ಇಂಟರ್ನೆಟ್‌ ಭವಿಷ್ಯಕ್ಕೆ ಭಾರತದ ಪ್ರತ್ಯೇಕ ನೀತಿ; ಸೂಕ್ತ ಮಾನದಂಡ ರಚಿಸಲು ಸಿದ್ಧ: ರಾಜೀವ್‌ ಚಂದ್ರಶೇಖರ್‌

ದುಬೈನಲ್ಲಿ ಆಯೋಜಿಸಲಾದ ಇಂಡಿಯಾ ಗ್ಲೋಬಲ್‌ ಫೋರಂನಲ್ಲಿ ಅರಬ್‌ ಸಚಿವ ಒಮಾರ್‌ ಸುಲ್ತಾನ್‌ ಅಲ್‌ ಒಲಾಮಾ ಅವರೊಂದಿಗೆ ನಡೆಸಿ ಚರ್ಚೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ 820 ದಶಲಕ್ಷಕ್ಕೂ ಹೆಚ್ಚು ಇಂಟರ್‌ನೆಟ್‌ ಬಳಕೆದಾರರಿದ್ದಾರೆ. ಭಾರತವು ಜಾಗತಿಕ ಇಂಟರ್‌ನೆಟ್‌ನಲ್ಲಿ ಸಿಂಹಪಾಲನ್ನು ಹೊಂದಿದ್ದರಿಂದ ತನ್ನ ಭವಿಷ್ಯವನ್ನು ತಾನೇ ನಿರ್ಧರಿಸಲು ಅರ್ಹವಾಗಿದೆ ಎಂದಿದ್ದಾರೆ.

india has more than 800 million internet users says rajeev chandrasekhar ash

ನವದೆಹಲಿ: ಯುರೋಪಿನ (Europe) ಡೇಟಾ ಸಂರಕ್ಷಣಾ (Data Protection) ನಿಯಮವನ್ನೇ ಚಿನ್ನದ ಮಾನದಂಡ ಎಂದು ಪರಿಗಣಿಸದೇ ಭಾರತವು (India) ಇಂಟರ್‌ನೆಟ್‌ (Internet) ಭವಿಷ್ಯಕ್ಕಾಗಿ ತನ್ನದೇ ಹಾದಿಯನ್ನು ರೂಪಿಸಿಕೊಳ್ಳಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಹಾಗೂ ಐಟಿ ಖಾತೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ (Rajeev Chandrasekhar) ಬುಧವಾರ ಹೇಳಿದ್ದಾರೆ. ದುಬೈನಲ್ಲಿ (Dubai) ಆಯೋಜಿಸಲಾದ ಇಂಡಿಯಾ ಗ್ಲೋಬಲ್‌ ಫೋರಂನಲ್ಲಿ (India Global Forum) ಅರಬ್‌ ಸಚಿವ ಒಮಾರ್‌ ಸುಲ್ತಾನ್‌ ಅಲ್‌ ಒಲಾಮಾ ಅವರೊಂದಿಗೆ ನಡೆಸಿ ಚರ್ಚೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ 820 ದಶಲಕ್ಷಕ್ಕೂ (82 ಕೋಟಿ) ಹೆಚ್ಚು ಇಂಟರ್‌ನೆಟ್‌ (Internet) ಬಳಕೆದಾರರಿದ್ದಾರೆ. ಭಾರತವು ಜಾಗತಿಕ ಇಂಟರ್‌ನೆಟ್‌ನಲ್ಲಿ ಸಿಂಹಪಾಲನ್ನು ಹೊಂದಿದ್ದರಿಂದ ತನ್ನ ಭವಿಷ್ಯವನ್ನು ತಾನೇ ನಿರ್ಧರಿಸಲು ಅರ್ಹವಾಗಿದೆ ಎಂದಿದ್ದಾರೆ.

ಯುರೋಪಿನ ಜಿಡಿಪಿಆರ್‌ ಅನ್ನು ಖಾಸಗಿತನ ಹಾಗೂ ಮಾಹಿತಿ ರಕ್ಷಣೆಯ ಚಿನ್ನದ ಮಾನದಂಡ ಎಂದೇ ಪರಿಗಣಿಸಲಾಗುತ್ತದೆ. ಆದರೆ ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ. 820 ದಶಲಕ್ಷ ಇಂಟರ್‌ನೆಟ್‌ ಬಳಕೆದಾರರೊಂದಿಗೆ ನಮ್ಮ ಭವಿಷ್ಯವನ್ನು ನಾವೇ ನಿರ್ಧರಿಸುವ, ನಮಗೆ ಸೂಕ್ತ ಎನಿಸುವ ಕಾನೂನಿನ ಚೌಕಟ್ಟನ್ನು ರೂಪಿಸುವ ಅರ್ಹತೆ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.

ಇದನ್ನು ಓದಿ: ವೈಯಕ್ತಿಕ ಡೇಟಾ ದುರ್ಬಳಕೆಗಿನ್ನು ಕಡಿವಾಣ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

‘ಭಾರತದಲ್ಲಿ ಡಿಜಿಟಲ್‌ ವೈಯಕ್ತಿಕ ಮಾಹಿತಿ ರಕ್ಷಣಾ ಮಸೂದೆಯನ್ನು ಸಮಾಲೋಚನೆಗಾಗಿ ಮುಕ್ತವಾಗಿಡಲಾಗಿದೆ. ನಾಗರಿಕರ ಡಿಜಿಟಲ್‌ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ ಸರ್ಕಾರವು ಇಂಟರ್‌ನೆಟ್‌ ಅನ್ನು ನಿಯಂತ್ರಿಸದೇ ಅದನ್ನು ಮುಕ್ತ, ಸುರಕ್ಷಿತ, ವಿಶ್ವಾಸಾರ್ಹಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ’ ಎಂದು ರಾಜೀವ್‌ ಚಂದ್ರಶೇಖರ್‌ ಸ್ಪಷ್ಟಪಡಿಸಿದ್ದಾರೆ.

ಸರ್ಕಾರದ ಪ್ರಯತ್ನದಿಂದಾಗಿ ಸರ್ಕಾರಿ ನಿಧಿಗಳನ್ನು ಫಲಾನುಭವಿಗಳಿಗೆ ನೇರವಾಗಿ ತಲುಪಿಸುವ ಯೋಜನೆ ಸಫಲವಾಗಿದೆ. ಭಾರತದಿಂದ ಪ್ರೇರಣೆ ಪಡೆದು ಇತರೆ ರಾಷ್ಟ್ರಗಳೂ ಈ ಮಾದರಿಯನ್ನು ಅಳವಡಿಸಿಕೊಳ್ಳಲು ಮುಕ್ತವಾಗಿವೆ. ಇದು ಸಂಪೂರ್ಣ ಡಿಜಿಟಲೀಕರಣವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗದ ದೇಶಗಳಿಗೂ ಡಿಜಿಟಲೀಕರಣದ ಏಣಿಯನ್ನು ವೇಗವಾಗಿ ಹತ್ತಲು ಅವಕಾಶ ಮಾಡಿಕೊಡುತ್ತದೆ ಎಂದರು.

ಇದನ್ನೂ ಓದಿ: ಭಾರತ ಈಗ ಸ್ಮಾರ್ಟ್‌ಫೋನ್‌ ಹಬ್‌: ಒಂದೇ ವರ್ಷದಲ್ಲಿ ಮೊಬೈಲ್‌ ರಫ್ತು ಡಬಲ್‌

ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಒಲಾಮಾ, ‘ಭಾರತ ಯಾವ ದೇಶ ಹಾಕಿಕೊಟ್ಟ ಮಾರ್ಗವನ್ನು ಅನುಸರಿಸದೇ, ಇತರರಿಗೂ ಅನುಕರಣೀಯವಾದ ತನ್ನದೇ ಮಾರ್ಗವನ್ನು ಸೃಷ್ಟಿಸಿದೆ. ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ದಶಕಕ್ಕಿಂತ ಕಡಿಮೆ ಅವಧಿಯಲ್ಲಿ ಇದನ್ನು ಸಾಧಿಸಿದ್ದು ಅದ್ಭುತ’ ಎಂದು ಕೊಂಡಾಡಿದ್ದಾರೆ.

ಇದನ್ನೂ ಓದಿ: 70 ಸಾವಿರ ಕೋಟಿ ಎಲೆಕ್ಟ್ರಾನಿಕ್ಸ್‌ ಉತ್ಪನ್ನ ರಫ್ತು: ರಾಜೀವ್‌ ಚಂದ್ರಶೇಖರ್‌

 

Latest Videos
Follow Us:
Download App:
  • android
  • ios