- ಸೋಂಕು ಹೆಚ್ಚಳಕ್ಕೆ ಈ ತಳಿ ಕಾರಣವಲ್ಲ: ಇನ್ಸಾಕಾಗ್‌- ದೇಶದ 12 ರಾಜ್ಯಗಳಲ್ಲಿ ಕೋವಿಡ್‌ ಹೆಚ್ಚುತ್ತಿದೆ- ಆತಂಕಪಡುವ ಅಗತ್ಯವಿಲ್ಲ ಎಂದ ಇನ್ಸಾಕಾಗ್‌ 

ನವದೆಹಲಿ(ಮೇ.04): ದೇಶದಲ್ಲಿ ಕೋವಿಡ್‌ ಸೋಂಕು ಏರಿಕೆಯಾಗುತ್ತಿರುವುದರ ನಡುವೆಯೇ ಆತಂಕಕಾರಿ ಸುದ್ದಿ ಹೊರಬಿದ್ದಿದ್ದು, ಒಮಿಕ್ರೋನ್‌ನ ರೂಪಾಂತರಿ ಉಪತಳಿ ಎಕ್ಸ್‌ಇ ಇದೇ ಮೊದಲ ಬಾರಿ ವ್ಯಕ್ತಿಯೊಬ್ಬರಲ್ಲಿ ದೃಢಪಟ್ಟಿದೆ. ಕೊರೋನಾ ವೈರಸ್‌ನ ರೂಪಾಂತರದ ಮೇಲೆ ನಿಗಾ ವಹಿಸುವ ಇನ್ಸಾಕಾಗ್‌ ಇದನ್ನು ಮಂಗಳವಾರ ಖಚಿತಪಡಿಸಿದೆ.

ಈ ಹಿಂದೆಯೇ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಎಕ್ಸ್‌ಇ ಉಪತಳಿ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಆದರೆ ಅದು ದೃಢಪಟ್ಟಿರಲಿಲ್ಲ. ಇದೀಗ ಮೊದಲ ಬಾರಿ ಎಕ್ಸ್‌ಇ ಸೋಂಕು ಪತ್ತೆಯಾಗಿರುವುದನ್ನು ಇನ್ಸಾಕಾಗ್‌ ಅಧಿಕೃತವಾಗಿ ತಿಳಿಸಿದೆ. ಆದರೆ, ದೇಶದಲ್ಲಿ ಸದ್ಯ ಕೊರೋನಾ ಹೆಚ್ಚುತ್ತಿರುವುದಕ್ಕೂ ಇದಕ್ಕೂ ಸಂಬಂಧವಿಲ್ಲ. ದೇಶದ 12 ರಾಜ್ಯಗಳಲ್ಲಿ ಕೋವಿಡ್‌ ಹೆಚ್ಚುತ್ತಿದ್ದರೆ, 19 ರಾಜ್ಯಗಳಲ್ಲಿ ಇಳಿಕೆಯಾಗುತ್ತಿದೆ ಎಂದು ಇನ್ಸಾಕಾಗ್‌ ತನ್ನ ಬುಲೆಟಿನ್‌ನಲ್ಲಿ ತಿಳಿಸಿದೆ.

ರಾಜ್ಯಕ್ಕೆ‌ ಕೊರೊನಾ XE, ME ರೂಪಾಂತರಿ ಭೀತಿ, ಸಚಿವ ಸುಧಾಕರ್ ತುರ್ತು ಸಭೆ

ಹೊಸತಾಗಿ ಪತ್ತೆಯಾಗಿರುವ ಎಕ್ಸ್‌ಇ ಉಪತಳಿಯನ್ನು ಬಿಎ.2.10 ಹಾಗೂ ಬಿಎ.2.12 ಎಂದು ವರ್ಗೀಕರಿಸಲಾಗಿದೆ. ಇದು ಒಮಿಕ್ರೋನ್‌ನ ಬಿಎ.2 ತಳಿಯ ಉಪತಳಿಯಾಗಿದೆ. ಈ ಉಪತಳಿಯ ಸೋಂಕು ತಗಲಿದವರಲ್ಲಿ ಕೊರೋನಾದ ತೀವ್ರತೆ ಹೆಚ್ಚಿರುತ್ತದೆ ಎಂಬುದು ಈವರೆಗೂ ಖಚಿತಪಟ್ಟಿಲ್ಲ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಇನ್ಸಾಕಾಗ್‌ ಹೇಳಿದೆ. ಆದರೆ, ಎಕ್ಸ್‌ಇ ಉಪತಳಿ ಪತ್ತೆಯಾಗಿರುವುದು ಯಾವ ರಾಜ್ಯ ಅಥವಾ ಯಾವ ಊರಿನಲ್ಲಿ ಎಂಬುದನ್ನು ಅದು ತಿಳಿಸಿಲ್ಲ.

ಮಹದೇವಪುರದಲ್ಲಿ ಶೇ.6.4 ಪಾಸಿಟಿವಿಟಿ ದರ ದಾಖಲು
ಬೆಂಗಳೂರು ನಗರದಲ್ಲಿ ಮಂಗಳವಾರ ನೂರು ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. ಪಾಸಿಟಿವಿಟಿ ದರ ಶೇ.2.81 ದಾಖಲಾಗಿದೆ. 103 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ ಸಾವು ದಾಖಲಾಗಿಲ್ಲ.

1,728 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ತೀವ್ರ ನಿಗಾ ವಿಭಾಗದಲ್ಲಿ ಒಬ್ಬರು ಮತ್ತು ಸಾಮಾನ್ಯ ವಾರ್ಡ್‌ನಲ್ಲಿ ಮೂವರು ಹೀಗೆ ಒಟ್ಟು ನಾಲ್ಕು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆ ಆರೈಕೆಯಲ್ಲಿದ್ದಾರೆ.

Covid Cases ಭಾರತಕ್ಕೆ ಲಗ್ಗೆ ಇಟ್ಟಿತಾ ಹೊಸ ಕೋವಿಡ್ ತಳಿ, 5 ರಾಜ್ಯಕ್ಕೆ ಕೇಂದ್ರ ಪತ್ರ!

ಇತ್ತ ಮಹದೇವಪುರದಲ್ಲಿ ಇನ್ನೊಂದು ಮೈಕ್ರೋ ಕಂಟೈನ್ಮೇಂಟ್‌ ವಲಯ ಪತ್ತೆಯಾಗಿದ್ದು, ಒಟ್ಟು ಮೈಕ್ರೋ ಕಂಟೈನ್ಮೆಂಟ್‌ಗಳ ಸಂಖ್ಯೆ ನಾಲ್ಕಕ್ಕೆ ಏರಿದೆ. ಮಹದೇವಪುರದಲ್ಲಿ ಮೂರು ಮತ್ತು ಬೆಂಗಳೂರು ದಕ್ಷಿಣದಲ್ಲಿ ಒಂದು ಕಂಟೈನ್ಮೆಂಟ್‌ ವಲಯವಿದೆ.

ಮಹದೇವಪುರದಲ್ಲಿ 40 ಪ್ರಕರಣ ಪತ್ತೆಯಾಗಿದ್ದು, ಶೇ.6.40 ಪಾಸಿಟಿವಿಟಿ ಇದೆ. ಉಳಿದಂತೆ ಬೆಂಗಳೂರು ಪೂರ್ವ 19, ಬೊಮ್ಮನಹಳ್ಳಿ 13, ಬೆಂಗಳೂರು ದಕ್ಷಿಣ 10, ಬೆಂಗಳೂರು ಪಶ್ಚಿಮ ಮತ್ತು ಯಲಹಂಕ ತಲಾ 7, ಆರ್‌ಆರ್‌ ನಗರ 5 ಮತ್ತು ದಾಸರಹಳ್ಳಿಯಲ್ಲಿ ತಲಾ 2 ಪ್ರಕರಣ ಪತ್ತೆಯಾಗಿದೆ.

ಮಂಗಳವಾರ 12,753 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 1,961 ಮಂದಿ ಮೊದಲ ಡೋಸ್‌, 3,960 ಮಂದಿ ಎರಡನೇ ಡೋಸ್‌ ಮತ್ತು 6,832 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ.

ರಾಜ್ಯದಲ್ಲಿ ಮಂಗಳವಾರ 107 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 107 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ನಿಂದ ಮೃತಪಟ್ಟಿದ್ದು ವರದಿ ಆಗಿಲ್ಲ. 7,114 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು ಶೇ. 1.50 ಪಾಸಿಟಿವಿಟಿ ದರ ದಾಖಲಾಗಿದೆ. ವಾರದ ಪಾಸಿಟಿವಿಟಿ ದರ ಶೇ. 1.33ಕ್ಕೆ ಏರಿಕೆ ಕಂಡಿದೆ. ಬೆಂಗಳೂರು ನಗರದಲ್ಲಿ 100 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಚಿತ್ರದುರ್ಗ 3, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಮೈಸೂರು ಮತ್ತು ಉತ್ತರ ಕನ್ನಡದಲ್ಲಿ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಈವರೆಗೆ 39.47 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 39.06 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 40,060 ಮಂದಿ ಮರಣವನ್ನಪ್ಪಿದ್ದಾರೆ.