Asianet Suvarna News Asianet Suvarna News

ಭಾರತವಿಂದು ಜಗತ್ತಿನ ನಂ.1 ಹಾಲು ಉತ್ಪಾದಕ: ಕೇಂದ್ರ ಸಚಿವ ಪರುಷೋತ್ತಮ ರೂಪಲಾ

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ದೇಶದ ಹಾಲಿನ ಉತ್ಪಾದನೆಯು ಶೇ.44ಕ್ಕಿಂತ ಹೆಚ್ಚಾಗಿದೆ. 2020-2021ರಲ್ಲಿ ದೇಶವು 210 ಎಂ.ಟಿ. ಹಾಲನ್ನು ಉತ್ಪಾದಿಸಿದೆ. ಇದು ವಿಶ್ವದ ಒಟ್ಟು ಹಾಲಿನ ಪ್ರಮಾಣದ ಶೇ.23ರಷ್ಟಿದೆ. 

India is the World's No. 1 Milk Producer Now Says Union Minister Parshottam Rupala grg
Author
First Published Dec 2, 2022, 11:30 AM IST

ಪಶುಸಂಗೋಪನಾ ಮೂಲಸೌಕರ್ಯ ಅಭಿವೃದ್ಧಿ ನಿಧಿ, ರಾಷ್ಟ್ರೀಯ ಗೋಕುಲ್‌ ಮಿಷನ್‌, ಪಶುಸಂಗೋಪನೆ ಗ್ರ್ಯಾಂಡ್‌ ಸ್ಟಾರ್ಟ್‌-ಅಪ್‌ ಚಾಲೆಂಜ್‌ ಮತ್ತು ಜಾನುವಾರು ರೈತರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸೌಲಭ್ಯಗಳ ವಿಸ್ತರಣೆಯಂತಹ ಇತ್ತೀಚಿನ ಯೋಜನೆಗಳು ಭಾರತದ ಹೈನುಗಾರಿಕಾ ವಲಯದ ಅಭಿವೃದ್ಧಿಗೆ ಕಾರಣವಾಗಿವೆ. ದೇಶವು ನ.26ರಂದು ರಾಷ್ಟ್ರೀಯ ಕ್ಷೀರ ದಿನವನ್ನು ಆಚರಿಸಿದೆ. ಇದೊಂದು ಮಹತ್ವಪೂರ್ಣ ದಿನ. ಏಕೆಂದರೆ ಅಂದೇ ಭಾರತದ ‘ಶ್ವೇತ ಕ್ರಾಂತಿ’ಗೆ ನಾಂದಿ ಹಾಡಿದ ದಿವಂಗತ ಡಾ. ವರ್ಗೀಸ್‌ ಕುರಿಯನ್‌ ಅವರ 101ನೇ ಜನ್ಮ ವಾರ್ಷಿಕೋತ್ಸವವಾಗಿದೆ.

ಭಾರತದ ಹೈನುಗಾರಿಕೆ ಕ್ಷೇತ್ರದ ಬೆಳವಣಿಗೆ ಮತ್ತು ಪ್ರಗತಿಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ದೇಶದ ಹಾಲಿನ ಉತ್ಪಾದನೆಯು ಶೇ.44ಕ್ಕಿಂತ ಹೆಚ್ಚಾಗಿದೆ. 2020-2021ರಲ್ಲಿ ದೇಶವು 210 ಎಂ.ಟಿ. ಹಾಲನ್ನು ಉತ್ಪಾದಿಸಿದೆ. ಇದು ವಿಶ್ವದ ಒಟ್ಟು ಹಾಲಿನ ಪ್ರಮಾಣದ ಶೇ.23ರಷ್ಟಿದೆ. 2020-21ರಲ್ಲಿ ಭಾರತದ ತಲಾವಾರು ಹಾಲಿನ ಲಭ್ಯತೆಯು ದಿನಕ್ಕೆ 427 ಗ್ರಾಂ ಇತ್ತು. ಅದೇ ಅವಧಿಯಲ್ಲಿ ವಿಶ್ವದ ಸರಾಸರಿ ದಿನಕ್ಕೆ 394 ಗ್ರಾಂ ಇತ್ತು.

ನಂದಿನಿ ಹಾಲಿನ ಬೆಲೆ ಹೆಚ್ಚಳ: ಕಾಫಿ-ಟೀ ಹಾಗೂ ಉಪಹಾರದ ಮೇಲೆ ಎಫೆಕ್ಟ್

ಭಾರತದ ಹೈನುಗಾರಿಕೆ ಕ್ಷೇತ್ರವು ಸಹಕಾರಿ ರಚನೆಯ ಅಡಿಯಲ್ಲಿ ಹೆಚ್ಚಾಗಿ ಸಂಘಟಿತವಾಗಿದೆ. ಹೈನುಗಾರ ರೈತರ ಬೆಲೆ ನಿಗದಿ ಪಡಿಸುವ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರವನ್ನು ವಹಿಸಿವೆ. ಅವರ ಕ್ಷೇತ್ರದಲ್ಲಿ ಹಾಲು ಸಂಗ್ರಹಣೆ ಮತ್ತು ಹಾಲು ಮಾರಾಟದ ಬೆಲೆಯನ್ನು ಹೊಂದಿಸಲು ಇದು ಸಹಾಯ ಮಾಡುತ್ತವೆ. ಅಕ್ಕಿ ಮತ್ತು ಗೋಧಿಯಂತಹ ಬೆಳೆಗಳ ವಿಷಯದಲ್ಲಿರುವಂತೆ, ಸರ್ಕಾರವು ಡೈರಿ ಉತ್ಪನ್ನಗಳ ಬೆಲೆಗಳನ್ನು ನಿರ್ದೇಶಿಸುವುದಿಲ್ಲ ಮತ್ತು ಹಾಲು ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿಲ್ಲ. ಇದು ಡೈರಿ ಸಹಕಾರ ಸಂಸ್ಥೆಗಳ ಸ್ವಾಯತ್ತತೆಯನ್ನು ಬೆಳೆಸಿದೆ ಮತ್ತು ಅವುಗಳನ್ನು ಮಾರುಕಟ್ಟೆ ಆಧಾರಿತವಾಗಿರಲು ಪ್ರೋತ್ಸಾಹಿಸಿದೆ. ವಾಸ್ತವವಾಗಿ, ದೇಶದ ಕೆಲವು ಪ್ರಮುಖ ಡೈರಿ ಸಹಕಾರಿ ಸಂಸ್ಥೆಗಳು ಕಾರ್ಯಕ್ಷಮತೆ ಮತ್ತು ಲಾಭ ಎರಡರಲ್ಲೂ ಖಾಸಗಿ ಕಂಪನಿಗಳನ್ನು ಮೀರಿಸುವಲ್ಲಿ ಯಶಸ್ವಿಯಾಗಿವೆ. ಭಾರತದ ಅತಿದೊಡ್ಡ ಡೈರಿ ಕಂಪನಿ ಅಮುಲ್‌ ದೇಶದೊಳಗಿನ ಸಹಕಾರಿ ಮಾದರಿಯ ಶಕ್ತಿ ಮತ್ತು ಯಶಸ್ಸಿಗೆ ಅತ್ಯುತ್ತಮ ಸಾಕ್ಷಿಯಾಗಿದೆ.

ಇ-ಗೋಪಾಲ ಆ್ಯಪ್‌ ಆರಂಭ

ತಂತ್ರಜ್ಞಾನದ ಬೆಳೆಯುತ್ತಿರುವ ಸಾಮರ್ಥ್ಯವನ್ನು ಬಳಸಿಕೊಳ್ಳಲು, ಜಾನುವಾರುಗಳ ನಿರ್ವಹಣೆಯಲ್ಲಿ ಸುಲಭ ಮತ್ತು ದಕ್ಷತೆಯನ್ನು ಹೆಚ್ಚಿಸಲು ಇ-ಗೋಪಾಲ ಎಂಬ ಡಿಜಿಟಲ್‌ ವೇದಿಕೆಯನ್ನು ಪ್ರಾರಂಭಿಸಲಾಗಿದೆ. ಈ ಡಿಜಿಟಲ್‌ ವೇದಿಕೆಯನ್ನು ಪಶು ಆಧಾರ್‌, ಪಶು ಪೋಷಣ್‌, ಎಥ್ನೋ-ವೆಟರ್ನರಿ ಮೆಡಿಸಿನ್ಸ್‌ (ಇವಿಎಂ), ಅನಿಮಲ್‌ ಬ್ರೀಡಿಂಗ್‌ ಸಂಬಂಧಿತ ಸೇವೆಗಳು ಮತ್ತು ಮಾಹಿತಿಯನ್ನು ಪಡೆಯಲು ಬಳಸಬಹುದು. ಹೆಚ್ಚುವರಿಯಾಗಿ, ಇ-ಗೋಪಾಲ ಅಪ್ಲಿಕೇಶನ್‌ ಡೈರಿ ಪ್ರಾಣಿಗಳು, ಗೂಳಿಯ ವೀರ್ಯ, ಗೋವಿನ ಭ್ರೂಣ ಇತ್ಯಾದಿಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ವೇದಿಕೆಯನ್ನು ಒದಗಿಸುತ್ತದೆ. ಇದಕ್ಕೆ ಪೂರಕವಾಗಿ, ಹೈನುಗಾರರಿಗೆ ಪಶು ಮಿತ್ರ ಎಂಬ ಸಹಾಯವಾಣಿಯನ್ನು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು ಸ್ಥಾಪಿಸಿದೆ. ರೈತರು ನೇರವಾಗಿ ಪ್ರಾಣಿಗಳ ಆರೋಗ್ಯ ಮತ್ತು ಪೌಷ್ಟಿಕಾಂಶದ ಬಗ್ಗೆ ತಮ್ಮ ಪ್ರಶ್ನೆಗಳಿಗೆ ತಜ್ಞರಿಂದ ಉತ್ತರ ಪಡೆಯಲು ಅನುವು ಮಾಡಿಕೊಡುತ್ತದೆ.

ರಫ್ತು ಹೆಚ್ಚಳಕ್ಕೆ ಅವಕಾಶ

2025ರ ವೇಳೆಗೆ ಭಾರತದ ಹಾಲಿನ ಉತ್ಪಾದನೆಯು 270 ಎಂಎಂಟಿ ತಲುಪುವ ನಿರೀಕ್ಷೆಯಿದೆ. ಹೈನುಗಾರಿಕೆ (ಡೈರಿ) ವಲಯದಲ್ಲಿ 10 ಶತಕೋಟಿ ಡಾಲರುಗಳ ಹೂಡಿಕೆ ಸಾಮರ್ಥ್ಯವನ್ನು ಒದಗಿಸುತ್ತದೆ. ಭಾರತದ ರಫ್ತಿನಲ್ಲೂ ಸಾಕಷ್ಟುಏರಿಕೆ ಕಂಡುಬಂದಿದೆ. ಉದಾಹರಣೆಗೆ, ಎಚ್‌ಎಸ್‌ ಕೋಡ್‌ 0406ರ ಅಡಿಯಲ್ಲಿ ಭಾರತದ ಚೀಸ್‌ ರಫ್ತುಗಳು 2015-2020ರ ಅವಧಿಯಲ್ಲಿ 16% ಸಿಎಜಿಆರ್‌ ದರದಲ್ಲಿ ಬೆಳೆದಿದೆ. ಭಾರತದಿಂದ ಹೈನುಗಾರಿಕಾ ಪದಾರ್ಥಗಳು ಅರಬ್‌ ಸಂಸ್ಥಾನ, ಭೂತಾನ್‌ ಮತ್ತು ಅಮೆರಿಕ ದೇಶಗಳಿಗೆ ಪ್ರಮುಖವಾಗಿ ರಫ್ತು ಆಗುತ್ತಿವೆ. ಪ್ರಸ್ತುತ, ಪ್ರಪಂಚದಾದ್ಯಂತ 75ಕ್ಕೂ ಹೆಚ್ಚು ಹಾಲಿನ ಕೊರತೆಯಿರುವ ದೇಶಗಳಿವೆ. ಅವುಗಳಲ್ಲಿ ಹೆಚ್ಚಿನವು ಏಷ್ಯಾ, ಲ್ಯಾಟಿನ್‌ ಅಮೆರಿಕ ಮತ್ತು ಆಫ್ರಿಕಾದಾದ್ಯಂತ ಹರಡಿಕೊಂಡಿವೆ. ಇದು ಭಾರತಕ್ಕೆ ಹೊಸ ಮಾರುಕಟ್ಟೆಗಳಿಗೆ ಪ್ರವೇಶ ಮಾಡಲು ಒಂದು ಒಳ್ಳೆಯ ಅವಕಾಶವನ್ನು ಒದಗಿಸುತ್ತದೆ. ಈ ನಿಟ್ಟಿನಲ್ಲಿ, ರಾಷ್ಟ್ರೀಯ ಡಿಜಿಟಲ… ಲೈವ್‌ ಸ್ಟಾಕ್‌ ಮಿಷನ್‌ನಂತಹ ಇತ್ತೀಚಿನ ಉಪಕ್ರಮಗಳು ಯಶಸ್ವಿಯಾಗುತ್ತವೆ ಮತ್ತು ಆಮದು ಮಾಡಿಕೊಳ್ಳುವ ರಾಷ್ಟ್ರಗಳು ನಿಗದಿಪಡಿಸಿದ ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ಭಾರತೀಯ ಕಂಪನಿಗಳಿಗೆ ಅನುವು ಮಾಡಿಕೊಡುತ್ತದೆ.

ನಂದಿನಿ ಹಾಲಿನ ಪ್ಯಾಕೆಟ್‌ ಮೇಲೆ ಗಂಧದ ಗುಡಿ: ಕೆಎಂಎಫ್​ನಿಂದ ಅಪ್ಪುಗೆ ವಿಶೇಷ ಗೌರವ

ಹೂಡಿಕೆ ಹೆಚ್ಚಿಸಲು ಪ್ರೋತ್ಸಾಹ

ಡೈರಿ ವಲಯದಲ್ಲಿ ಹೂಡಿಕೆಗಳನ್ನು ಉತ್ತೇಜಿಸಲು, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಡೈರಿ ಇನ್ವೆಸ್ಟ್‌ಮೆಂಟ್‌ ಆಕ್ಸಿಲರೇಟರ್‌ ವಿಭಾಗವನ್ನು ಸ್ಥಾಪಿಸಿದೆ. ಇದರ ಅಡಿಯಲ್ಲಿ ಗೇಟ್ಸ್‌ ಫೌಂಡೇಶನ್‌ ಮತ್ತು ಇನ್ವೆಸ್ಟ್‌ ಇಂಡಿಯಾದಂತಹ ಘಟಕಗಳು ಸಮಸ್ಯೆ ಪರಿಹಾರ, ಹೂಡಿಕೆ ಅನುಕೂಲ, ರಫ್ತು ಕಾರ್ಯತಂತ್ರದ ಸಹಾಯ, ಮಾರುಕಟ್ಟೆಸಂಶೋಧನೆ, ಸ್ಥಳ, ಮೌಲ್ಯಮಾಪನ ಇತ್ಯಾದಿ ಒಳಗೊಂಡಿರುವ ಪ್ರೊ ಬೊನೊ ಸೇವೆ ಅಂದರೆ ವೃತ್ತಿಪರರು ಉಚಿತವಾಗಿ ಅಥವಾ ಕಡಿಮೆ ವೆಚ್ಚದಲ್ಲಿ ಸಲ್ಲಿಸುವ ಸೇವೆಗಳನ್ನು ಒದಗಿಸಲು ಸಹಕರಿಸುತ್ತವೆ. ಪ್ರಮುಖವಾಗಿ, ಹೈನುಗಾರಿಕೆಯು ರೈತರ ಸಾಂಪ್ರದಾಯಿಕ ಬೆಳೆಗಳು ವಿಫಲವಾದಾಗ ಅವರಿಗೆ ಆದಾಯದ ವಿಶ್ವಾಸಾರ್ಹ ಮೂಲವನ್ನು ಒದಗಿಸಿದೆ. ರೈತರ ಆದಾಯವನ್ನು ಹೆಚ್ಚಿಸುವ, ಉದ್ಯೋಗವನ್ನು ಸೃಷ್ಟಿಸುವ ಗುರಿಯೊಂದಿಗೆ ಪ್ರಸ್ತುತ ಸರ್ಕಾರದ ಪ್ರಯತ್ನಗಳು ಈಗ ಡೈರಿ ಉದ್ಯಮವನ್ನು ಅಸಂಘಟಿತ ವಲಯದಿಂದ ಸಂಘಟಿತ ವಲಯಕ್ಕೆ ಪರಿವರ್ತಿಸುವುದರ ಮೇಲೆ ಕೇಂದ್ರೀಕೃತವಾಗಿವೆ.

ಪಶುಸಂಗೋಪನಾ ಮೂಲಸೌಕರ್ಯ ಅಭಿವೃದ್ಧಿ ನಿಧಿ, ರಾಷ್ಟ್ರೀಯ ಗೋಕುಲ್‌ ಮಿಷನ್‌, ಪಶುಸಂಗೋಪನೆ ಗ್ರ್ಯಾಂಡ್‌ ಸ್ಟಾರ್ಟ್‌-ಅಪ್‌ ಚಾಲೆಂಜ್‌ ಮತ್ತು ಜಾನುವಾರು ರೈತರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸೌಲಭ್ಯಗಳ ವಿಸ್ತರಣೆಯಂತಹ ಇತ್ತೀಚಿನ ಯೋಜನೆಗಳು ನಮ್ಮ ಡೈರಿ ವಲಯದ ಅಭಿವೃದ್ಧಿಗೆ ಕಾರಣವಾಗಿವೆ. ಹೀಗಾಗಿ, ಡಾ. ಕುರಿಯನ್‌ ಆಶಯದಂತೆ ಮುಂದಿನ ದಿನಗಳಲ್ಲಿ ಭಾರತವು ಡೈರಿ ಉತ್ಪನ್ನಗಳ ಪ್ರಮುಖ ರಫ್ತುದಾರನಾಗಿ ಹೊರಹೊಮ್ಮಲು ಸಿದ್ಧವಾಗಿದೆ ಎಂಬ ವಿಶ್ವಾಸ ನಮಗಿದೆ.
 

Follow Us:
Download App:
  • android
  • ios