್ತಾನ ಭಯೋತ್ಪಾದಕ ಕೃತ್ಯಗಳ ಕೇಂದ್ರಬಿಂದು ಎಂಬುದು ಸಾಬೀತಾಗುತ್ತಿದೆ ಎಂದರು. ಇದೇ ವೇಳೆ, ಆಪರೇಷನ್ ಸಿಂದೂರಕ್ಕೆ ಬಲಿಯಾದವರ ಅಂತ್ಯಸಂಸ್ಕಾರವನ್ನು ಉಗ್ರನಾಯಕ ಮುನ್ನಡೆಸುತ್ತಿದ್ದುದಕ್ಕೂ ಅವರು ಆಕ್ಷೇಪಿಸಿದರು.

ಯುದ್ಧ ಸ್ಥಿತಿ ಕಾರಣ ಉತ್ತರ ಭಾರತದ ಹಲವು ರಾಜ್ಯ ನೌಕರರ ರಜೆ ಕಡಿತ 
ಅಮೃತಸರ/ಅಹ್ಮದಾಬಾದ್: ಭಾರತೀಯ ಸೇನೆಯ ಆಪರೇಷನ್ ಸಿಂದೂರ ಬೆನ್ನಲ್ಲೆ, ರಜೆ ಪಡೆದು ತೆರಳಿದ್ದ ಪಂಜಾಬ್ ಹಾಗೂ ಗುಜರಾತ್ ಪೊಲೀಸರಿಗೆ ಸರ್ಕಾರವು ಕೂಡಲೇ ಸೇವೆಗೆ ಮರಳಲು ಸೂಚಿಸಿದೆ. ದಿಲ್ಲಿ, ಬಂಗಾಳ ನೌಕರರ ರಜೆ ರದ್ದು ಮಾಡಲಾಗಿದೆ. ಪಾಕ್‌ನೊಂದಿಗೆ ಜಲಗಡಿ ಹಂಚಿಕೊಂಡಿರುವ ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ಸೇನೆ ಗಸ್ತು ಬಿಗಿಗೊಳಿಸಿದ್ದು ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಇದೇ ವೇಳೆ, ಪಂಜಾಬಲ್ಲಿ ಎಲ್ಲ ಆಸ್ಪತ್ರೆಗಳನ್ನೂ ಸನ್ನದ್ಧ ಸ್ಥಿತಿಯಲ್ಲಿಡಲು ಹಾಗೂ ವೈದ್ಯರು ರಜೆ ರದ್ದುಗೊಳಿಸಿ ಕರ್ತವ್ಯಕ್ಕೆ ಮರಳಬೇಕು ಎಂದು ಸೂಚಿಸಲಾಗಿದೆ. ಆಸ್ಪತ್ರೆಗಳಲ್ಲಿ ಶೇ.25ರಷ್ಟು ಹಾಸಿಗೆಗಳನ್ನು ದಾಳಿಯ ಗಾಯಾಳುಗಳಿಗೆ ಮೀಸಲಿಡಬೇಕು ಎಂದು ತಿಳಿಸಲಾಗಿದೆ.