ದೇಶದಲ್ಲಿ ಇ ಜನಗಣತಿ ನಡೆಸಲು ಕೇಂದ್ರ ಸರ್ಕಾರ ನಿರ್ಧಾರ ಸುಲಭ ಹಾಗೂ ಸರಳ ವಿಧಾನದ ಮೂಲಕ ಜನಗಣತಿ ಇ ಜನಗಣತಿಯಿಂದ ಶೇಕಡಾ 100 ರಷ್ಟು ನಿಖರ ಮಾಹಿತಿ ಲಭ್ಯ

ನವದೆಹಲಿ(ಮೇ.09): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಂದು ಐತಿಹಾಸಿಕ ನಿರ್ಧಾರ ಘೋಷಿಸಿದೆ. ದೇಶದಲ್ಲಿ ಸಂಪೂರ್ಣ ಡಿಜಿಟಲ್ ಜನಗಣತಿ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜನನ ಹಾಗೂ ಮರಣವನ್ನು ಜನಗಣತಿಯೊಂದಿಗೆ ಜೋಡಣೆ ಮಾಡಿ ಸಂಪೂರ್ಣವಾಗಿ ಡಿಜಿಟಲೀಕರಣದ ಮೂಲಕ ಜನಗಣತಿ ನಡೆಸುವುದಾಗಿ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.

ಭಾರತದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಸಲಾಗುತ್ತದೆ. ಸದ್ಯ ನಡೆಸುತ್ತಿರುವ ಹಳೇ ವಿಧಾನಕ್ಕೆ ಬ್ರೇಕ್ ಹಾಕಿ ಮುಂಬರುವ ಜನಗಣತಿಯನ್ನು ಸಂಪೂರ್ಣವಾಗಿ ಇ ಜನಗಣತಿ ಮಾಡುವುದಾಗಿ ಅಮಿತ್ ಶಾ ಘೋಷಿಸಿದ್ದಾರೆ. ಇದರಿಂದ ಶೇಕಡಾ 100 ರಷ್ಟು ಜನಗಣತಿ ದಾಖಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ.

ಮತಾಂತರ: ಕ್ರೈಸ್ತ ಮಿಷನರಿಗಳ ಗಣತಿಗೆ ಸೂಚನೆ

2024ರ ವೇಳೆಗೆ ಭಾರತದಲ್ಲಿ ಜನಗಣತಿ ಸಂಪೂರ್ಣ ಬದಲಾಗಲಿದೆ. ಡಿಜಿಟಲೀಕರಣದಿಂದ ಜನಗಣತಿಯಲ್ಲಿ ಶೇಕಡಾ 100 ರಷ್ಟು ದಾಖಲಾತಿ ಆಗಲಿದೆ. ಇಷ್ಟೇ ಅಲ್ಲ ವಿಳಾಸ ಬದಲಾವಣೆ, ಹೆಸರು ಬದಲಾವಣೆ, ತಪ್ಪುಗಳ ತಿದ್ದುಪಡಿ ಸೇರಿದಂತೆ ಎಲ್ಲವೂ ಅತ್ಯಂತ ಸರಳವಾಗಿ ನಡೆಯಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಅಸ್ಸಾಂನಲ್ಲಿ ಜನಗಣತಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ, ಕೋವಿಡ್ ಕಾರಣ ಜನಗಣತಿ ಡಿಜಿಟಲೀಕರಣ ಪ್ರಕ್ರಿಯೆ ವಿಳಂವಾಗಿದೆ. ಇದೀಗ ಎಲ್ಲಾ ಕೆಲಸಗಳು ನಡೆಯುತ್ತಿದೆ. ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಜನಗಣತಿ ಡಿಜಿಟಲೀಕರಣದಿಂದ ಮುಂದಿನ 25 ವರ್ಷಗಳ ದೇಶದ ಅಭಿವೃದ್ಧಿಗೆ ರಹದಾರಿಯಾಗಲಿದೆ. ಪ್ರತಿ ಜನನದ ಬಳಿಕ ವಿವರಗಳನ್ನು ಸೇರಿಸಲಾಗುತ್ತದೆ. 18 ವರ್ಷ ತುಂಬಿದ ಬೆನ್ನಲ್ಲೇ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲಿದೆ. ಮತದಾರರ ಗುರುತಿನ ಚೀಟಿಯೂ ಲಭ್ಯವಾಗಲಿದೆ. ಮರಣದ ಬಳಿಕ ದಾಖಲೆಗಳು ಅಪ್‌ಡೇಟ್ ಆಗಲಿದೆ. ಜನನ ಹಾಗೂ ಮರಣ ದಾಖಲೆಗಳು 2024ರ ವೇಳೆಗೆ ಅಪ್‌ಡೇಟ್ ಆಗಲಿದೆ. ಇದರಿಂದ ಆಟೋಮ್ಯಾಟಿಕ್ ಆಗಿ ಎಲ್ಲಾ ದಾಖಲೆಗಳು ಅಪ್‌ಡೇಟ್ ಆಗಲಿದೆ. 

ಹಿಂದುಳಿದ ವರ್ಗಗಳ ಜಾತಿ ಗಣತಿ ಕಷ್ಟ: ಕೇಂದ್ರ

ಗಣತಿ ಮಾಹಿತಿ ನೀವೇ ಆನ್‌ಲೈನಲ್ಲಿ ಸಲ್ಲಿಸಿ
ಮಾರ್ಚ್ ತಿಂಗಳಲ್ಲಿ ಜನಗಣತಿ ತಿದ್ದುಪಡಿ ನಿಯಮಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇಷ್ಟೇ ಡಿಜಿಟಲೀಕರಣಕ್ಕೆ ಅನುಮೋದನೆ ನೀಡಿದೆ. ಇದರ ಪ್ರಕಾರ ಹತ್ತು ವರ್ಷಕ್ಕೊಮ್ಮೆ ನಡೆಯುವ ರಾಷ್ಟ್ರೀಯ ಜನಗಣತಿಯ ನಿಯಮಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು, ಮುಂಬರುವ ಜನಗಣತಿಯಲ್ಲಿ ದೇಶದ ಜನರು ತಮ್ಮ ಮಾಹಿತಿಯನ್ನು ತಾವೇ ಆನ್‌ಲೈನ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಬಹುದಾಗಿದೆ. ಇದರ ಜೊತೆಗೆ ಈ ಹಿಂದಿನಂತೆ ಗಣತಿದಾರರು ಜನರ ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯವೂ ನಡೆಯಲಿದೆ.

‘ಜನಗಣತಿ (ತಿದ್ದುಪಡಿ) ನಿಯಮಗಳು-2022’ಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿ ಅಧಿಸೂಚನೆ ಹೊರಡಿಸಿದೆ. ಅದರಲ್ಲಿ ‘ಎಲೆಕ್ಟ್ರಾನಿಕ್‌ ಅರ್ಜಿ’ಗೂ ಭೌತಿಕ ಅರ್ಜಿಗೆ ಸಮಾನವಾದ ಮಾನ್ಯತೆ ನೀಡಲಾಗಿದೆ. ಹೀಗಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮಾನುಸಾರ ಎಲೆಕ್ಟ್ರಾನಿಕ್‌ ರೂಪದಲ್ಲಿ ಸರ್ಕಾರ ಸ್ವೀಕರಿಸುವ ಜನಗಣತಿಯ ಮಾಹಿತಿಯು ಜನಗಣತಿದಾರರು ಭೌತಿಕವಾಗಿ ಸಂಗ್ರಹಿಸುವ ಮಾಹಿತಿಯಷ್ಟೇ ಅಧಿಕೃತವಾಗಿರುತ್ತದೆ. ಅದರಂತೆ ಜನರು ತಮ್ಮ ಮಾಹಿತಿಯನ್ನು ಗಣತಿಯ ಅರ್ಜಿಯನ್ನು ಡೌನ್‌ಲೋಡ್‌ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಕೆ ಮಾಡಬಹುದಾಗಿದೆ.