ಭಾರತ ಹಿಂದೂ ರಾಷ್ಟ್ರವಲ್ಲ, ಚುನಾವಣಾ ಫಲಿತಾಂಶದಿಂದ ಸ್ಪಷ್ಟ ಎಂದ ನೊಬೆಲ್ ಪುರಸ್ಕೃತ ಸೇನ್!
ಭಾರತ ಹಿಂದೂ ರಾಷ್ಟ್ರ ಅಲ್ಲ ಅನ್ನೋದನ್ನು ಭಾರತೀಯರು ಈ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಹೇಳಿದ್ದಾರೆ. ಫಲಿತಾಂಶ, ಬಿಜೆಪಿ ಆಡಳಿತ ಕುರಿತು ಸೇನ್ ಹೇಳಿದ್ದೇನು?
ಕೋಲ್ಕತಾ(ಜೂ.27) ಭಾರತ ಹಿಂದೂ ರಾಷ್ಟ್ರವಲ್ಲ ಅನ್ನೋದು ಈ ಬಾರಿಯ ಲೋಕಸಭಾ ಚುನಾವಣೆಯಿಂದ ಸ್ಪಷ್ಟವಾಗಿದೆ ಎಂದು ನೊಬೆಲ್ ಪುರಸ್ಕೃತ ಅರ್ಥ ಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳಿದ್ದಾರೆ. ಬಹುಮತ ಪಡೆಯದ ಬಿಜೆಪಿ, ಎನ್‌ಡಿಎ ಮೈತ್ರಿ ಸರ್ಕಾರ ರಚನೆಗೆ ಅಮರ್ತ್ಯ ಸೇನ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದೇ ವೇಳೆ ಬಿಜೆಪಿ ಆಡಳಿತವನ್ನು ಬ್ರಿಟಿಷ್ ಆಡಳಿತಕ್ಕೆ ಹೋಲಿಸಿದ್ದಾರೆ. ಭಾರತವನ್ನು ಹಿಂದೂ ರಾಷ್ಟ್ರ ಎಂದು ಬಿಂಬಿಸಲು ಹೊರಟ ಬಿಜೆಪಿಗೆ ಜನರು ಉತ್ತರ ನೀಡಿದ್ದಾರೆ ಎಂದಿದ್ದಾರೆ.
ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅಮರ್ತ್ಯ ಸೇನ್, ಭಾರತ ಜಾತ್ಯಾತೀತ ರಾಷ್ಟ್ರ. ಭಾರತದ ಸಂವಿಧಾನ ಜಾತ್ಯಾತೀತ. ಇಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಇದನ್ನು ಬದಲಿಸಲು ಹೊರಟಾಗ ಜನರು ಉತ್ತರ ನೀಡಿದ್ದಾರೆ ಎಂದು ಅಮರ್ತ್ಯ ಸೇನ್ ಹೇಳಿದ್ದಾರೆ. ಇಂದಿನ ಹೊಸ ಸರ್ಕಾರ ಕಳೆದ 10 ವರ್ಷದ ಸರ್ಕಾರಕ್ಕಿಂತ ಭಿನ್ನವಲ್ಲ. ಕಾರಣ ಈ ಹಿಂದೆ ಪ್ರಮುಖ ಖಾತೆಗಳನ್ನು ಹೊಂದಿದವರೆ ಈಗಲೂ ಅದೇ ಖಾತೆ ಹೊಂದಿದ್ದಾರೆ ಎಂದು ಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಮತಾ ಬ್ಯಾನರ್ಜಿಗೆ ಪ್ರಧಾನಿಯಾಗುವ ಸಾಮರ್ಥ್ಯವಿದೆ: ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್
ಬ್ರಿಟಿಷ್ ಆಡಳಿತದಲ್ಲಿ ನಮ್ಮ ಕುಟುಂಬದ ಹಿರಿಯರನ್ನು, ಹಲವರನ್ನು ವಿನಾಕಾರಣ ಜೈಲಿಗೆ ಹಾಕುತ್ತಿದ್ದರು. ಕಳೆದ 10 ವರ್ಷದಲ್ಲಿ ಬಿಜೆಪಿ ಸರ್ಕಾರ ಇದೇ ಮಾಡಿದೆ. ಸಿಬಿಐ, ಇಡಿ ಸೇರಿದಂತೆ ಹಲವು ಅಸ್ತ್ರಗಳನ್ನು ಬಳಸಿ ಹಲವರನ್ನು ಜೈಲಿಗೆ ಕಳುಹಿಸುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲೂ ಇತ್ತು. ಆದರೆ ಈಗ ವಿಪರೀತವಾಗಿದೆ ಎಂದು ಸೇನ್ ಹೇಳಿದ್ದಾರೆ.
ಭಾರತದ ನಿಜವಾದ ಗುರುತು ಮರೆಮಾಚಿ ಹಿಂದೂ ರಾಷ್ಟ್ರ ಮಾಡಲು ಹೊರಟವರಿಗೆ ಆಯೋಧ್ಯೆಯಲ್ಲಿ ತಕ್ಕ ಉತ್ತರ ಸಿಕ್ಕಿದೆ. ಬಿಜೆಪಿ ಅಯೋಧ್ಯೆಯಲ್ಲಿ ಸೋಲು ಕಂಡಿದೆ. ಸಾವಿರಾರು ಕೋಟಿ ರೂಪಾಯಿ ಸುರಿದು ದೇವಸ್ಥಾನ ನಿರ್ಮಿಸಿ,ಭಾರತವನ್ನು ಹಿಂದೂ ರಾಷ್ಟ್ರ ಎಂದು ಬಿಂಬಿಸಲು ಹೊರಟಿದ್ದರು. ಆದರೆ ಫಲಿತಾಂಶ ಸ್ಪಷ್ಟ ಉತ್ತರ ನೀಡಿದೆ ಎಂದು ಸೇನ್ ಹೇಳಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್, ಮಹಾತ್ಮಾ ಗಾಂಧಿ, ರಬೀಂದ್ರನಾಥ್ ಟಾಗೋರ್ ಬಾಳಿದ ಈ ದೇಶದ ಗುರುತನ್ನು ಮರೆಮಾಚಲು ಹೊರಟರೆ ಉತ್ತರ ಸ್ಪಷ್ಟ ಎಂದು ಸೇನ್ ಹೇಳಿದ್ದಾರೆ.
ದೇಶದ ಈಗಿನ ಪರಿಸ್ಥಿತಿ ನನಗೆ ಭಯ ಮೂಡಿಸಿದೆ ಎಂದ ಅಮರ್ತ್ಯ ಸೆನ್!
ಭಾರತ ನಿಜವಾದ ಗುರುತು ಜಾತ್ಯಾತೀತತೆ. ಆದರೆ ಕಳೆದ 10 ವರ್ಷದಲ್ಲಿ ಇದರ ವಿರುದ್ಧ ಹಲವು ಘಟನೆಗಳು ನಡೆದಿದೆ. ಪ್ರತಿ ಚುನಾವಣೆ ಬಳಿಕ ಮಹತ್ತರ ಬದಲಾವಣೆಗಳಾಗುತ್ತದೆ. ಈ ಬಾರಿಯೂ ಈ ಬದಲಾವಣೆಯನ್ನು ಜನರು ಚುನಾವಣೆಯಲ್ಲಿ ತೋರಿಸಿದ್ದಾರೆ ಎಂದು ಸೇನ್ ಹೇಳಿದ್ದಾರೆ.